Thursday, 12th December 2024

Vishweshwar Bhat Column: ‘ಶಿನ್ರಿನ್ ಯೋಕು’ ಅಂದ್ರೆ ಏನು? 

ಸಂಪಾದಕರ ಸದ್ಯಶೋಧನೆ 

ವಿಶ್ವೇಶ್ವರ ಭಟ್

‘ಶಿನ್ರಿನ್ ಯೋಕು’ ಎಂಬ ಪದವನ್ನು ಕೇಳಿದ್ದೀರಾ? ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮತ್ತು ಸೋಷಿ ಯಲ್ ಸರ್ಕಲ್ ಗಳಲ್ಲಿ ಕೇಳಿ ಬರುತ್ತಿರುವ ಪದವಿದು. ಇದು ಮೂಲತಃ ಜಪಾನಿ ಭಾಷೆಯ ಪದ. ಶಿನ್ರಿನ್ ಅಂದ್ರೆ ಅರಣ್ಯ ಅಥವಾ ಕಾಡು ಹಾಗೂ ಯೋಕು ಅಂದ್ರೆ ಸ್ನಾನ ಎಂದರ್ಥ. ಶಿನ್ರಿನ್ ಯೋಕು ಅಂದ್ರೆ ಅರಣ್ಯ ಸ್ನಾನ (Forest Bathing) ಎಂದು ಹೇಳಬಹುದು. 

ಅರಣ್ಯದಲ್ಲಿ ಸ್ನಾನ ಮಾಡುವುದಕ್ಕೆ ‘ಶಿನ್ರಿನ್ ಯೋಕು’ ಅಂತಾರಾ? ಅಷ್ಟಕ್ಕೂ ಹಾಗಂದ್ರೆ ಏನು? ನಮಗೆಲ್ಲರಿಗೂ ಗೊತ್ತು, ನಾವು ನಿಸರ್ಗದಲ್ಲಿದ್ದಾಗ ಸಂತಸ, ಸಮಾಧಾನದಲ್ಲಿರುತ್ತೇವೆ. ಅರಣ್ಯದ ಪರಿಸರ, ಮರ, ಗಿಡ, ಹಸಿರು, ಗಾಳಿ, ಮೌನ, ವಾಸನೆ, ಹೂವು, ಎಲೆ… ನಮಗೆ ಒಂದು ರೀತಿಯ ನೆಮ್ಮದಿಯನ್ನು ನೀಡುತ್ತವೆ. ಅಲ್ಲಿದ್ದಷ್ಟು ಹೊತ್ತು ನಾವು ನಮ್ಮ ಒತ್ತಡ, ಸಂಕಷ್ಟ, ಜಂಜಾಟಗಳನ್ನು ಮರೆಯುತ್ತೇವೆ. ಇದರಿಂದ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಇದ್ದಷ್ಟು ಹೊತ್ತು ನಮಗೆ ಬೇರೆಯದೇ ಆದ ಸಾಂತ್ವನ ಲಭಿಸುತ್ತದೆ. ಮನಸ್ಸು ತಾಜಾತನ ದಿಂದ ಅರಳುತ್ತದೆ. 

ಈ ಮನಸ್ಥಿತಿಯನ್ನು ವಿವರಿಸುವುದು ಕಷ್ಟ. ಕವಿಯಾದವನು ಇದನ್ನು ಅಕ್ಷರಗಳಲ್ಲಿ ಬಣ್ಣಿಸಬಹುದು. ಆದರೂ ಆತ ಪರಿಪೂರ್ಣ ಅನುಭವವನ್ನು ಕಟ್ಟಿಕೊಡಲಾರ. ಕಾಡಿನ ಪರಿಸರದಲ್ಲಿರುವುದು ಧ್ಯಾನಸ್ಥ ಸ್ಥಿತಿಗೆ ಹತ್ತಿರ ಎಂದು ಹೇಳಬಹುದಷ್ಟೆ. ಕಾರಣ ಧ್ಯಾನಸ್ಥ ಸ್ಥಿತಿಯನ್ನೂ ಇಡಿಯಾಗಿ ವಿವರಿಸುವುದು ಕಷ್ಟ. ನಮ್ಮ ಪಾಡಿಗೆ ಕಾಡಿನ ಅನುಭೂತಿಯನ್ನು ಆನಂದಿಸುವುದು, ಸುಖಿಸುವುದು, ಆ ಪರಿಸರವನ್ನು ಎಂಜಾಯ್ ಮಾಡುವುದು ‘ಶಿನ್ರಿನ್ ಯೋಕು’ ಅಥವಾ ಅರಣ್ಯ ಸ್ನಾನ. 

