ಹಳ್ಳಿಕಟ್ಟೆ
ವೆಂಕಟೇಶ್ ಆರ್.ದಾಸ್
ಏನ್ಲಾ ಸೀನ, ಎಲೆಕ್ಷನ್ ಆದ್ಮೇಲೆ ಹೋದ ಎಮ್ಮೆಲ್ಲೆ ಐದು ವರ್ಷ ಆದ್ಮೇಲೆ ಊರ್ ಕಡೆ ಕಾಣಿಸ್ಕಂಡಂಗೆ ಬೋ ದಿನಾದ್ಮೇಲೆ ಇವತ್ತು ಕಾಣಿಸ್ಕೋತಿದ್ದೀ ಯಲ್ಲೋ, ಎತ್ಲಾಗ್ ಹಾಳ್ ಆಗಿ ಹೋಗಿದ್ಯೋ, ಅಂದ್ಕೊಂಡು ಹಳ್ಳಿ ಕಟ್ಟೆ ಮ್ಯಾಲ್ ಬಂದು ಟವಲ್ ತಗ್ದು ನೆಲ ಒರೆಸ್ಕಂಡ್ ಕೂತ್ಕಂಡ ಪಟೇಲಪ್ಪ.
ಬಾ ದೊಡ್ಡಪ್ಪ, ನಾನುವೇ ದೊಡ್ಮನ್ಸ ಆಗಿವ್ನಿ ಕಣಾ, ನಂಗೂವೆ ವಸಿ ಜವಾಬ್ದಾರಿ ಅನ್ನದ್ ಬಂದಂದೆ, ಅದುಕ್ಕೆ ಬೆಂಗಳೂರ್ ಕಡೆ ಹೋಗಿ, ಇಧಾನ್ಸೌಧ ಎಲ್ಲ ಸುತ್ಕಂಡು, ನಿಮ್ಮಂತವ್ರ ಕಸ್ಟ ಎಲ್ಲ ಬಗೆಹರಸೋ ವತ್ಗೆ ನನ್ ಬೆವ್ರಿಳಿದ್ ಹೋಯ್ತದೆ, ನನ್ನಂಗೆ ಪಾಪ ನಮ್ಮೆಲ್ಲೆಗಳು ಕಷ್ಟ ಪಡ್ತಾರೆ ಕಣ್ ದೊಡ್ಡಪ್ಪ ಅಂತ ದೊಡ್ಡಪ್ಪನ್ ಪಕ್ಕಕ್ಕೆ ಬಂದ್ ಕೂತ್ಕಂಡ ಗುಡ್ದಳ್ಳಿ ಸೀನ.
ಊ ಕಣ್ ಬುಡಪ್ಪ, ನಿಮ್ಮ ಎಮ್ಮೆಲ್ಲೆಗಳು ಬೆವ್ರು ಹರ್ಸೋದ್ನಾ ನಾ ಕಾಣ್ನಾ, ನಿಮ್ ಸಾಹುಕಾರ್ರು ಡೆಲ್ಲಿಲಿ, ಬಾಂಬೆ ಬಾಯ್ಸು ಇಮಾನ ಇಳ್ದು ಬರ್ವಾಗ, ಮಾಡಾಳು ಮೆರವಣಿಗೆ ಮಾಡಿಸ್ಕಳ್ವಾಗ, ನಿಮ್ ಕೆಪಿಸಿಸಿ ಅಧ್ಯಕ್ಷ್ರು ತಿಹಾರ್ಗೆ ಹೋದಾಗ ಹೆಂಗೆಂಗೆ ಬೆವ್ರು ಹರಿತು ಅಂತ ಇಡೀ ರಾಜ್ಯದ್ ಜನಾನೇ
ನೋಡ್ಯದೆ ಕಣ್ ಬುಡ್ಲಾ, ಈಗೇನ್ ಫೇಸ್ ಬುಕ್ ಹೈಕ್ಳೇ ಲೈವ್ ಕೊಟ್ಟುಬುಡ್ತಾವೆ ಅಂದ ಪಟೇಲಪ್ಪ.
