ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಭಾರತದ ರಾಜಕಾರಣದಲ್ಲಿ 1975ರ ಜೂನ್ 12 ಅತ್ಯಂತ ಮಹತ್ವದ ದಿನ. ಎರಡು ಕಾರಣಕ್ಕೆ ಆ ದಿನ ಮಹತ್ವ ದ್ದಾಗಿದೆ. ಮೊದಲನೆಯದು, ಆ ದಿನ ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಬಂದಿತು. ಕಾಂಗ್ರೆಸ್ ಪಕ್ಷ ಆ ಚುನಾವಣೆಯಲ್ಲಿ ದಯನೀಯ ಪರಾಭವವನ್ನು ಅನುಭವಿಸಿತು.
ಕಾಂಗ್ರೆಸ್ (ಒ), ಜನಸಂಘ, ಪ್ರಜಾಸೋಷಿಯಲಿಸ್ಟ್ ಪಾರ್ಟಿ ಮತ್ತು ಲೋಕದಳ ಸೇರಿ ರಚಿಸಿಕೊಂಡ ಜನತಾ
ಮೋರ್ಚಾ ವಿರುದ್ಧ ಕಾಂಗ್ರೆಸ್ ಸೋತುಹೋಯಿತು. ನವನಿರ್ಮಾಣ ಆಂದೋಲನದ ಪರಿಣಾಮ ಚಿಮನ್ ಭಾಯಿ ಪಟೇಲ್ ನೇತೃತ್ವದ ಸರಕಾರ ಅದಕ್ಕೂ ಒಂದು ವರ್ಷದ ಮೊದಲೇ ವಜಾಗೊಂಡಿತ್ತು. ಎರಡನೆಯದು, ಅದೇ ದಿನ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿ, ೧೯೭೧ರಲ್ಲಿ ರಾಯ್ ಬರೇಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಇಂದಿರಾ ಗಾಂಧಿ ಆಯ್ಕೆಯನ್ನು ಅಮಾನ್ಯ ಮಾಡಿತ್ತು. ಇಂದಿರಾ ಅವರು ಚುನಾವಣೆಯಲ್ಲಿ ಅಕ್ರಮ ವೆಸಗಿರುವುದು ಸಾಬೀತಾಗಿದ್ದರಿಂದ ಅವರನ್ನು ಅನರ್ಹಗೊಳಿಸಿ ಮುಂದಿನ ಆರು ವರ್ಷಗಳ ಕಾಲ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ ಎಂದು ಜಸ್ಟಿಸ್ ಜಗಮೋಹನ್‌ಲಾಲ್ ಸಿನ್ಹಾ ಐತಿಹಾಸಿಕ ತೀರ್ಪು ನೀಡಿದ್ದರು.
ಇಂದಿರಾ ವಿರುದ್ಧ ಸ್ಪರ್ಧಿಸಿದ್ದ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ರಾಜ್ ನಾರಾಯಣ್ ಅವರು, ಇಂದಿರಾ ಚುನಾವಣೆಯಲ್ಲಿ ಅಕ್ರಮವೆಸಗಿzರೆ ಎಂದು ಕೋರ್ಟಿಗೆ ಹೋಗಿದ್ದರು. ಅವರು ಆ ಚುನಾವಣೆಯಲ್ಲಿ ಇಂದಿರಾ ವಿರುದ್ಧ ೧.೧೦ ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಇಂದಿರಾ ಕೋರ್ಟಿಗೆ ಹಾಜರಾಗಬೇಕು ಎಂದು ರಾಜ್ ನಾರಾಯಣ್ ಪರ ವಕೀಲರು ಆಗ್ರಹಿಸಿದರು. ದೇಶದಲ್ಲಿಯೇ ಮೊದಲ ಬಾರಿಗೆ ಪ್ರಧಾನಿ ವಿಚಾರಣೆ ಎದುರಿಸಲು ಕೋರ್ಟ್ ಮುಂದೆ ನಿಂತಿದ್ದರು. ಇಂದಿರಾ ಅವರ ಚುನಾವಣಾ ಏಜೆಂಟ್ ಯಶಪಾಲ್ ಕಪೂರ್, ರಾಯ್‌ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್, ರಾಯ್‌ಬರೇಲಿ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಪ್ರದೇಶ ಗೃಹ ಕಾರ್ಯದರ್ಶಿ ಇಂದಿರಾ ಗಾಂಧಿ ಅವರಿಗೆ ಚುನಾವಣೆಯಲ್ಲಿ ನೆರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಮತ್ತು ಇದು ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ ೧೨೩(೭) ರ ಪ್ರಕಾರ ಅಪರಾಧ ಎಂದು ಕೋರ್ಟ್ ಹೇಳಿತು.
