Friday, 22nd November 2024

Leopard Attack: ದಾಳಿ ಮಾಡಿದ ಚಿರತೆಯನ್ನು ದೊಣ್ಣೆಯಿಂದ ಹೊಡೆದು ಕೊಂದ ಮಾಜಿ ಸೈನಿಕ

Leopard Attack

ಉತ್ತರಪ್ರದೇಶ: ಹಸಿದ ಚಿರತೆಗಳು ಊರಿಗೆ ನುಗ್ಗಿ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನು ಕೊಂದು ತಿಂದು ಹಾಕಿದ ಘಟನೆ ಹಲವಾರು ಕಡೆ ನಡೆದಿದೆ. ಅದೇ ರೀತಿ ಇತ್ತೀಚೆಗೆ ಉತ್ತರ ಪ್ರದೇಶದ ಬಿಜ್ನೋರ್‍ ಅಫ್ಜಲ್‍ಗಢ ಪ್ರದೇಶದ ಭಿಕ್ಕಾವಾಲಾ ಗ್ರಾಮದಲ್ಲಿ 55 ವರ್ಷದ ರೈತ ಟೇಕ್ವೀರ್ ನೇಗಿ ಮೇಲೆ ಚಿರತೆ ದಾಳಿ(Leopard Attack) ನಡೆಸಿದೆ. ಈ ಸಂದರ್ಭದಲ್ಲಿ ಅವರು ಹೆದರದೇ ಆತ್ಮರಕ್ಷಣೆಗಾಗಿ ಚಿರತೆಯ ಮೇಲೆ ಪ್ರತಿದಾಳಿ ನಡೆಸಿ ಅದನ್ನು ಕೊಂದು ಹಾಕಿದ್ದಾರೆ.

ಟೇಕ್ವೀರ್ ನೇಗಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಚಿರತೆ ಅವರ ಮೇಲೆ ಹಾರಿ ದಾಳಿ ಮಾಡಿತ್ತು. ಅವರ ಕುತ್ತಿಗೆಯನ್ನು ತನ್ನ ಚೂಪಾದ ಹಲ್ಲುಗಳಿಂದ ಕಚ್ಚಿಕೊಂಡು ಹೊಲದೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿತ್ತು. ಆದರೆ ಹೆದರದ ನೇಗಿ ಅವರು ಅದರ ಹಲ್ಲುಗಳಿಂದ ಬಿಡಿಸಿಕೊಂಡು ಅಲ್ಲೇ ಇದ್ದ ದೊಣ್ಣೆಯಿಂದ  ಚಿರತೆಯ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಶಬ್ದ ಕೇಳಿದ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟೊತ್ತಿಗಾಗಲೇ ಚಿರತೆ ಪ್ರಜ್ಞೆ ತಪ್ಪಿ ಸ್ವಲ್ಪ ಹೊತ್ತಿನಲ್ಲೇ ಸಾವನಪ್ಪಿದೆ.

ನಂತರ ಈ ಬಗ್ಗೆ ಸ್ಥಳೀಯರು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನೇಗಿ ಅವರಿಗೆ  ಗಾಯಗಳಾಗಿದ್ದು, ಅವರ ದೇಹದ ಮೇಲೆ ಚಿರತೆಯ ಉಗುರುಗಳು ಮತ್ತು ಹಲ್ಲುಗಳ ಗುರುತುಗಳಿವೆ. ಜನರು ಅವರನ್ನು ಕಾಶಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ತಲುಪಿ ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಿದೆ. ಹಾಗೂ ಈ ಬಗ್ಗೆ ತನಿಖೆ ಆರಂಭಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಮೈ ಏರಿದ ಹೆಬ್ಬಾವು! ವಿಡಿಯೊ ನೋಡಿ

ಭಿಕ್ಕಾವಾಲಾ ಗ್ರಾಮದ ರೈತ ಟೇಕ್ವೀರ್ ನೇಗಿ ಸೈನಿಕರಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಬಿಜ್ನೋರ್‌ನ ಕಬ್ಬಿನ ಗದ್ದೆಗಳಲ್ಲಿ 500 ಕ್ಕೂ ಹೆಚ್ಚು ಚಿರತೆಗಳು ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಇದೆ.  ಹಾಗೇ ಚಿರತೆಯನ್ನು ಗ್ರಾಮಸ್ಥರು ಕೊಂದ ಮೊದಲ ಘಟನೆ ಇದಲ್ಲ. ಸೆಪ್ಟೆಂಬರ್ 27 ರಂದು, ಕಿರಾಟ್ಪುವಿನ ಅಮನ್ ನಗರ ಗ್ರಾಮದಲ್ಲಿ ದಿಶಾ ಸಿಂಗ್ (20) ತನ್ನ ತಂದೆ ಸುರೇಂದ್ರ ಸಿಂಗ್ (45) ಅವರನ್ನು ಚಿರತೆ ದಾಳಿಯಿಂದ ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಳು. ಈ ಘಟನೆಯಲ್ಲಿ ಕೂಡ ಗ್ರಾಮಸ್ಥರು ತಂದೆ ಮಗಳನ್ನು ರಕ್ಷಿಸಲು ಚಿರತೆಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.