Wednesday, 17th July 2024

ಕರ್ನಾಟಕದ ರಾಜಕೀಯ ಇತಿಹಾಸದ ಅವಲೋಕನ

ಸ್ವಾಸ್ಥ್ಯ ಸಂಪದ

Yoganna55@gmail.com

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ನಾಮಪತ್ರಗಳ ಸಲ್ಲಿಕೆ ಹಂತ ಸಲ್ಲಿಕೆ ಮತ್ತು ಹಿಂತೆಗೆಯುವ ಪ್ರಕ್ರಿಯೆಗಳು ಮುಗಿದಿದ್ದು, ಪಕ್ಷಗಳಲ್ಲಿ ಜಾತಿವಾರು ಟಿಕೆಟ್ ಹಂಚಿಕೆಯಾಗಿರುವುದು, ಪಕ್ಷಾಂತರ ಗಳಾಗುತ್ತಿರುವುದು, ಈ ಹಿಂದೆ ವಾಚಾಮ ಗೋಚರವಾಗಿ ಬೈಯ್ಯುತ್ತಿದ್ದ ಪಕ್ಷಗಳನ್ನೇ ಅಪ್ಪಿಕೊಳ್ಳುತ್ತಿರುವುದು, ಅಭ್ಯರ್ಥಿಗಳು ಕೋಟಿ ಕೋಟಿ ಆಸ್ತಿಗಳನ್ನು ಘೋಷಿಸಿ ಕೊಳ್ಳು ತ್ತಿರುವುದು, ಜಾತ್ಯತೀತವಾಗಿ, ಧರ್ಮಾತೀತವಾಗಿ ಆಡಳಿತ ನಡೆಸುತ್ತೇವೆಂಬ ಪ್ರಮಾಣ ವಚನ ಸ್ವೀಕರಿಸಿದವರೇ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳೇ ಜಾತಿ ಹಿಡಿದು ಪ್ರಚಾರ ಭಾಷಣ ಮಾಡುತ್ತಿರುವುದು, ಕುಟುಂಬ ರಾಜಕಾರಣವನ್ನು ವಿರೋಧಿ ಸುತ್ತಿದ್ದವರೇ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿರುವುದು, ಜಾತಿಗಳ ಓಲೈಕೆಗಾಗಿ ಚುನಾವಣಾ ಸಂದರ್ಭದಲ್ಲಿ ಮೀಸಲಾತಿ ಪುನರ್ ಪರಿಶೀಲಿಸುತ್ತಿರುವುದು, ಮತದಾರರಿಗೆ ಕುಕರ್ ಇತ್ಯಾದಿಗಳನ್ನು ರಾಜಾರೋಷವಾಗಿ ಹಂಚುತ್ತಿರು ವುದು, ಯಾವ ಜಾತಿಯವರು ಮುಖ್ಯಮಂತ್ರಿಯಾಗಬೇಕೆಂದು ಜಾತ್ಯತೀತ ರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಚರ್ಚಿಸು ತ್ತಿರುವುದು, ವಿರೋಧ ಪಕ್ಷದವರನ್ನೇ ಗುರಿ ಮಾಡಿ ಆಡಳಿತಾರೂಢ ಸರ್ಕಾರ  ಸುಮ್ಮನಿದ್ದು, ಚುನಾವಣಾ ಸಂದರ್ಭದಲ್ಲಿ ಐಟಿ ರೈಡ್, ಸಿಬಿಐ ಛೂ ಬಿಡುವಿಕೆ ಇತ್ಯಾದಿಗಳ ಮೂಲಕ ಹಣಿದು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಸಗಿದ ಘೋರ ಅಪಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರಚನೆ, ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ನಡೆದು ಬಂದ ಹಾದಿ, ಇಂದಿನ ದುಸ್ಥಿತಿ ಬಗ್ಗೆ ಮತದಾರರೊಂದಿಗೆ ಆತ್ಮಾವಲೋಕನ ಮಾಡಿ ಕೊಳ್ಳುವ ಲೇಖನವಿದು.

