ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಕೋರಾ’ ವೆಬ್‌ಸೈಟಿನಲ್ಲಿ ಒಬ್ಬರು, ‘ಟಿ.ಪಿ.ಕೈಲಾಸಂ ಅವರ ಬಗ್ಗೆ ಯಾರಾದರೂ ಒಂದು ಸಣ್ಣ ಪರಿಚಯ ಮಾಡಿಕೊಡುವಿರಾ?’ ಎಂದು ಕೇಳಿದ್ದರು. ಅದಕ್ಕೆ ನಂದೀಶ್ ಎಚ್.ಎನ್. ಎಂಬುವವರು ಕೈಲಾಸಂ ವ್ಯಕ್ತಿಚಿತ್ರವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದರು. ಅದನ್ನು ಓದಿದವರು ಕೈಲಾಸಂ ವ್ಯಕ್ತಿತ್ವ ವನ್ನು ಕಲ್ಪಿಸಿಕೊಳ್ಳಬಹುದಾಗಿತ್ತು. ತ್ಯಾಗರಾಜ ಪರಮಶಿವ ಅಯ್ಯರ್ ಕೈಲಾಸಂ (ಕೈಲ್ Awesome) ಕನ್ನಡ ಮತ್ತು ಇಂಗ್ಲಿಷಿನಲ್ಲಿ ನಾಟಕ, ಕತೆ ಮತ್ತು ಕವನಗಳನ್ನು ಬರೆದ, ‘ಕನ್ನಡಕ್ಕೊಬ್ಬನೇ ಕೈಲಾಸಂ’, ’ಕನ್ನಡ ನಾಟಕ ಪ್ರಹಸನ ಪಿತಾಮಹ’ ಇತ್ಯಾದಿ ಹೆಸರು ಪಡೆದ, ತಮಿಳು ಮನೆಮಾತಿನ ಒಬ್ಬ ಜಿಯಾಲಜಿ, ಒಬ್ಬ ಚುರುಕು ಬುದ್ಧಿಯ ಹಾಸ್ಯಗಾರ, ನಟ, ನಾಟಕಕಾರ, ಭಾಷಾಚತುರ ಮತ್ತು ಗ್ರಾಂಥಿಕ ಭಾಷೆ
ತೊರೆದು ಆಡುಭಾಷೆಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬರೆದ, ಎಲ್ಲ ಸ್ಥಾಪಿತವಾದವುಗಳನ್ನು ಕಿತ್ತೆಸೆದ ಕ್ರಾಂತಿಕಾರಿ.
ಕೈಲಾಸಂ 1884ರಲ್ಲಿ ಮೈಸೂರಲ್ಲಿ ಹುಟ್ಟಿ 1946ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. 140 ವರ್ಷಗಳೇ ಕಳೆದರೂ ಅವರ ನಾಟಕಗಳು ಈಗಲೂ ಹೆಸರುವಾಸಿಯಾಗಿವೆ. ಅವರ ಜೋಶಿ ಅಮರ! Wit, pun ಇವುಗಳ ಮಾಸ್ಟರ್ ಆಗಿದ್ದರು ಕೈಲಾಸಂ. ಅವರ ಕನ್ನಡದಲ್ಲಿ ಸಂಸ್ಕೃತದ ಬದಲು ಇಂಗ್ಲಿಷ್ ತುಂಬಾ ಸೇರಿ ಕೊಂಡು ಇರುತ್ತಿತ್ತು. 1945ರಲ್ಲಿ ಮದ್ರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಿಕ್ಕದಾಗಿ ಚೊಕ್ಕವಾಗಿ ಭಾಷಣ ಮಾಡಿ ಗಮನ ಸೆಳೆದಿದ್ದರು. ಒಮ್ಮೆ ರವೀಂದ್ರನಾಥ ಟಾಗೋರ್ ಬೆಂಗಳೂರಿಗೆ ಬಂದಿದ್ದಾಗ ಅವರ ಮುಂದೆ ತಮ್ಮ ನಾಟಕ ‘ಟೊಳ್ಳು ಗಟ್ಟಿ’ ಆಡಿ, ಭೇಷ್ ಅನ್ನಿಸಿಕೊಂಡಿದ್ದರು.
ಗಾಂಧೀಜಿ ಬೆಂಗಳೂರಿಗೆ ಬಂದಾಗ, ಪಿಟೀಲು ಚೌಡಯ್ಯನವರ ಕಛೇರಿ ಏರ್ಪಡಿಸಿದ್ದರಂತೆ. ಯಾರವರು? ಅಂತ ಪಕ್ಕದ ಕುಳಿತಿದ್ದ ಕೈಲಾಸಂ ಅವರನ್ನು ಗಾಂಧಿ ಕೇಳಿದಾಗ, ‘ನೀವು ದೊಡ್ಡ ನಾನ್-ವಯಲ ನಿ, ಅವರು ಚೌಡಯ್ಯ ಅಂತ, ಪಕ್ಕಾ ವಯಲನಿ’ ಅಂದ್ರಂತೆ ಕೈಲಾಸಂ!
ಕೈಲಾಸಂ ಜಿಯಾಲಜಿಯ ಕಲಿಕೆಗೆ ಮೈಸೂರು ಮಹಾರಾಜರ ಸಹಾಯ ದಿಂದ ಇಂಗ್ಲೆಂಡಿಗೆ ಹೋದವರು ಅಲ್ಲಿನ ಇಂಗ್ಲಿಷಿನ ಎಲ್ಲ ತರಹದ ಆಡುನುಡಿಗಳನ್ನು ಸಲೀಸಾಗಿ ಮಾತಾಡಬಲ್ಲವರಾಗಿದ್ದರು.
