ಬೇಸಿಗೆ ಬಂತೆಂದರೆ ಮಕ್ಕಳಿಗೆ ರಜೆ ಸಾಮಾನ್ಯ. ವರ್ಷವೀಡೀ ಓದಿನಲ್ಲಿ ಸುಸಸ್ತಾಗಿರುವ ಮಕ್ಕಳಿಗೆ ಈ ರಜಾ ದಿನವನ್ನು ಮಜಾ ಮಾಡಬೇಕೆಂಬ ಬಯಕೆ ಸಾಮಾನ್ಯ. ಭಾರತದ ಈ ಐದು ಸ್ಥಳಗಳಿಗೆ ನಿಮ್ಮ ಮಕ್ಕಳನ್ನು ಕರೆದೊಯ್ಯಿರಿ, ಖಂಡಿತ ಮಕ್ಕಳು ತಮ್ಮ ರಜೆಯನ್ನು ಸಂತೋಷದಿಂದ ಕಳೆಯುವರು.
1. ಅಮ್ಯೂಸ್ಮೆಂಟ್ ಪಾರ್ಕ್: ಮನರಂಜನೆಗೆ ಅತ್ಯಂತ ಪ್ರಶಸ್ತ್ರ್ಯ ಸ್ಥಳವೆಂದರೆ ಅದು ಅಮ್ಯೂಸ್ಮೆಂಟ್ ಪಾರ್ಕ್. ಅದರಲ್ಲೂ ಮಕ್ಕಳಿಗೆ ಅತಿ ಹೆಚ್ಚು ಇಷ್ಟವಾಗುವ ಸ್ಥಳವೂ ಹೌದು. ವಿವಿಧ ಬಗೆಯ ಗೇಮ್ಗಳು ಹಾಗೂ ನೀರಿನ ಗೇಮ್ಗಳು ಮಕ್ಕಳನ್ನು ಮನಸೂರೆಗೊಳಿಸುತ್ತವೆ. ಕರ್ನಾಟಕದಲ್ಲಿ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್, ಜಿಆರ್ಎಸ್ ಫಾಂಟಸಿ, ಸ್ನೋ ಸಿಟಿ ಈ ಜಾಗಗಳಲ್ಲಿ ಮಕ್ಕಳು ಅತಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈ ಬೇಸಿಗೆಯಲ್ಲಿ ಮಕ್ಕಳನ್ನು ರೆಸಾರ್ಟ್ಗಳಿಗೆ ಕರೆದೊ ಯ್ಯುವುದಕ್ಕಿಂತ ಅಮ್ಯೂಸ್ಮೆಂಟ್ ಪಾರ್ಕ್ಗೆ ಕರೆದೊಯ್ಯುವುದು, ಆರ್ಥಿಕವಾಗಿಯೂ ಉಳಿತಾಯದ ಜೊತೆಗೆ, ಮಕ್ಕಳು ಹೆಚ್ಚು ಮೋಜು ಮಸ್ತಿ ಮಾಡುವರು. ಹೈ-ಥ್ರಿಲ್ ಲ್ಯಾಂಡ್ ರೈಡ್ಗಳು, ನೀರಿನ ರೈಡ್ಗಳು ಮಕ್ಕಳನ್ನು ತಂಪಾಗಿರಿಸುತ್ತವೆ.
2. ಎಲಿಫೆಂಟಾ ಗುಹೆಗಳು: UNESCO ವಿಶ್ವ ಪರಂಪರೆಯ ತಾಣವಾದ ಎಲಿಫೆಂಟಾ ಗುಹೆಯು, ಮುಂಬೈನ ಚಿಕ್ಕದಾದ ದೋಣಿ ವಿಹಾರದ ಎಲಿಫೆಂಟಾ ದ್ವೀಪದಲ್ಲಿದೆ. ಈ ಗುಹೆಗಳು 5 ನೇ ಶತಮಾನದಿಂದ ಕಲ್ಲಿನಿಂದ ಕತ್ತರಿಸಿದ ದೇವಾಲಯಗಳಿಗೆ ಹೆಸರುವಾಸಿ ಯಾಗಿದೆ. ಪ್ರವಾಸಿಗರು ಮುಖ್ಯ ಗುಹೆ ಮತ್ತು ಅದರ ವಿವಿಧ ಕೋಣೆಗಳನ್ನು ನೋಡಬಹುದು. ಯಾವುದೇ ಋತುಮಾನದಲ್ಲೂ ತಂಪಾಗಿರುವ ಸ್ಥಳವಿದು. ಉರಿಬಿಸಿ ಬೇಸಿಗೆಯಲ್ಲಂತೂ ಎಲಿಫೆಂಟಾ ಗುಹೆ ಸ್ವರ್ಗವೇ ಸರಿ. ಮಕ್ಕಳಿಗೂ ಈ ತಂಪಾದ ಸ್ಥಳ ಇಂಪು ನೀಡಬಹುದು.
