ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಎಲ್ಲರಿಗೂ ತಾವು ಉತ್ತಮ ಮಾತುಗಾರರಾಗಬೇಕು, ಭಾಷಣಕಾರರಾಗಬೇಕು, ಪ್ರವಚನಕಾರರಾಗಬೇಕು ಎಂಬ ಆಸೆ ಇರುತ್ತದೆ. ಉತ್ತಮ ಭಾಷಣಕಾರರಾಗುವುದು ಹೇಗೆ ಎಂಬ ಬಗ್ಗೆ ಕೋರ್ಸುಗಳಿವೆ. ಆನ್‌ಲೈನ್ ನಲ್ಲಂತೂ ಇಂಥ ನೂರಾರು ಕೋರ್ಸುಗಳನ್ನು ನೋಡಬಹುದು. ಅದರಲ್ಲೂ ಬೇರೆಯವರನ್ನು ಪ್ರೇರೇಪಿಸುವಂತೆ, ಉಲ್ಲಸಿತ ರಾಗಿಸು ವಂತೆ (motivational speaker)ಮಾತಾಡುವವರಿಗೆ ಎಲ್ಲಿಲ್ಲದ ಬೇಡಿಕೆ.
ಅವರನ್ನು ಸಂಘ-ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಗಳಿಗೆ, ಸಾರ್ವಜನಿಕ ಸಭೆ- ಸಮಾರಂಭಗಳಿಗೆ ಹಣ ಕೊಟ್ಟು ಆಹ್ವಾನಿಸುತ್ತಾರೆ. ಇವರ ಮಾತುಗಳನ್ನು ಜನ ಹಣ ಕೊಟ್ಟು ಕೇಳುತ್ತಾರೆ. ವ್ಯಕ್ತಿತ್ವ ವಿಕಸನ ಗುರು ಶಿವ್ ಖೇರಾ ಅವರ
ಹೆಸರನ್ನು ಕೇಳಿರಬಹುದು. ಒಂದು ದಿನದ ಅವರ ಕಾರ್ಯಾಗಾರದಲ್ಲಿ ಭಾಗಿಯಾಗಲು ಲಕ್ಷಗಟ್ಟಲೆ ಹಣ ನೀಡಬೇಕು. ಅಲ್ಲಿ ಅವರು ನೀವು ಉತ್ತಮ ಭಾಷಣಕಾರ ಆಗುವುದು ಹೇಗೆ ಎಂಬ ಬಗ್ಗೆಯೂ ಪಾಠ ಮಾಡುತ್ತಾರೆ. ಈ
ದಿನಗಳಲ್ಲಿ ಇಂಥ ಭಾಷಣಕಾರರಿಗೆ ಬಹಳ ಬೇಡಿಕೆ. ಅಷ್ಟೇ ಅಲ್ಲ, ಒಳ್ಳೆಯ ಮಾತುಗಾರರಿಗೆ ಸರ್ವತ್ರ ಮನ್ನಣೆ. ಆದರೆ ಇಲ್ಲಿ ತನಕ ಯಾರೂ ‘ಉತ್ತಮ ಕೇಳುಗರಾಗುವುದು ಹೇಗೆ?’, ‘ಉತ್ತಮ ಕೇಳುಗರಾಗಲು ಏನು ಮಾಡಬೇಕು?’ ಎಂಬ ಬಗ್ಗೆ ಕೋರ್ಸುಗಳನ್ನು ಸಂಘಟಿಸಿದಂತಿಲ್ಲ.
ಮಾತುಗಾರ ಆಗುವುದು ಎಷ್ಟು ಮುಖ್ಯವೋ, ಕೇಳುಗರಾಗುವುದೂ ಅಷ್ಟೇ ಮುಖ್ಯ. ಉತ್ತಮ ಕೇಳುಗ ಮಾತ್ರ ಉತ್ತಮ ಮಾತುಗಾರ ಆಗಬಲ್ಲ. ಪ್ರಧಾನಿ ಮೋದಿಯವರು ಉತ್ತಮ ಭಾಷಣಕಾರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮೂಲತಃ ಅವರೊಬ್ಬ ಉತ್ತಮ ಕೇಳುಗ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅವರಿಗೆ ಮಾತಾಡುವುದಕ್ಕಿಂತ ಕೇಳುವುದರಲ್ಲಿಯೇ ಹೆಚ್ಚು ಖುಷಿ. ಯಾರಾದರೂ ಒಳ್ಳೆಯ ವಿಷಯವನ್ನು ಅವರ ಮುಂದೆ ಹೇಳಲಾರಂಭಿಸಿದರೆ, ಅವರು ತದೇಕಚಿತ್ತದಿಂದ ಕೇಳುತ್ತಾರೆ.
