ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನಾನು ಹಿಮಾಚಲ ಪ್ರದೇಶದ ಗುಡ್ಡದ ತಪ್ಪಲಲ್ಲಿ ಮನೆ ಮಾಡಿ, ಅಲ್ಲಿಯೇ ನನ್ನ ನಿವೃತ್ತ ಜೀವನವನ್ನು ಕಳೆಯ ಬಯಸಿದ್ದೇನೆ’. ಹಾಗೆಂದು ಹೇಳಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಅಂದು ಅವರು ತಮ್ಮ ಸಫ್ದರ್‌ಜಂಗ್ ನಿವಾಸದ ಮರದ ಕೆಳಗೆ ಕುಳಿತು ತಮ್ಮನ್ನು ಭೇಟಿ ಮಾಡಲು ಬಂದ ಇಬ್ಬರು ಅತಿಥಿಗಳ ಜತೆ ಮಾತಾಡುತ್ತಿದ್ದರು.
‘ನಾನು ಅಲ್ಲಿ ಸಣ್ಣ ಕಾಟೇಜನ್ನು ಖರೀದಿಸಿ, ಅಲ್ಲಿ ನನ್ನ ಆತ್ಮಕಥೆಯನ್ನು ಬರೆಯುತ್ತೇನೆ’ ಎಂದು ಇಂದಿರಾ ಹೇಳಿ ದರು. ‘ಅಷ್ಟಕ್ಕೂ ನನಗೆ ಏನು ಬೇಕು? ನನಗೆ ಏನು ಖರ್ಚಿದೆ? ನಾನು ಅಲ್ಲಿ ಸರಳ ಜೀವನವನ್ನು ನಡೆಸಲು ನಿರ್ಧರಿಸಿದ್ದೇನೆ’ ಎಂದು ಅವರು ಓಲ್ಡ್ ಮಾಂಕ್ ತಯಾರಿಸುವ ಮೋಹನ್ ಮೇಕಿನ್ ಲಿಕ್ಕರ್ ಕಂಪನಿಯ ಕಪಿಲ್ ಮೋಹನ್ ಮತ್ತು ಅನಿಲ್ ಬಾಲಿ ಅವರಿಗೆ ಹೇಳಿದರು. ಅವರಿಬ್ಬರೂ ಇಂದಿರಾ ಜತೆ ನಿಕಟ ಸಂಪರ್ಕವನ್ನು
ಹೊಂದಿದ್ದರು. ಮೋಹನ್ ಕುಟುಂಬಿಕರು ಅರವತ್ತರ ದಶಕದ ಆರಂಭದಿಂದ ಇಂದಿರಾ ಜತೆ ಗಟ್ಟಿಯಾಗಿ ನಿಂತು, ದೇಶಾದ್ಯಂತ ಅವರಿಗೆ ರಾಜಕೀಯ ಬೆಂಬಲ ದೊರಕಿಸಿಕೊಡಲು ಶ್ರಮಿಸಿದವರು. ಹಾಗೆಯೇ ಇಂದಿರಾ ಅವರಿಂದ ದೊಡ್ಡ ಪ್ರಮಾಣದಲ್ಲಿ ಉಪಕೃತರಾದವರು. ಎರಡು ವಾರಗಳ ಮೊದಲು (1977ರ ಏಪ್ರಿಲ್) ಅವರು ಭಾರತದ ಪ್ರಧಾನಿಯಾಗಿದ್ದರು.
ಆದರೆ ಅಂದು ಅವರು ಸಂಸತ್ತಿನ ಸದಸ್ಯೆಯೂ ಆಗಿರಲಿಲ್ಲ. ಮಾರ್ಚ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯವಾಗಿ ಸೋತುಹೋಗಿತ್ತು. ಇಂದಿರಾ ಅಂಥ ಪರಾಭವವನ್ನು ಕನಸು-ಮನಸಿನಲ್ಲೂ
ನಿರೀಕ್ಷಿಸಿರಲಿಲ್ಲ. ಚುನಾವಣೆಯ ಫಲಿತಾಂಶದಿಂದ ಅವರು ಆಘಾತಕ್ಕೊಳಗಾಗಿದ್ದರು. ಸ್ವಂತ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಅವರು ಸೋತುಹೋಗಿದ್ದರು. ಸೋಲು ಸಹ ಅವರಿಗೆ ಕನಿಕರ ತೋರಿರಲಿಲ್ಲ. ಸ್ವಾತಂತ್ರ್ಯಾ ನಂತರ ದೇಶವನ್ನು ನಿರಂತರ 30 ವರ್ಷಗಳ ತನಕ ಆಳಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಉತ್ತರ ಭಾರತದಲ್ಲಿ ಧೂಳೀ ಪಟವಾಗಿತ್ತು.
