ಡಾ. ಶಾಲಿನಿ ಜೋಶಿ – ಹಿರಿಯ ಸಲಹೆಗಾರರು, ಆಂತರಿಕೆ ಔಷಧ ಫೋರ್ಟಿಸ್ ಆಸ್ಪತ್ರೆ,
ಇಂದು ವಿಶ್ವ ತಂಬಾಕು ರಹಿತ ದಿನ. ಬಹುತೇಕ ಜನರು ಧೂಮಪಾನಕ್ಕೆ ದಾಸರಾಗಿರುತ್ತಾರೆ. ತಮ್ಮಲ್ಲಿರುವ ಒತ್ತಡವನ್ನು ನಿವಾರಿಸಿಕೊಳ್ಳಲು ಧೂಮಪಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಇದು ಕಾಲಕ್ರಮೇಣ ತಮ್ಮ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರಲಿದೆ, ಇದು ಪ್ರಾಣಕ್ಕೂ ಕುತ್ತು ತರಬಹುದು. ಹೀಗಾಗಿ ಧೂಮಪಾನ ಬಿಡುವುದು ಅತ್ಯಂತ ಅವಶ್ಯಕ. ಆದರೆ ಬಹುತೇಕರಿಗೆ ಇದನ್ನು ಬಿಡುವುದೇ ದೊಡ್ಡ ತಲೆನೋವಾಗಿದೆ. ಒಮ್ಮೆ ಇದರ ವ್ಯಸನಕ್ಕೆ ಒಳಗಾದರೆ ಬಿಡುವ ಮಾರ್ಗ ಕಷ್ಟವೇ ಸರಿ, ಆದರೆ ಬಿಡುವ ಗಟ್ಟಿ ನಿರ್ಧಾರ ಮಾಡಿದರೆ ಖಂಡಿತವಾಗಿ ಈ ವ್ಯಸನದಿಂದ ಮುಕ್ತಿ ಹೊಂದಬಹುದು.
ಹೊಗೆಯಿಂದಾಗುವ ಆರೋಗ್ಯ ಸಮಸ್ಯೆಗಳು: ಸಿಗರೇಟ್ನ ಮೊದಲ ಪಫ್ ಎಳೆದ 10 ಸೆಕೆಂಡುಗಳಲ್ಲಿ ತಂಬಾಕು ಹೊಗೆ ಯಲ್ಲಿರುವ ವಿಷಕಾರಿ ರಾಸಾಯನಿಕಗಳು ನಿಮ್ಮ ಮೆದುಳು, ಹೃದಯ ಮತ್ತು ಇತರ ಅಂಗಗಳನ್ನು ತಲುಪುತ್ತವೆ. ನಿಕೋಟಿನ್ ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಹಾನಿ ಮಾಡುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನವು ನಿಮ್ಮ ನೋಟ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.
ಅದರಲ್ಲೂ ಚೈನ್ ಸ್ಮೋಕರ್ಗಳು ಶೀಘ್ರವೇ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಕೆಲವರಲ್ಲಿ ಹಲ್ಲು ಮತ್ತು ಉಗುರುಗಳ ಬಣ್ಣ ಬದಲಾಗಬಹುದು, ದೇಹವು ಕೆಟ್ಟವಾಸನೆ ಹೊರಹೊಮ್ಮುತ್ತವೆ. ಸಿಗರೇಟ್ ಖರೀದಿಗೆ ಹೆಚ್ಚು ಹಣ ವ್ಯಹಿಸುವುದರಿಂದ ನೀವು ಆರ್ಥಿಕವಾಗಿಯೂ ಹೊಡೆತ ತಿನ್ನುತ್ತೀರಿ, ಇದರಿಂದ ನೀವು ಮಾನಸಿಕ ಒತ್ತಡಕ್ಕೆ ಸಿಲುಕುತ್ತೀರಿ.
ಇನ್ನು, ತಂಬಾಕಿನಲ್ಲಿರುವ ನಿಕೋಟಿನ್ ನೀವು ಪದೇ ಪದೇ ಸಿಗರೇಟು ಸೇದುವ ರೀತಿಯಲ್ಲಿ ವ್ಯಸನಿಗಳನ್ನಾಗಿ ಮಾಡುತ್ತದೆ. ಸಿಗರೇಟು ಸೇದಿದ ಕ್ಷಣದಲ್ಲಿ ನಿಮಗೆ ಆರಾಮದಾಯವೆನಿಸಬಹುದು, ಆದರೆ ಇದು ಸ್ಲೋಪಾಯಿಸನ್ ರೀತಿಯಲ್ಲಿ ನಿಮ್ಮನ್ನು ಕೊಲ್ಲುತ್ತದೆ. ಹೀಗಾಗಿ ಧೂಮಪಾನದ ವ್ಯಸನಕ್ಕೆ ಸಿಲುಕಿದವರು ಸಾಧ್ಯವಾ ದಷ್ಟು ಬೇಗ ಅದರಿಂದ ಹೊರಬರಲು ಪ್ರಯತ್ನಿಸಿ. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.
