Sunday, 24th November 2024

Vishweshwar Bhat Column: ಹೆಚ್ಚುವರಿ ಆದಾಯ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇದನ್ನು ನಾನು ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದ್ದು. ನೀವು ಗಳಿಸಿದ್ದೇ ಖಾಲಿಯಾಗಬಹುದಂತೆ. ಆದರೆ ಕೊನೆ ತನಕ ಉಳಿಯುವುದು ನೀವು ಉಳಿತಾಯ ಮಾಡಿದ್ದಂತೆ. ಉಳಿತಾಯವನ್ನು ಒಂದು ಕಠೋರ ನಿರ್ಣಯದಂತೆ ಪಾಲಿಸಿಕೊಂಡು ಬಂದರೆ ಅದೇ ಶ್ರೀರಕ್ಷೆಯಾಗಿ ಒಳಿತಾಗುತ್ತದೆಯಂತೆ. ಅವರ ಹೆಸರು ಮನೋಜ್ ಪರಮಾರ್.

ಅವರು ಇಂದೋರಿನ ಸಿಯಾಗಂಜಿನಲ್ಲಿ ‘ಸ್ಲೀಪ್ ವೆಲ್’ ಎಂಬ ಹೆಸರಿನ ಮ್ಯಾಟ್ರೆಸ್ (ಹಾಸಿಗೆ) ಮಾರಾಟದ ಅಂಗಡಿಯಲ್ಲಿ ಸೇಲ್ಸಮನ್. ಹಳೆಯ ಹಾಸಿಗೆಗಳ ದುರಸ್ತಿಯಲ್ಲಿ ಅವರಿಗೆ ವಿಶೇಷ ಪರಿಣತಿ. ಅವರು ಖರೀದಿ
ದಾರರ ಮನೆಗೆ ಹೊಸ ಹಾಸಿಗೆ ಡೆಲಿವರಿ ಕೊಡುತ್ತಾರೆ ಮತ್ತು ಅವರಲ್ಲಿನ‌ ಹಳೆ ಹಾಸಿಗೆಯನ್ನು ತಂದು ರಿಪೇರಿ ಮಾಡಿಕೊಡುತ್ತಾರೆ. ಈ ಕೆಲಸವನ್ನವರು ಭಾನುವಾರಗಳಂದು ಮಾತ್ರ ಮಾಡುತ್ತಾರೆ. ಸೋಮವಾರದಿಂದ
ಶನಿವಾರದ ತನಕ ಅವರು ಅಂಗಡಿಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆ, ಅದರಿಂದ ಸಿಗುವ ವೇತನದಲ್ಲಿ ಮನೆ ನಡೆಸುವುದು ಸಾಧ್ಯವಾಗುತ್ತದೆ.

ಅವರು ತಮ್ಮ ಇಬ್ಬರು ಸಹೋದರರ ಜತೆ ರಜಾ ದಿನವಾದ ಭಾನುವಾರದಂದು ಮನೆಮನೆಗೆ ಹೋಗಿ ಹಳೆ ಹಾಸಿಗೆ ದುರಸ್ತಿಪಡಿಸುವ ಕೆಲಸವನ್ನು ಮಾಡುತ್ತಾರೆ ಮತ್ತು ತಿಂಗಳಿಗೆ ಒಬ್ಬೊಬ್ಬರಿಗೂ ಎಂಟು ಸಾವಿರ ರುಪಾಯಿಗಳಷ್ಟು ಹೆಚ್ಚುವರಿ ಆದಾಯ ಸಿಗುತ್ತದೆ. ಇದು ಅವರ ಉಳಿತಾಯದ ಖಾತೆಗೆ ಹೋಗುತ್ತದೆ. ಭಾನುವಾರದ ಗಳಿಕೆ ಅವರ ಉಳಿತಾಯದ ಪಿಗ್ಮಿ ಖಾತೆ ಸೇರುತ್ತದೆ. ಈ ಪದ್ಧತಿಯನ್ನು ಅಂಗಡಿಯ ಸಂಸ್ಥಾಪಕ ದಿವಂಗತ ಇಸ್ಮಾಯಿಲ್ ಆಲಿ ಬಾದಶಾಹ ಆರಂಭಿಸಿದ್ದರಂತೆ. ಅವರೂ ಇದೇ ರೀತಿ ಸಣ್ಣಪುಟ್ಟ ಕೆಲಸಗಳನ್ನು ರಜಾ ದಿನಗಳಂದು ಮಾಡಿ ಹೆಚ್ಚುವರಿ ಗಳಿಕೆ ಮಾಡುತ್ತಿದ್ದರಂತೆ.

