Sunday, 15th December 2024

Vishweshwar Bhat Column: ಜಿಮ್ಮಿ ಕಾರ್ಟರ್‌ಗೆ ನೂರು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಅಮೆರಿಕದಲ್ಲಿ ಅಧ್ಯಕ್ಷರು ನಾಲ್ಕು ವರ್ಷಗಳಂತೆ, ಎರಡು ಅವಧಿಗೆ ಅಂದರೆ ಎಂಟು ವರ್ಷಗಳವರೆಗೆ ಆ ಹುದ್ದೆಯ ಲ್ಲಿರಬಹುದು. ಅದಕ್ಕಿಂತ ಹೆಚ್ಚು ಅವಧಿಗೆ ಇರುವಂತಿಲ್ಲ. ಆದರೆ ‘ಮಾಜಿ ಅಧ್ಯಕ್ಷ’ರಾಗಿ? ಹೂಂ.. ಎಷ್ಟು ವರ್ಷಗಳವರೆಗಾದರೂ ಇರಬಹುದು. ಮೊನ್ನೆ ತಾನೇ ತಮ್ಮ ಶತವರ್ಷಗಳನ್ನು ಪೂರೈಸಿದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ (ಜನನ: ಅಕ್ಟೋಬರ್ 1,1924), ಅಮೆರಿಕದ ಅಧ್ಯಕ್ಷರಾದವರ ಪೈಕಿ ನೂರು ವರ್ಷ ಪೂರೈಸಿದ ಪ್ರಪ್ರಥಮ ವ್ಯಕ್ತಿ ಎಂಬ ಅಗ್ಗಳಿಕೆಗೆ ಪಾತ್ರರಾದರು.

ಅವರು ಅಧ್ಯಕ್ಷರಾಗಿ ಆ ಹುದ್ದೆಯಿಂದ ಇಳಿದಿದ್ದು 1981ರಲ್ಲಿ. ಅವರು 1977ರಿಂದ ಮುಂದಿನ 4 ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಅವರು ಭಾರತಕ್ಕೊಮ್ಮೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಮೊರಾರ್ಜಿ ದೇಸಾಯಿ ಭಾರತದ ಪ್ರಧಾನಿಯಾಗಿದ್ದರು. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರಾಗಿ ನಿವೃತ್ತರಾದವರು ನೇಪಥ್ಯಕ್ಕೆ ಸರಿದುಬಿಡುತ್ತಾರೆ. ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಬಳಿಕ, ಬೇರೆ ಯಾವ ಹುದ್ದೆಯನ್ನೇರಿ ದರೂ ಅವರ ಘನತೆ, ವ್ಯಕ್ತಿತ್ವಕ್ಕೆ ಅದು ಕಮ್ಮಿಯೇ.

ಹೀಗಾಗಿ ಬಹುತೇಕರು ತಮ್ಮ ಹೆಸರಿನಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿಕೊಂಡು, ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗುವುದು ಸಾಮಾನ್ಯ. ಆದರೆ ಕಾರ್ಟರ್ ಅಷ್ಟಕ್ಕೇ ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ಸೀಮಿತ ಗೊಳಿಸಿಕೊಳ್ಳಲಿಲ್ಲ. ಅವರು ಮಾನವ ಹಕ್ಕುಗಳ ಜಾಗೃತಿ ಬಗ್ಗೆ ಜಗತ್ತಿನಾದ್ಯಂತ ಪ್ರವಾಸ ಮಾಡಿದರು. ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಅರಿವು ಮೂಡಿಸಲು ಅವರು ಆಫ್ರಿಕಾ ದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದರು.

ಅತಿ ಕಡಿಮೆ ಹಣದಲ್ಲಿ ಮನೆಯನ್ನು ನಿರ್ಮಿಸುವುದನ್ನು ಉತ್ತೇಜಿಸುವ, ಎಲ್ಲರಿಗೂ ಸೂರು ಕಲ್ಪಿಸುವ ಅಗತ್ಯವನ್ನು ಪ್ರತಿಪಾದಿಸುವ, ‘ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ’ ಎಂಬ ಸ್ವಯಂಸೇವಾ‌ ಸಂಸ್ಥೆಯ ಚಟುವಟಿಕೆಗೆ ತಮ್ಮ ಸಮಯವನ್ನು ಮೀಸಲಿಟ್ಟರು. ಅಮೆರಿಕದ ಅಧ್ಯಕ್ಷರಾಗಿ ಕಾರ್ಟರ್ ಅವರ ಅವಧಿ ಅಷ್ಟೇನೂ ಮಹತ್ವಪೂರ್ಣ ದ್ದಾಗಿರಲಿಲ್ಲ ಎನ್ನುವ ರಾಜಕೀಯ ವಿಶ್ಲೇಷಕರು, ‘ಕಾರ್ಟರ್ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದ್ದೇ ಅವರು ಮಾಜಿ ಅಧ್ಯಕ್ಷರಾದ ಬಳಿಕ. ಅವರಿಗೆ ಮುಪ್ಪು ಸಮಸ್ಯೆ ಆಗಲಿಲ್ಲ. ಅವರು ವಯಸ್ಸನ್ನು ಲೆಕ್ಕಿಸದೇ ಹೆಚ್ಚು ಕ್ರಿಯಾಶೀಲರಾದರು. ಅವರು ಬಹುತೇಕರಂತೆ ನೇಪಥ್ಯಕ್ಕೆ ಸರಿಯಲಿಲ್ಲ.

ಸದಾ ಒಂದಿಂದು ಕಾರಣಕ್ಕೆ ಸುದ್ದಿಯಲ್ಲಿರು ತ್ತಾರೆ’ ಎಂದು ಅಭಿಮಾನದ ಮಾತುಗಳನ್ನು ಹೇಳುತ್ತಾರೆ. ಮೂಲತಃ ಶೇಂಗಾ ಕೃಷಿಕರಾದ ಕಾರ್ಟರ್, ನಿವೃತ್ತಿಯ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1981ರಲ್ಲಿ ಅಧ್ಯಕ್ಷ ಪದವಿಯನ್ನು ತೊರೆದಾಗ, ವೈಟ್ ಹೌಸಿನಿಂದ ಅವರು ತಮ್ಮ ಹುಟ್ಟೂರಾದ ಜಾರ್ಜಿಯಾದ ಪ್ಲೆ ಗೆ ಮರಳಿ, 1961ರಲ್ಲಿ ಖರೀದಿಸಿದ್ದ ಮನೆಯಲ್ಲಿ ವಾಸಿಸಲಾರಂಭಿಸಿ ದರು. ಅವರು ಜಾರ್ಜಿಯಾದ ಗವರ್ನರ್ ಆಗಿದ್ದಾಗಲೂ ಅದೇ ಮನೆಯಲ್ಲಿ ಉಳಿದಿದ್ದರು. ಅಮೆರಿಕದ ಅಧ್ಯಕ್ಷರಾಗಿದ್ದ ಆ 4 ವರ್ಷಗಳ ಅವಧಿಯಲ್ಲಿ ಮಾತ್ರ ಆ ಮನೆಯಲ್ಲಿ ಉಳಿಯಲಿಲ್ಲ. ಆ ಮನೆಯಲ್ಲಿ ಕಾರ್ಟರ್ 63 ವರ್ಷಗಳನ್ನು ಕಳೆದಿದ್ದಾರೆ.

ಅದು 3 ಬೆಡ್‌ರೂಮುಗಳ, ನೆಲ ಅಂತಸ್ತು ಮಾತ್ರ ಇರುವ ಸಾಧಾರಣ ಮನೆ. ನಿವೃತ್ತರಾದ ಬಳಿಕ ಗಂಭೀರ ಬರವಣಿಗೆಯಲ್ಲಿ ನಿರತರಾದ ಕಾರ್ಟರ್, ಇಲ್ಲಿ ತನಕ ಸುಮಾರು 30 ಪುಸ್ತಕಗಳನ್ನು ಬರೆದಿದ್ದಾರೆ. ಕಾರ್ಟರ್ ಕೃತಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. Faith: A Journey for All, A Full Life: Reflections at Ninety, ಮತ್ತು Our Endangered Values: America’s Moral Crisis ಅವರ ಕೃತಿಗಳಲ್ಲಿ ಮಹತ್ವದ್ದಾಗಿವೆ.

ಹಾಗೆ ಅವರ ಆಡಿಯೋ ರೆಕಾರ್ಡಿಂಗ್ ಪುಸ್ತಕಗಳು ಬಹಳ ಜನಪ್ರಿಯ. 9 ಸಲ Grammy Award for Best Spoken Word Album ಪ್ರಶಸ್ತಿಗೆ ಅವರ ಹೆಸರು ಪ್ರಸ್ತಾಪವಾಗಿತ್ತು. ತಮ್ಮ 85ನೇ ವಯಸ್ಸಿನ ತನಕವೂ ಸೈಕಲ್ ಸವಾರಿ ಮಾಡುತ್ತಿದ್ದ ಕಾರ್ಟರ್‌ಗೆ ಮೂವರು ಗಂಡು ಮಕ್ಕಳು. ಅವರಾರೂ ತಂದೆ ನೂರು ವರ್ಷ ಪೂರೈಸಿ ದ್ದನ್ನು ಕಣ್ತುಂಬಿ ಕೊಳ್ಳಲು ಬದುಕುಳಿದಿಲ್ಲ. ತಮ್ಮ ಮರಣದ ಬಳಿಕ ಹುಟ್ಟೂರಿ ನಲ್ಲಿಯೇ ಸಮಾಧಿ ಮಾಡುವಂತೆ ಈಗಾಗಲೇ ಅವರು ಕೋರಿದ್ದಾರೆ.

ಇದನ್ನೂ ಓದಿ: Vishweshwar Bhat Column: ಆಗಸದಲ್ಲಿ ತಪ್ಪಿದ ದುರಂತ