1. ಯಾವುದಾದರು ನಿಮ್ಮೆಚ್ಚೆಯ ಹೊಸ ಚಟುವಟಿಕೆಯನ್ನು ರೂಢಿಸಿಕೊಳ್ಳಿ: ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುವ ಜೊತೆಗೆ, ಸಿಗರೇಟು ಸೇದಬೇಕು ಎನ್ನುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಮೆದುಳಿನಲ್ಲಿ ಡೋಪಮೈನ್ ಬಿಡುಗಡೆ ಮಾಡಿ, ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ.
2. ಪ್ರಚೋದಕಗಳನ್ನು ತಪ್ಪಿಸಿ: ಈ ಮೊದಲಿನ ದಿನಚರಿಯನ್ನು ಸಂಪೂರ್ಣ ಬದಲಿಸಿಕೊಳ್ಳಿ. ಇದು ನೀವು ಸಿಗರೇಟು ಸೇದಲು ಸಮಯ ನೀಡುವುದನ್ನು ತಪ್ಪಿಸುತ್ತದೆ. ನಿಮ್ಮ ವಿರಾಮದ ಸಮಯದಲ್ಲಿ ಸ್ನೇಹಿತರೊಂದಿಗೆ ಕಾಲಕಳೆಯಿರಿ. ಸಿಗರೇಟು ಸೇದುವ ಸ್ನೇಹಿತರಿಂದ ದೂರವಿರಿ. ಸಿಗರೇಟು ಸೇದಲು ಪ್ರಚೋದಿಸುವ ಎಲ್ಲಾ ಚಟುವಟಿಕೆಯಿಂದ ದೂರವಿರಿ.
3. ನಿಮ್ಮ ಗಮನ ಬದಲಿಸಿಕೊಳ್ಳುತ್ತಿರಿ: ಸಿಗರೇಟು ಬಿಡುವುದು ಸುಲಭದ ಮಾತಲ್ಲ. ಆದರೆ, ಕಷ್ಟಪಟ್ಟರೆ, ಖಂಡಿತ ಸುಲಭವೆ. ಇದಕ್ಕೆ ನಮ್ಮ ಶ್ರಮ ಮುಖ್ಯ. ಕೆಲವೊಮ್ಮೆ ಮೆದುಳಿಗೆ ಒತ್ತಡವೆನಿಸಿದಾಗ ಸಿಗರೇಟಿನ ಕಡೆ ಗಮನ ಎಳೆಯಬಹುದು. ಆ ಸಂದರ್ಭ ದಲ್ಲಿ ನಿಮ್ಮಿಷ್ಟದ ಆಹಾರ, ಸ್ನಾಕ್ಸ್ಗಳನ್ನು ಸೇವಿಸಿ. ಸಕ್ಕರೆ ರಹಿತ ಚೂಯಿಂಗಮ್ ಅಗಿಯಿರಿ. ಇದು ನಿಮ್ಮ ಗಮನವನ್ನು ಸಿಗರೇಟಿನತ್ತ ಕೊಂಡೊಯ್ಯುವುದಿಲ್ಲ.
3. ದೈಹಿಕವಾಗಿ ಸಕ್ರಿಯರಾಗಿರಿ: ನೀವು ಧೂಮಪಾನ ಮಾಡುವ ಬಯಕೆ ಹೊಂದಿದಾಗ ಮೆಟ್ಟಿಲು ಹತ್ತುವುದು, ಇಳಿಯುವುದು, ಸ್ವಲ್ಪ ನೀರು ಕುಡಿಯುವುದು ಮಾಡಿ. ಆ ಕ್ಷಣ ನೀವು ದೈಹಿಕವಾಗಿ ನಿಮ್ಮನ್ನ ಬೇರೆಡೆ ತೊಡಗಿಸಿಕೊಳ್ಳಿ.
4. ನಿಮ್ಮ ನಿರ್ಣಯವನ್ನು ಬಲಪಡಿಸಿ: ನೀವು ಸಿಗರೇಟು ಬಿಡಬೇಕು ಎನ್ನುವ ನಿರ್ಣಯವನ್ನು ಆಗಾಗ್ಗೇ ನೆನಪಿಸಿಕೊಳ್ಳಿ. ಈ ಬಗ್ಗೆ ನಿಮ್ಮ ಆತ್ಮೀಯ ಸ್ನೇಹಿತರಿಗೆ ಸಂದೇಶ ಕಳುಹಿಸಿ, ಕರೆ ಮಾಡಿ ಅಥವಾ ಮಾತನಾಡಿ. ಸಿಗರೇಟು ತ್ಯಜಿಸುವ ಕುರಿತ ಬ್ಲಾಗ್ಗಳನ್ನು ಓದಿ. ಸಹಾಯವಾಣಿಗೆ ಕರೆ ಮಾಡಿ.