ಅವರು ಅರವತ್ತರ ದಶಕದಲ್ಲಿ ಸೈಫೀ ಹೈಸ್ಕೂಲಿನಲ್ಲಿ ಗ್ರಂಥಪಾಲಕರಾಗಿ ನೌಕರಿ ಶುರು ಮಾಡಿದರು. ಅವರು ಅಲ್ಲಿ ಮೂರು ದಶಕಗಳ ಕಾಲ ಕೆಲಸ ಮಾಡಿದರು. ನಂತರ ಉರ್ದು, ಅರಬಿ ಭಾಷೆಗಳನ್ನು ಕಲಿಸಲಾರಂಭಿಸಿದರು. ಆಗ ಅವರಿಗೆ ಹೆಚ್ಚುವರಿ ಆದಾಯ ಸಿಗಲಾರಂಭಿ ಸಿತು. ಆ ಮೂಲಕ ಗಳಿಸಿದ ಹಣದಿಂದ ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಒಂದು ಕೆಲಸ ಮಾಡುತ್ತಿದ್ದಾಗ ಇನ್ನೊಂದನ್ನು ಜೋಡಿಸಿಕೊಂಡು ಹೆಚ್ಚುವರಿ ಆದಾಯವನ್ನು ಪಡೆಯುವುದು ಹೇಗೆ ಎಂಬುದನ್ನು ಅವರು ತಮ್ಮ ಕೆಲಸಗಾರರಿಗೂ ಕಲಿಸಿಕೊಟ್ಟರು. ನಿವೃತ್ತರಾದ ನಂತರವೂ ಅವರು ಇದನ್ನು ಮುಂದುವರಿಸಿದರು. ಎರಡು ವಿಧಗಳಲ್ಲಿ ಆದಾಯ ಗಳಿಸುವ ಅವರ ಕೆಲಸ ಮತ್ತೆ ಮುಂದು ವರಿಯಿತು. ಆದರೆ ಆಗ ಅವರ ವಿಧಾನ ಬದಲಾಗಿತ್ತು.

ಅವರು ಹಣ ಸಂಪಾದನೆ ಮಾಡುತ್ತಿದ್ದರು ಜತೆಗೆ ದಾನಧರ್ಮಗಳನ್ನೂ ಮಾಡುತ್ತಿದ್ದರು. ಅವರು ಮನೆಪಾಠ ಹೇಳುವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಹುಡುಗರಲ್ಲಿ ಅನೇಕರು ತಮ್ಮ ಶಾಲಾ ಫೀಜು ಕಟ್ಟಲೂ ಹಣವಿಲ್ಲದ ಬಡವರಿರುತ್ತಿದ್ದರು. ಈ ಸಂಸ್ಕೃತಿಯನ್ನು ಅವರು ತಮ್ಮ ಕೆಲಸಗಾರರಿಗೂ ಹೇಳಿಕೊಟ್ಟರು ಮತ್ತು ಭಾನುವಾರದ ದಿನವೂ ಕೆಲಸ ಮಾಡಿ ಉಳಿತಾಯ ಮಾಡುವುದನ್ನು, ಉಳಿಸಿದ್ದನ್ನು ದಾನಧರ್ಮಗಳಿಗೆ ವಿನಿಯೋಗಿಸುವುದನ್ನು ಕಲಿಸಿದರು. ನೀವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಭಾನುವಾರದ ದಿನವನ್ನು ಹೀಗೆ ಬಳಸಿಕೊಳ್ಳಬೇಕು ಮತ್ತು ನಿಮ್ಮ ಆದಾಯ ವರ್ಧನೆ ಮಾಡಿಕೊಳ್ಳಬೇಕು. ಆ ಮೂಲಕ ಉಳಿತಾಯವನ್ನು ಸಾಧಿಸಬಹುದು.

ಅನೇಕರು ಜೀವನವಿಡೀ ಒಂದೇ ಉದ್ಯೋಗಕ್ಕೆ ಮತ್ತು ಏಕ ಸಂಪಾದನೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಅವರಿಗೆ ಜೀವನ ತೆರೆದಿಡುವ ಬಹುಮುಖಿ ವಿಸ್ತಾರದ ಸಾಧ್ಯತೆ ಗೊತ್ತಾಗುವುದಿಲ್ಲ. ನಮ್ಮ ಬದುಕನ್ನು ಹೇಗೆ ಬೇಕಾದರೂ ರೂಢಿಸಿಕೊಳ್ಳಬಹುದು. ಆದರೆ ಬದುಕಿದ್ದಷ್ಟು ದಿನ ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಿಸು ವುದು ಯಾವತ್ತೂ ನಮ್ಮನ್ನು ಕ್ರಿಯಾಶೀಲರನ್ನಾಗಿಡುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ: Vishweshwar Bhat Column: ಹಿಂದಕ್ಕೆ ಬರಲಾಗದ, ಮುಂದ‌ಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ ಸ್ಥಿತಿ