Thursday, 12th December 2024

Vishweshwar Bhat Column: ವಿಮಾಣ ಪ್ರಯಾಣದಲ್ಲಿ ಟರ್ಬುಲೆನ್ಸ್

ವಿಮಾನ ಪ್ರಯಾಣ ವೇಗವೊಂದೇ ಅಲ್ಲ, ಸುರಕ್ಷಿತವೂ ಹೌದು. ಆದರೂ ಕೆಲವರು ವಿಮಾನದಲ್ಲಿ ಪ್ರಯಾಣಿಸಲು ಭಯ ಪಡುತ್ತಾರೆ. ಇದಕ್ಕೆ ಕಾರಣ, ವಿಮಾನ ಮೇಲಕ್ಕೆ ಹಾರುವಾಗ ಜೋರಾಗಿ ಅಡುವುದು. ಟರ್ಬುಲೆನ್ಸ್ (ಪ್ರಕ್ಷುಬ್ಧ) ಆದಾಗ ಇಡೀ ವಿಮಾನ ಗಾಳಿಯಲ್ಲಿ ಹುಯ್ದಾಡುತ್ತದೆ. ಇದು ಎಂಥವರಲ್ಲೂ ಭಯವನ್ನುಂಟು ಮಾಡುತ್ತದೆ. ವಿಮಾನ ಮೂವತ್ತೆಂಟು ಸಾವಿರ ನಲವತ್ತು ಸಾವಿರ ಅಡಿ ಎತ್ತರದಲ್ಲಿ ಹಾರುವಾಗ ಏಕಾಏಕಿ ಹುಯ್ದಾಡಲು ಆರಂಭಿಸಿದರೆ, ಪ್ರಾಣ ಹೋದ ಅನುಭವವಾಗುತ್ತದೆ.

ಕೆಲವೊಮ್ಮೆ ಇದು ಪ್ರಯಾಣಿಕರಿಗೆ ಅಸ್ವಸ್ಥತೆಯನ್ನುಂಟು ಮಾಡಬಹುದು. ಹಾಗಂತ ವಿಮಾನ ಬಿದ್ದು ಹೋಗುವು ದಿಲ್ಲ ಅಥವಾ ದುರಂತ ಸಂಭವಿಸುವುದಿಲ್ಲ. ವಿಮಾನ ಸುರಕ್ಷಿತವಾಗಿರುತ್ತದೆ. ಟರ್ಬುಲೆನ್ಸ್ ಪರಿಣಾಮಗಳನ್ನು ತಡೆದುಕೊಳ್ಳಲು ಶಕ್ಯವಾಗುವ ರೀತಿಯಲ್ಲಿ ವಿಮಾನಗಳನ್ನು ನಿರ್ಮಿಸಲಾಗಿರುತ್ತವೆ. ಆದರೂ ವಿಮಾನ ಆಗಸದಲ್ಲಿ ಅಷ್ಟು ಎತ್ತರದಲ್ಲಿ ಹಾರುವಾಗ ಹಠಾತ್ ಅಲುಗಾಡಲಾರಂಭಿಸಿದರೆ, ಅನುಭವಿ ಪ್ರಯಾಣಿಕರ ಎದೆ ಗುಂಡಿಗೆ ಪತರಗುಟ್ಟಲಾರಂಭಿಸುತ್ತದೆ. ವಿಮಾನ ಸ್ವಲ್ಪ ಅಲುಗಾಡಿದರೂ ಸಾಕು, ನಿಮ್ಮ ಸ್ಥಾನಕ್ಕೆ ಮರಳುವಂತೆ, ಸೀಟ್ ಬೆಲ್ಟನ್ನು ಕಟ್ಟಿಕೊಳ್ಳುವಂತೆ, ಟಾಯ್ಲೆಟ್ ಬಳಸದಂತೆ ಪೈಲಟ್ ಧ್ವನಿವರ್ಧಕದ ಮೂಲಕ ಆದೇಶ ನೀಡುತ್ತಾನೆ.

ವಿಮಾನ ಅಲುಗಾಡುವುದು ಆತಂಕಕಾರಿಯಾಗಿರುತ್ತದೆ, ಆದರೆ ಹಾನಿಕಾರಕವಲ್ಲ ಎಂದು ಎಷ್ಟೇ ಹೇಳಿದರೂ ಪ್ರಯಾಣಿಕರಿಗೆ ಸಮಾಧಾನವಾಗುವುದಿಲ್ಲ. ಅವರು ತಕ್ಷಣ ಭಗವಂತನನ್ನು ಪ್ರಾರ್ಥಿಸಲಾರಂಭಿಸುತ್ತಾರೆ. ವಿಮಾನ ಬಿದ್ದರೆ ಏನು ಗತಿ ಎಂದು ಚಿಂತಿಸಲಾರಂಭಿಸುತ್ತಾರೆ. ಅಷ್ಟಕ್ಕೂ ಟರ್ಬುಲೆ ಎಂದರೆ ಗಾಳಿಯಲ್ಲಿನ ಅಸ್ಥಿರತೆ. ಇದು ವಿವಿಧ ಕಾರಣಗಳಿಂದ ಉಂಟಾಗಬಹುದು, ಉದಾಹರಣೆಗೆ ಬಿಸಿ ಮತ್ತು ತಂಪಾದ ಗಾಳಿಯ ಸಂಪರ್ಕ, ಗಾಳಿಯ ಹರಿವು ಅಥವಾ ಮಳೆಬಿಲ್ಲುಗಳು. ಗಾಳಿ ಜೋರಾಗಿ ಬೀಸಲಾರಂಭಿಸಿದಾಗ, ಮೋಡಗಳು ವೇಗವಾಗಿ ಚಲಿಸಲಾರಂಭಿ
ಸಿದಾಗ ಅದರ ಪರಿಣಾಮ ವಿಮಾನ ಹಾರಾಟದ ಮೇಲಾಗುತ್ತದೆ.