5. ಖಿನ್ನತೆಯಿಂದ ಹೊರಬ್ಬಿ: ಪ್ರಾರಂಭದಲ್ಲಿ ಸಿಗರೇಟು ಬಿಡುವುದು ಸಹ ಒಂದು ಖಿನ್ನತೆಯಾಗಿ ಪರಿಣಮಿಸಬಹುದು. ಹೀಗಾಗಿ ಯೋಗ, ಧ್ಯಾನ, ಇತರೆ ವ್ಯಾಯಾಮಗಳನ್ನು ಮಾಡಿ. ಅಥವಾ ಟ್ರೆಕ್ಕಿಂಗ್ ಗುಂಪಿಗೆ ಸೇರಿಕೊಳ್ಳಿ. ಇದರಿಂದ ಖಿನ್ನತೆ ನಿಮ್ಮನ್ನು ಕಾಡುವುದಿಲ್ಲ.
6. ನೀವು ಏಕೆ ತ್ಯಜಿಸಲು ಬಯಸುತ್ತೀರಿ ಎಂಬುದನ್ನು ನೀವೇ ನೆನಪಿಸಿಕೊಳ್ಳಿ: ನಿಮಗೆ ಯಾವುದು ಮುಖ್ಯ? ನೀವು ಧೂಮ ಪಾನ ಮುಕ್ತರಾಗಿದ್ದರೆ ನಿಮ್ಮ ಸಂಗಾತಿ ಅದನ್ನು ನಿಜವಾಗಿಯೂ ಪ್ರಶಂಸಿಸಬಹುದು. ನಿಮ್ಮ ಮೊಮ್ಮಕ್ಕಳು ನಿಮ್ಮ ಬಳಿ ಆಟ ವಾಡುವುದನ್ನು ಆನಂದಿಸುತ್ತಾರೆ, ತ್ಯಜಿಸಿದ ನಂತರ ನೀವು ಉಸಿರುಗಟ್ಟುವಿಕೆ ಇಲ್ಲದೆ ಓಡಲು ಮತ್ತು ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ. ಕೆಮ್ಮು, ಇತರೆ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಈ ರೀತಿಯ ಕೆಲವು ಧನಾತ್ಮಕ ಕಾರಣ ಗಳನ್ನು ಆಗಾಗ್ಗೇ ನೆನಪಿಸಿಕೊಂಡು ನಿಮ್ಮ ನಿಲುವಿಗೆ ಅಂಟಿಕೊಳ್ಳಿ.
7″ಸಿಗರೇಟ್ ಬಗ್ಗೆ ಯೋಚಿಸಬೇಡಿ”: ಕೆಲವೊಮ್ಮೆ ಮನಸ್ಸು ನಮ್ಮ ವ್ಯಸನಗಳನ್ನು ಬೇಕೆಂದೇ ನೆನಪಿಸುತ್ತದೆ. ಆದರೆ ಅದನ್ನ ಬಲವಾಗಿ ನಿಲ್ಲಸಬೇಕಾಗುತ್ತದೆ. ನೀವು ಸಿಗರೇಟು ಬಿಡುತ್ತಿರುವ ಸತ್ಯವನ್ನು ಒಪ್ಪಿಕೊಂಡು ಅದು ನಿಮ್ಮ ನೆನಪಿಗೆ ಬಂದರೂ ಆ ಬಗ್ಗೆ ನೊಂದಿಕೊಳ್ಳೂವ ಭಾವನೆ ಮೂಡಬಾರದು. ಆ ರೀತಿಯಲ್ಲಿ ಸಿಗರೇಟಿನ ಬಗ್ಗೆ ಯೋಚನೆಯನ್ನು ಬಿಡುಬೇಕು.
8. ನಿಮ್ಮ ಪಾಸ್ವರ್ಡ್ ಅನ್ನು “ICanDoIt” ಗೆ ಬದಲಾಯಿಸಿ: ನೀವು ದಿನವಿಡೀ ಇದನ್ನು ಪದೇ ಪದೇ ಟೈಪ್ ಮಾಡಿದಾಗ ಈ ತಂತ್ರವು ನಿಮ್ಮ ಬದ್ಧತೆಯನ್ನು ಇಡೀ ದಿನ ಬಲಪಡಿಸುತ್ತದೆ.
9. ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಸಹ ತ್ಯಜಿಸಲು ಸಹಾಯ ಮಾಡುತ್ತದೆ: ವಾಪಸಾತಿ ರೋಗಲಕ್ಷಣಗಳನ್ನು ನಿರ್ವಹಿಸಲು ನಿಮ್ಮ ಆಯ್ಕೆಗಳನ್ನು ಚರ್ಚಿಸಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
10. ವೃತ್ತಿಪರರಿಂದ ಮಾರ್ಗದರ್ಶನ ಪಡೆಯಿರಿ: ಧೂಮಪಾನ ತ್ಯಜಿಸಲು ಈ ದಿನ ಉತ್ತಮವಾಗಿದೆ. ಈ ಬಗ್ಗೆ ದೃಢ ನಿರ್ಧಾರ ಮಾಡಿ, ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಿರಿ.