Friday, 20th September 2024

Vishweshwar Bhat Column: ಮೊಬೈಲ್‌ ಬಿಟ್ಟು ಇರಬಹುದಾ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್‌

ಗಂಡ-ಹೆಂಡತಿ ಏಕಾಂತದಲ್ಲಿ, ರಸಮಯವಾಗಿ, ರೊಮ್ಯಾಂಟಿಕ್ ಆಗಿ ಕಾಲ ಕಳೆಯುವ ತಾಣವೆಂದರೆ ಬೆಡ್ ರೂಮ್. ಆದರೆ ಅವರಿಬ್ಬರೂ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ತಾಣವೂ ಅದೇ. ಗಂಡ- ಹೆಂಡತಿ ಬೆಡ್ ರೂಮ್ ಸೇರಿದರೆ, ಇಬ್ಬರ ಕೈಯಲ್ಲೂ ಮೊಬೈಲ್. ಇಬ್ಬರೂ ಅವರವರ ಲೋಕದಲ್ಲಿ ಮಗ್ನ. ಗಂಡ ತನ್ನನ್ನು ತನ್ನಷ್ಟಕ್ಕೆ ಬಿಟ್ಟರೆ ಸಾಕು ಎಂದು ಹೆಂಡತಿ ಯೋಚಿಸುತ್ತಾಳೆ.

ಗಂಡನ ಯೋಚನೆಯೂ ಹಾಗೆ. ಇಬ್ಬರೇ ಹಾಯಾಗಿ ಕಾಲ ಕಳೆಯಬೇಕಾದ ಬೆಡ್ ರೂಮಿನಲ್ಲಿ ಮೊಬೈಲ್ ಎಂಬ
ಸವತಿ ನಿತ್ಯವೂ ಕಾಡುತ್ತಾಳೆ. ಇಂದಿನ ದಿನಗಳಲ್ಲಿ ಮೊಬೈಲ್ ಮನುಷ್ಯನ ಅಶಾಂತಿ, ಹಲವು ಸಮಸ್ಯೆಗಳಿಗೆ ಕಾರಣ ವಾಗಿದೆ. ಕ್ಯಾಥರೀನ್ ಪ್ರೈಸ್ ಎಂಬುವವಳು How To Break Up With Your Phone: The 30 day plan to take back your life ಎಂಬ ಪುಸ್ತಕದಲ್ಲಿ ಮೊಬೈಲ್ ಫೋನ್ ಕೋಟ್ಯಂತರ ಸಂಸಾರ ಹಾಳು ಮಾಡಿದ ಕಥೆಯನ್ನೇ ಬರೆದಿದ್ದಾಳೆ.

ನಿದ್ದೆ ಬರುವುದಕ್ಕಿಂತ ಮೊದಲು ಎಲ್ಲರೂ ಮೊಬೈಲ್ ನೋಡಿಯೇ ಮಲಗುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಲೇಬೇಕು. ಇವೆರಡರ ಮಧ್ಯೆ ನೂರಾರು ಸಲ ಮೊಬೈಲ್ ನೋಡುತ್ತಾರೆ. ಒಂದು ನಿಮಿಷ ಪುರುಸೊತ್ತು ಸಿಕ್ಕರೂ ಮೊಬೈಲ್ ನೋಡಲೇಬೇಕು. ಸ್ಮಾರ್ಟ್ ಫೋನ್ ಇಟ್ಟುಕೊಂಡವರು ದಿನಕ್ಕೆ ಏನಿಲ್ಲವೆಂದರೂ ಮೂರ ರಿಂದ-ನಾಲ್ಕು ಗಂಟೆ ಮೊಬೈಲಿನಲ್ಲಿರುತ್ತಾರೆ. ಕೆಲವರು ಆರರಿಂದ ಏಳು ಗಂಟೆ ಹಿಡಿದಿರುತ್ತಾರೆ. ನೀವು ಎಲ್ಲಿಯೇ ಹೋಗಲಿ, ಬರಲಿ ಅದು ನಿಮ್ಮೊಂದಿಗೆ ಇರುತ್ತದೆ.

ನಿಮ್ಮೊಂದಿಗೆ ಯಾರು ಇರದಿದ್ದರೂ ಮೊಬೈಲ್ ಇದ್ದೇ ಇರುತ್ತದೆ. ಮೊಬೈಲ್ ಇದ್ದರೆ ಬೇರೆ ಯಾರೂ ಇರಬೇಕಿಲ್ಲ. ಇಂದು ಮೊಬೈಲ್ ಇಲ್ಲದ ಮನೆಯಿಂದ ಸಾಸಿವೆಯನ್ನು ತರುವುದು ಸಾಧ್ಯವೇ ಇಲ್ಲ. ಮೊಬೈಲ್ ಮಹಾ ವ್ಯಸನ ಕಾರಿ. ಅಂದರೆ addictive. ಮೊಬೈಲ್ ಆಪ್‌ಗಳನ್ನು ಆ ರೀತಿಯಿಂದಲೇ ರೂಪಿಸಿರುತ್ತಾರೆ. ಕೈಯಲ್ಲಿ ಮೊಬೈಲ್ ಇದ್ದರೆ ನಾವು ಬೇರೆ ಸಂಗತಿಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಯಾವ ವಿಷಯದ ಬಗ್ಗೆಯೂ ಆಳವಾಗಿ ಯೋಚಿಸಲು, ಬಹುಕಾಲ ಚಿಂತನೆ ನಡೆಸಲು ಸಾಧ್ಯವಾಗುವುದಿಲ್ಲ. ಇದು ನೆನಪಿನ ಶಕ್ತಿಯನ್ನೂ ಕುಂದಿಸುತ್ತದೆ.

