ಪ್ರಕಾಶಕ ಮಿತ್ರರಾದ ಜಮೀಲ್ ಅವರು ಇತ್ತೀಚೆಗೆ ತಮ್ಮ ಸಾವಣ್ಣ ಪ್ರಕಾಶನದಿಂದ ಹೊರತಂದ ಪುಸ್ತಕಗಳ ಪ್ರತಿಗಳನ್ನು ಕಳಿಸಿಕೊಟ್ಟಿದ್ದರು. ಆ ಪೈಕಿ ಗೌರಿಬಿದನೂರು ವಾಗೀಶ ಕಟ್ಟಿ ಬರೆದ ’ರೀStart ಎಂಬ ಕೃತಿಯೂ ಸೇರಿತ್ತು. ಸಹಜ ಕುತೂಹಲದೊಂದಿಗೆ ಪುಸ್ತಕವನ್ನು ಕೈಗೆತ್ತಿ ಓದಲಾರಂಭಿಸಿದೆ.
ಪರಿವಿಡಿಯಲ್ಲಿನ ವಿಷಯಗಳು ಆಸಕ್ತಿದಾಯಕವಾಗಿದ್ದವು. ಆಗದು ಎಂದು ಕೈ ಕಟ್ಟಿ ಕುಳಿತರೆ..? RE-START, ಜೀವನದಲ್ಲಿ ಸೋತು ಸೋತು ಸಾಕಾಗಿ ಹೋಗಿದ್ದೀರ?, ಛಲ ನಮ್ಮೆಲ್ಲರ ಬಲ, ಕಷ್ಟಗಳು ನಮ್ಮೊಬ್ಬರಿಗೆ, ಬೇರೆಯವರೆಲ್ಲ ಸುಖಜೀವಿಗಳೇ? ಶಾರ್ಪ್ ಆಗುವ ಪೆನ್ಸಿಲ್ ಗಳು ಮತ್ತು ಸೋಲುಗಳಿಂದಲೇ ಶಾರ್ಪ್ ಆದವರು, ಎಲ್ಲರಿಗೂ ಮಾದರಿಯಾದ ಕಥೆ-೧೨೭ Hours, ಅವಮಾನಗಳನ್ನು ಗೆಲುವಾಗಿ ಪರಿವರ್ತಿಸಬೇಕು, ಇತಿಹಾಸ ನಿರ್ಮಿಸಿದವರೆಲ್ಲರೂ optimistic ಜನರೇ, ಬುದ್ಧಿವಂತ ಆಗುವುದು ಹೇಗೆ? …ಮುಂತಾದ ಅಧ್ಯಾಯಗಳ ಶೀರ್ಷಿಕೆ ಗಳೇ ಓದುವಂತೆ ಪ್ರೇರೇಪಿಸುವಂತಿದ್ದವು.
ಒಂದೆಡೆ ಲೇಖಕ ಕಟ್ಟಿಯವರು, ಬದುಕಿನಲ್ಲಿ ನಾವು ಮುನ್ನಡೆಯಬೇಕಾದರೆ ಅವಮಾನಗಳನ್ನು ಮೀರುವ ಕಲೆ ಯನ್ನು ರೂಢಿಸಿಕೊಳ್ಳಬೇಕು. ತಿರಸ್ಕಾರ, ಅವಮಾನಗಳು ನಾಟಿಕೊಳ್ಳದ ಹಾಗೆ ದಪ್ಪ ಚರ್ಮವಾಗಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಇತರರ ಟೀಕೆಗಳಿಂದ ನಮ್ಮನ್ನು ರಕ್ಷಿಸಿಕೊಂಡು ನಮಗೆ ಬೇರೆಯವರಿಂದಾಗುವ
ತಿರಸ್ಕಾರ, ಅವಮಾನಗಳನ್ನೂ ಸಹಿಸಿಕೊಳ್ಳುವ ಶಕ್ತಿಯನ್ನು ತಂದುಕೊಳ್ಳಬೇಕು. ಅವಮಾನಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆ ಕಹಿ ನೆನಪುಗಳನ್ನು ಮಾಗಿಸಲು ಬಿಟ್ಟುಬಿಟ್ಟರೆ, ಆಗ ನೋಡಿ ಬದುಕಿನ ಗಂಭೀರ ಸಮಸ್ಯೆ ಗಳಂತೆ ಕಂಡಿದ್ದೆಲ್ಲವೂ ಕೊನೆಗೆ ಸಮಸ್ಯೆಗಳಾಗಿಯೇ ಉಳಿದಿರುವುದಿಲ್ಲ’ ಎಂದು ಹೇಳುತ್ತಾರೆ.
ನಂತರ ಕಟ್ಟಿಯವರು ಒಬ್ಬರ ಜೀವನ ಪ್ರಸಂಗವನ್ನು ಹೇಳುತ್ತಾರೆ- ಇಂಗ್ಲೆಂಡಿನ ವಿದ್ಯಾರ್ಥಿಯೊಬ್ಬನಿಗೆ ಉತ್ತರ ಗೊತ್ತಿದ್ದರೂ ಉತ್ತರಿಸಲು ಉಗ್ಗುವಿಕೆಯಿಂದ ಬಹಳ ಕಷ್ಟಪಡುತ್ತಿದ್ದ. ಆ ಹುಡುಗ ನೋಡಲು ಸುಂದರವಾಗಿಯೂ ಇರಲಿಲ್ಲ. ಯಾರ ಸ್ನೇಹವೂ ಇಲ್ಲದೇ ಏಕಾಂಗಿಯಾಗಿಯೇ ಇರುತ್ತಿದ್ದ. ಆತ ಅನುಭವಿಸಿದ ಅವಮಾನಗಳು ಕಡಿಮೆ ಯೇನಲ್ಲ. ಮುಂದೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ನಟನೆಯಲ್ಲಿ ಆಸಕ್ತ ನಾದ. ಆದರೆ ಆತನಿಗೆ ಸಲೀಸಾಗಿ ಮಾತನಾಡಲು ಸಮಸ್ಯೆ.
ಆತನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಓದಿದರೂ ನಟನೆಯಲ್ಲಿಯೇ ಆಸಕ್ತಿ. ಟಿವಿ ಚಾನೆಲ್, ಸಿನಿಮಾ, ಕಾಮಿಡಿ ಶೋ ಎಲ್ಲಿಯೂ ಅವಕಾಶಗಳು ಸಿಗಲಿಲ್ಲ. ಜೀವನದಲ್ಲಿ ಆತ ನಂಬಿಕೆ ಮತ್ತು ಭರವಸೆ ಕಳೆದುಕೊಳ್ಳದೇ ಉತ್ಸಾಹದಿಂದ ಪ್ರಯತ್ನಿಸುತಿದ್ದ. ಎಲ್ಲರನ್ನೂ ನಗಿಸುವುದು ಅವನ ಹವ್ಯಾಸವಾಗಿತ್ತು. ಈ ಮಧ್ಯೆ ಆತನೇ ಕಾಮಿಡಿ ಸ್ಕ್ರಿಗಳನ್ನು ಬರೆದು ನಟಿಸಲು ಶುರುಮಾಡಿದ. ತನಗೆ ಅಡ್ಡಿ ಮಾಡುತ್ತಿದ್ದ ಉಗ್ಗುವಿಕೆಯನ್ನು ತಡೆಯಲು, ಚಾರ್ಲಿ ಚಾಪ್ಲಿನ್ ಥರಾ ಮಾತಿಲ್ಲದೇ ನಟನೆ ಮಾಡುತ್ತ ನಗಿಸಲು ಶುರುಮಾಡಿದ. ಪ್ರಯತ್ನಗಳಿಂದಲೇ ಜಗತ್ತಿನ ಅದ್ಭುತ ನಟನಾದ, ಮುಂದೆ ನಡೆದಿzಲ್ಲವೂ ಇತಿಹಾಸವಾಯಿತು.
ಅವಮಾನಗಳನ್ನು ಮೆಟ್ಟಿ ನಿಂತು ತನ್ನ ಕೊರತೆಗಳನ್ನೇ ಬಂಡವಾಳ ಮಾಡಿಕೊಂಡು, ಜೀವನವನ್ನೇ RE-START ಮಾಡಿ, ವಿಶ್ವ ಕಂಡ ಶ್ರೇಷ್ಠ ನಟನೆಂದು ಇತಿಹಾಸ ನಿರ್ಮಿಸಿದ. ಆತನ ಹೆಸರು ರೋವನ್ ಅಟ್ ಕಿನ್ಸನ್ ಅಲಿಯಾಸ್ ಮಿಸ್ಟರ್ ಬೀನ್. ಇಂದು ವಿಶ್ವದ ಬೀನ್ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಜಗತ್ತಿನ ಸುಮಾರು 200 ದೇಶಗಳಲ್ಲಿ ಮಿಸ್ಟರ್ ಬೀನ್‌ನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಮಕ್ಕಳಿಂದ ಮುದುಕರ ತನಕ ಎಲ್ಲರೂ ಆತನ ನಟನೆಯನ್ನು ಮೆಚ್ಚಿಕೊಂಡವರೇ. ಆರಂಭದಲ್ಲಿ ಆತನ ರೂಪವನ್ನು ನೋಡಿ, ನಿಜ ಹೆಸರಾದ ಅಟ್‌ಕಿನ್ಸನ್ ಎಂದು ಕರೆಯುವ
ಬದಲು, ಯಾವುದಾದರೂ ತರಕಾರಿ ಹೆಸರನ್ನು ಆತನಿಗಿಡಬೇಕೆಂದು ನಿರ್ಧರಿಸಿದ್ದರಂತೆ. ‘ಮಿಸ್ಟರ್ ಕ್ವಾಲಿಫ್ಲವರ್’ ಎಂದು ಆರಂಭದಲ್ಲಿ ಕರೆಯುತ್ತಿದ್ದರಂತೆ.
ಅದು ಉದ್ದವಾಗಿದ್ದರಿಂದ ನಂತರ, ’ಮಿಸ್ಟರ್ ಬೀನ್’ ಎಂದು ಕರೆಯಲಾರಂಭಿಸಿದರಂತೆ. ಇಂದು ಆತನ ನಿಜ ಹೆಸರು ಬಹುತೇಕ ಮಂದಿಗೆ ಗೊತ್ತಿಲ್ಲ. ‘ಮಿಸ್ಟರ್ ಬೀನ್’ ಅಂದ್ರೆ ಎಲ್ಲರಿಗೂ ಗೊತ್ತು. ಕಟ್ಟಿಯವರ ಪುಸ್ತಕ ಹಿತವಾದ ಪ್ರೇರಣೆ ನೀಡುವುದರಲ್ಲಿ ಎರಡು ಮಾತಿಲ್ಲ.