ಜನತಾ ಪಕ್ಷ ಮತ್ತು ಮಿತ್ರಪಕ್ಷಗಳು 345 ಸ್ಥಾನಗಳಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದವು. 11 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಇಂದಿರಾ, 1977ರ ಮಾರ್ಚ್ 22ರಂದು ರಾಜೀನಾಮೆ ನೀಡಿದರು. ಈ ಸೋಲು ಅವರನ್ನು ಹಿಂಜಿಹಿಪ್ಪಲಿ ಮಾಡಿತ್ತು. ರಾಜಕೀಯ ನಿವೃತ್ತಿ ಘೋಷಿಸಿ ದಿಲ್ಲಿ ಬಿಟ್ಟು ದೂರ ಹೋಗುವ ನಿರ್ಧಾರಕ್ಕೆ ಬಂದಿದ್ದರು. ‘ನಾನು ಎಂಥ ಜಾಗವನ್ನು ಆರಿಸಿಕೊಳ್ಳುತ್ತೇನೆ ಅಂದ್ರೆ ಸುತ್ತಲೂ ಹಸಿರು, ಮರಗಳಿರಬೇಕು.
ನಾನು ನನ್ನ ಉಳಿದ ದಿನಗಳನ್ನು ಅಲ್ಲಿಯೇ ಕಳೆಯುತ್ತೇನೆ. ಪುಸ್ತಕಗಳನ್ನು ಓದುತ್ತಾ ಇದ್ದುಬಿಡುತ್ತೇನೆ’ ಎಂದು ಹೇಳಿದರು. ‘ಮೇಡಂ, ನೀವು ಪುಸ್ತಕ ಬರೆಯುತ್ತೀರಾ?’ ಎಂದು 29 ವರ್ಷದ ಅನಿಲ್ ಬಾಲಿ ಉತ್ಸಾಹದಿಂದ ಕೇಳಿದ. ‘ಬರೆದರೂ ಬರೆದೇನು. ಅಷ್ಟಕ್ಕೂ ನನ್ನ ಆತ್ಮಕಥೆಯನ್ನು ಯಾರು ಓದಲು ಬಯಸುತ್ತಾರೆ?’ ಎಂದು ವಿಷಾದದಿಂದ ನುಡಿದರು. ತಾನು ಈ ದೇಶದ ಜನರಿಂದ ತಿರಸ್ಕಾರಕ್ಕೊಳಗಾದವಳು ಎಂಬುದು ಅವರಿಗೆ ಮನವರಿಕೆ ಯಾಗಿತ್ತು. ‘ಮೋಹನ್-ಬಾಲಿ, ನನಗಾಗಿ ಒಂದು ಉತ್ತಮ ಕಾಟೇಜ್ ಅನ್ನು ಹುಡುಕಿ. ನನಗೆ ಈ ರಾಜಕೀಯ ಸಾಕಾಗಿದೆ. ನಾನು ತುಂಬಾ ದಣಿದಿದ್ದೇನೆ.
ನನಗೆ ವಿಶ್ರಾಂತಿ ಬೇಕು ಎಂದು ಅನಿಸುತ್ತಿದೆ’ ಎಂದು ಇಂದಿರಾ ಹೇಳಿದರು. ತಕ್ಷಣ ಅವರಿಗೆ ಅದೇನೋ ಹೊಳೆ ದಂತಾಗಿ, ‘ನನಗೆ ಗೊತ್ತಿತ್ತು, ನಾನು ಸೋಲುತ್ತೇನೆಂದು’ ಎಂದು ಹೇಳಿದರು. ಈ ಮಾತನ್ನು ಕೇಳಿ ಮೋಹನ್ ಮತ್ತು ಬಾಲಿ ಮುಖಮುಖ ನೋಡಿಕೊಂಡರು. ಕಾರಣ ಗುಪ್ತಚರ ಇಲಾಖೆ ಅಧಿಕಾರಿಗಳು, ‘ನೀವೇ ಗೆಲ್ಲುತ್ತೀರಿ ಮತ್ತು 340 ಸ್ಥಾನಗಳಲ್ಲಿ ಜಯಗಳಿಸುತ್ತೀರಿ’ ಎಂದು ಹೇಳಿದ್ದರು. ಆ ಸಂಗತಿ ಮೋಹನ್-ಬಾಲಿಗೆ ಗೊತ್ತಿತ್ತು.
ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಹಿರಿಯ ನಾಯಕರೂ ತಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭಾವಿಸಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕಿಂತ ಎರಡು ದಿನ ಮೊದಲು, ಉತ್ತರ ಪ್ರದೇಶ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿ ಬಂದು, ‘ನಾವು ಉತ್ತರ ಪ್ರದೇಶದ 85 ಸ್ಥಾನಗಳ ಪೈಕಿ 70 ಸ್ಥಾನಗಳಲ್ಲಿ ಜಯ ಗಳಿಸುತ್ತೇವೆ’ ಎಂದು ಹೇಳಿದ್ದರು. ‘ಹಾಗಾದರೆ ನಾವು ಎಡವಿದ್ದು ಎಲ್ಲಿ?’ ಎಂದು ಇಂದಿರಾ ಸುಮ್ಮನಾಗಿಬಿಟ್ಟರು.
ಇದನ್ನೂ ಓದಿ: Vishweshwar Bhat Column: ಮೊಬೈಲ್ ಬಿಟ್ಟು ಇರಬಹುದಾ ?