Thursday, 12th December 2024

ಭಾರತದ ವಿರುದ್ದ ಒಗ್ಗೂಡಿದ ಉಗ್ರರು

ಸಂತೋಷಕುಮಾರ ಮೆಹೆಂದಳೆ

ಮಾರಣ ಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ (ಭಾಗ – ೫)

ಆವತ್ತು ಬೆಳಿಗ್ಗೆ ಬಹಿರಂಗವಾಗಿ, ಮುಲಾಜೆ ಇಲ್ಲದೇ ಬೆಳಿಗ್ಗೆನೆ ಮೈಕಿನಲ್ಲಿ ನೇರವಾಗಿ ಕೊಲ್ಲುವ ಎಚ್ಚರಿಕೆ ಸಾಲು ಸಾಲಾಗಿ ಮೊಳಗಿತ್ತು. ಆಗಲೂ ಸ್ಥಳೀಯ
ಪೋಲಿಸು, ನ್ಯಾಯಾಲಯ, ಇನ್ನಾವುದೇ ಮಾಧ್ಯಮಗಳು ಈ ಬಗ್ಗೆ ಪಿಟಕ್ಕೆನ್ನಲಿಲ್ಲ. ಸರಹದ್ದಿನಿಂದ ಭಯೋತ್ಪಾದಕರು ನುಸುಳುತ್ತಲೇ ಇದ್ದರು.

ಆಗೆಲ್ಲ ಯಾವ ಆಜ್ಞೆಗಳೂ ಯಾಕೆ ಜಾರಿಯಾಗಲೇ ಇಲ್ಲ ಈಗಲೂ ಗೊತ್ತಿಲ್ಲ. ಸೈನಿಕರೂ ಎತ್ತಲೂ ಕದಲಂತೆ ಅವರವರ ಕ್ಯಾಂಪುಗಳಲ್ಲಿ ಬಂದೂಕೆತ್ತಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮೊದಲು ಬ್ಯಾರಕ್ ಸುರಕ್ಷಿತ ಮಾಡಿಕೊಳ್ಳಬೇಕಲ್ಲ. ಅಕ್ಷರಶಃ ಪಂಡಿತರ ಕಾಲೋನಿಗಳನ್ನು ಸುತ್ತುವರೆದ ಉಸುರುಗಟ್ಟುವ ಸನ್ನಿವೇಶದ ಮಧ್ಯೆ ಮೊದಲ ಮುದ್ರಿತ ಘೋಷಣೆ ಹೊರಬಿದ್ದಿತ್ತು. ಅದೂ ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಪ್ರಿಂಟೆಡ್ ಧಮಕಿ ಮತ್ತು ಘೋಷಣೆ.

