Wednesday, 17th July 2024

ಸನಾತನ ಧರ್ಮದ ಧ್ರುವತಾರೆ, ನಿರ್ಮಲ ಮನಸ್ಸಿನ ಸಂತ

ಗುರುವಂದನೆ

ನಂಜೇಗೌಡ ನಂಜುಂಡ

ಐಐಟಿ ಪದವೀಧರರಾಗಿದ್ದ ಶ್ರೀಗಳಿಗೆ ವಿಜ್ಞಾನಿಯಾಗಿ ಉದ್ಯೋಗ ಲಭಿಸಿದರೂ ಅವರ ಮನಸ್ಸು ಪಾರಮಾರ್ಥಿಕ ಪ್ರಪಂಚದತ್ತ ಹರಿಯಿತು, ಸಮಾಜ ಸೇವೆಯೆಡೆಗೆ ತುಡಿಯಿತು. ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದರೆ, ಸ್ವಾಮಿ ನಿರ್ಮಲಾನಂದರು ಆ ಚಿನ್ನದ ಗರಿಗೆ ಮತ್ತಷ್ಟು ಸಾತ್ವಿಕ ಲೇಪವನ್ನಿತ್ತು ಗಟ್ಟಿಗೊಳಿಸುತ್ತಿದ್ದಾರೆ.

ದೇಶ ಕಂಡ ಏಕೈಕ ಸಂತ ವಿಜ್ಞಾನಿ, ಅನ್ನ ಮತ್ತು ಶಿಕ್ಷಣ ದಾಸೋಹಿ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ೭೨ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ೧೧ನೇ ವರ್ಷದ ಪಟ್ಟಾಭಿಷೇಕದ ಸಂಭ್ರಮದ ದಿನ ಇಂದು (ಫೆ.೨೦). ಪ್ರಪಂಚದ ಉದ್ದಗಲಕ್ಕೂ ನಿರಂತರವಾಗಿ ಸೇವೆ ಸಲ್ಲಿಸಿರುವ ಶ್ರೀಗಳ ಕಾರ್ಯಚಟುವಟಿಕೆಗಳು ಅನನ್ಯ, ಅಪ್ರತಿಮ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಸುಪ್ರಸಿದ್ಧವಾಗಿದೆ. ಧರ್ಮಕ್ಷೇತ್ರ, ತಪೋಭೂಮಿ ಎಂದೇ ಖ್ಯಾತವಾಗಿರುವ ಶ್ರೀ ಕ್ಷೇತ್ರವು ಸುಮಾರು ೨೦೦೦ ವರ್ಷ ಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯಾನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿಕೊಂಡ ಪರಮಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ಮಠವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದರು. ತಮ್ಮ ನಂತರ, ಅಂಧ ಮಕ್ಕಳ ಶಾಲೆ ಸೇರಿದಂತೆ ೫೦೦ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹೀಗೆ ಹತ್ತು ಹಲವು ಸಂಸ್ಥೆಗಳನ್ನೂ, ಶ್ರೀಕ್ಷೇತ್ರದಲ್ಲಿರುವ ಅದ್ಭುತ ದೇವಾಲಯ, ಮಿಕ್ಕ
ಆಸ್ತಿಪಾಸ್ತಿಗಳು ಹಾಗೂ ಭಕ್ತಾದಿಗಳ ನಿಗಾ ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನೂ ಶ್ರೀ ನಿರ್ಮಲಾನಂದ ನಾಥರಿಗೆ ಒಪ್ಪಿಸಲು ಬಯಸಿದ್ದರು ಹಿರಿಯ ಶ್ರೀಗಳು.

