Thursday, 12th December 2024

ಕಾರ್ಪೊರೇಟ್ ಹಿಡಿತಕ್ಕೆ ಸುಚಿತ್ರ

ವಿಶ್ವವಾಣಿ ವಿಶೇಷ

ಸುಚಿತ್ರ ಫಿಲ್ಮ ಸೊಸೈಟಿಯನ್ನು ಹೊರದಬ್ಬಲು ಹುನ್ನಾರ

ಇಂದು ಪ್ರತಿಭಟನೆ

ಬೆಂಗಳೂರು: 2015ರಿಂದೀಚೆಗೆ ಸುಚಿತ್ರ ಟ್ರಸ್ಟ್ ಕಾರ್ಪೊರೇಟ್ ಹಿಡಿತಕ್ಕೆ ಸಿಲುಕುತ್ತಿರುವ ಆತಂಕ ವ್ಯಕ್ತವಾಗಿದ್ದು, ಟ್ರಸ್ಟ್ ಹುಟ್ಟಲು ಕಾರಣವಾದ ಸುಚಿತ್ರ ಫಿಲ್ಮ ಸೊಸೈಟಿಯನ್ನು ಇಲ್ಲಿಂದ ಹೊರದೂಡಲು ಯತ್ನಿಸಲಾಗು ತ್ತಿದೆ ಎಂಬ ಆರೋಪಗಳು ಬಂದಿವೆ.

ಭಾರತದ ಪ್ರತಿಷ್ಟಿತ ಫಿಲ್ಮ್ ಸೊಸೈಟಿಗಳಲ್ಲಿ ಒಂದಾದ, ಸುವರ್ಣ ಮಹೋತ್ಸವ ಆಚರಿಸಿ ಕೊಳ್ಳುತ್ತಿರುವ ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಡೋಲಾಯಮಾನವಾಗಿದೆ. ಕಾರ್ಪೊ ರೇಟ್ ಹಿಡಿತಕ್ಕೆ ಸಿಲುಕುತ್ತಿರುವ ಸುಚಿತ್ರ ಟ್ರ, ತಮ್ಮ ಮೂಲ ಬೇರಾದ ಸೊಸೈಟಿ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಹೊರಟಿದೆ ಎಂದು ಸೊಸೈಟಿಯ ಸದಸ್ಯರು ಆರೋಪಿಸಿದ್ದಾರೆ.

ಟ್ರಸ್ಟ್ ಜಾರಿಗೊಳಿಸುತ್ತಿರುವ ಹೊಸ ನಿಯಮಗಳಿಂದ ಬೇಸತ್ತಿರುವ ಸುಚಿತ್ರ ಫಿಲ್ಮ್ ಸೊಸೈಟಿ ಸದಸ್ಯರು ಇಂದು(ಭಾನುವಾರ) ಸುಚಿತ್ರ ಗೇಟಿನ ಎದುರು ಮೌನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಪ್ರತಿಭಟನೆ ನಡೆಯಲಿದೆ.

ಸುಚಿತ್ರ ಫಿಲ್ಮ್ ಸೊಸೈಟಿ ಇತಿಹಾಸವನ್ನು ನೋಡುತ್ತಾ ಹೋದರೆ, ಸೊಸೈಟಿಯಿಂದ ಟ್ರ ಹುಟ್ಟಿಕೊಂಡಿತು. ಆದರೆ ಟ್ರಸ್ಟ್ ಪಟ್ಟ ಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕುತ್ತಿರುವ ಆತಂಕವನ್ನು ಟ್ರಸ್ಟ್ ಹಾಗೂ ಸೊಸೈಟಿಯ ಒಡನಾಟದಲ್ಲಿದ್ದವರು ವ್ಯಕ್ತಪಡಿಸು ತ್ತಿದ್ದಾರೆ.

