Tuesday, 22nd October 2024

ತಾಯಿಯ ಗರ್ಭದಲ್ಲಿನ ಶಿಶುವಿಗೇ ಶಸ್ತ್ರಕ್ರಿಯೆ !

ವೈದ್ಯ ವೈವಿಧ್ಯ

drhsmohan@gmail.com

ಗರ್ಭಸ್ತ ಶಿಶುವಿನ ವಿವಿಧ ಅಂಗಗಳ ಆರೋಗ್ಯ ಮತ್ತು ವಿಕೃತಿಯ ಬಗ್ಗೆ ಕಣ್ಣೆದುರೇ ನೋಡುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್‌ನಿಂದ ