ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನೀವು ಆಗಾಗ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ‘ಸುಗ್ರೀವಾಜ್ಞೆ’ ಎಂಬ ಪದವನ್ನು ಓದಿರುತ್ತೀರಿ. ರಾಮಾಯಣದ ಸುಗ್ರೀವ ಈಗ ಹೇಗೆ ಆeಯನ್ನು ಹೊರಡಿಸಿದ ಎಂಬ ಸಂದೇಹ ಕೆಲವರಿಗಾದರೂ ಮೂಡಬಹುದು. ಈ ಕಾಲದಲ್ಲಿ ಸುಗ್ರೀವ ಹೇಗೆ ಬಂದ ಎಂಬ ಅನುಮಾನವೂ ಕಾಡಬಹುದು. ಅಷ್ಟಕ್ಕೂ ಸುಗ್ರೀವಾಜ್ಞೆ ಅಂದರೇನು? ಆ ಪದ ಹೇಗೆ ಬಳಕೆಗೆ
ಬಂತು? ಸೀತೆಯ ಅಪಹರಣದ ನಂತರ ರಾಮ-ಲಕ್ಷ್ಮಣರು ಆಕೆಯನ್ನು ಹುಡುಕುತ್ತಾ ಕಾಡಿನಲ್ಲಿನಲ್ಲಿ ಹಗಲು-ರಾತ್ರಿಯೆನ್ನದೇ ಅಲೆಯುತ್ತಿರುತ್ತಾರೆ.
ಅದೇ ವೇಳೆಗೆ, ಅಣ್ಣ ವಾಲಿಯಿಂದಾಗಿ ರಾಜ್ಯ ಕಳೆದುಕೊಂಡು ಸುಗ್ರೀವನೂ ಅಲೆಯುತ್ತಿರುತ್ತಾನೆ. ರಾಮ ಕಾಡಿನಲ್ಲಿ ಶಬರಿಯನ್ನು ಭೇಟಿಯಾದ ಸಂದರ್ಭದಲ್ಲಿ ಈ ಸುಗ್ರೀವನ ಬಗ್ಗೆ ಪ್ರಸ್ತಾಪಿಸಿ, ಆತನ ವ್ಯಕ್ತಿತ್ವವನ್ನು ಬಣ್ಣಿಸಿರುತ್ತಾಳೆ. ಈ ಸಂದರ್ಭದಲ್ಲಿ ಸುಗ್ರೀವನ ಸಹಾಯ ಪಡೆಯಬೇಕು ಎಂದು ರಾಮನಿಗೆ ಅನಿಸುತ್ತದೆ. ಹನುಮಂತನ ಮೂಲಕ ರಾಮ ಸುಗ್ರೀವನ ಜತೆ ಸಂಪರ್ಕ ಸಾಧಿಸುತ್ತಾನೆ.
ರಾಮ, ವಾಲಿಯನ್ನು ಕೊಂದು ಕಿಷ್ಕಿಂದೆಯನ್ನು ಸುಗ್ರೀವನಿಗೆ ಕೊಟ್ಟಿದ್ದಕ್ಕೆ ಪ್ರತಿ ಉಪಕಾರವಾಗಿ ಆತ ಸೀತೆಯನ್ನು
ಹುಡುಕಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾನೆ. ಆದರೆ ರಾಜ್ಯ ಸಿಕ್ಕ ನಂತರ ತನ್ನ ಭರವಸೆಯನ್ನು ಸುಗ್ರೀವ ಮರೆತುಬಿಡುತ್ತಾನೆ. ಲಕ್ಷ್ಮಣನ ಮೂಲಕ ಸುಗ್ರೀವನಿಗೆ ತಾನು ನೀಡಿದ ವಾಗ್ದಾನ ನೆನಪಿಸಿ, ಎಚ್ಚರಿಕೆಯ
ಸಂದೇಶ ಮುಟ್ಟಿಸುತ್ತಾನೆ. ಆಗ ಎಚ್ಚೆತ್ತುಕೊಂಡ ಸುಗ್ರೀವ ಇನ್ನು ಎರಡು ತಿಂಗಳೊಳಗಾಗಿ ಸೀತೆಯನ್ನು ಹುಡುಕುವು ದಾಗಿ ಹೇಳುತ್ತಾನೆ. ತನ್ನ ಎಲ್ಲ ವಾನರಿಗೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ
ನೀಡುತ್ತಾನೆ. ಯಾವ ಕಾರಣಕ್ಕೂ ಸಬೂಬು ಹೇಳುವಂತಿಲ್ಲ, ಬರಿಗೈಯಲ್ಲಿ ಬರುವಂತಿಲ್ಲ ಎಂದು ತಾಕೀತು ಹಾಕುತ್ತಾನೆ. ಅಷ್ಟೇ ಅಲ್ಲ, ಎರಡು ತಿಂಗಳ ಮೇಲೆ ಒಂದು ದಿನವಾದರೂ, ಅವರಿಗೆ ಮರಣದಂಡನೆ ವಿಧಿಸಲಾ ಗುವುದು ಎಂದು ಆದೇಶ ನೀಡಿ ಅವರನ್ನೆಲ್ಲ ನಾಲ್ಕೂ ದಿಕ್ಕುಗಳಿಗೆ ನಾಲ್ಕು ತಂಡಗಳಲ್ಲಿ ಕಳುಹಿಸುತ್ತಾನೆ.
