ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ವಿಮಾನ ಪ್ರಯಾಣ ಯಾವತ್ತೂ ಅತ್ಯಂತ ಸುರಕ್ಷಿತ. ಒಮ್ಮೆ ವಿಮಾನ ಟೇಕಾಫ್ ಆಗಿ 35-40 ಸಾವಿರ ಅಡಿ ತಲುಪಿದ ನಂತರ ನಿರಾತಂಕ. ವಿಮಾನಕ್ಕೆ ಯಾವ ಅಡೆ-ತಡೆಗಳೂ ಇರುವುದಿಲ್ಲ. ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಸಹ ತೀರಾ ಕಮ್ಮಿ. ಅಷ್ಟು ಎತ್ತರದಲ್ಲಿ ವಿಮಾನಗಳು ಡಿಕ್ಕಿ ಹೊಡೆದುಕೊಳ್ಳುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂದು ಹೇಳಬಹುದು.
ಕಾರಣ ಅಷ್ಟು ಎತ್ತರದಲ್ಲಿ ಹಾರುವಾಗ, ಎರಡು ವಿಮಾನಗಳ ಅಂತರ ಕನಿಷ್ಠ ಹತ್ತು ನಿಮಿಷಗಳಾದರೂ ಇರುತ್ತವೆ. ಎಲ್ಲ ವಿಮಾನಗಳಲ್ಲಿ Traffic Alert and Collision Avoidance System (TCAS) ಅನ್ನು ಅಳವಡಿಸಲಾಗಿರುತ್ತದೆ. ವಿಮಾನ ಹಾರುತ್ತಿರುವಾಗ, ಸುತ್ತ-ಮುತ್ತ ವಿಮಾನ ಬಂದರೆ, ತಕ್ಷಣ ಪೈಲಟ್ಗೆ ಎಚ್ಚರಿಕೆಯ ಸಂದೇಶ ಬರುತ್ತದೆ. ಎಷ್ಟು ಅಂತರದಲ್ಲಿ ಮತ್ತೊಂದು ವಿಮಾನ ಆಗಮಿಸುತ್ತಿದೆ ಎಂಬುದು ತಕ್ಷಣ ಪೈಲಟ್ಗೆ ಗೊತ್ತಾಗುತ್ತದೆ. ಹೀಗಾಗಿ ಪೈಲಟ್ಗಳು ಮತ್ತೊಂದು ವಿಮಾನದಿಂದ ಕನಿಷ್ಠ ಹತ್ತು ನಿಮಿಷಗಳ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳು ತ್ತಾರೆ.
ಅದರಲ್ಲೂ ಮತ್ತೊಂದು ವಿಮಾನ ತನ್ನ ಎತ್ತರದಲ್ಲಿಯೇ ಹಾರುತ್ತಿದ್ದರೆ, ಆ ಸಂದೇಶವೂ ಎರಡೂ ವಿಮಾನಗಳ ಪೈಲಟ್ಗಳಿಗೆ ಬರುತ್ತದೆ. ಹೀಗಾಗಿ ಇಬ್ಬರೂ ಜಾಗೃತರಾಗುತ್ತಾರೆ. ಒಂದು ರಡಾರ್ ಪ್ರದೇಶದಲ್ಲಿ, ಎರಡು ವಿಮಾನ ಗಳು ಸಮ ಎತ್ತರದಲ್ಲಿ ಹಾರುತ್ತಿರುವಾಗ, ಎಟಿಆರ್ (ಏರ್ ಟ್ರಾಫಿಕ್ ಕಂಟ್ರೋಲ್)ನಿಂದಲೂ ಪೈಲಟ್ಗೆ ಎಚ್ಚರಿಕೆ ಯ ಸಂದೇಶ ರವಾನೆಯಾಗುತ್ತದೆ. ಆಕಾಶ ಮಾರ್ಗಮಧ್ಯದಲ್ಲಿ ಎರಡು ವಿಮಾನಗಳ ಮಧ್ಯೆ ಡಿಕ್ಕಿ (Mid-air collision) ಸಂಭವಿಸಬಾರದು ಎಂಬ ಕಾರಣಕ್ಕೆ ಇಷ್ಟೆಲ್ಲ ಮುಂಜಾಗ್ರತಾ ಕ್ರಮ ಮತ್ತು ಫುಲ್-ಪ್ರೂಫ್ ಕ್ರಮಗಳನ್ನು ಕೈಗೊಳ್ಳುವುದು.
