Friday, 20th September 2024

Vishweshwar Bhat Column: ಬೈಗುಳಗಳ ಕುರಿತು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಗತ್ತಿನ ಯಾವ ಭಾಷೆಯನ್ನಾದರೂ ಕಲಿಯಲು ಸುಲಭ ಮಾರ್ಗ ಬೈಗುಳಗಳ ಮೂಲಕ ಎಂಬ ಮಾತಿದೆ. ಸಾಮಾನ್ಯವಾಗಿ ಎಲ್ಲರೂ ಮೊದಲು ಬೈಗುಳಗಳನ್ನು ಕಲಿತು, ಉಳಿದ ಪದಗಳ ಅರ್ಥಗಳನ್ನು ತಿಳಿದು ಕೊಳ್ಳುತ್ತಾ‌ ರಂತೆ. ಹೀಗಾಗಿ ಬೈಗುಳಗಳು ಇಲ್ಲದ ಭಾಷೆಯೇ ಇರಲಿಕ್ಕಿಲ್ಲ.

ಎಲ್ಲರಿಗೂ ಬೈಗುಳಗಳ ಅರ್ಥ ಗೊತ್ತಿರುತ್ತದೆ ಎಂದೇನೂ ಇಲ್ಲ. ಅನೇಕರಿಗೆ ದರವೇಶಿ ಮತ್ತು ಬೇವರ್ಸಿ ಪದಗಳ ಅರ್ಥ ಗೊತ್ತಿರುವುದಿಲ್ಲ. ಆದರೆ ಅವು ಬೈಗುಳಗಳು ಎಂಬುದು ಗೊತ್ತು. ಹೀಗಾಗಿ ಅರ್ಥ ಗೊತ್ತಿಲ್ಲದಿದ್ದರೂ ಸಿಟ್ಟಿನಲ್ಲಿ
ಆ ಪದಗಳನ್ನು ಬಳಸುತ್ತಾರೆ. ಡಾ.ರಾಜ್‌ಕುಮಾರ್ ಅವರು ಸಿಟ್ಟು ಬಂದಾಗ ‘ಕತ್ತೆ ಭಡವ’ ಎಂದು ಬೈಯುತ್ತಿದ್ದ ರಂತೆ. ಆ ಪದಕ್ಕೆ ವಿಶೇಷವಾದ ಅರ್ಥವಿಲ್ಲ.

ಇದನ್ನೂ ಓದಿ: ‌Vishweshwar Bhat Column: ಮುಖ್ಯಮಂತ್ರಿ ಗನ್‌ ಮ್ಯಾನ್

ಬೈದಂತೆಯೂ ಆಗಬೇಕು, ಆದರೆ ಅದಕ್ಕೆ ಕೆಟ್ಟ ಅರ್ಥವೂ ಇರಬಾರದು ಮತ್ತು ಮನಸ್ಸಿಗೆ ನೋವಾಗಬಾರದೆಂದು ಅವರು ಆ ಪದವನ್ನು ಬಳಸುತ್ತಿದ್ದಿರಬೇಕು. ನನ್ನ ವಿದ್ವಾಂಸ ಸ್ನೇಹಿತರೊಬ್ಬರು, ಕೋಪ ಬಂದಾಗ, ‘ಹಸಿಗಿಡದ ತೊಪ್ಪಲು’, ‘ಒಣಗಿದ ಮರದ ತೊಗಟೆ’, ‘ಬಿದ್ದುಹೋದ ಮರದ ಕೊಂಬೆ’, ‘ಒಣಗಿದ ಮರದ ರೆಂಬೆ’ ಎಂದು ಬೈಯು ತ್ತಿದ್ದರು. ಅವರ ದನಿಯಿಂದ ಮಾತ್ರ ಅವರಿಗೆ ಕೋಪ ಬಂದಿದ್ದು ಗೊತ್ತಾಗುತ್ತಿತ್ತು, ಆದರೆ ಬೈಗುಳಗಳಿಂದಲ್ಲ. ಅಸಲಿಗೆ ಅವು ಬೈಗುಳಗಳೇ ಆಗಿರಲಿಲ್ಲ. ದಿವಂಗತ ಪತ್ರಕರ್ತ ಮತ್ತು ‘ಪದಾರ್ಥ ಚಿಂತಾಮಣಿ’ ಮೂಲಕ ಪದಗಳ ಪ್ರೀತಿ ಹುಟ್ಟಿಸಿದ ಪಾ.ವೆಂ.ಆಚಾರ್ಯರ ತಾಯಿ ಚಿಕ್ಕಂದಿನಲ್ಲಿ ನಿರ್ಗಂಟಿಕ ಎಂದು ಬೈಯು ತ್ತಿದ್ದರಂತೆ.