ಪರ್ವಾಗಿಲ್ಲ ಕಣ್ ದೊಡ್ಡಪ್ಪ ನೀನುವೆ ಬಲೇ ಅಪ್ಡೇಟ್ ಆಗಿದ್ದೀಯಾ, ನಿಂಗೇನ್ ಹೊಟ್ಟೆ ಉರಿ ತಕಾ, ಎಲೆಕ್ಷನ್ ಬಂದಾಗ ಮರೀದೆ ಬಂದು ನಿಂಗೆ ಎಲ್ಡ್ ಓಟಿ ಪಾಕೇಟು, ಕೋಳಿ ಬಾಡು ಕೊಟ್ಟೋಗಕುಲ್ವೇ? ಕುಂತುದ್ ಜಾಗುಕ್ಕೆ ಇಷ್ಟೆಲ್ಲ ತಂದ್ಕೊಟ್ರು ನಿಂದೇನ್ ನೋಯ್ತದೆ ಮುಚ್ಕಂಡ್ ಹೋಗಿ, ಮಿಡ್ಲಿಸ್ಕೂಲ್ಲಿ ವೋಟ್ ಹಾಕಿ ಬರದಷ್ಟೆ ತಾನೇ ನಿನ್ ಕ್ಯಾಮೆ ಅಂದ ಸೀನ.
ಊ ಕಣ್ಲಾ, ನಮ್ಮಂಥ ಮೂಡ್ನನ್ ಮಕ್ಕಳೆಲ್ಲ ಒಂದ್ ಓಟಿ ಪಾಕಿಟು, ಕೋಳಿ ಬಾಡ್ಗೆ ವೋಟ್ ಹಾಕಿನೆಯಾ ನಮ್ ದೇಸ ಹಿಂಗಾಗಿರದು, ಅದನ್ನ ಬುಟ್ಟು ಸರಿಯಾದ್ ಬಡ್ಡೀಮಗಂಗೆ ವೋಟ್ ಹಾಕಿ, ನಮಗೆ ಬೇಕಿರೋ ಕೆಲ್ಸ ಮಾಡಿಕೊಟ್ಟು ಮುಂದುಕ್ಕೋಗೋ ಗಿರಾಸ್ತಾ ಅಂದಿದ್ರೆ ಯಾವ್ ಎಮ್ಮೆಲ್ಲೆನೂ ಹಿಂಗೆ ಅವ್ರಿಗ್ ಬೇಕಾದಂಗೆ ಪರ್ಸಂಟೇಜ್ ತಗಂಡು ಕೆಲ್ಸ ಮಾಡ್ತಿರಲಿಲ್ಲ ಅಂದ ಪಟೇಲಪ್ಪ.