ಅವರ ಮುಂದಾಲೋಚನೆಗೆ ಚ್ಯುತಿ ಬಾರದ ರೀತಿಯಲ್ಲಿ ಶ್ರೀ ನಿರ್ಮಲಾನಂದನಾಥರು ಈ ಎಲ್ಲ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅತ್ಯಂತ ಪ್ರೀತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಬಾಲ್ಯಜೀವನ

“Success is the journey of determination, result of Hard Work, learning from failure, Loyalty and Persistence’ಎನ್ನುವಂತೆ, ಶ್ರೀಗಳು ಬಾಲ್ಯ ದಲ್ಲಿ ಅನುಭವಿಸಿದ ನೋವು, ಸಂಕಷ್ಟಗಳು ಹೇಳತೀರದು. ಇಷ್ಟಾಗಿಯೂ ಧೃತಿಗೆಡದೆ ಮೇಲೆದ್ದು ಬಂದ ಶ್ರೀಗಳ ಬದುಕು ಸರ್ವಕಾಲಕ್ಕೂ ಮಾದರಿ ಯಾಗಿದೆ. ೧೯೬೯ರ ಜುಲೈ ೨೦ರಂದು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೀಕನಹಳ್ಳಿಯಲ್ಲಿ ನರಸೇ ಗೌಡ ಮತ್ತು ನಂಜಮ್ಮ ದಂಪತಿಯ ಮಗನಾಗಿ ಜನಿಸಿದ ನಿರ್ಮಲಾ ನಂದನಾಥರ ಪೂವಾಶ್ರಮದ ಹೆಸರು ನಾಗರಾಜ. ತುಮಕೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದ ಇವರು ತರುವಾಯದಲ್ಲಿ ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ, ಮದ್ರಾಸ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಯಲ್ಲಿ ಎಂ.ಟೆಕ್ ಪದವಿ ಪಡೆದರು.

ಲೋಕಕಲ್ಯಾಣಕ್ಕಾಗಿ ಸಂತರಾದ ವಿಜ್ಞಾನಿ ಐಐಟಿ ಪದವೀಧರರಾಗಿದ್ದ ಶ್ರೀಗಳಿಗೆ ಪುಣೆಯ ಕೇಂದ್ರ ಜಲಶಕ್ತಿ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ
ಉದ್ಯೋಗ ಲಭಿಸಿತು. ಆದರೆ ಅವರ ಮನಸ್ಸು ಲೌಕಿಕಕ್ಕಿಂತಲೂ ಪಾರಮಾರ್ಥಿಕ ಪ್ರಪಂಚದತ್ತ ಹರಿಯಿತು, ಸಮಾಜ ಸೇವೆಯೆಡೆಗೆ ತುಡಿಯಿತು. ಬಾಲಗಂಗಾಧರ ನಾಥ ಸ್ವಾಮಿಗಳು ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದರೆ, ಸ್ವಾಮಿ ನಿರ್ಮಲಾನಂದರು ಆ ಚಿನ್ನದ ಗರಿಗೆ ಮತ್ತಷ್ಟು ಸಾತ್ವಿಕ ಲೇಪವನ್ನಿತ್ತು ಗಟ್ಟಿಗೊಳಿಸುತ್ತಿದ್ದಾರೆ. ಪೀಠಾಧ್ಯಕ್ಷರಾದ ಕೆಲವೇ ವರ್ಷಗಳಲ್ಲಿ ತಮಿಳುನಾಡಿನ ರಾಮೇಶ್ವರಂ, ಕಂಬಂ, ಉತ್ತರ ಪ್ರದೇಶದ ನೈಮಿಷಾರಣ್ಯ, ಮಧ್ಯಪ್ರದೇಶದ ಚಿತ್ರಕೂಟ, ಅಮೆರಿಕದ ನ್ಯೂಜೆರ್ಸಿ ಮೊದಲಾದೆಡೆಗಳಲ್ಲಿ ಶ್ರೀಕ್ಷೇತ್ರದ ಮಠಗಳನ್ನು ತೆರೆದ ಸ್ವಾಮಿ ನಿರ್ಮಲಾನಂದರು, ತನ್ಮೂಲಕ ಧರ್ಮದ ಸೇವೆಯನ್ನು ಪ್ರಪಂಚದಾದ್ಯಂತ ವಿಸ್ತರಿಸಿ, ಜನರನ್ನು ಸನ್ಮಾರ್ಗದೆಡೆಗೆ ಕರೆದುಕೊಂಡು ಹೋಗುವ ಕಾಯಕವನ್ನು ಮಾಡುತ್ತಿ ದ್ದಾರೆ.

ಸತ್ಸಂಗದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧರ್ಮದ ಕುರಿತಾದ ಒಳಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ‘ಗಿರಿ ಪ್ರದಕ್ಷಿಣೆ’ ಎಂಬ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳ ಹುಣ್ಣಿಮೆಯಂದು ಮಾನವ ಹಾಗೂ ಚಂದಿರನ ನಡುವೆ ಅಂತರಾಳದ ಸಂಬಂಧವನ್ನು ಬೆಸೆಯುವ ಮೂಲಕ ಸನಾತನ ಧರ್ಮದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ.

ಅನಾಥ ಮಕ್ಕಳ ಆರಾಧ್ಯದೈವ 
ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯನ್ನಾಗಿ ಪರಿವರ್ತಿಸಿ ಮತ್ತಷ್ಟು ಶೋಭಿಸುವಂತೆ ಮಾಡಲು ಶ್ರೀಗಳು ಹಗಲಿರು ಳೂ ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಜಿಎಸ್ ಆಯುರ್ವೇದಿಕ್ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಿಜಿಎಸ್ ಎಂಜಿನಿಯರಿಂಗ್ ಕಾಲೇಜು, ಮೈಸೂರು, ಮಾಲೂರು, ಮಂಗಳೂರಿನಲ್ಲಿ ಪದವಿ ಕಾಲೇಜುಗಳನ್ನು ತೆರೆದು, ಬಡವರು ಮತ್ತು ರೈತಾಪಿ ಜನರ ಮಕ್ಕಳಿಗೆ ಶಿಕ್ಷಣ ನೀಡುವ ಪುಣ್ಯ ಕಾರ್ಯವನ್ನು ಶ್ರೀಗಳು ನೆರವೇರಿಸಿದ್ದಾರೆ. ಇದರ ಜತೆಯಲ್ಲಿ ಬಡ, ಪ್ರತಿಭಾವಂತ, ಅನಾಥ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಶ್ರೀಗಳು ಉಚಿತ ಶಾಲೆ ತೆರೆದು ಸಾವಿರಾರು ಮಕ್ಕಳಿಗೆ ಪ್ರತಿವರ್ಷ ಜ್ಞಾನಧಾರೆ ಎರೆಯುತ್ತಿದ್ದಾರೆ.

ಬಿಜಿಎಸ್ ವಿದ್ಯಾನಿಧಿಯ ಮೂಲಕ ಪ್ರತಿವರ್ಷ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ತನ್ಮೂಲಕ ಅವರ ಭವಿಷ್ಯ ರೂಪಿಸುವ ಕಾಯಕದಲ್ಲಿ ಶ್ರೀಗಳು ಅನನ್ಯವಾಗಿ ತೊಡಗಿಸಿಕೊಂಡಿದ್ದಾರೆ.

ಮಾನವೀಯ ಮೌಲ್ಯದ ಸಂತ
ಅತ್ಯಂತ ಚಿಕ್ಕ ವಯಸ್ಸಿನಿಂದಲೇ ರೈತರ ನೋವು, ಕಷ್ಟಗಳನ್ನು ನೋಡಿರುವ ಶ್ರೀಗಳು ನಾಡಿನಾದ್ಯಂತದ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಾ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜತೆಗೆ, ಶ್ರೀಮಠದ ಸಂಸ್ಥೆಗಳಲ್ಲಿ ಅರ್ಹರಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಬಾಳಿಗೆ ನಂದಾದೀಪ ವಾಗಿದ್ದಾರೆ. ಸದಾ ರೈತರ ಪರವಾಗಿ ನಿಲ್ಲುವ ಶ್ರೀಗಳು ಕಾವೇರಿ ನೀರಿನ ಸಮಸ್ಯೆ, ರೈತರ ಆತ್ಮಹತ್ಯೆ ಮುಂತಾದ ಸಂದರ್ಭಗಳಲ್ಲಿ ರೈತ ಕುಟುಂಬಿಕರ
ಜತೆಯಲ್ಲಿ ನಿಂತು ಅವರಿಗೆ ಆಸರೆಯಾಗಿದ್ದಾರೆ. ಕೋವಿಡ್ ಮಹಾಮಾರಿಯಿಂದಾಗಿ ಜನರ ಬದುಕು ಅಲ್ಲೋಲ ಕಲ್ಲೋಲವಾದಾಗ ಪ್ರತಿ ಹಳ್ಳಿ ಗಳಿಗೆ ಭೇಟಿ ನೀಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಾ, ಪ್ರತಿ ಮನೆ ಗಳಿಗೆ ಉಚಿತ ದವಸ-ಧಾನ್ಯಗಳು, ಅಗತ್ಯ ಚಿಕಿತ್ಸೆಯನ್ನು ಒದಗಿಸುತ್ತ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದು ಶ್ರೀಗಳ ಹೆಗ್ಗಳಿಕೆ. ರೈತರು ಮಕ್ಕಳ ಮದುವೆಗಾಗಿ, ತಮ್ಮಲ್ಲಿರುವ ಅಲ್ಪಪ್ರಮಾಣದ ಜಮೀನುಗಳನ್ನು ಮಾರುವುದನ್ನು ಕಣ್ಣಾರೆ ಕಂಡ ಶ್ರೀಗಳು ೨೦೧೪ರಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡ ಕುಟುಂಬ ಗಳ ಹಿತರಕ್ಷಕ ಎನಿಸಿಕೊಂಡಿದ್ದಾರೆ.