ಇದು ವ್ಯಾಯಾಮವಲ್ಲ, ಚಾರಣವಲ್ಲ, ಬೆಟ್ಟ-ಗುಡ್ಡಗಳನ್ನು ಏರುವುದಲ್ಲ, ಜಾಗಿಂಗ್ ಅಲ್ಲ. ನಿಸರ್ಗದ ಮಡಿಲಿನಲ್ಲಿ ಒಂದಾಗುವುದು. ಪ್ರಕೃತಿಯನ್ನು ಆನಂದಿಸುತ್ತಾ, ನಮ್ಮನ್ನು ನಾವು ಮರೆಯುವುದು. ಮೈಮನಗಳಲ್ಲಿ , ಪಂಚೇಂದ್ರಿ ಯಗಳಲ್ಲಿ, ಅರಣ್ಯದ ಆ ದಿವ್ಯ ವಾತಾವರಣವನ್ನು ನಮ್ಮೊಳಗೆ ತುಂಬಿಕೊಳ್ಳುವುದು ಮತ್ತು ಅದರಿಂದ ಹೊಸ ಶಕ್ತಿ, ಚೈತನ್ಯಗಳನ್ನು ಪಡೆದುಕೊಳ್ಳುವುದು.

‘ಶಿನ್ರಿನ್ ಯೋಕು’ ಅಂದರೆ ಆ ಸ್ಥಿತಿಯನ್ನು ಪಡೆಯಲು ಮನಸ್ಸನ್ನು ಹದಗೊಳಿಸಿಕೊಳ್ಳುವುದು. ‘ಶಿನ್ರಿನ್ ಯೋಕು’ ಅಂದರೆ ನಮ್ಮ ಮತ್ತು ಪ್ರಕೃತಿಯ ನಡುವಿನ ಸೇತುವೆ ಅಥವಾ ನಮ್ಮ ಮತ್ತು ಪ್ರಕೃತಿಯ ನಡುವಿನ ಅಂತರವನ್ನು ಕಿರಿದುಗೊಳಿಸುವ ಸೇತು. 

ಇತ್ತೀಚಿನ ವರ್ಷಗಳಲ್ಲಿ ಜಪಾನಿಯರು ಒತ್ತಡದ ಬದುಕಿಗೆ ಕಂಡುಕೊಂಡ ಪರಿಹಾರವೇ ‘ಶಿನ್ರಿನ್ ಯೋಕು’. 2050 ರ ಹೊತ್ತಿಗೆ ಜಗತ್ತಿನ ಶೇ.66 ರಷ್ಟು ಜನಸಂಖ್ಯೆ ನಗರಗಳಲ್ಲಿ ಕೇಂದ್ರೀಕೃತವಾಗುತ್ತದೆಂದು ಅಂದಾಜು ಮಾಡಲಾಗಿದೆ. ಅಮೆರಿಕದ ಪ್ರಜೆಗಳಲ್ಲಿ ಶೇ. 93 ರಷ್ಟು ಮಂದಿ ಮನೆಯೊಳಗೇ ಇರುವುದನ್ನು ಇಷ್ಟಪಡುತ್ತಿದ್ದಾರಂತೆ. ಅವರಿಗೆ ಮನೆಯೇ ಜಗತ್ತು. ಅವರು ಮನೆಯಿಂದ ಆಚೆ ಬರುವುದನ್ನು ಇಷ್ಟಪಡುವುದಿಲ್ಲ. 