ಬುಡು ದೊಡ್ಡಪ್ಪ, ಈ ಸತಿ ಹಂಗಾದ್ರೆ ನಾವ್ಯಾರು ಏನು ಈಸ್ಕಳ್ಳದಂಗೆ ವೋಟ್ ಹಾಕಿ ಸಾಚಾ ಆಗ್ ಬುಡುಮಾ, ಆಗ್ಲಾರುವೆ ನಮ್ಮೆಲ್ಲೆಗಳೆಲ್ಲ ನಾವೇಳ್ದಂಗೆ ಕೇಳಿ, ನಮಗ್ ಬೇಕಾದ್ ಕೆಲ್ಸವ ಮಾಡ್ಕೊಡ್ತಾರಾ ನೋಡನಾ, ಅಂತ ಒಂದ್ ಕಾಲ ಬಂದ್ರು ಬಂದತ್ತು ಅಂತ ಪಟೇಲಪ್ಪನ್ ಸಮಾಧಾನ ಮಾಡ್ದ ಸೀನ. ಊ ಕಣ್ ಬುಡ್ಲಾ ಬತ್ತದೆ, ಅವ್ರೇನಾರ ಮಾಡ್ಲಿ ನಾವಂತೂ ನಿಯತ್ತಾಗ್ ಹೋಗಿ ವೋಟ್ ಹಾಕುಮಾ, ಹಂಗೆಯಾ ನಮ್ ಸಿಟಿನಲ್ಲಿರೋ ಸಿಡಿಮಿಡಿ ಸಿಂಗಾರಪ್ಪಗೋಳು, ವೋಟಾಕ ದಿನ ಸೂಟಿ ಸಿಕ್ತು ಅಂತ ಕಾರ್ ಹತ್ಕಂಡು ಊಟಿ ಕಡೀಕ್ ಹೋಗೋ ಬದ್ಲು, ಊರ್ ಕಡೀಕ್ ಬಂದು, ಇಲ್ಲ ಮನೇತಾವ್ಲೇ ಇರೋ ವೋಟಿನ್ ಬೂತ್ ಕಡೀಕ್ ಬಂದು ವೋಟಾಕ್ಲಿ ನೋಡಾನ ಅಂದ ಪಟೇಲಪ್ಪ.
ಹಾಕ್ತಾರೆ ಕಣ್ ದೊಡ್ಡಪ್ಪೋ, ಅವ್ರಿಗುವೇ ಇತ್ತೀಚ್ಗೆ ಬುದ್ದಿ ಬತ್ತಾ ಐತೆ, ವೋಟ್ ಹಾಕದು ಎಷ್ಟು ಇಂಪಾರ್ಟೆಂಟು ಅಂತಾ ಗೊತ್ತಾಯ್ತೈತೆ, ಅದ್ಕೆ ಎಲೆಕ್ಷನ್ ಕಮೀಷನ್ನೋರುವೆ ಭಲೇ ಪ್ರಯತ್ನ ಮಾಡಿ, ವೋಟ್ ಮಾಡೋದನ್ನು ಜಾಸ್ತಿ ಮಾಡೋಕ್ ಕೆಲ್ಸ ಮಾಡ್ತಾವ್ರೆ, ಪಾರ್ಟಿನೋರ್ ಮಾತ್ರ ಟಿಕೆಟ್
ಕೊಡೋದ್ರು ಕಡೀಗ್ ತಲೆ ಕೆಡಿಸ್ಕಂಡವ್ರೆ ಅಂದ ಸೀನ. ಊ ಕಣ್ಲಾ ಸೀನ ಮರ್ತಿದ್ದೆ, ಟಿಕೆಟ್ ಕೊಡೋ ಶಾಸ ಎಲ್ಲಿಗಂಟ ಬಂದೈತ್ಲಾ, ಕುಮಾರಣ್ಣ ಏನೋ ಮೊದ್ಲು ಕಂತು ಬುಟ್ಬುಟ್ಟು, ಎರಡನೇ ಕಂತು ಬುಡಕ್ಕೆ ಯಾರ್ಯಾರ್, ಬೇರೆ ಪಾರ್ಟಿಂದ ನೆಗೀತಾರೆ ನೋಡ್ಕಳ್ಳನಾ ಅಂತೇಬೋ ಸುಮ್ನೈತಂತೆ, ಉಳಿದೋರ್ ಕತೆ ಏನ್ಲಾ? ಕಮಲದೋರು, ಕೈನೋರು ಏನಾ ಮಾಡ್ತಾವ್ರೆ ಅಂದ ಪಟೇಲಪ್ಪ.
