Thursday, 12th September 2024

Vishweshwar Bhat Column: ವಿಮಾನಯಾನ: ಗೊತ್ತಿರದ ಸಂಗತಿಗಳು

ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಎಲ್ಲ ವಿಷಯಗಳನ್ನು ಹೇಳುವುದಿಲ್ಲ ಮತ್ತು ಕೆಲವು ಸಂಗತಿಗಳನ್ನು ಮುಚ್ಚಿಡುತ್ತವೆ ಎಂಬ ಬಗ್ಗೆ ಮೊನ್ನೆ ಬರೆದಿದ್ದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಂಶಗಳು: ೮ ಗಂಟೆಗೂ ಹೆಚ್ಚು ಹೊತ್ತು ವಿಮಾನದಲ್ಲಿ ಪ್ರಯಾಣ ಮಾಡುವ ಪೈಲಟ್ ಗಳು ಊಟದ ಬಗ್ಗೆ ಎಚ್ಚರ ವಹಿಸುತ್ತಾರೆ. ಇಬ್ಬರು ಪೈಲಟ್‌ಗಳು ಪ್ರತ್ಯೇಕವಾದ ಊಟವನ್ನು ಮಾಡುತ್ತಾರೆ. ಇಬ್ಬರಿಗೂ ನೀಡಿದ ಆಹಾರ ಕಲುಷಿತವಾಗಿದ್ದರೆ ಅಥವಾ ವಿಷಯುಕ್ತವಾಗಿದ್ದರೆ, ಸಮಸ್ಯೆ ಆಗಬಹುದೆಂದು, ಪ್ರತ್ಯೇಕವಾದ ಥಾಲಿಯನ್ನು ಅವರಿಗೆ ನೀಡಲಾಗುತ್ತದೆ. ಈ ನಿಯಮವನ್ನು ಕೆಲವು ಏರ್‌ಲೈನ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುತ್ತವೆ.

ಒಬ್ಬರಿಗೆ ಹೊಟ್ಟೆ ಕೆಟ್ಟರೆ (Stoamach Upset), ಮತ್ತೊಬ್ಬರು ಸುರಕ್ಷಿತವಾಗಿರಲಿ ಎಂಬ ದೃಷ್ಟಿಯಿಂದ ಈ ಕ್ರಮ. ಡೊಮೆಸ್ಟಿಕ್ ವಿಮಾನಗಳಲ್ಲಿ ಜಗ್‌ನಲ್ಲಿ ಕುಡಿಯುವ ನೀರನ್ನು ನೀಡುತ್ತಾರೆ. ಈ ನೀರು ಸುರಕ್ಷಿತವಲ್ಲ. ಮಿನರಲ್ ವಾಟರ್ ನೀಡದಿದ್ದರೆ ನೀರನ್ನು ಕುಡಿಯದಿರುವುದೇ ವಾಸಿ. ಕಾರಣ, ವಿಮಾನದೊಳಗಿನ ಪರಿಸರ ಬ್ಯಾಕ್ಟೀರಿಯಾ ಜನಕ. ೩೭ ಬೇರೆ ಬೇರೆ ಬಗೆಯ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇರುತ್ತದೆ. ಆಸ್ಟ್ರೇಲಿ ಯಾದ ಕ್ವಾಂಟಾಸ್ ಏರ್‌ಲೈ ಆರಂಭವಾಗಿ ೧೦೪ ವರ್ಷಗಳಾದವು. ಆದರೆ ಅದು ಇಲ್ಲಿ ತನಕ ಒಂದೇ ಒಂದು ಸಲ ಅಪಘಾತಕ್ಕೀಡಾಗಿಲ್ಲ. ಪ್ರಯಾಣದ ಸುರಕ್ಷತೆಗೆ ಈ ವಿಮಾನಯಾನ ಸಂಸ್ಥೆ ಗರಿಷ್ಠ ಮಹತ್ವವನ್ನು ನೀಡುತ್ತದೆ.

ಆದರೆ ಈ ಅಂಶವನ್ನು ಅದು ಡಂಗುರ ಸಾರಿಲ್ಲ. ಒಂದು ವೇಳೆ ಅಪಘಾತಕ್ಕೀಡಾದರೆ, ತಾನು ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದಂತಾಗಬಹುದು ಎಂಬ ಕಾರಣಕ್ಕೆ ಹಾಗೆ ಮಾಡಿಲ್ಲ. ಜಾಹೀರು ಮಾಡದಿರುವುದೂ ಒಂದು
ಜಾಹೀರಾತು ತಂತ್ರವೇ. ಸಾಕಷ್ಟು ವಿಮಾನ ಪ್ರಯಾಣ ಮಾಡಿರುವವರಿಗೂ ಈ ವಿಷಯ ಗೊತ್ತಿರುವುದಿಲ್ಲ. ಅದೇನೆಂದರೆ ವಿಮಾನದಲ್ಲಿರುವ ಟಾಯ್ಲೆಟ್ ಒಳಗೆ ಹೋಗಿ, ನೀವು ಬಾಗಿಲು ಲಾಕ್ ಮಾಡಿಕೊಂಡರೂ ಹೊರಗಿನಿಂದ ತೆಗೆಯಬಹುದು ಎಂಬುದು. ಒಳಗಿನಿಂದ ಲಾಕ್ ಮಾಡಿಕೊಂಡರೆ, ಬೇರೆ ಯವರಾರೂ ತೆಗೆಯ‌ ಲಾರರು ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು.