ಮಧ್ಯೆ ಬಾಯಿ ಹಾಕುವುದಿಲ್ಲ. ಈ ಗುಣವೇ ಅವರನ್ನು ಉತ್ತಮ ಭಾಷಣಕಾರರನ್ನಾಗಿ ಮಾಡಿದೆ. ಸಾಮಾನ್ಯವಾಗಿ ಉತ್ತಮ ಭಾಷಣಕಾರರೆಲ್ಲರೂ ಉತ್ತಮ ಕೇಳುಗರೂ ಆಗಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಭಾಷಣಕಾರರು ಮತ್ತು ಉತ್ತಮ ಕೇಳುಗರು. ಅವರ ಮುಂದೆ ಗಂಟೆಗಟ್ಟಲೆ ಮಾತಾಡಿದರೂ ಮಧ್ಯೆ ಬಾಯಿ ಹಾಕದೇ ಕೇಳುತ್ತಾರೆ. ಅನೇಕರು ಮಾಡುವ ತಪ್ಪೆಂದರೆ, ಅಧಂಬರ್ಧ ಕೇಳುತ್ತಾರೆ, ಆ ಪೈಕಿ ಕಾಲುಭಾಗದಷ್ಟು ಅರ್ಥ ಮಾಡಿ ಕೊಳ್ಳುತ್ತಾರೆ ಮತ್ತು ಕೇಳಿದ್ದಕ್ಕಿಂತ ಹತ್ತು ಪಟ್ಟು ಮಾತಾಡುತ್ತಾರೆ. ಜನರಿಗೆ ಯಾವತ್ತೂ ಮಾತು ಅಥವಾ ಉಪದೇಶ ಬೇಕಿರುವುದಿಲ್ಲ.
ಯಾರಾದರೂ ಕಾಳಜಿಯಿಂದ ಅವರ ಕೈಯನ್ನು ಹಿಡಿದುಕೊಂಡರೆ, ಅವರ ಮಾತುಗಳನ್ನು ಆಸಕ್ತಿಯಿಂದ ಕೇಳಿದರೆ ಸಾಕು, ಅವರ ತಾಪತ್ರಯಗಳೆಲ್ಲ ಮಾಯ! Instead of talking in the hope that people will listen, try listening in the hope that people will talk ಎಂಬ ಮಾತಿದೆ. ನೀವು ಯಾವ ರೀತಿ ಕೇಳಬೇಕೆಂದರೆ, ಜನ ನಿಮ್ಮ ಮುಂದೆ ಮಾತಾ ಡಲು ಹಪಹಪಿಸಬೇಕು. ಆ ರೀತಿ ಕೇಳಬೇಕು. ಯಾರು ಒಳ್ಳೆಯ ಕೇಳುಗರಾಗಿರುತ್ತಾರೋ, ಅವರ ಮುಂದೆ ಎಲ್ಲರೂ ಬಂದು ಬಂದು ತಮ್ಮ ಗೋಳುಗಳನ್ನು ಬಂದು ಹೇಳಿಕೊಳ್ಳುತ್ತಾರೆ. ಮಾತಾಡುವುದು ಒಂದು ಕಲೆಯಾದರೆ, ಕೇಳುವುದೂ ಒಂದು ಕಲೆ. ಅದರಲ್ಲೂ ಗಮನವಿಟ್ಟು ಕೇಳುವುದು, ಅರ್ಥ ಮಾಡಿಕೊಂಡು ಕೇಳುವುದು, ಕೇಳುತ್ತಾ ಕೇಳುತ್ತಾ ಅರ್ಥ ಮಾಡಿಕೊಳ್ಳುವುದು, ಪ್ರಶ್ನೆ ಕೇಳಲೆಂದು ಕೇಳದಿರುವುದು ಬಹಳ ಮುಖ್ಯ. ಮಾತು ಆತುರದ ಸಂಕೇತ. ಕೇಳುವುದು ಸಂಯಮದ ಸಂಕೇತ. ಮಾತಾಡುವುದರಿಂದ ಬರಿದಾಗುತ್ತೇವೆ. ಕೇಳುವುದರಿಂದ ತುಂಬಿ ಕೊಳ್ಳುತ್ತೇವೆ.
ಇದನ್ನೂ ಓದಿ: Vishweshwar Bhat Column: ಬಾತ್ ರೂಮ್ ಬರಹ ಎಂಬ ನಿಜವಾದ ಸೃಜನಶೀಲ ಸಾಹಿತ್ಯ !