‘ಇದು ನಿಂದನೆಯ ಬೈಗುಳ ಹೌದೋ, ಅಲ್ಲವೋ ನಾನರಿಯೆ. ಆದರೆ ದಕ್ಷಿಣ ಕನ್ನಡದ ಬ್ರಾಹ್ಮಣರಲ್ಲಿ ಈ ಪದ ಬಳಕೆಯಿತ್ತು. ನಿರ್ಗಂಟಿಕ ಅಂದರೆ ದಯೆ, ಮರುಕ, ಮಮತೆ ಇಲ್ಲದ ಭಾವನಾಶೂನ್ಯ ವ್ಯಕ್ತಿ’ ಎಂದು ಆಚಾರ್ಯರು
ಹೇಳಿzರೆ. ಅಷ್ಟಕ್ಕೇ ಅವರು ಸುಮ್ಮನಾಗುವುದಿಲ್ಲ. ‘ಅಮರ ಕೋಶದಲ್ಲಿ ನಿರ್ಗ್ರಂಥನ ಅಂದರೆ ಕೊಲೆ ಎಂದಿದೆ. ನಿರ್ಗಂಟಿಕ ಅದರ ಅಪಭ್ರಂಶವಾಗಿರಬಹುದೇ? ಆದರೆ ಈ ತಾತ್ಪರ್ಯ ನನಗೆ ಸಮಾಧಾನ ತರಲಿಲ್ಲ. ಆದರೆ ಈಚೆಗೆ ಜೈನ ಸಾಹಿತ್ಯವನ್ನು ಅವಲೋಕಿಸಿದಾಗ ಒಂದು ಹೊಸ ಸಮಾಧಾನಕರ ಊಹೆ ಸಾಧ್ಯವಾಯಿತು. ಜೈನರಲ್ಲಿ ನಿರ್ಗ್ರಂಥ ಎಂದರೆ ದಿಗಂಬರ ಸನ್ಯಾಸಿ. ಎಲ್ಲ ಮಮತೆಗಳನ್ನೂ ತೊರೆದು ದ್ವೇಷಗಳನ್ನು ತ್ಯಜಿಸಿ ಅಂದರೆ ಪ್ರಾಪಂಚಿಕ ಸಂಬಂಧದ ಎಲ್ಲ ಗ್ರಂಥಿಗಳನ್ನೂ ಕಡಿದು ಅವಧೂತನಾದವನು ನಿರ್ಗ್ರಂಥ ಅಥವಾ ನಿರ್ಗ್ರಂಥಿಕ. ಜೈನರ ಪ್ರಭಾವ ಬೆಳೆದು ವೈದಿಕ ಧರ್ಮವನ್ನು ಅದು ಒತ್ತುತ್ತಿದ್ದಾಗ ಜೈನ ಸಾಧು ನಿರ್ಗ್ರಂಥಿಕ, ವೈದಿಕರಲ್ಲಿ ಒಂದು ನಿಂದಾಪದವಾಗಿ ಮಮತೆ ಇಲ್ಲದವನೆಂಬ ಕೆಟ್ಟ ಅರ್ಥದಲ್ಲಿ ನಿರ್ಗಂಟಿಕನಾಗಿ ಬಳಕೆ ಪಡೆದಿರಬಹುದು.

