Friday, 22nd November 2024

Vishweshwar Bhat Column: ಬೋ*ಮಗ ಸಂಸ್ಕೃತ ಪದವೇ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್‌

ಪಾ.ವೆಂ.ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಕನ್ನಡದ ಒಂದು ಅಮೂಲ್ಯ ಗ್ರಂಥ. ಆ ಕೃತಿಯಲ್ಲಿ ಆಚಾರ್ಯರು ಸಾವಿರಾರು ಪದಗಳ ವ್ಯುತ್ಪತ್ತಿ, ವಿಸ್ತಾರ, ಅರ್ಥ, ಹೊಳಹು, ಭಿನ್ನರೂಪ ಹೀಗೆ ಪದಗಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ನಾವು ದಿನನಿತ್ಯ ಬಳಸುವ ಅವೆಷ್ಟೋ ಪದಗಳ ಹುಟ್ಟು ಅನೇಕರಿಗೆ ಗೊತ್ತಿರುವುದಿಲ್ಲ. ಉದಾಹರಣೆಗೆ ತ್ರಾಸು ಎಂಬ ಪದ. ಇದನ್ನು ನಾವು ಸಹಜವಾಗಿ ಬಳಸುತ್ತೇವೆ. ಅದಕ್ಕೆ ಆಚಾರ್ಯರು ಹೀಗೆ ಹೇಳುತ್ತಾರೆ- ನಮ್ಮ ಪೂರ್ವಿಕರು ಶಬ್ದಗಳ ವಿಷಯದಲ್ಲಿ ಮಡಿವಂತರಾಗಿರಲಿಲ್ಲ ಎಂಬುದಕ್ಕೆ ಇನ್ನೊಂದು ನಿದರ್ಶನ ತಕ್ಕಡಿಯಂಬರ್ಥದ ತ್ರಾಸು ಎಂಬ ಪದ. ಇದು ೧೨ನೇ ಶತಮಾನದಷ್ಟು ಹಿಂದೆಯೇ ಕನ್ನಡ ಕಾವ್ಯದಲ್ಲಿ ಕಂಡುಬರುತ್ತದೆ. ‘ತ್ರಾಸಿನೊಳಿಟ್ಟು ತೂಗುವ ಮಾತು’ ಅಲ್ಲಿದೆ. ಇದು ಹೊರನೋಟಕ್ಕೆ ಸಂಸ್ಕೃತವೆಂದೇ ತೋರೀತು. ಆದರೆ ಇದರ ಮೂಲ ಪಾರಸೀಕ ತರಾಜೂ. ಸಂಸ್ಕೃತದ ತ್ರಾಸದಿಂದ ಕನ್ನಡಕ್ಕೆ ಬಂದ ತ್ರಾಸು ಎಂಬುದು ಕಷ್ಟ, ಒತ್ತಡ ಎಂಬರ್ಥದ್ದು. ತ್ರಾಸು ಇಸ್ಲಾಮಿ ವಿಸ್ತರಣೆಯ ಪ್ರಭಾವದಿಂದ ಬಂದಿರದೆ ವಿದೇಶಗಳೊಡನೆ ಪ್ರಾಚೀನದಿಂದ ಇದ್ದ ಕರ್ನಾಟಕದ ವ್ಯಾಪಾರ ದೊಡನೆ ಬಂದದ್ದು.

ಆದರೆ ಫೌಜು ಅಥವಾ ಪೌಜು ಎಂಬುದು ಇಸ್ಲಾಮಿ ಮಿಲಿಟರಿ ಪ್ರಭಾವದಿಂದ ಕನ್ನಡಕ್ಕೆ ಸಾಕಷ್ಟು ಹಿಂದಿನ ಕಾಲದಲೇ ಬಂದ ಅರಬೀ ಪದ. ಇದರ ಅರ್ಥ ಸೈನ್ಯ ಅಥವಾ ದಂಡು. ಕ್ರಿ.ಶ. ೧೬೦೦ರವನಿರಬೇಕೆಂದು ತರ್ಕಿಸಲಾದ ಲಕ್ಷ್ಮೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ಅದನ್ನು ತುರುಕರದೆಂಬ ಯಾವ ಶಂಕೆಯೂ ಇಲ್ಲದೆ ಪ್ರಯೋಗಿಸುತ್ತಾನೆ. ಸೈನ್ಯಾಧಿಕಾರಿ ಎಂಬರ್ಥವುಳ್ಳ -ಜುದಾರವನ್ನು ಸ್ವಲ್ಪ ಅರ್ಥ ವಿಸ್ತಾರ ಮಾಡಿ ಪೊಲೀಸ್ ಪಡೆಯ ಅಧಿಕಾರಿ ಎಂಬರ್ಥದಲ್ಲಿ ಉತ್ತರ ಕರ್ನಾಟಕದಲ್ಲಿ ಬಳಸುತ್ತಾರೆ. ಒಂದು ಸಾಮಾನ್ಯ ಪದಕ್ಕೆ ಆಚಾರ್ಯರು ನೀಡುವ ವಿವರಣೆ ನಮ್ಮನ್ನು ಇಲ್ಲಿಂದ, ಮತ್ತೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಆ ಕೃತಿಯಲ್ಲಿ ಇಂಥ ಚಮತ್ಕಾರಗಳನ್ನು ಪ್ರತಿ ಪುಟದಲ್ಲಿ ಕಾಣಬಹುದು.

