Sunday, 24th November 2024

ವಿಶ್ವ ಪರಿಸರ ದಿನಾಚರಣೆ; ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಅತ್ಯವಶ್ಯಕ

ರಮೇಶ ಪಿ.ಗೌಡೂರು, ರಾಯಚೂರು

ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.

ಮಾನವ, ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು, ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿ ಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಆಚರಿಸ ಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ.

ಪರಿಸರದ ಮಹತ್ವ ತಿಳಿಸಿ ಕೊಟ್ಟ ಕೋವಿಡ್; ಅಯ್ಯೋ, ಅಯ್ಯಯ್ಯೋ, ಅಮ್ಮಾ, ಯಾರಾದ್ರೂ ಆಕ್ಸಿಜನ್ ಕೊಡಿ, ಅಣ್ಣಾ ಯಾರಾದ್ರೂ ಆಕ್ಸಿಜನ್ ಕೊಡಿ, ಡಾಕ್ಟರೇ ದಯಮಾಡಿ ನಿಮ್ಮ ಕಾಲಿಗೆ ಬೀಳುತ್ತೇನೆ ಆಕ್ಸಿಜನ್ ಕೊಡಿ ಎಷ್ಟು ಸಾವಿರ ಖರ್ಚಾದರೂ ಪರ್ವಾಗಿಲ್ಲ. ಎಷ್ಟು ಲಕ್ಷ ಬೇಕಾದರೂ ತೊಗೊಳ್ಳಿ ದಯಮಾಡಿ ಆಕ್ಸಿಜನ್ ಕೊಡಿ ಎಂದು ಕೊರೋನಾ ರೋಗಿಗಳ ಸಂಬಂಧಿಕರು ಆಸ್ಪತ್ರೆಗಳಲ್ಲಿ ರೋಧಿಸುತ್ತಿರುವ ದೃಶ್ಯಗಳು ದೊಡ್ಡ ದೊಡ್ಡ ಮಹಾನಗರಗಳಲ್ಲಿ ಸಾಮಾನ್ಯವಾಗಿ ಕೋವಿಡ್ ಸಮಯದಲ್ಲಿ ಕಂಡುಬಂದಿದ್ದು, ಇನ್ನೂ ಮರೆಯುವಂತಿಲ್ಲ.

ಆಸ್ಪತ್ರೆಯ ಮುಂದೆ ರಸ್ತೆಯ ಮೇಲೆ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಮುಖಕ್ಕೆ ವೆಂಟಿಲೇಟರ್ ಇಟ್ಟುಕೊಂಡು ನರಳುತ್ತಿದ್ದ ಒಬ್ಬ ಮಹಿಳೆಯ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ನೋಡಿ ನಿಜಕ್ಕೂ ಕರುಳ ಹಿಂಡುವಂತಿತ್ತು. ಇವರ ಸ್ಥಿತಿಯನ್ನು ನೋಡಿ ಅಂದು ಪ್ರಕೃತಿ ನಗುತ್ತಿತ್ತು, ಅದು ನಗುವಂತೆ ಮಾಡಿದವರು ಬೇರಾರು ಅಲ್ಲ. ಅಂದು ಆಸ್ಪತ್ರೆಯಲ್ಲಿ ರೋಧಿಸುತ್ತಿರುವವರೆ. ಇವರೆಲ್ಲ ಮಾಧ್ಯಮದ ಮುಂದೆ ಬಂದು ಸರ್ಕಾರ ಆಕ್ಸಿಜನ್‌ ನೀಡುತ್ತಿಲ್ಲ, ಮುಖ್ಯಮಂತ್ರಿ ಆಕ್ಸಿಜನ್ ನೀಡುತ್ತಿಲ್ಲ, ಆರೋಗ್ಯ ಮಂತ್ರಿ ಆಕ್ಸಿಜನ್ ನೀಡುತ್ತಿಲ್ಲ ಎಂದು ಆರೋಪ ಮಾಡು ತ್ತಿರುವುದು ಹಾಸ್ಯಾಸ್ಪದವಾಗಿತ್ತು. ಕಾರಣ ಒಳ್ಳೆಯ ಆಮ್ಲಜನಕ ನೀಡುವ ಮರಗಳನ್ನು ನಾವು ಉಳಿಸಿಕೊಂಡಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಅಷ್ಟಕ್ಕೂ ನಮಗೆ ಆಕ್ಸಿಜನ್ ನೀಡುವ ಶಕ್ತಿ ಸರ್ಕಾರಕ್ಕೂ ಇಲ್ಲ, ಮಂತ್ರಿಗಳಿಗೂ ಇಲ್ಲ. ಇರುವುದು ಕೇವಲ ಗಿಡ, ಮರಗಳಿಗೆ ಮಾತ್ರ.