ಅದು ಜೈನರ ಮೇಲೆ ಕ್ರೋಧವನ್ನು ತೋರಿಸುವ ಒಂದು ದಾರಿ’. ಆಚಾರ್ಯರು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ವಿದೇಶಗಳಲ್ಲಿ, ಬೇರೆ ಧರ್ಮಗಳಲ್ಲಿ ಇರುವ ಬೈಗುಳದ ಬೆನ್ನತ್ತಿ ಹೋಗುತ್ತಾರೆ. ಇಂಗ್ಲಿಷ್ ನಿಘಂಟುಗಳಲ್ಲಿ Nazarene ಎಂಬ ಶಬ್ದ ಇದೆ. ಇದರ ಅರ್ಥ ಆದಿಮ ಕ್ರಿಸ್ತಾನುಯಾಯಿಗಳು ಎಂದು. ಕ್ರಿಸ್ತನು ನಜರೆತ್ ಪ್ರಾಂತದವನಾಗಿದ್ದು ದರಿಂದ ಅವನ ಬೆಂಬಲಿಗರನ್ನು ನಜರೀನರು ಎಂದು ಕರೆಯಲಾಯಿತು. ಆದರೆ ಇದನ್ನು ಸಂಪ್ರದಾಯವಂತ ಯಹೂದ್ಯರು ತಮ್ಮ ನಡುವೆ ಹೊಸ ಧರ್ಮವನ್ನು ತಂದ ಕ್ರಿಸ್ತನ ಮೇಲೆ ನಂಜಿನಿಂದಲೇ ಪ್ರಯೋಗಿಸಿದ್ದರು. ತಮ್ಮ ಪುರಾಣಗಳ ಪ್ರಕಾರ ನಜರೆತ್ ಪ್ರಾಂತದಲ್ಲಿ ದೇವತಾಪುರುಷರು ಹುಟ್ಟುವುದಿಲ್ಲ ಎಂದಿರುವಾಗ ಈ ಕ್ರಿಸ್ತ ತಾನು ದೇವರ ಮಗ ಎಂದು ಕರೆದುಕೊಂಡದ್ದು ಅವರಿಗೆ ವಿಕೃತಿಯಾಗಿ ಕಂಡಿತ್ತು!

ಹೀಗೆ ಕೈಸ್ತರಿಗೆ ತುಚ್ಛಿಕಾರಪೂರ್ವಕ ಅನ್ವಯಿಸುತ್ತಿದ್ದ ಶಬ್ದವನ್ನು ಯಹೂದ್ಯರಿಂದ ಅರಬರು ಹೆಕ್ಕಿಕೊಂಡರು. ಯುರೋಪಿನ ಕೈಸ್ತರಿಗೂ ಮುಸ್ಲಿಮ್ ಧರ್ಮ ಸ್ವೀಕರಿಸಿದ ಅರಬರಿಗೂ ಭಾರತದ ಕರಾವಳಿಯ ವ್ಯಾಪಾರಕ್ಕಾಗಿ ಜಟಾಪಟಿಯಾದಾಗ ಅರಬರು ಕ್ರೈಸ್ತರ ಮೇಲಿನ ನಂಜಿನಿಂದ ನಸರಾನಿ ಶಬ್ದವನ್ನು ನಮ್ಮ ಕರಾವಳಿಯಲ್ಲಿ ಬಿತ್ತಿರಬೇಕು. ನಾಲಾಯಕ್, ದುಷ್ಟ, ಮೂರ್ಖ ಇತ್ಯಾದಿ ಅನಿರ್ವಚನೀಯ ಅಕಲ್ಯಾಣ ಗುಣಗಳನ್ನೆಲ್ಲ ಪ್ರತಿನಿಧಿಸುವ ಶಬ್ದವಾಗಿ ಅದು ಕರಾವಳಿಯಲ್ಲಿ ಹಬ್ಬಿತು. ‘ಬರೇ ನಸ್ರಾಣಿ ಮನುಷ್ಯ’ ಎಂದು ಬಯ್ಯುವುದು ಕರಾವಳಿಯಲ್ಲಿ ಕೇಳಿಸುತ್ತದೆ. ಆದರೆ ನಸ್ರಾಣಿ ಅಂದರೆ ಕ್ರೈಸ್ತ ಎಂಬುದು ಮರೆತೇ ಹೋಗಿರುವುದರಿಂದ ನಿಮಗೀಗ ನಸ್ರಾಣಿ ಹಿಂದುಗಳೂ ನಸ್ರಾಣಿ ಮುಸಲ್ಮಾನರೂ ಸಿಗಬಹುದು! ಪೂರ್ವಗ್ರಹಗಳು ಬಲು ಬೇಗ ತಮ್ಮ ಮೂಲಗಳನ್ನು ಮರೆತುಬಿಡುತ್ತವೆ.