Thursday, 21st November 2024

ರಾತ್ರಿ ಭೇಟಿಯಾಗಿ ಭರಪೂರ ನಗಬೇಕೆಂದುಕೊಂಡಿದ್ದೆ

ಪೃಕೃತಿ.ಎನ್.ಬನವಾಸಿ

ಅಪ್ಪುವಿಗೆ ಹೃದಯಾಘಾತ ಆಗಿದೆ ಎಂದು ಮಾಧ್ಯಮಗಳಲ್ಲಿ ಅಷ್ಟೊಂದು ಭಿತ್ತರಿಸುತ್ತಿರುವುದನ್ನು ನೋಡಿ ನಾನು ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಇವತ್ತು ರಾತ್ರಿ ಆಸ್ಪತ್ರೆಯಿಂದ ಅಪ್ಪು ಬಂದ ನಂತರ, ಇಬ್ಬರೂ ಈ ವಿಚಾರವಾಗಿ ಬಿದ್ದೂ ಬಿದ್ದೂ ನಗುತ್ತೇವೆ ಅಂತ. ಆದ್ರೆ ನಗುವೇ ನಿಲ್ಲುವಂತೆ ಆಗಿಬಿಟ್ಟಿದೆ! ಕ್ರೂರ… ಅದೆಷ್ಟು ಘನಘೋರ ಈ ದುರ್ವಿಧಿ.

ಇಡೀ ಜಗತ್ತಿನಲ್ಲಿ ಅಪ್ಪುವಿನಷ್ಟು ನಿಷ್ಕಲ್ಮಷವಾದ, ಮೃದು ಮಾತಿನ, ಮನಸ್ಸಿನ, ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ನೋಡಿಲ್ಲ. ಸಿಕ್ಕಾ ಗೆಲ್ಲ ‘ಫ್ರಾಕ್ಸ್’ ಅಂತ ಕರೆಯುತ್ತಿದ್ದ ಅಪ್ಪು ಇನ್ನು ನನ್ನ ಜತೆಗಿಲ್ಲ ಅನ್ನುವುದನ್ನು ನೆನೆದಾಗ ಮನಸ್ಸು ಭಾರವಾಗುತ್ತಿದೆ. ಬರೆಯು ವುದಕ್ಕೆ ಶಕ್ತಿ ಕುಂದುತ್ತಿದೆ. ಇದುವರೆಗೆ ಕಂಡಿದ್ದೆಲ್ಲ ಯಾವುದೋ ರಾತ್ರಿಯ ಹುಸಿ ಕನಸಾಗಿಬಿಡಲಿ ಎಂದು ಹೃದಯದ ಪ್ರತಿ ಬಡಿತ ಹೇಳುತ್ತಿದೆ.

ಚಿಕ್ಕಂದಿನಿಂದಲೂ ನಾವು ತುಂಬಾ ಆತ್ಮೀಯ ಸ್ನೇಹಿತರು. ಬಹುಶಃ ಆತನ (ಕ್ಷಮಿಸಿ, ಬಹುವಚನ ಬಳಸಿದರೆ ಅದು ನನ್ನ ಗೆಳೆಯ ನಿಗೆ ಮಾಡುವ ಅಪಚಾರ) ಬಗ್ಗೆ ಹೇಳುತ್ತ ಹೋದರೆ ಮುಗಿಯದಷ್ಟು ಕಥೆಗಳಿವೆ. ಆ ಕಥೆಗಳು ನನ್ನ ನೋವಿನ ಜತೆಗೆ ಓದುಗನ ನೋವನ್ನೂ ಹೆಚ್ಚಿಸಬಹುದು. ಹಾಗಾಗಿ ಅಪ್ಪು ಮತ್ತು ನಾನು ಬರೆದ ಪುಸ್ತಕದ ಬಗ್ಗೆ ಮಾತ್ರ ಹೆಚ್ಚಾಗಿ ಹೇಳುತ್ತೇನೆ.