ವಿಮಾನವು ಗಾಳಿಯಲ್ಲಿ ಚಲಿಸುವಾಗ, ಗಾಳಿಯ ಒತ್ತಡದಲ್ಲಿ ಆಗುವ ಬದಲಾವಣೆಯಿಂದ ವಿಮಾನ ಕಂಪಿಸುವು ದರಿಂದ ಟರ್ಬುಲೆ ಉಂಟಾಗಬಹುದು. ಇದು ವಿಮಾನದ ಎತ್ತರ, ಹವಾಮಾನ ಮತ್ತು ಗಾಳಿಯ ವೇಗದ
ಮೇಲೆಯೂ ಅವಲಂಬಿತವಾಗಿರುತ್ತದೆ. ಟರ್ಬುಲೆನ್ಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ಎಲ್ಲ ಪ್ರಯಾ ಣಿಕರ ಯೋಚನೆಯಲ್ಲಿ ಹಾದುಹೋಗುತ್ತದೆ. ಇದಕ್ಕೆ ಉತ್ತರ – ಇಲ್ಲ. ಟರ್ಬುಲೆನ್ಸ್‌ನಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಅದರ ಪರಿಣಾಮವನ್ನು ಕಡಿಮೆ ಮಾಡಬಹುದು.

ಉದಾಹರಣೆಗೆ, ವಿಮಾನದ ಮಧ್ಯದಲ್ಲಿ ಕುಳಿತುಕೊಳ್ಳಬೇಕು ಇಲ್ಲಿ ಟರ್ಬುಲೆನ್ಸ್ ಕಡಿಮೆ ಇರುತ್ತದೆ. ಬೆಳಗಿನ ಜಾವ ಅಥವಾ ಸಂಜೆಯ ವೇಳೆ ಪ್ರಯಾಣಿಸಬೇಕು. ಈ ಸಮಯದಲ್ಲಿ ಗಾಳಿ ಶಾಂತವಾಗಿರುತ್ತದೆ. ಹಾಗಂತ ಆ ಸಮಯ ದಲ್ಲಿ ಟರ್ಬುಲೆನ್ಸ್ ಸಂಭವಿಸುವುದೇ ಇಲ್ಲ ಎನ್ನುವಂತಿಲ್ಲ. ವಿಂಡೋ ಸೀಟ್‌ನಲ್ಲಿ ಕುಳಿತುಕೊಳ್ಳಬಾರದು. ವಿಂಡೋ ಸೀಟ್‌ನಲ್ಲಿ ಕುಳಿತಾಗ ಟರ್ಬುಲೆನ್ಸ್‌ನ ಪರಿಣಾಮ ಹೆಚ್ಚಾಗಿ ಅನುಭವವಾಗುತ್ತದೆ. ಆಹಾರವನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ಟರ್ಬುಲೆನ್ಸ್‌ನ ಸಮಯದಲ್ಲಿ ಆಹಾರವನ್ನು ಸೇವಿಸುವುದು ಸುರಕ್ಷಿತವಲ್ಲ. ವಿಮಾನ ಅಡುವಾಗ ಆಹಾರಗಳು ಮೈಮೇಲೆ ಬಿದ್ದು ಮತ್ತಷ್ಟು ಗಾಬರಿಯನ್ನು ಮೂಡಿಸಬಹುದು.

ವಿಮಾನ ಪ್ರಯಾಣದುದ್ದಕ್ಕೂ ಸೀಟ್ ಬೆಲ್ಟ ಧರಿಸಿರುವುದು ಸುರಕ್ಷಿತ. ವಿಮಾನ ಹೊರಡುವ ಮುನ್ನ ಮತ್ತು ಇಳಿಯುವಾಗ ಟರ್ಬುಲೆನ್ಸ್ ಹೆಚ್ಚಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಅದೆಷ್ಟೇ ಬಲವಾದ ಟರ್ಬುಲೆ ಸಂಭವಿಸಲಿ, ವಿಮಾನಕ್ಕೆ ಏನೂ ಆಗುವುದಿಲ್ಲ ಎಂಬು‌ದನ್ನು ಗಟ್ಟಿಯಾಗಿ ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳ ಬೇಕು. ಯಾವ ಕಾರಣಕ್ಕೂ ಭಯ ಪಡಬಾರದು. ಕಾರಣ ಪೈಲಟ್‌ಗಳು ಈ ಸಂದರ್ಭವನ್ನು ನಿಭಾಯಿಸಲು ಸುಸಜ್ಜಿತರಾಗಿರುತ್ತಾರೆ. ಗಗನಸಖಿ ಯರ ಸೂಚನೆಗಳನ್ನು ಪಾಲಿಸಬೇಕು. ಅವರು ನಿಮಗೆ ಸುರಕ್ಷಿತವಾಗಿರಲು ಎಲ್ಲ ಸಹಾಯ ಮಾಡುತ್ತಾರೆ.