ಬರ್ನಾರ್ಡ್ ಷಾ ಅವರಿಂದ ತುಂಬಾ ಪ್ರಭಾವಿತರಾಗಿದ್ದರು. ಇಂಗ್ಲಿಷ್ ಹಾಡುಗಳ ಅದೇ ರಾಗ ದಲ್ಲಿ ನಿಂತಂತೆಯೇ ಕನ್ನಡದಲ್ಲಿ ಕವನಗಳನ್ನು ಕಟ್ಟಿ ಹಾಡಬಲ್ಲವರಾಗಿದ್ದರು. ಈ ರೀತಿ ಹುಟ್ಟಿದ ಹಾಡೇ ‘ನಾನು ಕೋಳೀಕೆ ರಂಗ’! ಫುಟ್ಬಾಲ್ ಆಟದಲ್ಲಿ ಅವರೊಬ್ಬ ಉತ್ತಮ ಗೋಲ್ ಕೀಪರ್. ಜತೆಗೆ ಒಳ್ಳೆಯ ವ್ಯಾಯಾಮಪಟು. ರಾಯಲ್ ಜಿಯಾಲಜಿಕಲ್ ಸೊಸೈಟಿಯಿಂದ ಚಿನ್ನದ ಪದಕ ಪಡೆದು ಭಾರತಕ್ಕೆ ಮರಳಿ ಬಂದವರು ಅಗೆದು ಗುಡ್ಡೆ ಹಾಕಿದ್ದು ಅದಿರನ್ನಲ್ಲ, ಸಾಹಿತ್ಯವನ್ನು!
ಕೈಲಾಸಂ ಅವರು ರಾತ್ರಿ ಹತ್ತು ಗಂಟೆ ಮೇಲೆ ಒಂದು ಕೊಳಕಾದ ಅಡ್ಡಾದಲ್ಲಿ (nook ಅಂತ ಕೈಲಾಸಂ ಕರೆಯುತ್ತಿದ್ದರು) ಗೆಳೆ ಯರ ಜತೆ ಸೇರಿಕೊಂಡು ಆಲ್ಕೋಹಾಲ್ ಕುಡೀತ ಸಿಗರೇಟು ಸೇದುತ್ತಾ, ಹೊಗೆ ಸುರಳಿಯಲ್ಲಿ ಕೈಲಾಸಂ ಅಂತ ಬರೆಯುತ್ತಾ, ನಾಟಕ, ಕತೆ, ಕವನ, ಜೋಕುಗಳನ್ನು ಏರಿದ ಧ್ವನಿಯಲ್ಲಿ ಹಾವಭಾವ ಮಾಡಿಕೊಂಡು ಡಿಕ್ಟೇಟ್ ಮಾಡುತ್ತಿದ್ದರು. ಅವರ ಗೆಳೆಯರು ಅದನ್ನು ಹಾಳೆಗಳ ಮೇಲೆ ಇಳಿಸುತ್ತಿ ದ್ದರು. ಅಂಥ ಗೆಳೆಯರಲ್ಲಿ ಒಬ್ಬರು ಜಿ.ಪಿ.ರಾಜರತ್ನಂ! ಪಾಪ, ಕುಡುಕನ ಪದಗಳನ್ನು ಬರೆದ ರಾಜರತ್ನಂ ಅವರು ಏನನ್ನೂ ಕುಡಿಯುತ್ತಿರಲಿಲ್ಲ!
ಕೆ.ವಿ.ಅಯ್ಯರ್ ಕೂಡ ಈ ಪಟಾಲಂ ಸದಸ್ಯರು. ಜಿಯಾಲಜಿ ಡಿಪಾರ್ಟ್ಮೆಂಟ್‌ಗೆ ಮಹಾ ನಿರ್ದೇಶಕ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದ ಕೈಲಾಸಂ ಅಪ್ಪ ಹೈಕೋರ್ಟ್ ಜಡ್ಜ್ ಪರಮಶಿವ ಅಯ್ಯರ್, ಸರಕಾರಿ ಜಿಯಾಲಜಿ ಕೆಲಸ ಬಿಟ್ಟು ನಾಟಕ, ಕತೆ ಅಂತ ಕುಡಿದುಕೊಂಡು, ಸೇದಿಕೊಂಡು ಹಾಳಾಗಿದ್ದ ಮಗನನ್ನ ತೊರೆದುಬಿಟ್ಟಿದ್ದರು! ಯಾರೋ ಒಬ್ಬರು, ‘ನೀವು ಕನ್ನಡದ ಬರ್ನಾರ್ಡ್ ಷಾ’ ಅಂದರಂತೆ. ಅದಕ್ಕೆ
ಕೈಲಾಸಂ ಹೇಳಿದ್ದು- ’ಬರ್ನಾರ್ಡ್ ಷಾ ಐರಿಷ್, ನಾನು ಅಯ್ಯರಿಷ್!’ ಒಮ್ಮೆ ರೈಲಿನಲ್ಲಿ ಗೆಳೆಯನ ಜತೆ ರಾತ್ರಿ ಪ್ರಯಾಣ ಆದ ಮೇಲೆ ಹೇಳಿ
ದರಂತೆ- ‘ಸೌಂಡ್ ಸ್ಲೀಪ್ ಎಲ್ಲಿ ಬಂತು, ನನಗೆ ಸೌಂಡ್, ಅವನಿಗೆ ಸ್ಲೀಪ್’.