ವಿಮಾನವನ್ನು ಲೋಹದ ಹಕ್ಕಿ ಅಂತ ಕರೆಯುತ್ತಾರಷ್ಟೇ. ಆದರೆ ವಿಮಾನಕ್ಕೆ ಬಹಳ ದೊಡ್ಡ ವೈರಿ ಅಂದರೆ ಹಕ್ಕಿಗಳು. ವಿಮಾನ ಟೇಕಾಫ್ ಆಗುವಾಗ ಅಥವಾ ಲ್ಯಾಂಡ್ ಆಗುವಾಗ, ಹಕ್ಕಿಗಳು ವಿಮಾನಕ್ಕೆ ಡಿಕ್ಕಿ ಹೊಡೆದರೆ, ಪರಿಣಾಮವನ್ನು ಊಹಿಸಲು ಆಗುವುದಿಲ್ಲ. ಸಾಮಾನ್ಯವಾಗಿ ಟೇಕಾಫ್ ಆಗುವಾಗ ಹಕ್ಕಿಗಳು ವಿಮಾನದ ಮೂತಿಗೆ ಅಥವಾ ಪೈಲಟ್ ಮುಂಬದಿಗಿರುವ ವಿಂಡ್ ಸ್ಕ್ರೀನ್‌ಗೆ, ಇಲ್ಲವೇ ವಿಮಾನದ ಎರಡೂ ಕಡೆಗಳಲ್ಲಿರುವ ಎಂಜಿನ್‌ಗಳಿಗೆ ಡಿಕ್ಕಿ ಹೊಡೆಯುತ್ತವೆ. ಒಂದು ಹಕ್ಕಿ ಅಥವಾ ಗುಂಪಿನಲ್ಲಿರುವ ನಾಲ್ಕೈದು ಹಕ್ಕಿಗಳು ಡಿಕ್ಕಿ ಹೊಡೆಯಬಹುದು. ಅಂಥ ಸಂದರ್ಭದಲ್ಲಿ ವಿಂಡ್ ಸ್ಕ್ರೀನ್ ಒಡೆದುಹೋಗುತ್ತದೆ. ವಿಮಾನದ ಮೂತಿಗೆ ಡಿಕ್ಕಿ ಹೊಡೆದರೆ, ಅದು ಜಖಂ ಆಗಬಹುದು. ವಿಮಾನದ ಎರಡೂ ಕಡೆಗಳಲ್ಲಿರುವ ಒಂದು ಎಂಜಿನ್ ಅಥವಾ ಎರಡಕ್ಕೂ ಡಿಕ್ಕಿ ಹೊಡೆದರೆ ಅದರ
ಬ್ಲೇಡುಗಳಿಗೆ ಧಕ್ಕೆಯಾಗುತ್ತವೆ. ಹಕ್ಕಿಗಳನ್ನು ಎಂಜಿನ್ ಜೋರಾಗಿ ಸೆಳೆದುಕೊಳ್ಳುವುದರಿಂದ, ಪರಿಣಾಮ ಇನ್ನಷ್ಟು ಬಲವಾಗಿರುತ್ತದೆ.
ವಿಮಾನದ ಎಂಜಿನ್‌ಗೆ ಡಿಕ್ಕಿಯಾಗುತ್ತಿದ್ದಂತೆ, ಎಂಜಿನ್ ಘಾಸಿಗೊಂಡು ಬೆಂಕಿ ಕಾಣಿಸಿಕೊಳ್ಳಬಹುದು. ಅಂಥ ಸಂದರ್ಭಗಳಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡುತ್ತಾರೆ. ಪೈಲಟ್ ಮುಂದಿನ ವಿಂಡ್ ಸ್ಕ್ರೀನ್‌ಗೆ ಹೊಡೆದಾಗ, ಅದು ಒಡೆದು ಪೈಲಟ್‌ಗೆ ಜೋರಾಗಿ ಗಾಳಿ ಅಪ್ಪಳಿಸುವುದರಿಂದ, ಆತನಿಗೆ ಎಮರ್ಜನ್ಸಿ ಲ್ಯಾಂಡಿಂಗ್ ಮಾಡದೇ ಬೇರೆ ಮಾರ್ಗವೇ ಇರುವುದಿಲ್ಲ. ಹಾರುತ್ತಿರುವ ವಿಮಾನಕ್ಕೆ ಹಕ್ಕಿ ಅಪ್ಪಳಿಸಿದರೆ (Bird hit) ವಿಮಾನಕ್ಕೆ ಭಾರಿ ಹಾನಿ ಯಾಗುವುದಂತೂ ನಿಶ್ಚಿತ. ಏರ್‌ಲೈನ್ ಸಂಸ್ಥೆಗೆ ಕನಿಷ್ಠ ಹತ್ತಾರು ಕೋಟಿ ರುಪಾಯಿಗಳಷ್ಟು ನಷ್ಟವಾಗುವುದು ಗ್ಯಾರಂಟಿ. ಅಲ್ಲಿ ತನಕ ಆ ವಿಮಾನ ಹಾರಾಟಕ್ಕೆ ಅಯೋಗ್ಯ, ನೆಲದ ಮೇಲೆ ನಿಂತಿರಬೇಕಾಗುತ್ತದೆ. ವಿಂಡ್ ಸ್ಕ್ರೀನ್ ಒಡೆದುಹೋದರೆ, ಬೇರೆಯದನ್ನು ಹಾಕಬಹುದು. ಆದರೆ ವಿಮಾನದ ಮೂತಿ ನುಜ್ಜುಗುಜ್ಜಾದರೆ ಅಥವಾ ರಂಧ್ರ ವಾದರೆ, ರಿಪೇರಿ ಮಾಡುವುದು ಕಷ್ಟ ಮತ್ತು ಅದಕ್ಕೆ ಸ್ವಲ್ಪ ಸಮಯವೂ ಹಿಡಿಯುತ್ತದೆ.