ಆ ಪುಸ್ತಕಕ್ಕೆ ಹಾ.ಮಾ.ನಾಯಕ ಅವರು ಮುನ್ನುಡಿ ಬರೆದಿದ್ದಾರೆ. ಒಂದೆಡೆ ನಾಯಕರು, ಪಾವೆಂ ಪ್ರಸ್ತಾಪಿಸಿದ ‘ಬೋಳಿ ಮಗ’ ಪದವನ್ನು ಪ್ರಸ್ತಾಪಿಸುತ್ತಾರೆ. ಇದು ‘ಬ್ರಾಹ್ಮಣ ಬೈಗುಳ’ ಎಂದು ಪಾವೆಂ ಹೇಳಿದ್ದಕ್ಕೆ ನಾಯಕರು ಒಂದು ಕತೆಯನ್ನು ಉಲ್ಲೇಖಿಸಿದ್ದಾರೆ. ಇದು ಅವರು ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೇಳಿದ್ದಂತೆ. ಆ ಕಾಲೇಜಿನಲ್ಲಿ ಒಬ್ಬ ಇಂಗ್ಲಿಷ್ ಪ್ರಾಧ್ಯಾಪಕರಿದ್ದರು. ಅವರು ಇಂಗ್ಲೆಂಡಿನಿಂದ ಬಂದವರು. ಅವರನ್ನು ನೋಡಿದಾ ಗಲೆಲ್ಲ ಒಬ್ಬ ಹುಡುಗ ‘ಬೋಳಿಮಗ’ ಎನ್ನುತ್ತಿದ್ದ. ಹೀಗೆ ನಾಲ್ಕಾರು ಸಲ ಆದ ಮೇಲೆ, ಆ ಪ್ರಾಧ್ಯಾಪಕರಿಗೆ ಆ ಮಾತು ಬಾಯಿ ಪಾಠವಾಯಿತು. ಅದರ ಅರ್ಥ ತಿಳಿಯಲು ಅವರಲ್ಲಿ ಕುತೂಹಲ ಬೆಳೆಯಿತು. ಒಮ್ಮೆ ಅವರು ಒಬ್ಬ ಉರ್ದು ಅಧ್ಯಾಪಕರನ್ನು ಕೇಳಿದರು. ಆ ಅಧ್ಯಾಪಕರು ಅದಕ್ಕೆ ಅರ್ಥ ಹೇಳಲು ಸಂಕೋಚಪಟ್ಟು, ಅದು ಕನ್ನಡ ಮಾತೆಂದೂ, ತಮಗೆ ಅರ್ಥ ತಿಳಿಯದೆಂದೂ ಹೇಳಿದರು! ಇಂಗ್ಲಿಷ್ ಪ್ರಾಧ್ಯಾಪಕರು ಕನ್ನಡ ಅಧ್ಯಾಪಕ ರೊಬ್ಬರನ್ನು ಕೇಳಿದರು.

ಅವರು ಸಂಕೋಚದಿಂದ ತಮಗೆ ಗೊತ್ತಿಲ್ಲ ಅಂದರು. ಹಿಂದಿ ಮೇಷ್ಟ್ರನ್ನು ಕೇಳಿದರು. ಅವರಿಗೂ ಸಂಕೋಚವಾಗಿ ಅದು ಸಂಸ್ಕೃತ ಪದ ಎಂದುಬಿಟ್ಟರು. ಸಂಸ್ಕೃತ ಅಧ್ಯಾಪಕರು ಮಾತ್ರ ನಿಜವಾದ ಅರ್ಥ ಹೇಳಿದರು! ಅದನ್ನು ಕೇಳಿ ಆ ಪ್ರಾಧ್ಯಾಪಕರಿಗೆ ತುಂಬ ಸಂತೋಷವಾಯಿತು. ಹಾಗೆಯೇ ಆಶ್ಚರ್ಯವೂ ಆಯಿತು. ಸತ್ಯವಾದ ತಮ್ಮ ಹುಟ್ಟಿನ ವಿಚಾರ ಈ ಹುಡುಗನಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆ ಕಾಡಲಾರಂಭಿಸಿತು. ಅವರು ನಿಜವಾಗಿಯೂ ಒಬ್ಬ ವಿಧವೆಯ ಮಗನಾಗಿದ್ದರು!

ಇದೊಂದು ಜನಪದ ಕಥೆಯೇ ಇರಬಹುದು. ಆದರೆ ಇದರಿಂದ ಹೊರಡುವ ಭಾಷೆ-ಸಮಾಜಗಳ ಸಂಬಂಧ ಗಮನಾರ್ಹವಾದದ್ದು. ಒಂದು ಪದದ ಅರ್ಥಕ್ಕೆ ಮಿತಿ ಹಾಕಲು ಸಾಧ್ಯವಿಲ್ಲ. ಅದು ಆಯಾ ಪ್ರದೇಶಗಳಲ್ಲಿ ಬೇರೆ ಬೇರೆ ಅರ್ಥವನ್ನು ಹೊಮ್ಮಿಸುತ್ತಾ ಹೋಗಬಹುದು. ಪದಗಳು ಜನರಿದ್ದಂತೆ. ಅವರನ್ನು ಹೀಗೇ ಎಂದು ಮಿತಿ ಗೊಳಿಸಲು ಸಾಧ್ಯವಿಲ್ಲ. ಅವರು ರೂಪಾಂತರವಾಗುತ್ತಾ ಹೋಗುತ್ತಾರೆ. ಪದಗಳೂ ಹಾಗೆ.