‘ಕಾಶ್ಮೀರಿ ಹಿಂದೂಗಳು ಕಣಿವೆ ತೊರೆಯಬೇಕು. ಇಲ್ಲದಿದ್ದರೆ ಜೀವ ಆಸ್ತಿ ಪಾಸ್ತಿ ಕಳೆದುಕೊಳ್ಳಬೇಕಾಗುತ್ತದೆ..’ ಜತೆಗೆ ಮೈಕಿನಲ್ಲಿ, ನಿಮ್ಮ ಹೆಂಡಿರನ್ನೂ ಬಿಟ್ಟು ಹೊರಡಿ ನಾವು ಪಾಕಿಸ್ತಾನ ನಿರ್ಮಿಸುತ್ತೇವೆ ಎಂಬ ವರಾತ ಬೇರೆ. ಹೀಗೆ ಹೇಳಿಕೆಯನ್ನು ನೀಡಿ ಬಹಿರಂಗ ಪ್ರಕಟಣೆ ನೀಡಿದ್ದು ಬೇರಾರು ಅಲ್ಲ ‘ಅಫ್ತಾಬ್’ ಎಂಬ ಪತ್ರಿಕೆ. ಅದನ್ನು ಮುಖ ವಾಣಿಯಾಗಿ ಬಳಸಿಕೊಂಡಿದ್ದು ಮೊದಲ ಬಾರಿಗೆ ಬಹಿರಂಗವಾಗಿ ಕಣಿವೆ ರಾಜಕೀಯದಲ್ಲಿ ಕೈಯಿಟ್ಟ ಪಾತಕ ಸಂಘಟನೆ ‘ಹಿಜ್ಬುಲ್ ಮುಜಾಹಿದ್ದಿನ್’. ಅಂದರೆ ಪವಿತ್ರ ಹೋರಾಟಗಾರ ಗುಂಪು. ಅಸಲಿಗೆ ಅದು ಹುಟ್ಟಿದ್ದು ಮತ್ತು ಕಣಿವೆಗೆ ಇಳಿದಿದ್ದೇ ಇಂಥಾ ಕಾರಣ ಕ್ಕಾಗಿ. ಇಸ್ಲಾಮಿಸ್ಟ್ ಪರ ಪಾಕ್ ಬೆಂಬಲದಲ್ಲಿ ಅಲ್ಲಿಯೇ ತರಬೇತಾಗಿ ಕಣಿವೆಗೆ ಕಾಲಿಟ್ಟ ಗುಂಪು ಇದು. ಇದರ ಆರಂಭಿಕ ಸಂಖ್ಯೆಯೇ ಅಂದಾಜು ಹತ್ತು ಸಾವಿರ.

ಮಹಮ್ಮದ್ ಅನ್ಸರ್ ಧಾರ್‌ನ ಕನಸಿನ ಕೂಸಾದ, ಇದರ ಫೀಲ್ಡ್ ಕಮಾಂಡರ್ ಆಗಿ ರಂಗಕ್ಕಿಳಿದವನು ಸೈಫುಲ್ಲಾ ಮೀರ್. ಜಾಗತಿಕ ಮೂಲಭೂತವಾದ ಯುದ್ಧದಲ್ಲಿ ಹಿಜ್ಬುಲ್ ಪಾಲ್ಗೊಂಡು ಪವಿತ್ರ ಯುದ್ಧ ಮಾಡಬೇಕೆಂದು ಕನಸು ಕಂಡ ಸಂಘಟನೆಗೆ ಆರಂಭದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ದೊರಕಿತಾದರೂ ಮುಂದೆ ಅದರ ನಡುವನ್ನು ಮುರಿದಿದ್ದು ಭಾರತೀಯ ಸೇನೆ. ಈ ಪ್ರಯತ್ನ ಮತ್ತು ಹಿಜ್ಬುಲ್ ಕನಸು ಆರಂಭವಾದದ್ದು 1980 ರ ಸುಮಾರಿಗೆ ಪಾಕಿಸ್ತಾನದ ಜಿಯಾ ಉಲ್ -ಹಕ್ ಅಕ್ರಮಿತ ಕಾಶ್ಮೀರದ ‘ಜಮಾತ್ ಇ ಇಸ್ಲಾಮಿ’ ಯ ಚೀ- ‘ಅಬ್ದುಲ್ ಬಾರಿ’ ಗೆ ಕರೆ ಮಾಡಿ, ‘ಕಣಿವೆಯಲ್ಲಿ ದಂಗೆ ಹೆಚ್ಚಿಸಬಹುದಾ ನೋಡು. ಸಹಾಯ ಮಾಡುತ್ತೇನೆ, ಅಮೇರಿಕೆಯಿಂದ ಬರುತ್ತಿರುವ ಹಣವನ್ನು ಇತ್ತ ತಿರುಗಿಸುತ್ತೇವೆ’ ಎಂದು ಫಿಟ್ಟಿಂಗ್ ಇಟ್ಟಾಗ.