ಆಗ ಎಚ್ಚೆತ್ತುಕೊಂಡ ವಾನರರು ನಾಲ್ಕೂ ದಿಕ್ಕುಗಳಿಗೂ ಹೊರಡಲು ಸನ್ನದ್ಧರಾಗುತ್ತಾರೆ. ಅಂದು ಸುಗ್ರೀವ ತನ್ನ ಸೇನೆಗೆ ವಿಧಿಸಿದ ಕಟ್ಟಾಜ್ಞೆಯೇ ಸುಗ್ರೀವಾಜ್ಞೆ. ಇಂಥ ಕಠಿಣವಾದ ಆದೇಶವನ್ನು ಸುಗ್ರೀವ ನೀಡಿದ್ದರಿಂದ ಅದು ಆತನ ಹೆಸರಿನಲ್ಲಿ ಸುಗ್ರೀವಾe ಎಂದು ಪ್ರಸಿದ್ಧವಾಯಿತು ಮತ್ತು ಆಡುಮಾತಿನಲ್ಲಿ ಬಳಕೆಗೂ ಬಂದಿತು. ಸುಗ್ರೀವಾಜ್ಞೆ ಅಂದರೆ ಯಾರೂ ಮೀರಲಾರದ, ವೀರಬಾರದ ಕಟ್ಟಪ್ಪಣೆ ಎಂದರ್ಥ.
ಸುಗ್ರೀವಾಜ್ಞೆ ಅಂದರೆ ಒಂದು ತುರ್ತು ಆದೇಶ ಎಂದು ಹೇಳಬಹುದು. ಇದನ್ನು ಸಾಮಾನ್ಯವಾಗಿ ಸರಕಾರಗಳು ತುಂಬಾ ಮುಖ್ಯವಾದ ಸಂದರ್ಭಗಳಲ್ಲಿ ಹೊರಡಿಸುತ್ತವೆ. ಕೇಂದ್ರದಲ್ಲಿ ಸಂಸತ್ತು ಮತ್ತು ರಾಜ್ಯದಲ್ಲಿ ವಿಧಾನ ಮಂಡಲದ ಅನುಮತಿ ಇಲ್ಲದೇ ಸರಕಾರಗಳು ತಕ್ಷಣದ ಕ್ರಮಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬಹುದು. ಇದು ಒಂದು ಕಾನೂನಿನಂತೆ ಕೆಲಸ ಮಾಡುತ್ತದೆ ಮತ್ತು ಎಲ್ಲರೂ ಇದನ್ನು ಪಾಲಿಸಬೇಕು. ಸುಗ್ರೀವಾಜ್ಞೆಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ ಮತ್ತು ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಸುಗ್ರೀವಾeಯನ್ನು ಹೊರಡಿಸಿದ ಆರು ತಿಂಗಳ ಒಳಗೆ ಶಾಸನಸಭೆಯ ಅನುಮತಿ ಪಡೆಯಬೇಕು.
ಇಲ್ಲದಿದ್ದರೆ ಅದು ಅಮಾನ್ಯವಾಗುತ್ತದೆ. ಭೂಕಂಪ, ಪ್ರವಾಹ ಇತ್ಯಾದಿಗಳ ಸಂದರ್ಭದಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು, ಆರ್ಥಿಕ ಬಿಕ್ಕಟ್ಟು ಸಂಭವಿಸಿದಾಗ ಸಮಸ್ಯೆಗಳನ್ನು ನಿಭಾಯಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಾಗ, ದೇಶದ ಭದ್ರತೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸ ಬಹುದು. ಸುಗ್ರೀವಾeಯನ್ನು ಪದೇ ಪದೆ ಹೊರಡಿಸುವಂತಿಲ್ಲ.
ವಿಶೇಷ ಸಂದರ್ಭಗಳಲ್ಲಿ ಹೊರಡಿಸಬಹುದು. ಆ ವಿಶೇಷ ಸಂದರ್ಭ ಅಂದರೆ ಯಾವುದು ಎಂಬುದನ್ನು ಆಯಾ ಕಾಲದಲ್ಲಿರುವ ಸರಕಾರಗಳೇ ನಿರ್ಧರಿಸಬೇಕು. ಪದೇ ಪದೆ ಇದನ್ನು ಬಳಸುವುದರಿಂದ ಸಂಸದೀಯ ವ್ಯವಸ್ಥೆ ದುರ್ಬಲವಾಗುತ್ತದೆ. ಸಂಸತ್ತು ಅಥವಾ ವಿಧಾನಸಭೆ ಅಧಿವೇಶನಗಳು ನಡೆಯದಿರುವ ಸಂದರ್ಭದಲ್ಲಿ ತುರ್ತಾಗಿ ಕಾನೂನು ಜಾರಿಗೊಳಿಸಲು ವಿಶೇಷ ಅಧಿಕಾರವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು.
ಇದನ್ನೂ ಓದಿ: Vishweshwar Bhat Column: ಬೆಲ್ಲಿ ಲ್ಯಾಂಡಿಂಗ್ ಅಂದರೇನು ?