ಯಶಪಾಲ್ ಕಪೂರ್ ಕೇಂದ್ರ ಸರಕಾರದ ಗೆಜೆಟೆಡ್ ಅಧಿಕಾರಿಯಾಗಿದ್ದರು. ಅವರು ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯ ಅಧಿಕಾರಿ(ಒಎಸ್‌ಡಿ) ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಇಂದಿರಾ ಏಜೆಂಟ್ ಆಗಿದ್ದರು. ಅವರ ರಾಜೀನಾಮೆ ಯಾವಾಗಿನಿಂದ ಜಾರಿಗೆ ಬಂದಿದೆ
ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಕಾರಣ ಅವರು ರಾಜೀನಾಮೆ ನೀಡಿದ ದಿನಾಂಕದ ಮುನ್ನವೇ ಇಂದಿರಾ ಪರವಾಗಿ ಎರಡು ಕಡೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು.
ಸರಕಾರದ ಗೆಜೆಟೆಡ್ ಅಧಿಕಾರಿಯಿರುವಾಗಲೇ ಅವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು. ಇಂದಿರಾ ಅನುಮತಿ ಮೇರೆಗೆ ಕಪೂರ್ ಇಂಥ ಚಟುವಟಿಕೆಗಳಲ್ಲಿ
ಪಾಲ್ಗೊಂಡಿರುವುದು ಕೋರ್ಟ್‌ಗೆ ಮನವರಿಕೆಯಾಗಿತ್ತು. ಅಲಹಾಬಾದ್ ಹೈಕೋರ್ಟಿನ ತೀರ್ಪು ಬಂದರೂ, ಇಂದಿರಾ ರಾಜೀನಾಮೆ ನೀಡಲಿಲ್ಲ. ಇಂದಿರಾ ಅವರ ಮಗ ಸಂಜಯ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ ರೇ, ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರುವಾ, ಕೃಷ್ಣ ಚಂದ್ರ ಪಂತ್ ಮುಂತಾದ ನಾಯಕರು ಇಂದಿರಾಗೆ ಪ್ರಧಾನಿಯಾಗಿ ಮುಂದುವರಿಯುವಂತೆ ಸಲಹೆ ನೀಡಿದರು.
ಕೋರ್ಟ್ ತೀರ್ಪು ಬರುತ್ತಿದ್ದಂತೆ ರಾಜೀನಾಮೆ ನೀಡಲು ಇಂದಿರಾ ನಿರ್ಧರಿಸಿದ್ದರು ಮತ್ತು ರಕ್ಷಣಾ ಸಚಿವ ಬಾಬು ಜಗಜೀವನ ರಾಮ್ ಅವರನ್ನು ಕೆಲಕಾಲದ ಅವಧಿಗೆ ತಮ್ಮ ಹುದ್ದೆಯಲ್ಲಿ ಕುಳ್ಳಿರಿಸಲು ಯೋಚಿಸಿದ್ದರು. ಆದರೆ ಇಂದಿರಾ ನಿಷ್ಠರು, ‘ಇಂಥ ಯಾವ ಕ್ರಮಕ್ಕೂ ಮುಂದಾಗಬೇಡಿ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದರೆ, ನಿಮ್ಮನ್ನು ಮುಗಿಸಿ ಬಿಡುತ್ತಾರೆ. ಒಮ್ಮೆ ಅಧಿಕಾರವನ್ನು ಬಿಟ್ಟರೆ, ಮರಳಿ ಪಡೆಯುವುದು ಕಷ್ಟ’ ಎಂದು ಅವರಿಗೆ ಸಲಹೆ ನೀಡಿದರು.
ಇದನ್ನೂ ಓದಿ: Tamannaah Bhatia: ಮೇಕಪ್ ಇಲ್ಲದೆ ಕಾಣಿಸಿಕೊಂಡ ಮಿಲ್ಕ್ ಬ್ಯೂಟಿ ತಮನ್ನಾ; ಹೇಗಿದ್ದಾರೆ ನೋಡಿ…