ಸೊಸೈಟಿ ಅಧ್ಯಕ್ಷರಾದವರು ಟ್ರಸ್ಟ್‌ನ ಕಾಯಂ ಸದಸ್ಯರಾಗಿರುತ್ತಿದ್ದರು. ಹೀಗಾಗಿ ಸೊಸೈಟಿ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯ ವಾಗುತ್ತಿತ್ತು. ಬಾಡಿಗೆ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತಿತ್ತು. ಕಾರ್ಪೊರೇಟ್ ಸಂಸ್ಥೆಯ ಹೆಸರೂ ಟ್ರಸ್ಟ್‌ಗೆ ಸೇರಿಸಿ ಕೊಂಡಿರುವುದರಿಂದ ಅನುಮಾನಗಳು ಹೆಚ್ಚಾಗಿವೆ. ಇಡೀ ಜಾಗವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಪ್ರಯತ್ನವಾ? ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲೇಬಾರದು ಎಂಬ ಉದ್ದೇಶವಾ ಎಂಬ ಅನುಮಾನಗಳು ವ್ಯಕ್ತವಾಗಿವೆ ಎನ್ನುತ್ತಾರೆ ಸದಸ್ಯರು.

ಏನಿದು ವಿವಾದ? : ಸುಚಿತ್ರ ಫಿಲ್ಮ ಸೊಸೈಟಿ 1971ರಲ್ಲಿ ಕೆಲವು ಸಿನೆಮಾ ಆಸಕ್ತರು ಸೇರಿ ಆರಂಭಿಸಿದರು. ಸರಕಾರ ಬನಶಂಕರಿ ಯಲ್ಲಿ ಸುಚಿತ್ರ ಫಿಲ್ಮ ಸೊಸೈಟಿ ಚಟುವಟಿಕೆ ನಡೆಸುವುದಕ್ಕಾಗಿಯೇ ಒಂದು ಸ್ವಂತ ಚಿತ್ರಮಂದಿರ ಕಟ್ಟಿಕೊಳ್ಳಲು ಒಂದು ಸಿಎ ನಿವೇಶನವನ್ನು ಬಿಡಿಎ ಮುಖಾಂತರ ಗುತ್ತಿಗೆ ಆಧಾರದಲ್ಲಿ ಕೂಡಿಸಿತು. ಈ ನಿವೇಶನ ನೋಡಿಕೊಳ್ಳಲು ಒಂದು ಟ್ರಸ್ಟ್‌  ಮಾಡಿ ಕೊಳ್ಳಬೇಕೆಂದು ಸರಕಾರ ಸೂಚಿಸಿತು.

ಅದಕ್ಕನುಸಾರವಾಗಿ ಸುಚಿತ್ರ ಫಿಲ್ಮ ಸೊಸೈಟಿ 1979ರಲ್ಲಿ ಸುಚಿತ್ರ ಸಿನೆಮಾ ಅಕಾಡೆಮಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿತು. ಅದರ ಪ್ರಾರಂಭದ ಟ್ರಸ್ಟಿಗಳು ಬಹುತೇಕ ಸುಚಿತ್ರ ಫಿಲ್ಮ ಸೊಸೈಟಿಯಿಂದ ಬಂದವರೇ ಆಗಿದ್ದರಿಂದ ಎರಡೂ ಸಂಸ್ಥೆಗಳು ಅಂದಿನಿಂದ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾ ಬಂದಿದ್ದವು. ಆದರೆ, ಇದೀಗ ಸೊಸೈಟಿಯ ಯಾವುದೇ ಕಾರ್ಯಕ್ರಮ ಗಳಿಗೆ ಟ್ರಸ್ಟ್ ಅನುಮತಿ ನೀಡುತ್ತಿಲ್ಲ. ಸೊಸೈಟಿಯ 2 ಲಕ್ಷ ರು.ಗಳ ಮುಂಗಡ ಹಣ ಮುರಿದುಕೊಳ್ಳಲಾಗಿದೆ. ಜತೆಗೆ ಎರಡು ಲಾಯರ್ ನೋಟೀಸ್ ನೀಡಲಾಗಿದೆ. ಮಾಸಿಕ 50 ಸಾವಿರ ರು.ಬಾಡಿಗೆ ನೀಡುವಂತೆ ಒತ್ತಾಯಿಸಲಾಗಿದೆ. ಸೊಸೈಟಿಗೆ ವರ್ಷಕ್ಕೆ ಬರುವ ಆದಾಯವೇ ನಾಲ್ಕು ಲಕ್ಷ, ಬರುವ ಹಣವನ್ನೆಲ್ಲ ಬಾಡಿಗೆ ಕಟ್ಟಿದರೆ ಕಾರ್ಯಕ್ರಮ ಮಾಡುವುದು ಹೇಗೆ? ಎಂಬುದು ಬಿ.ಸುರೇಶ್ ಅವರ ಪ್ರಶ್ನೆ.