Thursday, 21st November 2024

Vishweshwar Bhat Column: ವಾಟರ್‌ ಲ್ಯಾಂಡಿಂಗ್‌ ಅಂದರೇನು ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ವಿಮಾನ ಟೇಕಾಫ್ ಆಗುವುದಕ್ಕಿಂತ ಮುನ್ನ ಗಗನಸಖಿಯರು ಪ್ರಯಾಣಿಕರಿಗೆ ಕೆಲವು ಸೂಚನೆಗಳನ್ನು ನೀಡುತ್ತಾ ರಷ್ಟೆ. ಆ ಸಂದರ್ಭದಲ್ಲಿ‌ ಒಂದು ಸೂಚನೆಯನ್ನು ನೀಡಲು ಮರೆಯುವುದಿಲ್ಲ. ಅದೇನೆಂದರೆ, ಒಂದು ವೇಳೆ ವಿಮಾನ ನೀರಿನ ಮೇಲೆ ಇಳಿದರೆ (ಲ್ಯಾಂಡ್ ಆದರೆ) ಏನು ಮಾಡಬೇಕು, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಂಥ ಸನ್ನಿವೇಶದಲ್ಲಿ ಪಾರಾಗುವ ಬಗೆ ಎಂತು ಎಂಬುದನ್ನು ವಿವರಿಸುತ್ತಾರೆ. ಅದನ್ನು ಮೊದಲ ಬಾರಿ ಕೇಳಿಸಿ ಕೊಂಡವರಿಗೆ ಭಯವಾಗಬಹುದು. ವಿಮಾನ ನೀರಿನ ಮೇಲೆಯೂ ಇಳಿಯುತ್ತದಾ ಎಂದು ಅನಿಸಬಹುದು. ಆದರೆ ತುರ್ತು ಸ್ಥಿತಿ ಸಂದರ್ಭದಲ್ಲಿ ವಿಮಾನ ನೀರಿನ ಮೇಲೆ ಇಳಿಯುವ ಪ್ರಸಂಗ ಬರಲೂ‌ಬಹುದು. ಇದನ್ನು ವಾಟರ್ ಲ್ಯಾಂಡಿಂಗ್ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ವಿಮಾನಗಳನ್ನು ಭೂಮಿಯ ಮೇಲೆ ಇಳಿಯಲಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ ನಿವಾರ್ಯ ಕಾರಣಗಳಿಂದ, ನೀರಿನ ಮೇಲೆ ವಿಮಾನವನ್ನು ಇಳಿಸುವ ಪ್ರಸಂಗವೂ ಬರಬಹುದು. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಇಂಧನ ಮುಗಿದು ಹೋದರೆ, ಎಂಜಿನ್ ವಿಫಲವಾದರೆ, ತುರ್ತು ತಾಂತ್ರಿಕ ದೋಷಗಳು ಕಾಣಿಸಿಕೊಂಡರೆ ಅನಿವಾರ್ಯವಾಗಿ ನೀರಿನ ಮೇಲೆ ಲ್ಯಾಂಡ್ ಮಾಡಬೇಕಾಗುತ್ತದೆ.

ಇದು ಪೈಲಟ್ ಮುಂದಿರುವ ಕೊನೆಯ ಆಯ್ಕೆ. ಎಷ್ಟೋ ವಿಮಾನ ನಿಲ್ದಾಣಗಳು ಸಮುದ್ರದ ಅಂಚಿಗೆ ಇವೆ. ಉದಾಹರಣೆಗೆ, ಹಾಂಗ್‌ಕಾಂಗ್ ಮತ್ತು ಮಾಲ್ಡೀ ವಿಮಾನ ನಿಲ್ದಾಣಗಳು. ಕೆಲವು ವೇಳೆ ಹವಾಮಾನ ವೈಪರೀತ್ಯ ಗಳಿಂದ ಭೂಮಿ ಮೇಲೆ ಇಳಿಯಬೇಕಾದ ವಿಮಾನ ಸ್ವಲ್ಪ ಹಿಂದೆಯೇ ಇಳಿದರೆ ಆಗ ನೀರಿನ ಮೇಲೆ ಲ್ಯಾಂಡ್ ಆಗಬಹುದು. ವಾಟರ್ ಲ್ಯಾಂಡಿಂಗ್ ಅನ್ನು ಮಾಡಲು ಕಾರಣಗಳಿವೆ. ವಿಮಾನವು ಸಂಪೂರ್ಣವಾಗಿ ನಾಶವಾಗ ದಂತೆ ತಡೆಯಲು ಮತ್ತು ಪ್ರಯಾಣಿಕರ ಜೀವಗಳನ್ನು ಉಳಿಸಲು ಪೈಲಟ್ ಗಳು ವಾಟರ್ ಲ್ಯಾಂಡಿಂಗ್ ಮಾಡಲು ನಿರ್ಧರಿಸುತ್ತಾರೆ.