ಪ್ರಸ್ತುತ ಕರ್ನಾಟಕ ಉತ್ತರದಿಂದ ದಕ್ಷಿಣದವರೆಗೆ ೭೫೦ ಕಿ. ಮೀ, ಪೂರ್ವದಿಂದ ಪಶ್ಚಿಮದವರೆಗೆ ೪೦೦ ಕಿ.ಮೀ. ಒಟ್ಟು
೧೯೧೭೯೧ ಚ.ಮೀ ವಿಸ್ತೀರ್ಣವುಳ್ಳ ಭಾರತದ ಒಟ್ಟು ವಿಸ್ತೀರ್ಣದಲ್ಲಿ ಶೇ ೫.೮ ರಷ್ಟು ಭೂಪ್ರದೇಶ ಹೊಂದಿರುವ, ಇಡೀ ರಾಷ್ಟ್ರ ದಲ್ಲಿಯೇ ಭೂ ವಿಸ್ತೀರ್ಣದಲ್ಲಿ ೮ನೇ ಸ್ಥಾನ ಪಡೆದ ರಾಜ್ಯವಾಗಿದ್ದು, ತನ್ನದೇ ಆದ ಸುಮಾರು ೨೦೦೦ ವರ್ಷಗಳ ಇತಿಹಾಸವುಳ್ಳ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾದ ಕನ್ನಡ ಭಾಷೆ ಮತ್ತು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ, ಶರವೇಗ ದಲ್ಲಿ ಪ್ರಗತಿ ಸಾಧಿಸುತ್ತಿರುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಪ್ರತಿಷ್ಠಿತ ರಾಜ್ಯವಾಗಿದೆ.

ಕನ್ನಡ ನಾಡಿಗೆ ತನ್ನದೇ ಆದ ಆಡಳಿತದ ಇತಿಹಾಸವಿದ್ದು, ಕದಂಬರಿಂದ ಸ್ಥಾಪಿತವಾದ ಈ ನಾಡು ತದನಂತರ ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿಹೋಗಿ ಗಂಗರು, ಚೋಳರು, ಹೊಯ್ಸಳರು, ರಾಷ್ಟ್ರಕೂಟರು, ಮರಾಠರು, ಆದಿಲ್ ಶಾಹಿ (ಬಿಜಾಪುರ), ಅಂತಿಮವಾಗಿ ಸ್ವಾತಂತ್ರ್ಯ ಪಡೆಯುವಾಗ ಮೈಸೂರು ಸಂಸ್ಥಾನದ ಯದುವಂಶದ ಒಡೆಯರು(೧೩೯೯-೧೯೪೭), ಅನಂತರ ಬಂದ ಚುನಾಯಿತ ಸರ್ಕಾರಗಳು ಇವರುಗಳ ಆಡಳಿತಕ್ಕೊಳಪಟ್ಟು, ಪ್ರತಿಯೊಬ್ಬರ ಆಡಳಿತದಲ್ಲೂ ಪ್ರಗತಿಯನ್ನು ಕಾಣುತ್ತಾ ಬಂದಿದೆ.

ಯದುವಂಶದ ಒಡೆಯರುಗಳ ಆಡಳಿತದಲ್ಲಂತೂ ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ (೧೮೯೪-೧೯೪೦) ಅವಧಿಯಲ್ಲಿ ಇಡೀ ಏಷ್ಯಾಖಂಡದಲ್ಲಿಯೇ ಪ್ರಪ್ರಥಮವಾಗಿ ಪ್ರಾರಂಭವಾದ ಶಿವನ ಸಮುದ್ರದ ವಿದ್ಯುಚ್ಛಕ್ತಿ ಉತ್ಪತ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ಥಾಪನೆ, ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಕೃಷ್ಣರಾಜಸಾಗರ ಅಣೆಕಟ್ಟು, ಮೈಸೂರು ವೈದ್ಯಕೀಯ ಕಾಲೇಜಿನ ಸ್ಥಾಪನೆ, ಭದ್ರಾವತಿಯ ಕಬ್ಬಿಣ ಕಾರ್ಖಾನೆ ಸ್ಥಾಪನೆ ಹೀಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲಿಯೇ ಅಂದು ಪ್ರಪ್ರಥಮ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿಗೆ ಭಾಜನರು.