ಇದರಿಂದ ಎದ್ದು ನಿಂತ ‘ಬಾರಿ’ ನೇರ ಶ್ರೀನಗರಕ್ಕೆ ಬಂದಿಳಿದ. ಇದರ -ಲವಾಗಿ ಇಸ್ಲಾಮಿ ಸ್ಥಾಪಕ ‘ಸಾದುದ್ದಿನ್ ತರ್ಬಲಿ’ಯನ್ನು ತಮ್ಮೊಂದಿಗಿನ ನೇರ ಮಾತುಕತೆ ಅಹ್ವಾನಿದ್ದು ಜಿಯಾ ಉಲ್ ಹಕ್. ಆದರೆ ಸಂಪೂರ್ಣ ನಿಯಂತ್ರಣದ ಪ್ರಸ್ತಾಪ ತಿರಸ್ಕರಿಸಿ ಬೇರೆಯದೇ ಪ್ರಪೋಸಲ್ಲು ಕೊಟ್ಟ ತರ್ಬಲಿ. ಆ ಮೂಲಕ ಕಣಿವೆಯಲ್ಲಿ ನಡೆಸಲಾಗುವ ಕಾರ್ಯಾಚರಣೆಯನ್ನು ಸ್ವತಃ ನಿಯಂತ್ರಣ ಮೂಲಕ ನಡೆಸಬಯಸಿದ್ದ ಹಕ್ ಕನಸಿಗೆ ‘ತರ್ಬಲಿ’ ಮಣ್ಣೆರಚಿದ್ದ. ಏನಿದ್ದರೂ ನಾವೇ ನೋಡಿಕೊಳ್ಳುತ್ತೇವೆ ಆದರೆ ಬೆಂಬಲ ಕೊಡಲೇಬೇಕು. ಗ್ಯಾರಂಟಿಗಾಗಿ ತರಬೇತಿಯ ಮೊದಲ ಬ್ಯಾಚ್‌ನಲ್ಲಿ ನಾನು ಸ್ವತಃ ನನ್ನ ಮಗನನ್ನೇ ಕಳಿಸುತ್ತೇನೆ ಎಂದುಬಿಟ್ಟ.

ತೀರ ಕಟ್ಟರ್ ಅನುಯಾಯಿಯ ಹುಡುಕಾಟದಲ್ಲಿದ್ದ ಹಕ್‌ಗೆ ಇದು ನಿರಾಸೆ ತಂದಿತಾದರೂ ತಾತ್ಪೂರ್ತಿಕವಾಗಿ ಒಪ್ಪಿಕೊಂಡ. ಆದರೆ ಅವನು ನಿರೀಕ್ಷಿ ಸಿದ್ದ ಜೆಹಾದ್ ವೇಗ ದೊರಕದಿದ್ದಾಗ ಸಿಕ್ಕಿದ್ದೆ ಜೆ.ಕೆ.ಎಲ್.ಎಫ್. ಫ್ರಂಟು. ಕೂಡಲೇ ಐ.ಎಸ್.ಐ ಮೂಲಕ ಫ್ರಂಟ್ ಸಂಪರ್ಕ ಸಾಧಿಸಿದ ಹಕ್ ಅದರ ಮೂಲಕ ಜಮಾತ್ ಇಸ್ಲಾಮಿ ಮುಂದಾಳತ್ವದಲ್ಲಿ ಕಾರ್ಯಾಚರಣೆ ಗುಂಪಾಗಿ ನಡೆಸುವಂತೆ ನೋಡಿಕೊಂಡ. ಆಗ ಒಮ್ಮೆಲೆ ಲೈಮ್‌ಲೈಟ್‌ಗೆ ಬಂದವನೇ ಸಯ್ಯದ್ ಗಿಲಾನಿ. ಅದಾಗಲೇ ಇಸ್ಲಾಮಿ ಜಮಾತ್‌ನಿಂದ ವಿಧಾನಸಭಾ ಸದಸ್ಯನೂ ಆಗಿ ರಾಜಕೀಯ ಕೃಪಾಪೋಷಕನ ಗೆಟ್‌ಅಪ್‌ ನಲ್ಲಿದ್ದುದೂ ಸಹಾಯಕವಾಗಿತ್ತು. ಆ ಮೂಲಕ ಎಲ್ಲ ಗುಂಪುಗಳ ಒಗ್ಗೂಡುವಿಕೆಯಲ್ಲಿ ಇತನ ಪಾತ್ರ ದೊಡ್ಡದು ಎನ್ನುತ್ತವೆ ಸುದ್ದಿಗಳು.