3. ಮನಾಲಿ: ಹಿಮವೆಂದರೆ ಯಾರಿಗೆ ಇಷ್ಟವಿಲ್ಲವೇಳಿ? ಸದಾ ಹಿಮದಿಂದ ಕೂಡಿರುವ ಮನಾಲಿ ಮಕ್ಕಳಿಗೆ ಅಚ್ಚುಮೆಚ್ಚಿನ ತಾಣವಾಗಬಹುದು. ಚಳಿಗಾಲ ಮತ್ತು ಮಳೆಗಾಲದಲ್ಲಿ ಹೆಚ್ಚು ಹಿಮ ಹಾಗೂ ಚಳಿಯಿಂದ ಕೂಡಿರುತ್ತದೆ, ಆ ವೇಳೆ ಭೇಟಿ ನೀಡುವುದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಷ್ಟ. ಹೀಗಾಗಿ ಬೇಸಿಗೆ ಕಾಲ ಅತ್ಯಂತ ಒಳ್ಳೆಯದು. ಬಿರು ಬಿಸಿಲಿನಲ್ಲಿ ಹಿಮದೊಂದಿಗೆ ಆಟವಾಡುವುದು ಮಕ್ಕಳಿಗೆ ಇಷ್ಟವಾಗಲಿದೆ. ಜೊತೆಗೆ. ಪ್ಯಾರಾಗ್ಲೈಡಿಂಗ್, ಜೋರ್ಬಿಂಗ್ ಮತ್ತು ರಿವರ್ ರಾಫ್ಟಿಂಗ್ನಂತಹ ಹಲವಾರು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಮನಾಲಿಯು ತನ್ನ ಬಿಸಿನೀರಿನ ಬುಗ್ಗೆಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
4. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ: ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಉತ್ತರಾಖಂಡದ ರಾಮನಗರ ದಲ್ಲಿದೆ. ವನ್ಯಜೀವಿಗಳನ್ನು ಪ್ರೀತಿಸುವ ಮತ್ತು ನೈಜ ಪ್ರಕೃತಿಯನ್ನು ಅನುಭವಿಸಲು ಬಯಸುವ ಕುಟುಂಬಗಳಿಗೆ ಸೂಕ್ತವಾಗಿದೆ. ಅನೇಕ ಜಲಪಾತಗಳಿಂದ ಹರಿಯುವ ನದಿಗಳು ಈ ಭಾಗದಲ್ಲಿದೆ. ನಯನ ಮನೋಹರ ಉದ್ಯಾನವನಗಳು, ಸಫಾರಿ, ಪಕ್ಷಿ ಧಾಮ ವೀಕ್ಷಣೆ ಸೇರಿದಂತೆ ಅನೇಕ ಪ್ರಾಕೃತಿಕ ಸೌಂದರ್ಯ ಸವೆಯುವ ತಾಣ ಇದಾಗಿದೆ. ಮಕ್ಕಳಿಗೆ ತೋರಿಸಲೇ ಬೇಕಾದ ಸ್ಥಳಗಳಲ್ಲಿ ಇದೂ ಒಂದು. ಪ್ರಾಣಿಸಂಗ್ರಹಾಲಯ, ವಸ್ತು ಸಂಗ್ರಹಾಲಯವೂ ಇಲ್ಲಿರುವುದರಿಂದ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಿ ದಂತಾಗುವ ಜೊತೆಗೆ ಮಕ್ಕಳು ಸಹ ಎಂಜಾಯ್ ಮಾಡಲಿದ್ದಾರೆ.
5. ಊಟಿ: ಭೂಲೋಕದ ಸೌರ್ಗವೆಂದರೆ ಅದು ಊಟಿ. ಬೆಟ್ಟ, ಗುಡ್ಡ, ಪ್ರಕೃತಿ ಸೌಂದರ್ಯದಿಂದ ಮೈ ದುಂಬಿಕೊಂಡಿದೆ. ಪರಿಮಳಯುಕ್ತ ಟೀ ಎಸ್ಟೇಟ್ಗಳು, ಬೆರಗುಗೊಳಿಸುವ ವೈಡೂರ್ಯದ ಸರೋವರ ಮನಸ್ಸಿಗೆ ಆಹ್ಲಾದ ನೀಡಲಿದೆ. ಮಕ್ಕಳಿಗೂ ಆಟವಾಟಲು ಸಾಕಷ್ಟು ಸ್ಥಳಗಳು ನಿಮಗೆ ಇಲ್ಲಿ ದೊರೆಯಲಿದೆ. ಬಿರುಬಿಸಿಲಿನ ಈ ಸಮಯದಲ್ಲಿ ತಂಪನ್ನು ಆಹ್ಲಾದಿಸಲು ಊಟಿ ಉತ್ತಮ ಸ್ಥಳ.