ಜಗತ್ತಿಗೆ ಐಫೋನ್ ಅನ್ನು ಪರಿಚಯಿಸಿದ ಆಪಲ್ ಕಂಪನಿಯ ಮುಖ್ಯಸ್ಥನಾಗಿದ್ದ ದಿವಂಗತ ಸ್ಟೀವ್ ಜಾಬ್ಸ್, ತನ್ನ ಮಕ್ಕಳಿಗೆ ಆಪಲ್ ಪ್ರಾಡಕ್ಟ್‌ಗಳ ಬಳಕೆಯನ್ನು ನಿಯಂತ್ರಿಸಿರುವುದಾಗಿ ಹೇಳಿದ್ದ. ಅದರಲ್ಲೂ ಐಫೋನ್ ಬಳಕೆ ಬಗ್ಗೆ
‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಟೆಕ್ನಾಲಜಿ ವರದಿಗಾರ ನಿಕ್ ಬಿಲ್ಟನ್ ಕೇಳಿದ ಪ್ರಶ್ನೆಗೆ, They haven’t used it. We limit how much technology our kids use at home ಎಂದು ಹೇಳಿದ್ದ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ತನ್ನ ಮಕ್ಕಳ ಮೇಲೆ ಇದೇ ನಿಯಂತ್ರಣ ಹೇರಿದ್ದ. ‘ನನ್ನ ಮಕ್ಕಳಿಗೆ ಹದಿನಾಲ್ಕು ವರ್ಷ ಆಗುವವರೆಗೆ, ನಾನು ಮೊಬೈಲ್ ಫೋನ್ ಕೊಟ್ಟಿರಲಿಲ್ಲ.

ಅವುಗಳಿಂದ ಅವ ರನ್ನು ದೂರ ಇಟ್ಟಿದ್ದೆ’ ಎಂದು ಹೇಳಿದ್ದ. ಯುರೋಪಿನ ಕೆಲ ದೇಶಗಳಲ್ಲಿ ಸಾರ್ವಜನಿಕ ಸ್ಥಳ ಗಳಲ್ಲಿ, ಆಫೀಸುಗಳಲ್ಲಿ No Mobile Zone ಕಾಣಿಸಿಕೊಳ್ಳುತ್ತಿವೆ. ಕೆಲವರು ತಮ್ಮ ಮನೆಗಳಲ್ಲೂ ಈ ತಾಣವನ್ನು ನಿರ್ಮಿಸಿ ಕೊಳ್ಳುತ್ತಿದ್ದಾರೆ. ಡೈನಿಂಗ್ ಟೇಬಲ್‌ಗೆ ಬರುವಾಗ ಮೊಬೈಲ್ ಅನ್ನು ಹಿಡಿದು ತರಬಾರದು ಎಂಬ ನಿಯಮ ಜನಪ್ರಿಯವಾಗುತ್ತಿದೆ. ದಿನದಲ್ಲಿ ಒಂದು ಗಂಟೆಗಿಂತ ಅಧಿಕವಾಗಿ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ತಮ್ಮ ಮೇಲೆ ವಿಧಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಯಾಪ್ ಆಪ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ.

ಇವುಗಳ ಗೊಡವೆಯೇ ಬೇಡ ಎಂದು ಬೇಸಿಕ್ ಸೆಟ್‌ಗೆ ಮೊರೆ ಹೋಗುತ್ತಿದ್ದಾರೆ. ಮೊಬೈಲ್ ಇಲ್ಲದೇ ಬದುಕಬಹುದು ಎಂಬ ವಾದ ಜನಪ್ರಿಯ ವಾಗುತ್ತಿದೆ. ಅದು ಸಹ ಫ್ಯಾಷನ್ ಆಗುತ್ತಿದೆ. ನಾನು ಮೊಬೈಲ್ ಬಳಸುತ್ತಿಲ್ಲ, ನಾನು ವಾಟ್ಸ್ಯಾಪ್ ಬಳಸುವುದಿಲ್ಲ, ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.. ಎಂಬ ಮಾತುಗಳೂ ಹೆಚ್ಚು ಕೇಳಿ ಬರಲಾರಂಭಿಸಿವೆ.‌

ಇದನ್ನೂ ಓದಿ: Vishweshwar Bhat Column: ಬೈಗುಳಗಳ ಕುರಿತು