ಗಿಲಾನಿ ಮುಂದೆ ಸಂಪೂರ್ಣ ‘ಹುರಿಯತ್ ಪ್ರತ್ಯೇಕತಾವಾದಿ’ ಬಣಗಳ ಸುಪ್ರಿಂ ನಾಯಕನೂ ಆದ. 86 ರಲ್ಲಿ ಹುಟ್ಟಿದ ಹಿಜ್ಬುಲ್ -ಆನ್ಸಾರ್, 1987 ರ ಜಿಯಾ-ಟೈಗರ್ಸ್, ೮೮ ರ ಅಲ್- ಹಮ್ಜಾ, ಅಲ್-ಬದ್ರ್ ಮತ್ತು ಆಂತರಿಕವಾಗಿ ಉತ್ತಮ ಸಂಘಟನೆಯಾಗಿದ್ದ ಅನ್ಸಾರುಲ್-ಇಸ್ಲಾಂಗಳೆಂಬ ಮರಿ, ಕಿರಿಗಳನ್ನೆಲ್ಲ ಒಂದು ಗುಂಪಿನಡಿ ತಂದು ನಿಲ್ಲಿಸುವಲ್ಲಿ ಐ.ಎಸ್.ಐ ಯಶಸ್ವಿಯಾಯಿತು. ‘ಮಸೂದ್ ಸರ್ಫರಾಜ್’ ಎಂಬ ಜಮಾತ್ ನಾಯಕ ಮಾಡಿದ ಈ ಮಹತ್ತರ ಕಾರ್ಯದಿಂದ ಹುಟ್ಟಿದ್ದೇ ಹಿಜ್ಬುಲ್-ಮುಜಾಹಿದ್ದಿನ್. ಅದರ ಸರ್ವತ್ರ ನಾಯಕನಾಗಿ ಮೊದಲ ಆಯ್ಕೆಯಾದವನೇ ಮಹಮ್ಮದ್ ದಾರ್. ಆಗ ಕಾಲಾವಧಿ 1989 ಆಕ್ಟೋಬರ್. ಅದೇ ಅಧಿಕೃತ ದಿನಾಂಕವಾಯಿತು.

ಮಹಮ್ಮದ್ ದಾರ್‌ಗೆ ಈಗ ಅರ್ಜೆಂಟ್ ಆಗಿ ಫಲಿತಾಂಶ ತೋರಿಸಬೇಕಿತ್ತು. ಜಾಗತಿಕ ಒಳವಲಯದ ಪ್ರತ್ಯೇಕತಾವಾದಿಗಳ ಕಣ್ಣು ಇತ್ತಲೆ ಇದೆ ಎಂಬುವು ದೂ ಗೊತ್ತಿತ್ತು. ಭಾರತೀಯ ರಾಜಕೀಯ ಪಲ್ಲಟಗಳನ್ನು ನೋಡುತ್ತಿದ್ದಾಗಲೇ ಕೇಂದ್ರಕ್ಕೆ ವಿರೋಧವಾದ ಪಕ್ಷ ಶ್ರೀನಗರದಲ್ಲಿ ಸರಕಾರ ಹಿಡಿದಿತ್ತು. ಪೋಲಿಸ್ ಮತ್ತು ಮಾಧ್ಯಮಗಳನ್ನು ನಿಯಂತ್ರಿಸಲು ಮೊದಲ ಸೂಚನೆ ಹೋಗಿತ್ತು ಧಾರ್‌ನಿಂದ. ಎಸ್ ಎಂದುಬಿಟ್ಟಿದ್ದರು ಆಯಕಟ್ಟಿನ ಜಾಗದಲ್ಲಿ ಕೂತವರೆಲ್ಲ. ಬಹುಶ: ಸೇನೆ ಮತ್ತು ಪೋಲಿಸರ ಕೈಗಳು ಕಟ್ಟಿ ಹಾಕಿರದಿದ್ದರೆ, ಮಾತು ಮಾತಿಗೂ ದಿಲ್ಲಿಯ ಆರ್ಡರ್‌ಗಾಗಿ ಕಾಯುವ ಪರಿಸ್ಥಿತಿ ಇಲ್ಲದಿದ್ದರೆ ಆವತ್ತಿಗೆ ಕಣಿವೆ ತಹಬಂದಿಗೆ ಬರುತ್ತಿತ್ತು.