ಜಗತ್ತಿನ ಬೇರೆ ದೇಶಗಳಲ್ಲೂ ಈ ಟ್ರೆಂಡ್ ವೃದ್ಧಿಸುತ್ತಿದೆ. ಕೋವಿಡ್ ನಂತರ ‘ವರ್ಕ್ ಫ್ರಾಮ್ ಹೋಮ್’ ಜನಪ್ರಿಯ ವಾದ ಬಳಿಕ, ಮನೆಯಲ್ಲಿರುವುದನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮ, ನಿಸರ್ಗದಿಂದ ದೂರವಾಗುವ ಪ್ರವೃತ್ತಿ ಜನರಲ್ಲಿ ಮೊಳೆಯುತ್ತಿದೆ. ಜಪಾನಿಯರು ಇದಕ್ಕೆ ಕಂಡುಕೊಂಡ ಉತ್ತರವೇ ‘ಶಿನ್ರಿನ್ ಯೋಕು’. 

ಅರಣ್ಯಸ್ನಾನವನ್ನು ಹೇಗೆ ಪ್ರಾಕ್ಟೀಸ್ ಮಾಡುವುದು? ನಿಸರ್ಗದ ಮಡಿಲಿನಲ್ಲಿ ಯಾವುದಾದರೂ ಶಾಂತಾವಾದ ಜಾಗವನ್ನು ಆರಿಸಿಕೊಳ್ಳಬೇಕು. ಮೊಬೈಲ್ ಮತ್ತು ಕೆಮರಾವನ್ನು ಜತೆಯಲ್ಲಿ ಇಟ್ಟುಕೊಳ್ಳಬಾರದು. ಒಬ್ಬರೇ ಇದ್ದರೆ ಒಳ್ಳೆಯದು. ನಿಧಾನವಾಗಿ ಅರಣ್ಯದಲ್ಲಿ ನಡೆಯುತ್ತಾ ಹೋಗಬೇಕು. ಯಾವ ಜಾಗ ತಲುಪುತ್ತೇವೆ ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಬ್ಯಾಕ್ ಪ್ಯಾಕ್ ಇಲ್ಲದಿದ್ದರೆ ಒಳ್ಳೆಯದು. ಜಿಪಿಎಸ್ ಬಳಸಬಾರದು. ನಿಮ್ಮ ದೇಹವೇ ನಿಮಗೆ ಮಾರ್ಗದರ್ಶಕ. ಎಲ್ಲಿ ಹೋಗಬೇಕು ಎಂಬುದನ್ನು ಅರಣ್ಯವೇ ಹೇಳುತ್ತದೆ. 

ನಿಮ್ಮ ಮನಸ್ಸಿನ ಮಾತನ್ನು ಕೇಳಿ, ಮುಂದಕ್ಕೆ ಹೆಜ್ಜೆ ಹಾಕಬೇಕು. ಇಂಥಲ್ಲಿಗೆ ಹೋಗಬೇಕು ಎಂದಿಲ್ಲ. ಅಷ್ಟಕ್ಕೂ ಯಾವುದೋ ಜಾಗವನ್ನು ತಲುಪುವುದು ನಿಮ್ಮ ಉದ್ದೇಶ ಅಲ್ಲವಲ್ಲ. ನಿಮ್ಮ ಪಂಚೇಂದ್ರಿಯಗಳ ಮೂಲಕ ಕಾಡನ್ನು ನಿಮ್ಮೊಳಗೆ ಆವಾಹಿಸಿಕೊಳ್ಳಬೇಕು. ನಿಧಾನವಾಗಿ ಪ್ರಕೃತಿಯಲ್ಲಿ ಒಂದಾಗಬೇಕು. ಕೆಲಕ್ಷಣ ಮೈಮರೆಯ ಬೇಕು. ಇದೊಂದು ಅದ್ಭುತವಾದ ಅನುಭವ.