ರಾಜರ ಆಡಳಿತದಲ್ಲೂ ಪ್ರಜಾಪ್ರತಿನಿಧಿಗಳ ಸಮಿತಿಯನ್ನು ರಚಿಸಿ ಅವರ ಅಭಿಪ್ರಾಯಗಳ ಮೇರೆಗೆ ಆಡಳಿತ ನಡೆಸುತ್ತಿದ್ದ ಮಹಾನ್ ಪ್ರಜಾಪ್ರಭುತ್ವವಾದಿ. ಇವರ ಆಡಳಿತವನ್ನು ಕಂಡ ಮಹಾತ್ಮ ಗಾಂಧಿಯವರು ದೇಶದೆಲ್ಲೆಡೆ ಇಂತಹ ರಾಜರುಗಳಿದ್ದಲ್ಲಿ ದೇಶಕ್ಕೆ ಸ್ವಾತಂತ್ರ್ಯದ ಅಗತ್ಯವೇ ಇಲ್ಲ ಎಂದು ಹೇಳಿದ್ದರು. ಸ್ವಾತಂತ್ರ್ಯ ಬಂದ ನಂತರ ಅಂದು ಮೈಸೂರು ಸಂಸ್ಥಾನದ ಯದುವಂಶದ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ರವರು ಇನ್ನಿತರರಂತೆ ಯಾವ ತಕರಾರನ್ನೂ ಮಾಡದೆ ರಾಜ್ಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಪಡಿಸಿದ ಫಲವಾಗಿ ಕೇಂದ್ರ ಸರ್ಕಾರ ಜಯಚಾಮರಾಜ ಒಡೆಯರ್ ಅವರನ್ನು ಮೈಸೂರು ರಾಜ್ಯದ ಪ್ರಥಮ ರಾಜ್ಯಪಾಲರನ್ನಾಗಿ (೧೯೫೦-೧೯೫೬) ನೇಮಿಸಲಾಯಿತು.

ಕ್ರಿ.ಶ. ೧೨ನೇ ಶತಮಾನದಲ್ಲಿಯೇ ಅನುಭವ ಮಂಟಪ ರಚಿಸಿ ಸಮಾಜದ ಎಲ್ಲ ವರ್ಗಗಳ ಅಭಿಪ್ರಾಯಗಳ ಮಂಡನೆಗೆ ಅವಕಾಶ ಮಾಡಿಕೊಟ್ಟ ಬಸವಣ್ಣನವರ ಪ್ರಯೋಗ ಇಡೀ ಪ್ರಪಂಚಕ್ಕೆ ಕರ್ನಾಟಕ ತೋರಿಸಿಕೊಟ್ಟ ಪ್ರಪ್ರಥಮ ಪ್ರಜಾಪ್ರಭುತ್ವ ಪ್ರಕ್ರಿಯೆಯೇ ಆಗಿದ್ದು, ಭಾರತದ ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಇದು ಭದ್ರವಾದ ಬುನಾದಿ ಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ದಾರ್ಶನಿಕ, ಜಾತ್ಯತೀತ ಹಿನ್ನೆಲೆಯಲ್ಲಿ ರೂಪಿತವಾಗಿರುವ ಕರ್ನಾಟಕದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಜಾತಿ ಆಧಾರದ ಮೇಲೆ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮತದಾರರು ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯವಶ್ಯಕ. ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ಸೃಷ್ಟಿಸಲಾರರು.

ಸ್ವಾತಂತ್ರ್ಯಾನಂತರ ಬಂದ ಮಧ್ಯಂತರ ಕೇಂದ್ರ ಸರ್ಕಾರ ಅಂದಿನ ಮೈಸೂರು ರಾಜ್ಯಕ್ಕೆ ಕೆ.ಚೆಂಗಲ ರೆಡ್ಡಿ ಅವರನ್ನು ಮುಖ್ಯ ಮಂತ್ರಿಯನ್ನಾಗಿ (೧೯೪೭-೧೯೫೨)ನೇಮಿಸಿತು. ೧೯೫೨ರಲ್ಲಿ ನಡೆದ ಮೊಟ್ಟಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಕೆಂಗಲ್ ಹನುಮಂತಯ್ಯನವರು ಮೈಸೂರು ರಾಜ್ಯದ ಪ್ರಪ್ರಥಮ ಚುನಾಯಿತ ಮುಖ್ಯಮಂತ್ರಿ ಯಾದರು (೧೯೫೨-೧೯೫೬).