ಕಲೆಗೆ ಪ್ರೋತ್ಸಾಹ ನೀಡುವ ಸದಾಶಯದೊಂದಿಗೆ ನಾಡಿನಾದ್ಯಂತ ಇರುವ ಕಲೆಗಾರರಿಗೆಂದು ‘ಚುಂಚಾದ್ರಿ ಕಲೋತ್ಸವ’ವನ್ನು ಹಮ್ಮಿಕೊಂಡು, ಅವರ ಕಲಾಪ್ರದರ್ಶನಕ್ಕೆ ಭವ್ಯವೇದಿಕೆಯನ್ನು ರೂಪಿಸಿಕೊಟ್ಟಿದ್ದಾರೆ. ಸ್ವತಃ ವಿಜ್ಞಾನಿಗಳಾಗಿರುವ ಶ್ರೀಗಳು ಜ್ಞಾನ-ವಿಜ್ಞಾನ- ತಂತ್ರಜ್ಞಾನ ಮೇಳವನ್ನು ಹಮ್ಮಿಕೊಂಡು, ಅತ್ಯಾಧುನಿಕ ವಿಚಾರ ಧಾರೆಗಳ ಬಗ್ಗೆ ಚರ್ಚಿಸಲು ಹಾಗೂ ಪರಿಹಾರ ಕಂಡು ಕೊಳ್ಳಲು ಪ್ರತಿವರ್ಷ ವಿಚಾರ ಸಂಕಿರಣಗಳು, ಕಾರ್ಯಾ
ಗಾರಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಅಪ್ರತಿಮ ಸೇವೆ ಮಾಡಿರುವ ಸಾಧಕರನ್ನು ಪ್ರತಿವರ್ಷ ಗುರುತಿಸಿಪ್ರೋತ್ಸಾಹಿಸುವ ಕೆಲಸವನ್ನು ಶ್ರೀಗಳು ೨೦೧೬ರಿಂದ ನಡೆಸಿ ಕೊಂಡು ಬರುತ್ತಿದ್ದಾರೆ. ಸಾಧಕರ ಅಪ್ರತಿಮ ಸಮಾಜ ಸೇವೆಯನ್ನು ಗುರುತಿಸಿ ‘ಚುಂಚಾದ್ರಿ’ ಪ್ರಶಸ್ತಿಯನ್ನು, ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಯನ್ನು ಗುರುತಿಸಿ ‘ವಿಜ್ಞಾನಂ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಸದ್ದುಗದ ಲವಿಲ್ಲದ ಸಾಧನೆ
ಯಾವುದೇ ಪ್ರಚಾರ ಬಯಸದೆ ಕಾರ್ಯನಿರ್ವಹಿಸುವುದು ಶ್ರೀಗಳ ವೈಖರಿ. ಕರ್ನಾಟಕ ಸರಕಾರವು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲು ಕಾರಣೀಭೂತ ರಾಗಿರುವ ಶ್ರೀಗಳು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡರ ಅಧ್ಯಯನ ಪೀಠ ರಚಿಸಲು ಹಾಗೂ ಅವರ ಸಾಧನೆಗಳು ಮುಂದಿನ ತಲೆಮಾರಿಗೆ ಚಿರಸ್ಥಾಯಿಯಾಗಿ ಉಳಿಯುವಂತಾಗಲು ಶ್ರಮಿಸಿದ್ದಾರೆ. ೧೦೮ ಅಡಿ ಎತ್ತರದ ‘”Statue of Prosperity’ ಎಂಬ ಕೆಂಪೇಗೌಡರ ವಿಶ್ವಪ್ರಸಿದ್ಧ ಪ್ರತಿಮೆಯ ಸ್ಥಾಪನೆಯ ಹಿಂದಿನ ದಿವ್ಯಶಕ್ತಿ ಯಾಗಿ ಕಾರ್ಯನಿರ್ವಹಿಸಿದ್ದಾರೆ. ಒಕ್ಕಲಿಗ ಜನಾಂಗಕ್ಕಿರುವ ಮೀಸಲಾತಿಯನ್ನು ಶೇ.