ಕಾಶ್ಮೀರ ಕೊಳ್ಳದಲ್ಲಿದ್ದ ಹಿಂದೂಗಳೆಲ್ಲ, ನಿನ್ನೆಯವರೆಗೆ ಜತೆಗಿದ್ದವರಿಗೆ ಇದ್ದಕ್ಕಿದ್ದಂತೆ ಕಾಫೀರರಾಗಿ ಕಾಣಿಸತೊಡಗಿದರು. ಇದಕ್ಕೆ ಬೇಸ್ ಆಗಿ ಬಳಸಿದ್ದು ಮಕ್ಬೂಲ್ ಭಟ್‌ನ ಪ್ರಕರಣ. ಈತ ಅತ್ಯಂತ ಕಟ್ಟರ್ ಉಗ್ರನಾಗಿ ಹಲವು ದಾಳಿಗಳನ್ನು ಶ್ರೀನರಗರದಲ್ಲಿ ನಡೆಸಿದ್ದ. 1965 ರಲ್ಲಿ ‘ನ್ಯಾಶನಲ್ ಲಿಬರೇಷನ್ ಫ್ರಂಟ್’ ಎಂಬ ಉಗ್ರ ಸಂಘಟನೆ ಸ್ಥಾಪಿಸಿ ಬಹಿರಂಗವಾಗಿ ರಕ್ತದಲ್ಲಿ ಬರೆದು ಪ್ರಮಾಣ ವಚನ ಸ್ವೀಕರಿಸಿದ್ದ ಪಾತಕಿ. ಅದಕ್ಕಾಗಿ ಪಡೆಗಳು ಭಟ್‌ನನ್ನು ಜೀವಂತವಾಗಿ ಜೈಲಿಗೆ ದಬ್ಬಿದ್ದವು. ಆಗಿನ ಹೈಕೋರ್ಟ್ ತೀರ್ಪಿನಂತೆ ತಿಹಾರ್ ಜೈಲಿನಲ್ಲಿ ಫೆ. 11. 1984 ರಂದು ಗಲ್ಲಿಗೇರಿಸಲಾಗಿತ್ತು. ಈ ತೀರ್ಪು ನೀಡಿದವರು ನ್ಯಾಯಮೂರ್ತಿ ಕೆ.ಎನ್.ಗಂಜು.(ಈ ಹೆಸರು ನೆನಪಿಟ್ಟುಕೊಳ್ಳಿ. ಕತೆ ಮುಂದಿದೆ) ಈ ಕೇಸನ್ನು ಅತ್ಯಂತ ಆಳವಾಗಿ ಬಳಸಿ ಮೊದಲ ಹಂತ ದಲ್ಲಿ ಸ್ಥಳೀಯರನ್ನು ಪ್ರಚೋದಿಸಿ ಮುಂದೆ ಬಿಡಲಾಯಿತು. ಅದರ ಫಲ ಮತ್ತು ಮುನ್ಸೂಚನೆಯಂತೆ ಮೊದಲ ಬಾರಿಗೆ ಹಿಂದುಗಳ ಮನೆಗಳ ಮೇಲೆ ಕಲ್ಲೆಸೆತದ ಘಟನೆ ನಡೆಯಿತು. ಅಲ್ಲಿಂದ ನಿರಂತರತೆ ಪಡೆದ ದಳ್ಳುರಿ 1989ರ ಜೂನ್ ಹೊತ್ತಿಗೆ ಕುದಿಯುವ ಬಿಂದುವಿನ ಬಾಗಿಲಿಗೆ ಬಂದು ನಿಂತಿತ್ತು.