ರಾಜ್ಯದ ಆಡಳಿತ ನಡೆಸುವುದಕ್ಕಾಗಿ ಬೆಂಗಳೂರಿನಲ್ಲಿ ಜಗತ್ಪ್ರಸಿದ್ಧಿ ವಿನ್ಯಾಸದ ವಿಧಾನಸೌಧವನ್ನು ಕೈದಿಗಳನ್ನು ಉಪಯೋಗಿಸಿ ಕೊಂಡು ಕಟ್ಟಿದ್ದು, ಅದರ ಮುಂಭಾಗದಲ್ಲಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಕೆತ್ತಿಸಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅನುಷ್ಠಾನ ಮತ್ತು ಬೆಳವಣಿಗೆಗಾಗಿ ಸರ್ಕಾರದಲ್ಲಿ ಪ್ರತ್ಯೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಪ್ರಾರಂಭಿಸಿದ್ದು ಮತ್ತು ಮೈಸೂರು ಸಂಸ್ಥಾನದೊಡನೆ ಇಂದಿನ ಉತ್ತರ ಕರ್ನಾಟಕದ ಭಾಗಗಳನ್ನು ಒಗ್ಗೂಡಿಸಿ ಅಖಂಡ
ಕರ್ನಾಟಕ ನಿರ್ಮಾಣ ಮಾಡಲು ವಿಧಾನಸೌಧದಲ್ಲಿ ನಿರ್ಣಯ ಮಾಡಿದ್ದು ಇವು ಕೆಂಗಲ್ ಅವರ ಅವಿಸ್ಮರಣೀಯ ಸಾಧನೆಗಳು.

ಕೆಂಗಲ್ ಅವರ ದಕ್ಷತೆ, ಪ್ರಾಮಾಣೀಕತೆ, ಅದಮ್ಯ ದೇಶಪ್ರೇಮ, ಜಾತ್ಯತೀತ ಮನೋಭಾವ, ಸ್ವಾಭಿಮಾನ ಇವೆಲ್ಲವುಗಳನ್ನು ಅವರ ಆಡಳಿತದಲ್ಲಿ ಕೈಗೊಂಡ ನಿರ್ಧಾರಗಳಿಂದ ಗುರುತಿಸಬಹುದಾಗಿದೆ. ಕರ್ನಾಟಕದ ಏಕೀಕರಣದ ಪರವಾಗಿದ್ದ ಕೆಂಗಲ್
ಹನುಮಂತಯ್ಯನವರ ವಿರುದ್ಧ ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ, ಸ್ವಜಾತಿಯವರಾದ ಸಾಹುಕರ್ ಚೆನ್ನಯ್ಯ, ವೀರಣ್ಣ ಗೌಡ ಮತ್ತಿತರರು ಕರ್ನಾಟಕದ ಏಕೀಕರಣಕ್ಕೆ ಸಮ್ಮತಿ ನೀಡಬಾರದೆಂದು, ಒಂದು ಪಕ್ಷ ಹಾಗಾದಲ್ಲಿ ಅಂದು ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಒಕ್ಕಲಿಗರಿಗಿಂತ ಏಕೀಕರಣದ ನಂತರ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಲಿಂಗಾಯತರು ರಾಜಕೀಯವಾಗಿ ಪ್ರಬಲರಾಗಿ ಒಕ್ಕಲಿಗರ ನಾಯಕತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಮನವರಿಕೆ ಮಾಡಿ ಕೊಡಲು ಯತ್ನಿಸಿದರೂ ಜಾತಿಗಿಂತ ರಾಜ್ಯ ಮುಖ್ಯ ಎಂಬ ನಿಲುವು ತಳೆದ ಪರಿಣಾಮವಾಗಿ ಏಕೀಕರಣ ಸುಲಭ ವಾಯಿತು.