ಇದರಿಂದ ಏರ್‌ಲೈನ್ಸ್ ಸಂಸ್ಥೆಗೆ ನಷ್ಟ. ವಿಮಾನದ ಅಕ್ಕಪಕ್ಕದ ಎಂಜಿನ್‌ಗಳ ಪೈಕಿ ಯಾವುದಾದರೂ ಒಂದಕ್ಕೆ ಹಕ್ಕಿಗಳು ಬಡಿದರೂ ಅದರ ಪರಿಣಾಮ ಗಂಭೀರ. ಕೆಲವೊಮ್ಮೆ ವಿಮಾನ ಯಾವ ವೇಗದಲ್ಲಿ ಹಾರುತ್ತಿರುವಾಗ ಹಕ್ಕಿಗಳು ಅದಕ್ಕೆ ಅಪ್ಪಳಿಸಿದವು ಎಂಬುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಲ್ಯಾಂಡ್ ಆಗುವುದಕ್ಕಿಂತ, ಟೇಕಾಫ್ ಆಗುವಾಗ, ವಿಮಾನದ ವೇಗ ಜಾಸ್ತಿ ಇರುತ್ತದೆ. ಆಗ bird hit ಪರಿಣಾಮವೂ ಅಧಿಕವಾಗಿರುತ್ತದೆ. ೨೦೦೯ರ ಜನವರಿ ೧೫ರಂದು ಅಮೆರಿಕದ ನ್ಯೂಯಾರ್ಕ್ ನಗರದ ಹಡ್ಸನ್ ನದಿ ಮೇಲಾದ ಪವಾಡವನ್ನು ವೈಮಾನಿಕ ಇತಿಹಾಸದಲ್ಲಿಯೇ ಮರೆಯುವಂತಿಲ್ಲ. ಲಗ್ವಾರ್ಡಿಯಾ ವಿಮಾನ ನಿಲ್ದಾಣದಿಂದ ಶಾರ್ಲೆಟ್ ಮತ್ತು ಸಿಯಾಟಲ್‌ಗೆ ಹೊರಟಿದ್ದ ವಿಮಾನಕ್ಕೆ, ಟೇಕಾಫ್ ಆದ ಕೆಲ ನಿಮಿಷಗಳಲ್ಲಿ, ವಿಮಾನದ ಎರಡೂ ಕಡೆಗಳಲ್ಲಿರುವ ಎಂಜಿನ್‌ಗೆ ಪಕ್ಷಿಗಳ ಹಿಂಡು ಅಪ್ಪಳಿಸಿತು. ಪರಿಣಾಮ ಅದೆಷ್ಟು ತೀವ್ರವಾಗಿತ್ತೆಂದರೆ, ಪಕ್ಷಿಗಳು ಅಪ್ಪಳಿಸಿದ ಮರುಕ್ಷಣವೇ ವಿಮಾನದ ಎಂಜಿನ್‌ನಿಂದ ಕಪ್ಪು ಹೊಗೆ ಹೊರಹೊಮ್ಮಲಾರಂಭಿಸಿತು.
ತಾಂತ್ರಿಕವಾಗಿ ವಿಮಾನ ಹಾರಾಟಕ್ಕೆ ಅನರ್ಹವಾಗಿಬಿಟ್ಟಿತು. ಅಂಥ ಸಂದರ್ಭದಲ್ಲಿ ಪೈಲಟ್ ವಿಮಾನವನ್ನು ಹಾರಿಸುವುದು ಕನಸಿನ ಮಾತು. ಆದರೆ ಅಂದು ಕ್ಯಾಪ್ಟನ್ ಸಲ್ಲಿ, ನ್ಯೂಯಾರ್ಕಿನ ಹಡ್ಸನ್ ನದಿಯ ಮೇಲೆ ಸುರಕ್ಷಿತ ವಾಗಿ ಲ್ಯಾಂಡ್ ಮಾಡಿ, ಎಲ್ಲರ ಜೀವಗಳನ್ನು ಉಳಿಸಿದ್ದು ಮೈನವಿರೇಳಿಸುವ ಘಟನೆ. ಇದೇ ಪ್ರಸಂಗವನ್ನು ಆಧರಿಸಿ, ಮುಂದೆ ಹಾಲಿವುಡ್ ಸಿನಿಮಾ ಕೂಡ ಆಯಿತು. ಭಾರತದಲ್ಲೂ ವಿಮಾನಗಳಿಗೆ ಹಕ್ಕಿಗಳು ಅಪ್ಪಳಿಸುವ ಘಟನೆಗಳು ಸಾಮಾನ್ಯ. ೨೦೨೩ರಂದೇ ಇಂಥ ಸುಮಾರು ೧,೩೭೧ ಪ್ರಸಂಗಗಳು ಜರುಗಿದ್ದವು. ಅಂದರೆ ಒಂದು ದಿನಕ್ಕೆ ನಾಲ್ಕಕ್ಕೂ ಹೆಚ್ಚು ಇಂಥ ಪ್ರಸಂಗಗಳು.