ಅದು ೧೯೯೫ನೇ ಇಸವಿ. ಅದುವರೆಗೆ ರಾಜ್‌ಕುಮಾರ್ ಅನ್ನುವ ಚೈತನ್ಯ, ಯಾರಿಗೂ ತಮ್ಮ ಕುರಿತಾಗಿನ ಸಂದರ್ಶನವನ್ನು ನೀಡದೇ ಸುಮಾರು ೧೫ ವರ್ಷಗಳೇ ಕಳೆದಿತ್ತು. ನನಗೆ ಅದೇನೋ ಒಂದು ಆಸೆ, ಹೇಗಾದರೂ ಮಾಡಿ ರಾಜ್ ಕುಮಾರ್ ಅವರ ಬಗ್ಗೆ ಒಂದು ದೊಡ್ಡ ಬರಹವನ್ನ ಬರೆಯಬೇಕು, ಅದು ಎಲ್ಲಾದರೂ ಪ್ರಕಟವಾಗಬೇಕು ಅಂತ. ರಾಜ್ ಕುಟುಂಬವನ್ನು ಕೇಳಿ ದಾಗ ಅವರು ಒಪ್ಪಿಗೆಯನ್ನೂ ನೀಡಿದ್ದರು. ನಂತರ ಅಣ್ಣಾವ್ರು ಹಲವು ಸಂದರ್ಶನಗಳನ್ನೂ ನೀಡಿದ್ದರು. ಅದರ ಆಧಾರ ವನ್ನಿಟ್ಟು ಸುಮಾರು 3000 ಶಬ್ದಗಳ ಮಿತಿಯಲ್ಲಿ ಹೈ ಸೊಸೈಟಿ ಅನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿದ್ದೆ. ಅದೊಂದು ನನ್ನ ಜೀವನದ ಅಚ್ಚರಿ.

ಬರಹ ಪ್ರಕಟವಾಗಿ ಕೆಲ ದಿನಗಳಾಗಿತ್ತು. ಅಪ್ಪು ನನ್ನ ಹತ್ತಿರ ಬಂದು, ‘ಪ್ರಾಕ್ಸ್, ನಮ್ಮ ಅಪ್ಪಾಜಿಯ ಜೀವನ ಚರಿತ್ರೆಯನ್ನು
ನೀನೇ ಬರೆಯಬೇಕು’ ಅಂತ ಹೇಳಿದ್ದ. ಆಗ ಅವನಿಗೂ ತುಂಬಾ ಚಿಕ್ಕ ವಯಸ್ಸು, ಸುಮ್ಮನೆ ಹೇಳಿದ್ದಿರಬಹುದು ಅಂತ ನಾನೂ ತಲೆಯಾಡಿಸಿ ಸುಮ್ಮನಾಗಿದ್ದೆ. ಸಮಯ ಯಾರ ಮಾತನ್ನೂ ಕೇಳದೆ ಓಡುತ್ತಲೆ ಇತ್ತು, ಅಪ್ಪು ದಿನೇ ದಿನೇ ಜೀವನ ಚರಿತ್ರೆಯ ಕುರಿತಾಗಿ ಹೇಳತೊಡಗಿದ್ದ. ನಾನು ಕೇವಲ ತಲೆಯನ್ನ ಅಲುಗಾಡಿಸಿದ್ದನ್ನ ಗಮನಿಸಿದ ಅಪ್ಪು ನನಗೊಂದು ಲೇಖನಿಯನ್ನು ಉಡುಗೊರೆಯಾಗಿ ನೀಡಿದ್ದು ಇನ್ನೂ ನನ್ನ ಕಣ್ಣನಲ್ಲಿ, ಮುದ್ರೆ ಒತ್ತಿ ಅದರ ಮೇಲೆ ಬಣ್ಣ ಬಣ್ಣಗಳಿಂದ ಚಿತ್ತಾರ ಮಾಡಿದಂತೆ
ಕಾಣುತ್ತಿದೆ. ಕಣ್ಣೀರು ಆ ಬಣ್ಣದ ಮುದ್ರೆಯನ್ನು ಮತ್ತೆ ಕಪ್ಪುಗೊಳಿಸಿದೆ ಅಂದರೆ ಅತಿಶಯೋಕ್ತಿ ಇಲ್ಲ.

ತಲೆ ಅಲುಗಾಡಿಸುತ್ತಿದ್ದ ಕಾಲಗಳು ಮುಗಿದು ಜೀವನ ಚರಿತ್ರೆಯನ್ನು ಬರೆಯುವುದಕ್ಕೆ ಪ್ರಾರಂಭ ಮಾಡಿದ ನನಗೆ ಮೊದಲು ಎರಡು ತಿಂಗಳುಗಳ ಕಾಲ ಮಾನಸಿಕ ಸಿದ್ಧತೆ ಬೇಕಾಗಿತ್ತು. ಅದರ ನಂತರ ಮೊದಲ ಹದಿನೈದು ಪುಟಗಳನ್ನು ಪಾರ್ವತಮ್ಮ ನವರಿಗೆ ಮತ್ತು ಅಪ್ಪುವಿಗೆ ಕೊಟ್ಟಾಗ ಅವರ ಕಂಗಳಲ್ಲಿ ಕಂಡ ಸಂತೋಷ ಬಣ್ಣಿಸುವುದಕ್ಕೆ ಅಸಾಧ್ಯ.

ಪುಸ್ತಕವನ್ನು ಪ್ರಾರಂಭ ಮಾಡಿ ಈಗ ಸುಮಾರು ಹತ್ತು ವರ್ಷಗಳು ಕಳೆಯುತ್ತ ಬಂದಿರಬಹುದು. ಸ್ನೇಹಿತರಿಂದ ಹಿಡಿದು ಮಾಧ್ಯಮ ಮಿತ್ರರವರೆಗೆ ನಾವಿಬ್ಬರು ಕಂಡಾಗ, ‘ಏನಪ್ಪಾ ಜೀವನಚರಿತ್ರೆ ಮುಗೀತಾ ಇನ್ನೂ ಇದ್ಯಾ?’ ಅಂತ ಗೇಲಿ ಮಾಡಿ ಮಾತನಾಡುತ್ತಿದ್ದಿದ್ದು ಇನ್ನೂ ಹಸಿಯಾದ ನೆನಪು. ಇವೆಲ್ಲವನ್ನೂ ಕೇಳುತ್ತ ಸುಮ್ಮನೆ ಮಂದಸ್ಮಿತವಾಗಿ ನಗುತ್ತ ಬಂದವನು ಅಪ್ಪು.

ಸಾಮಾನ್ಯವಾಗಿ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಕ್ಕೂ ಕರೆಯುತ್ತಿದ್ದ ಅಪ್ಪು, ಅಪ್ಪಾಜಿ ಅವರ ಸ್ನೇಹಿತರಿಲ್ಲರಿಗೆ ಪರಿಚಯ ಮಾಡಿಸಿ, ಇವರ ಕುರಿತಾಗಿ ಬರೆಯಬೇಕು, ಹೀಗೆ ಬರೆಯಬೇಕು ಹಾಗೆ ಬರೆಯಬೇಕು ಅಂತೆಲ್ಲ ಹೇಳುತ್ತಿರುವುದು ಈಗಲೂ ಕೇಳುತ್ತಿದೆ. ಪುಸ್ತಕದ ವಿಚಾರವಾಗಿ ನಾವಿಬ್ಬರು ಹೆಚ್ಚಾಗಿ ಮಾತ ನಾಡಿದ್ದು, ಸಿನೆಮಾ ಶೂಟಿಂಗ್ ವೇಳೆಯಲ್ಲೇ.

ಅವನು ಭೇಟಿ ನೀಡುತ್ತಿದ್ದ ಹೆಚ್ಚಿನ ಸ್ಥಳಗಳಿಗೆ ನಾನೂ ಹೋಗಿ ಸ್ಥಳಗಳನ್ನು ನೋಡುತ್ತಿದ್ದೆ. ಸ್ಥಳದ ಬಗ್ಗೆ ಅಥವಾ ಅಲ್ಲಿನ ಜನರ ಕುರಿತಾಗಿ ಬರೆಯುವ ಅವಕಾಶ ನನ್ನದಾಗಿತ್ತು. ನಮ್ಮಿಬ್ಬರ ಸ್ನೇಹದ ಅವಧಿಯಲ್ಲಿ ಅಪ್ಪು ಯಾವತ್ತೂ ನನಗೆ ‘ಹೀಗೆಯೇ ಮಾಡು’ ಅಂತ ಹೇಳಿದ್ದಿಲ್ಲ. ವಿದೇಶಗಳಲ್ಲಿ ಶೂಟಿಂಗ್ ಇರುವಾಗ ಅಶ್ವಿನಿ ಅವರನ್ನು  ಕರೆದುಕೊಂಡೇ ಹೋಗುತ್ತಿದ್ದ ಪುನೀತ್‌ಗೆ ಐವತ್ತು
ಅರವತ್ತು ಪುಟಗಳನ್ನು ಕೊಟ್ಟು ತಿದ್ದುಪಡಿಗೆ ಕಳಿಸುತ್ತಿದ್ದೆ. ಅಶ್ವಿನಿ ಕೂಡ ಸಂಪಾದಕ ಮಂಡಳಿಯಲ್ಲಿದ್ದು ಪ್ರತಿ ದಿನ ಓದುತ್ತಿ ದ್ದರು.