ಒಬ್ಬ ಆರೋಗ್ಯವಂತ ಮನುಷ್ಯನಿಗೆ ದಿನವೊಂದಕ್ಕೆ ಉಸಿರಾಡಲು ಕನಿಷ್ಟ 45ಕೆಜಿ ಆಮ್ಲಜನಕ ಬೇಕು. ಅಂದರೆ 45ಕೆಜಿ ಆಮ್ಲಜನಕ ಮೂರು ಸಿಲಿಂಡರ್‌ಗೆ ಸಮ. ಇವತ್ತಿನ ಮಾರುಕಟ್ಟೆಯಲ್ಲಿ ಒಂದು ಸಿಲಿಂಡರಿನ ಬೆಲೆ ಸುಮಾರು 1,700 ರಿಂದ 1800 ರೂ. ಅಂದರೆ ದಿನವೊಂದಕ್ಕೆ 5400 ರೂ. ಮೊತ್ತದ ಗಾಳಿಯನ್ನು ಉಸಿರಾಡುತ್ತಿದ್ದೇವೆ. ಆದರೆ ಒಂದು ದಿನ ಬದುಕಲು ಇಷ್ಟೊಂದು ಹಣ ಪಾವತಿಸುವಷ್ಟು ಶಕ್ತಿ ನಮ್ಮಲ್ಲಿದೆಯೇ? ನಾವು ಅಷ್ಟು ಶ್ರೀಮಂತರೆ? ಈಗ ನಾವು ಉಸಿರಾಡುತ್ತಿರುವ ಈ ಗಾಳಿಗೆ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲ. ಬದಲಿಗೆ ಗಿಡ ಮರಗಳು ನಮಗಾಗಿ ಉಚಿತವಾಗಿ ನೀಡುತ್ತಿವೆ. ಇಷ್ಟು Common Sense ಇಲ್ಲದ ಮನುಷ್ಯ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕೊಟ್ಯಾಂತರ ಮರಗಳ ಮಾರಣ ಹೋಮ ಮಾಡಿ ಪರೋಕ್ಷವಾಗಿ ತನ್ನ ಅಸ್ಥಿತ್ವಕ್ಕೆ ತಾನೇ ಕೊಡಲಿಪೆಟ್ಟು ಕೊಡುತ್ತಿದ್ದಾನೆ.