ಪೈಲಟ್‌ಗಳ ತರಬೇತಿ ಕಾಲದಲ್ಲಿ ನೀರಿನ ಮೇಲೆ ವಿಮಾನವನ್ನು ಇಳಿಸುವ ಉಪಕ್ರಮವೂ ಸೇರಿರುತ್ತದೆ. ಇದಕ್ಕೆ ‘ಸೈಲೆಂಟ್ ಲ್ಯಾಂಡಿಂಗ್’ ಎಂದೂ ಕರೆಯುತ್ತಾರೆ, ಏಕೆಂದರೆ ವಿಮಾನವು ನೀರಿನ ಮೇಲೆ ಇಳಿಯುವುದು ಒಂದು ಮೃದು ಅಥವಾ ಸಾವಧಾನದ ಪ್ರಕ್ರಿಯೆಯಾಗಿದ್ದು, ಭೂಮಿ ಮೇಲೆ ಇಳಿಸುವಾಗ ಆಗುವ ಗಡುಸಾದ ಅನುಭವ ಆಗುವುದಿಲ್ಲ. ವಿಮಾನ ನೀರಿನ ಮೇಲೆ ಇಳಿದರೂ ಅದು ಎಲ್ಲಿ ಇಳಿದಿದೆ ಎಂಬುದು ಮುಖ್ಯ. ಆಳವಾದ ಸಮುದ್ರ ದಲ್ಲಿ ವಿಮಾನ ಇಳಿದರೆ ಗಂಡಾಂತರವೇ. ಹೀಗಾಗಿ ಸಮುದ್ರದ ಅಲೆಗಳ ಅಬ್ಬರ, ಗಾಳಿಯ ವೇಗ ಮತ್ತು ನೀರಿನ ಆಳ ಇವು ವಾಟರ್ ಲ್ಯಾಂಡಿಂಗ್ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತವೆ.

ಸರಿಯಾದ ಎತ್ತರ, ವೇಗ ಮತ್ತು ಸಮತೋಲನವನ್ನು ನಿರ್ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ವಿಮಾನವು ತ್ವರಿತವಾಗಿ ಮುಳುಗಬಹುದು ಅಥವಾ ಮುರಿಯಬಹುದು. ಪೈಲಟ್ ಮತ್ತು ವಿಮಾನ ಸಿಬ್ಬಂದಿ ನೀರಿನ ಮೇಲೆ ಇಳಿಸಿದ ಬಳಿಕ ತುರ್ತು ಕ್ರಮಗಳನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗುತ್ತದೆ, ಏಕೆಂದರೆ ವಿಮಾನ ಇಳಿದ ನಂತರ ಮುಳುಗುವ ಸಾಧ್ಯತೆ ಇರುತ್ತದೆ. ವಿಮಾನ ಹಾರಾಟದ ಇತಿಹಾಸದ ಅತ್ಯಂತ ಪ್ರಸಿದ್ಧ ವಾಟರ್ ಲ್ಯಾಂಡಿಂಗ್ ಅಂದರೆ, 2009ರಲ್ಲಿ ಅಮೆರಿಕದಲ್ಲಿ ಸಂಭವಿಸಿದ ‘ಹಡ್ಸನ್ ನದಿ ಅದ್ಭುತ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಘಟನೆ. ಯುಎಸ್ ಏರ್‌ವೇಸ್ ಫ್ಲೈಟ್ 1549ರ ಎರಡೂ ಎಂಜಿನ್‌ಗಳು ವಿಫಲವಾದ ಬಳಿಕ, ಕ್ಯಾಪ್ಟನ್ ಸಲಿ ಸುನ್‌ಬರ್ಗರ್ ಅತ್ಯಂತ ನಿಶ್ಚಿತ ಹಾಗೂ ಸಮರ್ಥವಾಗಿ ನ್ಯೂಯಾರ್ಕಿನ ಹಡ್ಸನ್ ನದಿಯಲ್ಲಿ ವಿಮಾನವನ್ನು ಇಳಿಸಿದ್ದು ಇಂದಿಗೂ ಮೈನವಿರೇಳಿಸುವ ಪ್ರಸಂಗ.

ಇದರಿಂದ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ವಾಟರ್ ಲ್ಯಾಂಡಿಂಗ್ ಅನ್ನು ಅತ್ಯಂತ ಅಪರೂಪದ ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಸಾಮಾನ್ಯವಾಗಿ ವಿಮಾನಗಳನ್ನು ಭೂಮಿಯ ಮೇಲೆ ಅಥವಾ ವಿಮಾನ ನಿಲ್ದಾಣಗಳಲ್ಲಿ ಇಳಿಯಲೆಂದೇ ವಿನ್ಯಾಸಗೊಳಿಸಿರುತ್ತಾರೆ. ಜಲಕ್ರೀಡೆಗಳಲ್ಲಿ ವಿಮಾನವನ್ನು ನೀರಿನ ಮೇಲಿಂದ ಟೇಕಾಫ್ ಮತ್ತು ಲ್ಯಾಂಡ್ ಮಾಡುತ್ತಾರೆ. ಆದರೆ ಪ್ರಯಾಣಿಕರ ವಿಮಾ
ನವನ್ನು ನೀರಿನ ಮೇಲೆ ಇಳಿಸುವುದು ಸಾಮಾನ್ಯ ಸಂಗತಿಯಲ್ಲ. ಲ್ಯಾಂಡ್ ಮಾಡಿದ ಬಳಿಕ ವಿಮಾನವನ್ನು ಮರುಬಳಸುವ ಸಾಧ್ಯತೆ ತೀರಾ ಕಮ್ಮಿ.

ಇದನ್ನೂ ಓದಿ: Ganesh Bhat Column: ಭಾರತದ ಮುಂದಿರುವ ರಾಜತಾಂತ್ರಿಕ ಸವಾಲುಗಳು