Friday, 22nd November 2024

Vishweshwar Bhat Column: ಸಾಯ್ತಾನೆ, ಸಾಯಲಿ, ಸತ್ತಿದ್ದೆ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನನಗೆ ಸಿಹಿ ಪದಾರ್ಥ ಅಂದ್ರೆ ಪ್ರಾಣ, ನನಗೆ ಕ್ರಿಕೆಟ್ ಅಂದ್ರೆ ಪ್ರಾಣ, ನನಗೆ ಡಾ.ರಾಜ್‌ಕುಮಾರ್ ಸಿನಿಮಾ ಅಂದ್ರೆ ಪ್ರಾಣ’ ಎಂದು ಹೇಳುವುದನ್ನು ಕೇಳಿರಬಹುದು. ‘ಬಹಳ ಇಷ್ಟ, ಅತೀವ ಇಷ್ಟ’ ಎಂದು ಹೇಳುವಾಗ ‘ಪ್ರಾಣ’ ಎಂದು ಹೇಳುವುದುಂಟು. ಪ್ರಾಣ ಅಂದರೆ ಉಸಿರು ಎಂದರ್ಥ.

ಅತೀವ ಇಷ್ಟ ಎಂದು ಹೇಳುವಾಗ ಪ್ರಾಣದ ವಿರುದ್ಧಾರ್ಥ ಪದವಾದ ‘ಸಾವು’ ಪದವನ್ನು ಬಳಸುವುದು ಮಾತ್ರ ವಿಚಿತ್ರವೇ. ‘ಆತ ಸ್ಕಾಚ್ ಅಂದ್ರೆ ಸಾಯ್ತಾನೆ, ಆತ ಎಣ್ಣೆಯ ಪದಾರ್ಥಗಳೆಂದ್ರೆ ಸಾಯ್ತಾನೆ’ ಎಂದು ಹೇಳುವುದನ್ನು ಕೇಳಿರಬಹುದು. ‘ಆತ ಸತ್ತು ಹೋಗಲಿ, ನಾನು ಚಿಂತಿಸುವುದಿಲ್ಲ’, ‘ಆತ ಸಾಯಲಿ, ನನಗೇನು?’ ಎಂದು ಹೇಳುವು ದನ್ನು ಕೇಳಿರಬಹುದು.

ಇಲ್ಲಿ ಸಾಯಲಿ ಅಂದರೆ ನಿಜಕ್ಕೂ ಸಾಯಲಿ ಎಂಬರ್ಥದಲ್ಲಿ ಹೇಳಿಲ್ಲ. ‘ಆತನಿಗೆ ಏನಾದರೂ ಆಗಲಿ, ನನಗೇನು?’ ಎಂಬ ಅರ್ಥದಲ್ಲಿ ಬಳಸಿರುವುದು.

ಆದರೆ ‘ಸಾವು’ ಪದ ಬಳಸಿದ್ದರಿಂದ ಅದರ ಅರ್ಥ ಅಥವಾ ಪರಿಣಾಮ ಗಾಢವಾಗಿ ಆಗಲಿ ಎಂಬುದು ಉದ್ದೇಶ. ಇಂಗ್ಲಿಷಿನಲ್ಲಿ ಸಹ Let him die ಎಂದು ಹೇಳುವುದುಂಟು. ಹಿಂದಿಯಲ್ಲೂ ‘ಮರನೇದೋ, ಮುಝೆ ಕುಛ್ ಭೀ ನಹೀ ಹೋ ಸಕ್ತಾ ಹೈ’ ಎಂದು ಹೇಳುವುದನ್ನು ಕೇಳಿರಬಹುದು. ‘ನಾನು ತವರಿಗೆ ಹೋಗಿಯೇ ಸಿದ್ಧ ಅಂತ ಹೆಂಡತಿ ಹೇಳಿದರೆ ನಾನು ಏನು ಸಾಯಲಿ?’ ಎಂದು ಗಂಡಂದಿರು ಹೇಳುವುದು ಹೊಸತೇನಲ್ಲ. ಇಲ್ಲಿ ‘ಏನು ಸಾಯಲಿ’ ಅಂದರೆ ಅದರ ಅರ್ಥವೇ ಬೇರೆ. ಇಲ್ಲಿ ‘ನಾನೇನು ಮಾಡಲಿ?’ಎಂಬರ್ಥದಲ್ಲಿ ‘ಏನು ಸಾಯಲಿ?’ ಎಂಬ ಪದ ಪ್ರಯೋಗವಾಗಿದೆ.