ಆದರೆ ಈ ವರ್ಷದ ಮಾರ್ಚ್ 24ರಂದು ಏನಾಯಿತು ಗೊತ್ತಾ? ಕತಾರ್ ಏರ್ವೇಸ್ಗೆ ಸೇರಿದ ಬೋಯಿಂಗ್ 777
ವಿಮಾನ ದೋಹಾದಿಂದ ಮಾಲ್ಡಿ ರಾಜಧಾನಿ ಮಾಲೆಗೆ ಹೋಗುತ್ತಿತ್ತು. ಅದೇ ಮಾರ್ಗದಲ್ಲಿ ಇಸ್ರೇಲಿನ ಎಲ್ ಅಲ್ ಏರ್ಲೈಗೆ ಸೇರಿದ ಬೋಯಿಂಗ್ 777 ವಿಮಾನ ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಿಂದ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ಗೆ ಹೋಗುತ್ತಿತ್ತು. ಎರಡೂ ವಿಮಾನಗಳೂ ಅರಬ್ಬಿ ಸಮುದ್ರದ ಮೇಲೆ, ಮುಂಬೈ ವೈಮಾನಿಕ ಮಾಹಿತಿ ಪ್ರದೇಶದ (Flight Information Region) ವ್ಯಾಪ್ತಿಯಲ್ಲಿ, 35 ಅಡಿ ಸಮ-ಸಮ ಎತ್ತರದಲ್ಲಿ ಹಾರುತ್ತಿದ್ದವು. ಸಾಮಾನ್ಯ ವಾಗಿ ಅಷ್ಟು ಎತ್ತರದಲ್ಲಿ ಸಮುದ್ರದ ಮೇಲೆ ಹಾರುವಾಗ ಎರಡು ವಿಮಾನಗಳ ಮಧ್ಯೆ ಕನಿಷ್ಠ ಹತ್ತು ನಿಮಿಷಗಳ ಅಂತರವನ್ನು ಕಾಪಾಡಿಕೊಳ್ಳಲೇಬೇಕು.
ಇದು ಅಂತಾರಾಷ್ಟ್ರೀಯ ನಿಯಮ. ಯಾವ ಕಾರಣಕ್ಕೂ ಈ ಅಂತರವನ್ನು ಕಿರಿದುಗೊಳಿಸುವಂತಿಲ್ಲ ಹಾಗೂ ಈ ನಿಯಮವನ್ನು ಉಲ್ಲಂಸುವಂತಿಲ್ಲ. ಈ ವಿಷಯದಲ್ಲಿ ಸಣ್ಣಮಟ್ಟಿಗಿನ ರಾಜಿಯನ್ನೂ ಅಂತಾರಾಷ್ಟ್ರೀಯ ವೈಮಾನಿಕ ಸುರಕ್ಷತೆ ಸಂಸ್ಥೆಗಳು ಸಹಿಸುವುದಿಲ್ಲ. ಆದರೆ ಅಂದು ಆ ಎರಡೂ ವಿಮಾನಗಳು ಪರಸ್ಪರ ಕೇವಲ ಒಂದು ನಿಮಿಷದ ಅಂತರ (ಸುಮಾರು ಒಂಬತ್ತು ನಾಟಿಕಲ್ ಮೈಲು)ದಷ್ಟು ಸನಿಹ ಬಂದಿದ್ದವು. ಯಾವ ಕಾರಣಕ್ಕೂ, ಯಾವ ಸಂದರ್ಭದಲ್ಲೂ ಎರಡು ವಿಮಾನಗಳು ಅಷ್ಟು ಸನಿಹಕ್ಕೆ ಬರಲೇಕೂಡದು. ಆಘಾತಕಾರಿ ಸಂಗತಿ ಅಂದರೆ, ಅಂದು ಆ ಎರಡೂ ವಿಮಾನಗಳ ಪೈಲಟ್ಗಳಿಗೆ Traffic Alert and Collision Avoidance
System ನಿಂದ ಯಾವ ಎಚ್ಚರಿಕೆಯ ಸಂದೇಶ ಬರದೇ ಇದ್ದಿದ್ದು.
ಅಂದು ಶುಭ್ರ ವಾತಾವರಣವಿದ್ದುದರಿಂದ ಮತ್ತು ಹಗಲಿನ ಹೊತ್ತಾಗಿದ್ದರಿಂದ, ಎರಡೂ ವಿಮಾನಗಳ ಪೈಲಟ್ಗಳು ಜಾಗೃತರಾಗಿ ದ್ದರಿಂದ, ಅದೃಷ್ಟವಶಾತ್ ಯಾವ ಅಪಘಾತವೂ ಸಂಭವಿಸಲಿಲ್ಲ. ಕೂದ ಲೆಳೆಯ ಅಂತರದಲ್ಲಿ ಭಾರಿ
ಅವಘಡ ತಪ್ಪಿತು. ಇಲ್ಲದಿದ್ದರೆ ವಿಮಾನಯಾನ ಇತಿಹಾಸದಲ್ಲಿಯೇ ಕಂಡುಕೇಳರಿಯದ ಭೀಕರ ದುರಂತ ಸಂಭವಿಸಿ ಬಿಡುತ್ತಿತ್ತು. ಈ ಘಟನೆ ಬಗ್ಗೆ ಸಮಗ್ರ ತನಿಖೆ ಪೂರ್ಣಗೊಂಡಿಲ್ಲ. ಆದರೆ ಈ ಪ್ರಸಂಗ ವಿಮಾನಯಾನ ಸುರಕ್ಷತೆಯ ಸಾಚಾತನದ ಬಗ್ಗೆ ದೊಡ್ಡ ಪ್ರಶ್ನೆ ಯನ್ನೇ ಎತ್ತಿದೆ. ಇದು ಅಂತಾರಾಷ್ಟ್ರೀಯ ಪ್ರಯಾಣಿಕರ ನಿದ್ದೆಗೆಡಿಸಿರುವುದಂತೂ ಸತ್ಯ.
ಇದನ್ನೂ ಓದಿ: Mumbai Rain: ಮುಂಬೈ ವರುಣಾರ್ಭಟಕ್ಕೆ ನಾಲ್ವರು ಬಲಿ; ಪುಣೆಯಲ್ಲಿ ಮೋದಿ ಕಾರ್ಯಕ್ರಮ ರದ್ದು