ಅವರು ತುಂಬಾ ಉತ್ತಮವಾಗಿ ತಿದ್ದುತ್ತಿದ್ದ ಮಹಿಳೆ. ಯಾವತ್ತೂ ಮರೆಯಲಾರದ ಚೈತನ್ಯದಂತಿದ್ದ ರಾಜ್‌ಕುಮಾರ್ ಅವರ ಜೀವನ ಚರಿತ್ರೆಗೆ ‘ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ’ ಅಂತ ಹೆಸರನ್ನೂ ನೀಡಿದ್ದೆವು. ಪಾರ್ವತಮ್ಮ ಒಬ್ಬರು ಭಾವನಾತ್ಮಕ ವ್ಯಕ್ತಿ. ಅಣ್ಣಾವ್ರ ಕುರಿತಾಗಿ ಏನೇ ಮಾತನಾಡುತ್ತಿರುವಾಗಲೂ ಅವರ ಕಣ್ಣುಗಳಲ್ಲಿ ನೀರು ಉಕ್ಕಿ ಬರುತ್ತಿತ್ತು. ಆದರೂ ಅವರಿಗೆ ಅದೆನೋ ಒಂದು ಸಂತೋಷ, ಪ್ರೀತಿ. ಇಡೀ ಪುಸ್ತಕ ನಂಬಿಕೆಯ ಮೇಲೆ ನಡೆಯುತ್ತಿತ್ತು.

ಕೆಲಸ ಮಾಡಿಕೊಡುತ್ತೇನೆ ಅಂತ ಹೇಳಿದ ವ್ಯಕ್ತಿಯೊಬ್ಬ ಸುಮಾರು ಎರಡು ಲಕ್ಷಗಳಷ್ಟು ಮೋಸ ಮಾಡಿದ್ದ. ಆದರೆ ಪುನೀತ್
ಮೋಸಮಾಡಿದವನಿಗೆ ಕೂಡ ಒಂದು ಮಾತನ್ನೂ ಹೇಳದೆ ಕೆಲಸವನ್ನ ಬೇರೆಯವರಿಗೆ ನೀಡಿದ್ದ. ಅವನಿಂದ ನಾವು ಕಲಿಯ ಬೇಕಾದ ಒಂದು ಉತ್ತಮವಾದ ಪಾಠ ಇದು. ಬದಲಾಗುವ ಸಮಯದ ಜತೆ ನಾವೇ ಹೊಂದಾಣಿಕೆ ಮಾಡಿಕೊಳ್ಳುವುದು.

ಕಾಲದ ಸಂಧಿಯಲ್ಲಿ ಸಿಲುಕಿದ್ದ ಚಕ್ರ ಮತ್ತೆ ಮೇಲೆ ಬರುವ ಸಮಯ ಅದಾಗಿತ್ತು. ವ್ಯಕ್ತಿಯ ಹಿಂದಿನ ವ್ಯಕ್ತಿತ್ವಕ್ಕೊಂದು ಕೃತಿಯ ರೂಪ ಬಂದಿತ್ತು, ಪುನೀತ್‌ರ ಕನಸು ನನಸಾಗುವ ಕ್ಷಣ ಹತ್ತಿರದಲ್ಲೇ ಇತ್ತು. 450 ಪುಟಗಳಿರುವ ಈ ಪುಸ್ತಕದಲ್ಲಿ 750 ಚಿತ್ರಗಳನ್ನು ಅಳವಡಿಸಿದ್ದೆವು. ಅಣ್ಣಾವ್ರ ಮುತ್ತಿನಂತಹಾ ಜೀವನ ಚರಿತ್ರೆಯನ್ನ ಒಂದು ಲಕ್ಷ ಕನ್ನಡ ಪದಗಳಲ್ಲಿ ಜೋಡಿಸಿದ್ದೆವು. ಅಣ್ಣಾವ್ರ ಜೀವನ ಇಡೀ ಜಗತ್ತಿಗೆ ತಿಳಿಯಬೇಕು ಅನ್ನುವ ದೃಷ್ಟಿಯಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಶಬ್ದಗಳನ್ನು ಬಳಸಿ ‘ಪರ್ಸನ್ ಬಿಹೈಂಡ್ ದಿ ಪರ್ಸನಾಲಿಟಿ’ ಅನ್ನುವ ಇಂಗ್ಲೀಷ್ ಅನುವಾದವೂ ರೂಪುಗೊಂಡಿತ್ತು. ಇಡೀ ಕೃತಿಯಲ್ಲಿ ಅಪ್ಪುವಿಗೆ ತುಂಬಾ ಇಷ್ಟವಾದ ಭಾಗ ಅಂದ್ರೆ ಸಿನೆಮಾ ಕುರಿತಾದ ಒಂದು ಅಧ್ಯಾಯ. ಅದನ್ನ ಅಮಿತಾಬಚ್ಚನ್ ಅವರ ಜೀವನ ಚರಿತ್ರೆಯಲ್ಲಿ ಬಳಸಿದಂತೆ ಬಳಸಲಾಗಿತ್ತು.