ಆಗ ಸಶಸ್ತ್ರವಾಗಿ ಎಂಟ್ರಿ ಕೊಟ್ಟಿದ್ದೆ ಹಿಜ್ಬುಲ್ ಪಾತಕಿಗಳು. ಕಾರಣ ಜನ ಸಾಮಾನ್ಯರ ಕೈಗಿನ್ನೂ ಆ ರೇಂಜಿನ ತುಪಾಕಿ ಬಂದಿರಲಿಲ್ಲ. ಅಲ್ಲೊಂದು ಇಲ್ಲೊಂದು ಬಂದೂಕು ಸಿಡಿಯುತ್ತಿದ್ದವಾದರೂ ತೀರ ಎ.ಕೆ.47 ಲೋಡುಗಟ್ಟಲೇ ಗಲ್ಲಿಗಲ್ಲಿಗೆ ಬಂದಿಳಿದಿರಲಿಲ್ಲ. ಆವತ್ತು ರಾತ್ರಿಯೇ ಕಶ್ಮೀರಿ ಹಿಂದೂ ಪಂಡಿತರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಅದಾಗಲೇ ಇಲ್ಲ. ಕಲ್ಲೆಸತ ಮತ್ತು ಹಿಂದೂ ಹುಡುಗಿಯರ ಮೇಲೆ ಎರಗುವ ಧಮಕಿಯಂತಹ ಘಟನೆಗಳು ವರದಿಯಾದವು. ಕಾಶ್ಮೀರಿ ಹಿಂದೂಗಳಿಗೆ ಪೋಲಿಸ್ ಸಹಾಯವೂ ಸಿಕ್ಕಲಿಲ್ಲ. ಸರಕಾರ ಇದ್ದಿದ್ದು ಫಾರೂಕ್ ಅಬ್ದುಲ್ಲನದ್ದು. ನಂತರ ಮೊದಲ ಮೆಟ್ಟಿಲಾಗಿ ಜೆ.ಕೆ.ಎಲ್.ಎಫ್. ಮೈಕುಗಳನ್ನು ಹಿಡಿದು ಜೀಪುಗಳಲ್ಲಿ ತಿರುಗುತ್ತಾ ಸವಾಲು ಹಾಕತೊಡಗಿತ್ತು.

ಆಗಲೇ ಅಲ್ಲಿಯವರೆಗೂ ಕಂಡೂ ಕಾಣದಂತೆ ಹಿಂದೂಗಳನ್ನು ಒಗ್ಗೂಡಿಸಿ ಅವರ ಮತ್ತು ಪ್ರತ್ಯೇಕತಾವಾದಿಗಳ ಮಧ್ಯೆ ಗೋಡೆಯಾಗಿ ನಿಂತಿದ್ದ ಆರ್.ಎಸ್.ಎಸ್. ಸ್ವಯಂ ಸೇವಕ, 1975ರಲ್ಲಿ ಇಂದಿರೆಯ ತುರ್ತು ಪರಿಸ್ಥಿತಿ ವಿರೋಧಿಸಿ ಲಾಲ್‌ಚೌಕ್ ನಲ್ಲಿ ಕೇವಲ ಮೂರು ಜನರನ್ನು ಇರಿಸಿಕೊಂಡು ಸತ್ಯಾಗ್ರಹ ಹೂಡಿದ್ದ ಹೋರಾಟಗಾರ ಟೀಕಾಲಾಲ್ ಟಪ್ಲೂ ಬಹಿರಂಗವಾಗಿ ರಂಗಕ್ಕಿಳಿದುಬಿಟ್ಟರು. ಜಮ್ಮು ಹೈಕೋರ್ಟಿನಲ್ಲಿ ವಕಾಲತ್ತು ಮಾಡುತ್ತಿದ್ದು ರಿಂದ ಇಂಥವುಗಳ ಅರಿವೂ ಅವರಿಗಿತ್ತು. ಅವರನ್ನು ಸಂಘದಲ್ಲಿ ಪ್ರೀತಿಯಿಂದ ‘ಲಾಲಜೀ’ ಎಂದೇ ಕರೆಯಲಾಗುತ್ತಿತ್ತು.