೨ರಿಂದ ೪ಕ್ಕೆ ಹೆಚ್ಚಿಸಲು ಶ್ರಮಿಸಿದ್ದಾರೆ. ಕೇಂದ್ರ ಸರಕಾರ ಪ್ರಮುಖ ಯೋಜನೆ ಗಳಲ್ಲಿ ಒಂದಾದ ‘ಸ್ಕಿಲ್ ಇಂಡಿಯಾ’ದ ಮಾರ್ಗದರ್ಶಕರಾಗಿ, ‘ಸ್ವಚ್ಛಭಾರತ ಅಭಿಯಾನ’ದ ರಾಯಭಾರಿಯಾಗಿ, ಇಸ್ರೋ ಸಂಸ್ಥೆಯ ತಾಂತ್ರಿಕ ಸಲಹೆಗಾರರಾಗಿಯೂ ಪಾಲ್ಗೊಳ್ಳುವ ಮೂಲಕ ಶ್ರೀಗಳು ದೇಶಸೇವೆಯಲ್ಲಿ
ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಭಾರತೀಯರ ಕನಸಿನ ಕೂಸಾದ ಅಯೋಧ್ಯೆಯ ವಿಶ್ವಪ್ರಸಿದ್ಧ ರಾಮಮಂದಿರ ಸ್ಥಾಪನೆಯ ಮುಖ್ಯ ಸಲಹೆಗಾರರ ಸಮಿತಿಯ ಸದಸ್ಯರಾಗಿ ಮಹತ್ತರ ಕೊಡುಗೆಯನ್ನು ಶ್ರೀಗಳು ನೀಡಿದ್ದಾರೆ. ಸಮಾಜಕ್ಕೆ ಶ್ರೀ ನಿರ್ಮಲಾನಂದರು ಮಾಡಿರುವ ಸೇವೆಗಳನ್ನು ಪರಿಗಣಿಸಿ ಮೈಸೂರು ವಿಶ್ವ ವಿದ್ಯಾಲಯವು ೨೦೧೬ರ ಏಪ್ರಿಲ್ ೩೦ರಂದು ಶ್ರೀಗಳಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿತು. ೨೦೨೩ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ. ಪರಮಪೂಜ್ಯ  ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಪ್ರಾರಂಭಿಸಿದ, ಸಮಾಜದ ಎಲ್ಲ ವರ್ಗದವರಲ್ಲಿ, ವಿಶೇಷವಾಗಿ ದೀನ-ದಲಿತರಲ್ಲಿ ಸೌಹಾರ್ದ ಮತ್ತು ಜ್ಞಾನದ ಸಂದೇಶವನ್ನು ಹರಡುವ ಕೆಲಸವನ್ನು ಶ್ರೀ ನಿರ್ಮಲಾನಂದನಾಥ
ಸ್ವಾಮಿಯವರು ಪಟ್ಟುಬಿಡದೆ ಮುಂದುವರಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.

(ಲೇಖಕರು ಒಕ್ಕಲಿಗ ಯುವ ಬ್ರಿಗೇಡ್ ಮತ್ತು
ಎನ್‌ಆರ್‌ಐ ಒಕ್ಕಲಿಗ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷರು)

Leave a Reply

Your email address will not be published. Required fields are marked *

error: Content is protected !!