ಡಾ. ರಾಜ್‌ಕುಮಾರ್ ಅವರು ಒಟ್ಟೂ ಎಷ್ಟು ಸಿನೆಮಾಗಳನ್ನು ಮಾಡಿದ್ದಾರೆ, ಅದರ ಇಸವಿ, ಕನ್ನಡ ಚಿತ್ರರಂಗಕ್ಕೆ ಇದು ಎಷ್ಟನೇ ಕೊಡುಗೆ ಹೀಗೆ….ಇಷ್ಟೆಲ್ಲ ಆದಾಗಿಯೂ ಕೃತಿಯ ಮುನ್ನುಡಿಯನ್ನು ಮಾತ್ರ ಪಾರ್ವತಮ್ಮನವರೇ ಬರೆಯಬೇಕಿತ್ತು. ಅಪ್ಪು ಆ ದೊಡ್ಡ ಕೆಲಸವನ್ನ ನನ್ನ ಮೇಲೆಯೇ ಹಾಕಿದ್ದ. ತಾಯಿಯೊಬ್ಬಳು ತನ್ನ ಮಗುವಿನ ಬಗ್ಗೆ ಮೂರನೆಯ ವ್ಯಕ್ತಿಯ ಜತೆ ಹೆಮ್ಮೆ ಯಿಂದ ಹೇಳಿಕೊಳ್ಳುವಾಗ ತಾಯಿಗೆ ಆಗುವ ಸಂತೋಷ ಅವರ್ಣನೀಯ. ಮುನ್ನುಡಿಯನ್ನು ಬರೆಯುವ ಸಮಯಕ್ಕೆ ಅವರ ಆರೋಗ್ಯವೂ ಕ್ಷೀಣಿಸತೊಡಗಿತ್ತು. ಇಡೀ ಕಾದಂಬರಿಯ ಆತ್ಮ ಅಪ್ಪುವಾಗಿದ್ದ, ನಾನು ಕೇವಲ ಬರಹಗಾರ.

ಅಪ್ಪು ಇಲ್ಲದ ಒಂದು ದಿನವನ್ನೂ ಊಹಿಸಿರದಿದ್ದ ನನ್ನ ಮನಸ್ಸು, ಕಾರ್ಮೋಡದಂತೆ ಕಪ್ಪುಗಟ್ಟುತ್ತಿದೆ. ಯಾವುದೋ ಜನ್ಮದಲ್ಲಿ ನಾನು ಪುಣ್ಯ ಮಾಡಿದ್ದೆಅನಿಸುತ್ತಿದೆ. ಇಷ್ಟು ದಿನಗಳ ಕಾಲ ಅಪ್ಪು ನನ್ನ ಜತೆಗಿದ್ದ. ಯಾವುದೋ ಜನುಮದಲ್ಲಿ ದೊಡ್ಡ ಪಾಪ ವನ್ನು ಮಾಡಿರಬಹುದು ಅಪ್ಪು ಬಿಟ್ಟುಹೋದ. ಭಾವನೆಗಳು ಮೂಕವಾಗಿವೆ.