ಬಿ.ಜೆ.ಪಿ ಕಾಶ್ಮೀರ ಜಿಲ್ಲಾಧ್ಯಕ್ಷ ಟಪ್ಲೂ ಹಿಂದೂಗಳನ್ನು ಒಗ್ಗೂಡಿಸಿ ಹೋರಾಡತೊಡಗಿದರು. ಸ್ವತಃ ವಕೀಲನಾಗಿದ್ದ ಟಪ್ಲೂ ಅಪ್ಪಟ ಕಾಶ್ಮೀರಿ ಪಂಡಿತ ಮಾತ್ರವಲ್ಲ ತುಂಬ ಓದಿಕೊಂಡಿದ್ದ ಪ್ರಬಲ ವಾಗ್ಮಿ. ಟಪ್ಲೂ ಮಾತಾಡುತ್ತಿದ್ದರೆ ಪಾತಕಿಗಳೂ ಬಾಯಿಬಿಟ್ಟುಕೊಂಡು ಕದ್ದು ಕೇಳುತ್ತಿದ್ದರಂತೆ. ಅವರನ್ನು ಬೆನ್ನಟ್ಟಿ ಬೆದರಿಸುವ, ಮನೆಗಳ ಮೇಲೆ ಕಲ್ಲೆಸೆಯುವ ಘಟನೆಗಳಿಗೂ ಟಪ್ಲೂ ಹಿಂದೆಗೆಯಲ್ಲಿಲ್ಲ. ಗಟ್ಟಿ ಗುಂಡಿಗೆಯ ತೆಳು ದೇಹದ ಮನುಷ್ಯ ಟಪ್ಲೂ ದನಿಯಲ್ಲಿ ಮಾತ್ರ ಭಯಾನಕ ಕಮಾಂಡಿಂಗ್. ದೊಡ್ಡ ದನಿಯಲ್ಲಿ ನಿಖರವಾಗಿ ಮಾತಾಡುತ್ತಿದ್ದ ಟಪ್ಲೂ ಮನೆಯ ಸುತ್ತಮುತ್ತ ಗಾಡಿ ನಿಲ್ಲಿಸಿ ಕಾಯುವ ಮತ್ತು ಆಗೀಗ ಬೆನ್ನಟ್ಟಿ ಬೆದರಿಸುವ, ಕುಟುಂಬವನ್ನು ಹೊತ್ತೊಯ್ಯುವ ಬೆದರಿಕೆಗಳ ಮಧ್ಯೆಯೂ, ಇವೆಲ್ಲವನ್ನು ವಿರೋಧಿಸಿ ಜೆ.ಕೆ.ಎಲ್.ಎಫ್ ವಿರುದ್ಧ, ಉಗ್ರ ಅಡಳಿತದ ವಿರುದ್ಧ ಸಂಘಟನೆ ಬಲಗೊಳಿಸಿದ್ದರು. ಆದರೆ ಟಪ್ಲೂವಿನ ಸಮಯ ಸರಿಯಾಗಿರಲಿಲ್ಲ…

…ಮುಂದುವರೆಯುವುದು