‘ನಾನು ಮನೆಯಲ್ಲ ಹುಡುಕಿದೆ. ಇಷ್ಟು ಹೊತ್ತು ಎಲ್ಲಿ ಸತ್ತಿದ್ದೆ?’ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರಬಹುದು. ಅಂದರೆ ‘ಇಷ್ಟು ಹೊತ್ತು ಎಲ್ಲಿದ್ದೆ, ಎಲ್ಲಿ ಅಡಗಿದ್ದೆ’ ಎಂಬರ್ಥದಲ್ಲಿ ‘ಎಲ್ಲಿ ಸತ್ತಿದ್ದೆ’ ಪ್ರಯೋಗ ವಾಗಿದೆ. ‘ಆತ ಐಸ್‌ಕ್ರೀಮ್ ಅಂದ್ರೆ ಜೀವ ಬಿಡ್ತಾನೆ’ ಎನ್ನುವ ವಾಕ್ಯದಲ್ಲೂ ‘ಜೀವ ಬಿಡ್ತಾನೆ’ ಅಂದರೆ ‘ಅತೀವ ಇಷ್ಟ’ ಎಂಬ ಭಾವ ಧ್ವನಿಸುತ್ತದೆ. ಈ ವಿಷಯದ ಬಗ್ಗೆ ಪಾ.ವೆಂ.ಆಚಾರ್ಯರು ತಮ್ಮ ‘ಪದಾರ್ಥ ಚಿಂತಾಮಣಿ’ಯಲ್ಲಿ
ಏನನ್ನಾದರೂ ಹೇಳಿರಬಹುದಾ ಎಂದು ಹುಡುಕಿದಾಗ, ನನಗೆ ಆಶ್ಚರ್ಯವಾಯಿತು. ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆಚಾರ್ಯರು ಹೀಗೆ ಬರೆಯುತ್ತಾರೆ- ‘ಬೇರೆ ಭಾಷೆಗಳಲ್ಲಿಯೂ ಸಮಾನಾಂತರ ವಾಗ್ಧೋರಣೆಗಳು ಸಿಗುತ್ತವೆ.

‘ಔರತ್ ಪರ್ ಮರತಾ ಹೈ’ ಎಂಬ ಮಾತನ್ನು ಇಂಗ್ಲಿಷಿನಲ್ಲಿ He dies on her ಅಂತಾರೆ. ಅವಳೆಂದರೆ ಜೀವ ಬಿಡುತ್ತಾನೆ ಎಂಬರ್ಥದಲ್ಲಿ ಹೇಳುವುದು ರೂಢಿಯಾಗಿದೆ. ಇಲ್ಲಿ ‘ಸಾಯು’ವುದು ಯಾವುದಾದರೊಂದು ಪ್ರಿಯ ಅಥವಾ ಗೌರವಾರ್ಹ ವಸ್ತುವನ್ನು ಪಡೆಯುವುದಕ್ಕೆ ಅಥವಾ ಕಾಪಾಡುವುದಕ್ಕಾಗಿ ಸಾಯಲು ಸಿದ್ಧವಾಗುವುದಲ್ಲ. ಹಾಗೆ ಮಾಡುವುದಕ್ಕೆ ‘ಜೀವ ಕೊಡು’ವುದೆನ್ನುತ್ತೇವೆ. ಎಲ್ಲಕ್ಕಿಂತ ಸೋಜಿಗದ ಸಾವು ಕರುಣೆಯಿಂದ ಹುಟ್ಟು ವಂಥದ್ದು, ‘ಅವನನ್ನು ಹಿಡಿದು ಚಚ್ಚಿ ಹಾಕಬಹುದಿತ್ತು. ಸಾಯಲಿ ಅಂತ ಬಿಟ್ಟೆ’ ಅಥವಾ ‘ಪಾಪ, ಸಾಯಲಿ, ಬಿಟ್ಟುಬಿಡಿ!’ ಎಂದು ಹೇಳುವಾಗ ತಿರಸ್ಕಾರಮಿಶ್ರಿತ ಕರುಣೆ ಪ್ರೇರಣೆ ಕೊಡುತ್ತದೆ.