ಇದರಿಂದ ಹತಾಶರಾದವರು ತದ ನಂತರ ಅವರನ್ನು ಮುಖ್ಯಮಂತ್ರಿಯ ಪದವಿಯಿಂದಲೂ ಪದಚ್ಯುತಿಗೊಳಿಸಿದರು(೧೯೫೬). ರಾಜಕೀಯ ಅಧಿಕಾರ ಗಳಿಕೆಗಾಗಿ ಜಾತಿಯ ಹೆಸರನ್ನು ಬಳಸುತ್ತಿರುವ ಇಂದಿನ ರಾಜಕಾರಣಿಗಳಿಗೆ ಕೆಂಗಲ್ಲರ ಆದರ್ಶ ನೆನಪಾಗಬೇಕಲ್ಲವೇ? ವಿಧಾನಸೌಧದ ಕಾಮಗಾರಿ ಕಂಟ್ರ್ಯಾಕ್ಟರ್ ಪಡೆದಿದ್ದ ಗುತ್ತಿಗೆದಾರನಿಗೆ ಕೆಂಗಲ್ ಹನುಮಂತಯ್ಯನವರು ದೇವಸ್ಥಾನದ ಸಮೀಪದಲ್ಲಿ ಹಾಲು ನೀಡಿ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ ಮಾಡುವುದಿಲ್ಲವೆಂದು ಪ್ರಮಾಣ ಮಾಡಿಸಿದ್ದ
ಘಟನೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಮಾದರಿಯಲ್ಲವೇ? ಇಷ್ಟಾದರೂ ಅವರ ಮೇಲೂ ಸಾಬೀತಾಗದ ಭ್ರಷ್ಟಾಚಾರದ ಆರೋಪ ಬಂತು.

ಕೆಂಗಲ್ಲರನ್ನು ಇಳಿಸಿ ಅಲ್ಪಾವಧಿಗೆ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಯಾಗುತ್ತಾರೆ. ಅನಂತರ ನಿಜಲಿಂಗಪ್ಪನವರು ಏಕೀಕರಣಗೊಂಡ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗುತ್ತಾರೆ (೧೯೫೬-೧೯೫೮). ಭಾಷಾವಾರು ಪ್ರಾಂತ್ಯಗಳ ರಚನೆಯಾದ ನಂತರ ೧೯೫೬ರ ನವೆಂಬರ್ ೧ರಂದು ದಕ್ಷಿಣ ಭಾಗದ ಮೈಸೂರು ರಾಜ್ಯ ಮತ್ತು ಉತ್ತರ ಕರ್ನಾಟಕ ಭಾಗಗಳ ಏಕೀಕರಣವಾಗಿ ಅಖಂಡ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದು ೧೯೭೩ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾಗಿದ್ದಾಗ ಕರ್ನಾಟಕ ರಾಜ್ಯ ಎಂದು ನಾಮಕರಣವಾಗುತ್ತದೆ. ಈ ದಿಕ್ಕಿನಲ್ಲಿ ಹಲವಾರು ವಿರೋಧಗಳ ನಡುವೆಯೂ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಸಾಹಿತಿ ಆಲೂರು ವೆಂಕಟರಾಯರು, ಕೆಂಗಲ್ ಹನುಮಂತಯ್ಯನವರು ಮತ್ತು ನಿಜಲಿಂಗಪ್ಪನವರು ಅವಿಸ್ಮರಣೀಯರು.