ಪ್ರಯಾಣಿಕರು ವಿಮಾನದ ಟಾಯ್ಲೆಟ್ ಒಳಗೆ ಹೋದಾಗ, ಹೃದಯಾಘಾತವಾದರೆ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಯಾದರೆ, ತಕ್ಷಣ ನೆರವು ನೀಡಲೆಂದು ಈ ಕ್ರಮ. Lavatory ಅಥವಾ Toilet ಎಂದು ಬರೆದ ದೀಪದ ಸೂಚನಾ ಫಲಕದ ಬಳಿ ಒಂದು ಸಣ್ಣ ಸ್ವಿಚ್ ಇರುವುದು ಯಾರಿಗೂ ಕಾಣುವುದಿಲ್ಲ. ಗಗನಸಖಿಯರಿಗೆ ಮಾತ್ರ ಅದು ಗೊತ್ತಿರುತ್ತದೆ. ಅಂಥ ಪ್ರಸಂಗ, ಟಾಯ್ಲೆಟ್ ಒಳಗೆ ಹೋದ ಪ್ರಯಾಣಿಕ ಬಹಳ ಹೊತ್ತಾದರೂ ಹೊರಗೆ ಬರದಿದ್ದರೆ, ಆಗ ಹೊರಗಿನಿಂದ ಬಾಗಿಲನ್ನು ತೆಗೆಯಲಾಗುತ್ತದೆ.

ಯಾವ ಕಾರಣಕ್ಕೂ ವಿಮಾನದೊಳಗೆ ಲೇಸರ್ ಪಾಯಿಂಟರ್ ಅನ್ನು ಬಳಸುವಂತಿಲ್ಲ. ಅಮೆರಿಕದ ಕೆಲವು ವಿಮಾನಗಳಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಬರೆದಿರುತ್ತಾರೆ. ಅದನ್ನು ಬಳಸಿದ ಪ್ರಯಾಣಿಕರನ್ನು ಐದು ವರ್ಷಗಳ
ಕಾರಾಗೃಹ ಶಿಕ್ಷೆಗೆ ಗುರಿಪಡಿಸುತ್ತಾರೆ. ಅದನ್ನು ಯಾಕೆ ಬಳಸಬಾರದು ಎಂದು ಹೇಳುವುದಿಲ್ಲ. ವಿಮಾನ ಹಾರುವ ಮುನ್ನ, ಪ್ರಯಾಣದುದ್ದಕ್ಕೂ ಪಾಲಿಸಬೇ ಕಾದ ನಿಯಮ/ಸೂಚನೆಗಳನ್ನು ಗಗನಸಖಿಯರು ಆಂಗಿಕವಾಗಿ ತಿಳಿಸಿ ಕೊಡುತ್ತಾರೆ. ಆ ಪೈಕಿ, ಯಾವ ಕಾರಣಕ್ಕೂ ವಿಮಾನದ ಎಮರ್ಜೆನ್ಸಿ ಬಾಗಿಲನ್ನು ತೆರೆಯಬಾರದು ಎಂಬುದೂ ಒಂದು.

ಅಸಲಿಗೆ ಆ ಬಾಗಿಲನ್ನು ಏನೇ ಮಾಡಿದರೂ ತೆಗೆಯಲು ಆಗುವುದಿಲ್ಲ. ವಿಮಾನದೊಳಗಿನ ಪ್ರೆಶರ್ (ನಾಲ್ಕರಿಂದ
ಹದಿನಾಲ್ಕು ಪಿಎಸ್‌ಐ) ಜಾಸ್ತಿಯಿರುವುದರಿಂದ ಬಲವಂತವಾಗಿ ಪ್ರಯತ್ನಿಸಿದರೂ ಬಾಗಿಲು ತೆಗೆಯುವುದು ಅಸಾಧ್ಯ. ವಿಮಾನ ಲ್ಯಾಂಡ್ ಆಗುವಾಗ ಕಡಿಮೆ ಎತ್ತರದಲ್ಲಿ ಹಾರುವ ಸಂದರ್ಭದಲ್ಲಿ ಬಾಗಿಲನ್ನು ತೆಗೆಯಬಹುದು. ವಿಮಾನ ಪ್ರಯಾಣದಲ್ಲಿ ಟೇಕಾ- ಆಗುವುದಕ್ಕಿಂತ ಹೆಚ್ಚು ಅಪಘಾತಗಳು ಲ್ಯಾಂಡ್ ಆಗುವಾಗ ಆಗುತ್ತವೆ. ಟೇಕಾಫ್ ಆಗುವಾ ಗಿನ (ಮೊದಲ ಮೂರು ನಿಮಿಷ) ಸಾಧ್ಯತೆ ಶೇ.೧೪ರಷ್ಟು. ಲ್ಯಾಂಡ್ ಆಗುವಾಗಿನದ್ದು (ಕೊನೆಯ ೮ ನಿಮಿಷ) ಶೇ.೪೮ರಷ್ಟು.

Leave a Reply

Your email address will not be published. Required fields are marked *