ಎಲ್ಲ ಪ್ರಜ್ಞಾವಂತರಿಗೆ ಗೊತ್ತು ಜೂನ್ 5 ವಿಶ್ವ ಪರಿಸರ ದಿನ ಎಂದು, ಆ ದಿನ ಮಾತ್ರ ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಒಂದು ಸಸಿನೆಟ್ಟು ಕ್ಯಾಮರಾಕ್ಕೆ ಫೋಸ್ ಕೊಟ್ಟು ತಿರುಗಿ ನಾಳೆ ಆ ಸಸಿ ಏನಾಯಿತೆಂದು ತಿರುಗಿಯೂ ಸಹ ನೋಡದ ಪರಿಸರವಾದಿಗಳು ತುಂಬಿ ತುಳುಕುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರಲಿ ಪರಿಸರಕ್ಕೆ ನಿರ್ದಿಷ್ಟ ದಿನವಿಲ್ಲ. ವರ್ಷದ 365 ದಿನಗಳು ಪರಿಸರ ದಿನಗಳೆ. ನಾವು ಈಗಲಾದರೂ ಎಚ್ಚೆತ್ತುಕೊಂಡು ಉಳಿದಿರುವ ಅಲ್ಪ ಸ್ವಲ್ಪ ಪರಿಸರವನ್ನು ಸಂರಕ್ಷಿಸಿಕೊಳ್ಳದಿದ್ದರೆ ಈಗ ನಮ್ಮ ಮೊಬೈಲ್‌ ಫೋನ್‌ಗೆ ರೀಚಾರ್ಜ್ ಮಾಡಿಸಿಕೊಳ್ಳುವಂತೆ ಪ್ರತಿ ತಿಂಗಳು ಕುಟುಂಬದ ಸದಸ್ಯರೆಲ್ಲರೂ ಕೃತಕಗಾಳಿಯನ್ನು ಒಂದು ತಿಂಗಳ ಮಟ್ಟಿಗೆ ರೀಚಾರ್ಜ್ ಮಾಡಿಸಿಕೊಂಡು ಬದುಕುವ ಕಾಲ ಬಹುದೂರವಿಲ್ಲ. ಇದನ್ನು ನಾವು ಅರಿತುಕೊಳ್ಳದಿದ್ದರೆ ಈ ಭೂಮಿಯ ಮೇಲೆ ನಮ್ಮ ತಲೆಮಾರು ಕೊನೆಯ ತಲೆಮಾರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನಾವು-ನೀವು ಯಾವುದಾದರೂ ಊರಿಗೆ ಹೋಗಬೇಕಾದರೆ ಬಸ್ಸಿನ ಕಿಟಕಿಯಲ್ಲಿ ಕುಳಿತು ಹೊರಗಡೆ ಕಣ್ಣು ಹಾಯಿಸಿದಾಗ ಎಲ್ಲ ಬೆಟ್ಟ ಗುಡ್ಡಗಳಲ್ಲಿ ಹೊಲಗಳಲ್ಲಿ ದೊಡ್ಡ ದೊಡ್ಡ ಮರಗಳು ಕಾಣಿಸುತ್ತಿದ್ದವು ಇವುಗಳು ರಸ್ತೆಯ ಅಕ್ಕಪಕ್ಕದಲ್ಲಿ ಸ್ವಲ್ಪ ದೂರದಲ್ಲಿರುವ ಊರುಗಳನ್ನು ಮರೆಮಾ ಚಿದಂತಿದ್ದವು. ಆದರೆ ಇಂದು ರಸ್ತೆಯ ಇಕ್ಕೆಲಗಳೆಲ್ಲ, ಹೊಲದ ಡ್ವಾಣಗಳೆಲ್ಲ, ಬೋಳಾಗಿ ಮರದ ಹಿಂದೆ ಅವಿತುಕೊಂಡಿದ್ದ ಊರುಗಳೆಲ್ಲ ಇಂದು ಬಟಾ ಬಯಲಾಗಿವೆ. ಕಣ್ಣುಹಾಯಿಸಿದಷ್ಟು ಬಯಲೇ ಬಯಲು ಹಿಂದೆ ಎಳ್ಳ ಅಮಾವಾಸ್ಯೆಯ ದಿನ ಚರಗ ಹೊಡೆಯಲು ಮನೆ ಮಂದಿಯೆಲ್ಲ ಎತ್ತಿನ ಗಾಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿ ಮರದ ನೆರಳಿನಲ್ಲಿ ಕುಳಿತು ಸಂತಸದಿಂದ ಊಟಮಾಡುತ್ತಿದ್ದರು. ಆದರೆ ಇಂದು ಆ ಮರವನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ನಾಗರ ಪಂಚಮಿಗೆ ತವರಿಗೆ ಬಂದ ಅಕ್ಕ ತಂಗಿಯರು ಇಂದು ಜೋಕಾಲಿ ಆಡಲು ಅಂಗಳದಲ್ಲೊಂದು ಮರವಿಲ್ಲದಂತೆ ಮಾಡಿದ ವಿಕೃತರು ನಾವು. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಭಿಕ್ಷುಕರು ಕೂಡ ತಟ್ಟೆಯ ಬದಲು ಖಾಲಿ ಸಿಲಿಂಡರ್ ಹಿಡಿದು ಅಮ್ಮ ಸ್ವಲ್ಪ ಆಮ್ಲಜನಕ ಇದ್ದರೆ ಕೊಡಿ! ಎಂದು ಬೇಡುವ ಪರಿಸ್ಥಿತಿ ಬರಬಹುದು. ಈ ಪರಿಸ್ಥಿತಿಗೆ ಕಾರಣ ಯಾರು? ಎಂಬುದನ್ನು ಅರ್ಥ ಮಾಡಿಕೊಂಡು ಇಂದೇ ನಾವು ನೀವೆಲ್ಲರೂ ಎಚ್ಚೆತ್ತುಕೊಂಡು ಶಪಥ ಮಾಡೋಣ. ನಮ್ಮ ದೇಶದ ಜನಸಂಖ್ಯೆ ಅಂದಾಜು 142.86 ಕೋಟಿ ಇದರ ಅರ್ಧದಷ್ಟು ಜನರು ಮನಸ್ಸು ಮಾಡಿದರೂ ಸಾಕು, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಈಗ ಕಳೆದುಕೊಂಡಿರುವ ಪರಿಸರವನ್ನು ಹತ್ತಿಪ್ಪತ್ತು ವರ್ಷದಲ್ಲಿ ಪುನಃ ಸೃಷ್ಟಿಸಬಹುದು. ಮುಂದಿನ ತಲೆಮಾರಿನ ಉಳಿವಿಗಾಗಿ ಕೈ ಜೋಡಿಸೋಣ. ಆರೋಗ್ಯಪೂರ್ಣ ಸಮಾಜವನ್ನು ಕಟ್ಟೋಣ.