ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಗತ್ತಿನ ಯಾವುದೇ ಪುಸ್ತಕದ ಅಂಗಡಿಗೆ ಅಥವಾ ಗ್ರಂಥಾಲಯಕ್ಕೆ ಹೋದರೆ ಕಾಣಸಿಗುವ ಮತ್ತು ಇರಲೇಬೇಕಾದ ಒಂದು ಪುಸ್ತಕವೆಂದರೆ ಅದು ಡೇಲ್ ಕಾರ್ನೇಗಿ ಬರೆದ How to Win Friends and Influence People. ಪ್ರಾಯಶಃ ಎಲ್ಲರ ಖಾಸಗಿ ಸಂಗ್ರಹದಲ್ಲೂ ಕಾಣಸಿಗುವ ಕೃತಿಯಿದು. ಕೆಲವು ವರ್ಷಗಳ ಹಿಂದೆ, ‘ರೀಡರ್ಸ್ ಡೈಜೆ’ ಮಾಸಿಕ ಏರ್ಪಡಿಸಿದ ಜಾಗತಿಕ ಸಮೀಕ್ಷೆಯಲ್ಲಿ, ಶೇ.18ರಷ್ಟು ಓದುಗರು ತಾವು ಈ ಕೃತಿಯಿಂದಲೇ ಪುಸ್ತಕ ಓದುವುದನ್ನು ಆರಂಭಿಸಿದ್ದಾಗಿ ಹೇಳಿದ್ದರು.
ಈ ಪುಸ್ತಕ ಎಷ್ಟು ಮಾರಾಟವಾಗಿದೆಯೋ ಯಾರಿಗೂ ಗೊತ್ತಿಲ್ಲ. ಕಾರಣ ಎಲ್ಲ ದೇಶಗಳಲ್ಲೂ ಇದರ ನಕಲಿ ಆವೃತ್ತಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿದ್ದರಿಂದ ನಿಖರವಾದ ಲೆಕ್ಕ ಸಿಗುವುದಿಲ್ಲ. ಕೆಲವರು ಐದು ಕೋಟಿ ಅಂತಾರೆ, ಇನ್ನು ಕೆಲವರು ಹತ್ತು ಕೋಟಿ ಅಂತಾರೆ. ಆದರೆ ಐದು ಕೋಟಿಗಿಂತ ಕಡಿಮೆ ಪ್ರತಿಗಳು ಮಾರಾಟ ವಾಗಿರಲಿಕ್ಕಿಲ್ಲ. ಅಂದ ಹಾಗೆ ಈ ಪುಸ್ತಕ ಬಿಡುಗಡೆಯಾಗಿ 86 ವರ್ಷಗಳಾದವು. ಇಂದಿಗೂ ಪ್ರತಿ ವರ್ಷ ಈ ಕೃತಿಯ ಎರಡೂವರೆ ಲಕ್ಷ ಪ್ರತಿಗಳು ಮಾರಾಟವಾಗುತ್ತಿರುವುದು ಮಾತ್ರ ಅಚ್ಚರಿಯ ಸಂಗತಿಯೇ.
ಈ ಅವಧಿಯಲ್ಲಿ ಐವತ್ತಕ್ಕೂ ಹೆಚ್ಚು ಪರಿಷ್ಕೃತ ಆವೃತ್ತಿಗಳಲ್ಲಿ ಬಿಡುಗಡೆಯಾಗಿರುವುದು ಒಂದು ದಾಖಲೆಯೇ. ಎಲ್ಲ ಕಾಲಕ್ಕೂ ಸಲ್ಲುವ ಈ ಪುಸ್ತಕ 2011ರಲ್ಲಿ, ‘ಟೈಮ್’ ಮ್ಯಾಗಜಿನ್‌ನ ಪ್ರಭಾವ ಬೀರಿದ 100 ಪುಸ್ತಕಗಳ ಪಟ್ಟಿಯಲ್ಲಿ ಹತ್ತೊಂಬತ್ತನೇ ಸ್ಥಾನವನ್ನು ಪಡೆದಿತ್ತು. ‘ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿ’ ನಡೆಸಿದ ಸಮೀಕ್ಷೆ ಪ್ರಕಾರ, ಇದು ಸರ್ವಕಾಲಕ್ಕೂ ಸಲ್ಲುವ ((Top Check Outs Of All Time) ಪುಸ್ತಕ. ಕಾಲಕಾಲಕ್ಕೆ ಈ ಪುಸ್ತಕದ ಕೃತಿಸ್ವಾಮ್ಯ (ಕಾಪಿರೈಟ್) ವನ್ನು ಬೇರೆ ಬೇರೆ ಪ್ರಕಾಶಕರು ಪಡೆದುಕೊಂಡಾಗ ಮೂಲವನ್ನು ಪರಿಷ್ಕರಿಸಿದ್ದುಂಟು. ಈ ನೆಪದಲ್ಲಿ ಕೃತಿಯನ್ನು ಬೇಕಾಬಿಟ್ಟಿ ಎಡಿಟ್ ಮಾಡಿದ್ದೂ ಇದೆ. ಆದರೂ ಓದುಗರ ಮೇಲಾಗಲಿ, ಮಾರಾಟದ ಮೇಲಾಗಲಿ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ. ಈ ಪುಸ್ತಕವನ್ನು ಬರೆದಾಗ ಡೇಲ್ ಕಾರ್ನೇಗಿಗೆ ನಲವತ್ತಾರು ವರ್ಷ. ಮೂಲತಃ ಆತ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುತ್ತಿದ್ದ.
ಮಾನವೀಯ ಸಂಬಂಧ, ಸಾರ್ವಜನಿಕ ಭಾಷಣ, ಜನರನ್ನು ಆಕರ್ಷಿಸುವ ಕಲೆ, ಉತ್ತಮ ನಡೆಯನ್ನು ಬೆಳೆಸಿ ಕೊಳ್ಳುವ ರೀತಿ.. ಇವೇ ಮುಂತಾದ ವಿಷಯಗಳನ್ನೊಳಗೊಂಡ 14 ವಾರಗಳ ಕೋರ್ಸನ್ನು ನಡೆಸುತ್ತಿದ್ದ. ಆ ಸಮಯ ದಲ್ಲಿ ‘ಸೈಮನ್ ಮತ್ತು ಶುಸ್ಟರ್’ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರು, ‘ಈ ವಿಷಯಗಳನ್ನೇ ಆಧಾರ ವಾಗಿಟ್ಟುಕೊಂಡು ನೀವೇಕೆ ಒಂದು ಪುಸ್ತಕವನ್ನು ಬರೆಯಬಾರದು’ ಎಂದು ಸೂಚಿಸಿದರು. ಆದರೆ ಏನೋ ಒಂದು ನೆಪ ಹೇಳಿ ಕಾರ್ನೇಗಿ ಮುಂದೂಡುತ್ತಲೇ ಇದ್ದ. ಅದಾದ ಬಳಿಕ ಪ್ರಕಾಶಕರು ಒಬ್ಬ ಸ್ಟೆನೋಗ್ರಾಫರ್ ಅನ್ನು ನೇಮಿಸಿ, ಕಾರ್ನೇಗಿ ತನ್ನ ಶಿಬಿರಗಳಲ್ಲಿ ಮಾತಾಡುವುದನ್ನು ದಾಖಲಿಸಿಕೊಂಡು ಪುಸ್ತಕ ರೂಪದಲ್ಲಿ ಬರೆದುಕೊಡುವಂತೆ ಹೇಳಿದರು. ಆ ದಿನಗಳಲ್ಲಿ ಮೊದಲ ಮುದ್ರಣದಲ್ಲಿ ಐದು ಸಾವಿರ ಪ್ರತಿಗಳನ್ನು ಅಚ್ಚುಹಾಕಲಾಗಿತ್ತು.
ಅವೆ ಕೆಲವೇ ದಿನಗಳಲ್ಲಿ ಮಾರಾಟವಾದವು. ಒಂದು ವರ್ಷದ ಅವಧಿಯಲ್ಲಿ, 17 ಆವೃತ್ತಿಗಳು ಮಾರಾಟವಾಗಿದ್ದು ಗಮನಾರ್ಹ. ಜಗತ್ತಿನ ಖ್ಯಾತನಾಮ ಸಾಹಿತಿಗಳು, ಪ್ರತಿಭಾನ್ವಿತರು, ಅಮೆರಿಕದ ಅಧ್ಯಕ್ಷರು, ಉದ್ದಿಮೆದಾರರು, ಕಾರ್ಪೊರೇಟ್ ಸಂಸ್ಥೆ ಮುಖ್ಯಸ್ಥರು, ಹಾಲಿವುಡ್ ನಟ-ನಟಿಯರು, ಕ್ರೀಡಾಪಟುಗಳು ಈ ಕೃತಿಯನ್ನು ಓದಿದ್ದಾಗಿ
ಹೇಳಿರುವುದು ಇದರ ಲೋಕಮಾನ್ಯತೆಗೆ ಸಾಕ್ಷಿ. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ವಾರೆನ್ ಬಫೆಟ್, ತಮ್ಮ ಇಪ್ಪತ್ತನೇ ವಯಸ್ಸಿನ ಇದನ್ನು ಓದಿರುವುದಾಗಿ ಹೇಳಿದ್ದರು. ನಿಮ್ಮ ಮನಸ್ಸಿಗೆ ಬರುವ ಹತ್ತು ಪುಸ್ತಕಗಳು ಯಾವವು ಎಂಬ ಪ್ರಶ್ನೆಯನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಕೇಳಿದಾಗ ಅವರು ಹೇಳಿದ ಪುಸ್ತಕಗಳಲ್ಲಿ How to Win Friends and Influence People ಕೂಡ ಒಂದಾಗಿತ್ತು. ಡೇಲ್ ಕಾರ್ನೇಗಿ 25ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿದ್ದರೂ, ನೆನಪಿರುವುದು ಅದೊಂದೇ.
ಇದನ್ನೂ ಓದಿ: Vishweshwar Bhat Column: ಹಿಂದಕ್ಕೆ ಬರಲಾಗದ, ಮುಂದಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ ಸ್ಥಿತಿ