ಕಾಂಗ್ರೆಸ್ ಇಬ್ಭಾಗವಾದ ನಂತರ ಕೆಂಗಲ್ ಹನುಮಂತಯ್ಯನವರು ಇಂದಿರಾ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು ಇಂದಿರಾ ಗಾಂಧಿಯವರ ಸಚಿವ ಸಂಪುಟದಲ್ಲಿ ರೈಲ್ವೆ ಮಂತ್ರಿಗಳಾಗುತ್ತಾರೆ. ಸ್ವಾಭಿಮಾನಿ ಕೆಂಗಲ್ ಅವರು ದೀರ್ಘಕಾಲ ಸರ್ವಾಧಿ ಕಾರತ್ವದ ಇಂದಿರಾಗಾಂಧಿಯವರ ಜೊತೆಗಿರದೆ ದೂರವಾಗಿ ತಮ್ಮದೇ ಆದ ಸ್ವರಾಜ ಪಕ್ಷವನ್ನು ಸ್ಥಾಪಿಸಿ, ಅದನ್ನು ಕಟ್ಟುವಷ್ಟರಲ್ಲಿಯೇ ನಿಧನರಾಗುತ್ತಾರೆ (೧೯೮೦). ಮೈಸೂರು ರಾಜರ ಶತಮಾನಗಳ ಜನಪರ ಆಡಳಿತದಿಂದಾಗಿ ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕಕ್ಕಿಂತ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿದ್ದು, ಉತ್ತರ ಕರ್ನಾಟಕ ಇಂದಿಗೂ ಅತಿ ಹಿಂದುಳಿದಿರುವುದು ಏಕೀಕರಣದ ನಂತರದ ಆಡಳಿತ ನಡೆಸಿದ ಸರ್ಕಾರಗಳ ದೌರ್ಬಲ್ಯಕ್ಕೆ ಹಿಡಿದ ಕೈಗನ್ನಡಿ.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚಿಸದ, ಅಭಿವೃದ್ಧಿ ಪರ ಯೋಜನೆಗಳನ್ನು ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಇನ್ನೂ ಕಾರ್ಯಗತ ಮಾಡದ ರಾಜಕೀಯ ಪಕ್ಷಗಳು ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಮತಗಳ ಬೇಟೆಗೆ ಮಾತ್ರ ಜಾತಿ ಅಫೀಮು ಕುಡಿಸುತ್ತಿರುವುದು ಇಂದಿನ ರಾಜಕೀಯ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ.

ನಿಜಲಿಂಗಪ್ಪನವರು ಅಪ್ರತಿಮ ದೇಶಪ್ರೇಮಿ, ಶುದ್ಧಹಸ್ತರು. ಅವರು ನಿಧನರಾದಾಗ (೨೦೦೦) ಚಿತ್ರದುರ್ಗದಲ್ಲಿನ ಅವರ ಮನೆಯೊಂದನ್ನು ಬಿಟ್ಟರೆ ಮತ್ತಾವ ಆಸ್ತಿಯೂ ಅವರಿಗಿರಲಿಲ್ಲ. ಇಂದಿನ ರಾಜಕಾರಣಿಗಳು ಕೋಟಿ ಕೋಟಿ ರುಗಳ ಆಸ್ತಿಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿರುವುದನ್ನು ನೋಡಿ ಅವರ ಆತ್ಮ ಎಷ್ಟು ವ್ಯಥೆ ಪಡುತ್ತಿದೆಯೋ?! ಅವರು ಮುಖ್ಯಮಂತ್ರಿ ಯಾಗಿದ್ದಾಗ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತುಕೊಟ್ಟು, ಕೃಷ್ಣಾ ನದಿಗೆ ಆಲಮಟ್ಟಿ ಅಣೆಕಟ್ಟೆ (೧೯೬೩), ಹೇಮಾವತಿ, ಕಬಿನಿ, ಹಾರಂಗಿ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಕರ್ನಾಟಕದ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ.