ಆಲೋಚನೆ ಮಾಡಿದರೆ ಕಚಗುಳಿ ಇಡುವಂಥ ಅರ್ಥವೈಪರೀತ್ಯವಿದು. ‘ಸಾಯಲಿ’ ಅಂತ ನಿಮಗೆ ಅನಿಸುವುದಾದರೆ ಬಿಟ್ಟುಬಿಡುವುದೇಕೆ ? ಕೊಂದೇ ಹಾಕಬಹುದಲ್ಲ? ನಾನ್ಯಾಕೆ ಕೊಲ್ಲುವ ಕಷ್ಟ ತೆಗೆದುಕೊಳ್ಳಲಿ, ಅವನೇ ತನ್ನಷ್ಟಕ್ಕೆ ಸಾಯಲಿ ಅಂತಲೋ? ಈ ವಿಷಯದಲ್ಲಿ ಭಾರತೀಯ ಹಾಗೂ ಇತರ ಭಾಷೆಗಳಲ್ಲಿ ಸಾಮ್ಯ ಕಾಣುತ್ತದೆ. ಹಿಂದಿಯಲ್ಲಿ ಮಾರ್‌ನಾ ಎಂದರೆ ಕೊಲ್ಲುವುದೂ ಹೌದು, ಹೊಡೆಯುವುದೂ ಹೌದು. ‘ಮರ್’ ಧಾತುವಿಗೆ ಸಂಸ್ಕೃತದ ‘ಮೃ’ ಧಾತು ಮೂಲವಾಗಿದ್ದರೂ ಸಂಸ್ಕೃತದಲ್ಲಿ ಪ್ರಧಾನವಾಗಿರುವುದು ‘ಸಾಯಿಸು’ ಎಂಬರ್ಥ ಮಾತ್ರ. ಹಿಂದಿಯದರೋ ಸಾಯಿಸು ಎಂಬರ್ಥ ಸ್ಪಷ್ಟವಾಗಬೇಕಾದರೆ ಮಾರ್ ಡಾಲ್ನಾ (ಕೊಂದು ಹಾಕುವುದು) ಎಂದು ಹೇಳಬೇಕಾಗುತ್ತದೆ. ಇಂಗ್ಲಿಷಿನಲ್ಲಿ ಕೂಡ Kill ಶಬ್ದ ಬಹಳ ನೋಯಿಸು ಎಂಬರ್ಥದಲ್ಲಿ ಬಳಕೆಯಾಗುವುದುಂಟು.

ಒಂದು ಸೋಜಿಗವೆಂದರೆ ಇಂಗ್ಲಿಷಿನ Killing time (ವ್ಯರ್ಥ ಕಾಲಹರಣ ಮಾಡುವುದು) ಎಂಬ ನುಡಿಗಟ್ಟಿಗೆ ಕನ್ನಡ ದಲ್ಲಿ ಸಮಾನ ನುಡಿಗಟ್ಟು ಇರುವುದು ನಮ್ಮ ಕುಮಾರವ್ಯಾಸ ಭಾರತದಲ್ಲಿ. ಅಲ್ಲಿ ಆತ ‘ಕಾಲವ ಕೊಲುವುದೇ?’ ಎಂದು ಕೇಳುತ್ತಾನೆ.

ಇದನ್ನೂ ಓದಿ: Vishweshwar Bhat Column: ಪುತ್ತೂರಾಯರ ʼಪದ ಪಂಚಾಮೃತʼ