ವಿಶ್ವವಾಣಿ ಪತ್ರಿಕೆಯ ವರದಿಗೆ ಸ್ಪಂದಿಸಿದ ಸರಕಾರ
ಬೆಂಗಳೂರು: ಬಸವಕಲ್ಯಾಣದ ಹರಳಯ್ಯ ವೃತ್ತದ ಪಕ್ಕದಲ್ಲಿರುವ ಬಸವ ವನ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ ಎಂಬ ವಿಶ್ವವಾಣಿ ಪತ್ರಿಕೆಯ ವರದಿಗೆ ಸರಕಾರ ಸ್ಪಂದಿಸಿದೆ. ಈ ಬಗ್ಗೆ
ಪ್ರತಿಕ್ರಿಯಿಸಿರುವ ಬಸವ ಕಲ್ಯಾಣ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಬಸವ ವನದ ನಿರ್ವಹಣೆ
ಕಾರ್ಯವು ಪ್ರಗತಿಯಲ್ಲಿದ್ದು, ಉದ್ಯಾನವನ ನಿರ್ವಹಣೆ ಹಾಗೂ ಸಂರಕ್ಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವವಾಣಿ ವರದಿಯನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾ ಧಿಕಾರಿ ಡಾ.ವೈಷ್ಣವಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಿಂದ ಎಚ್ಚೆತ್ತು ಕೊಂಡಿರುವ ತೋಟಗಾರಿಕಾ ಅಧಿಕಾರಿಗಳು ಬಸವ ಕಲ್ಯಾಣ ಅಭಿವೃದ್ಧಿಯ ಆಯುಕ್ತರಿಗೆ ಪತ್ರ ಬರೆದು ಮುಂದಿನ ದಿನದಲ್ಲಿ ಬಸವ ವನ ಸಂರಕ್ಷಿಸುವುದಾಗಿ ತಿಳಿಸಿದ್ದಾರೆ.