ಅಂದು ನಿಜಲಿಂಗಪ್ಪನವರಿಗೆ ರಾಷ್ಟ್ರಮಟ್ಟದಲ್ಲಿದ್ದ ಪ್ರಭಾವದಿಂದಾಗಿ ಕೇಂದ್ರ ಸರ್ಕಾರ ಅಥವಾ ತಮಿಳುನಾಡಿನಿಂದ ಯಾವುದೇ ತಕರಾರಿಲ್ಲದೆ ಈ ಯೋಜನೆಗಳು ಕಾರ್ಯಗತಗೊಂಡವು. ಅಂದು ಈ ನೀರಾವರಿ ಯೋಜನೆಗಳು ಕಾರ್ಯಗತವಾಗ
ದಿದ್ದರೆ ಇಂದು ಆಗುವ ಸಂಭವವೇ ಇರುತ್ತಿರಲಿಲ್ಲ! ಅನಂತರದ ದಿನಗಳಲ್ಲಿ ನಿಜಲಿಂಗಪ್ಪನವರು ನ್ಯಾಷನಲ್ ಕಾಂಗ್ರೆಸ್‌ನ
ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಪ್ರಪ್ರಥಮ ರಾಷ್ಟ್ರೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅನಂತರ  ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲರು (೧೯೬೮-೧೯೭೧) ನೀರಾವರಿ ತಜ್ಞರಾದ ಹೆಚ್.ಎಂ. ಚೆನ್ನಬಸಪ್ಪನವರ ಜೊತೆ ಗೂಡಿ ಈ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ೧೯೬೯ರಲ್ಲಿ ಇಬ್ಭಾಗವಾದ ನಂತರ ರಾಜ್ಯದ ಕಾಂಗ್ರೆಸ್ ಕೂಡ ಇಬ್ಭಾಗವಾಗಿ ವೀರೇಂದ್ರ ಪಾಟೀಲ್ ಅವರ ಸರ್ಕಾರ ಪತನವಾಯಿತು. ಅಷ್ಟೊತ್ತಿಗಾಗಲೆ ನಿಜಲಿಂಗಪ್ಪ ಮತ್ತು ಕಾಂಗ್ರೆಸ್‌ನಿಂದ ದೂರ ಸರಿದು ತಮ್ಮದೇ ಆದ ಜನತಾ ಪಕ್ಷವನ್ನು ರಚಿಸಿ ವಿಧಾನ ಸಭೆಯಲ್ಲಿ ಶಾಸಕರನ್ನು ಪಡೆದಿದ್ದ ಸಾಹುಕಾರ್ ಚೆನ್ನಯ್ಯನವರು ಮತ್ತು ೧೯೬೨ರಿಂದ ಶಾಸಕರಾಗಿದ್ದ ಡಿ. ದೇವರಾಜ ಅರಸ್ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಇಂದಿರಾಗಾಂಧಿ ಅವರ ಬಣದ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದು ೧೯೭೨ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಿ ಡಿ.ದೇವರಾಜ ಅರಸು ಅವರು ಕರ್ನಾಟಕದ ಪ್ರಪ್ರಥಮ ಅಲ್ಪಸಂಖ್ಯಾತ ವರ್ಗದ ಮುಖ್ಯಮಂತ್ರಿಯಾಗಿ ಪೂರ್ಣಾವಧಿಗೆ ಅಧಿಕಾರ ನಡೆಸಿದ (೧೯೭೨-೧೯೭೭) ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅನಂತರ ೧೯೭೭ರಲ್ಲಿ ನಡೆದ ಚುನಾವಣೆಯಲ್ಲೂ ಜಯಗಳಿಸಿ ೨ನೇ ಬಾರಿಗೆ ಅಪೂರ್ಣ ಅವಧಿಗೆ (೧೯೭೮ ರಿಂದ ೧೯೮೦) ಅರಸು ಮುಖ್ಯಮಂತ್ರಿಗಳಾಗಿ ದೀರ್ಘಕಾಲಾವಧಿಗೆ ಮುಖ್ಯಮಂತ್ರಿಗಳಾದ ಪ್ರಥಮ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಇಂದಿಗೂ ಆ ದಾಖಲೆ ಸ್ಥಿರವಾಗಿಯೇ ಇದೆ. ಕರ್ನಾಟಕದ ಇತಿಹಾಸದಲ್ಲಿ ದೇವರಾಜ ಅರಸು ಅವರ ಆಡಳಿತ ಹಲವಾರು ಜನಪರ
ಕಾರ್ಯಗಳ ಅನುಷ್ಠಾನಗಳ ಪ್ರಥಮಗಳಿಗೆ ನಾಂದಿಯಾಯಿತು.

(ಮುಂದುವರಿಯುವುದು) 

error: Content is protected !!