ಕಮಲದೋವ್ರ ಟಿಕೆಟ್ ಕಿಚ್ಚನ್ನಲ್ಲಿ ಫಿಕ್ಸ್ ಆಗಲ್ಲ ಅಂತ ಹೇಳಿಲ್ವೇ ಸಿ.ಟಿ.ರವಿ ಸಾಹೇಬ್ರು, ಹಿಂಗಾಗಿ, ಅದು ಡೆಲ್ಲಿನಲ್ಲೇ ಫೈನಲ್ ಆಗಿ, ಕೊನೆ ಗಳಿಗೇಲ್ ಬಂದು ಎದೆ ಮೇಲೆ ಕೂತ್ಕತ್ತದೆ. ಇನ್ನೂ ಕೈ ಪಾರ್ಟಿನೋರ್ದು ಇಲ್ಲೆ ಕಿತ್ತಾಡ್ಕೋಂಡು ಫೈನಲ್ ಮಾಡುದ್ರುವೆ, ಕೊನೆಗೆ ಸೈನ್ಗಾದ್ರುವೆ ತುಘಲಕ್ ರೋಡ್ ಕಡೀಕ್ ಹೋಗಿ ಬರ್ಲೇಬೇಕು, ಇನ್ನೂ ತೆನೆ ಹೊತ್ತವ್ರ ಟಿಕೆಟ್ ತ್ವಾಟದ್ ಮನೇಲಿ ಆಯ್ತದೆ, ರವಿಯಣ್ಣ ಹೇಳ್ದಂಗೆ ಕಿಚ್ಚನ್ನಲ್ಲೂ ಆಯ್ತದೆ. ಒಟ್ನಲ್ಲಿ ಎಲ್ಲ ಪಾರ್ಟಿನೋರು ಅದೇ ಕೆಲ್ಸ ಮಾಡ್ತಾವ್ರೆ ಕಣ್ ತಕಾ ಅಂದ ಸೀನ.
ಏನೋ ಮಾಡಪ್ಪ, ಒಟ್ನಲ್ಲಿ ಮುಂದಿನ್ ವಾರದಿಂದ ಎಲೆಕ್ಸನ್ ಜೋರ್ ಆಯ್ತದೆ, ಊರಲ್ಲಿರೋ ಹೈಕ್ಳೆಲ್ಲ ಕುಡ್ದು ಕುಡ್ದು ಕಂಡೋರ್ ಮನೆ ಜಗ್ಲಿ ಮ್ಯಾಲೆ ಮಲೀಕತ್ತವೆ, ಅವುಕ್ಕೆಲ್ಲ ಮುಂದಿನ್ ಸಲುಕ್ಕಾದ್ರೂವೆ ಒಳ್ಳೆಯವ್ರಿಗೆ ವೋಟಾಕಿ, ಗೆಲ್ಲಿಸ್ಕಂಡು ವಸಿ ಮರ್ಯಾದೆಗಿರೋ ಯಾವ್ದಾದ್ರೂ ಕೆಲ್ಸ ಮಾಡೋ ಹಂಗಾಗ್ಲಿ ಅಂತ ಹಾರೈಸ್ತಿನಿ ಕಣ್ ಬುಡ್ಲಾ ನಾನು, ಈಗ ಹೊತ್ತಾಗ್ಯದೆ ಮನೆ ಕಡೀಕ್ ಹೋಯ್ತೀನಿ, ನಾಳಿಕ್ಕೆ ಸಿಕ್ತೀನಿ ಬಾರ್ಲಾ ಇದೇ ಟೇಮಿಗೆ ಅಂತ ಎದ್ದು, ಕರವಲ್ಲಿ ಕೊಡಿಕೊಂಡು ಮನೆ ಕಡಿಕ್ ಒಂಟ ಪಟೇಲಪ್ಪ, ಯಾವ್ದೋ ಪಾರ್ಟಿದು ವ್ಯಾನ್ ಬತ್ತು ಹತ್ಕೊಂಡು ಪ್ಯಾಟೆ ಕಡೀಕ್ ಹೊಂಟ ಗುಡ್ದಳ್ಳಿ
ಸೀನ.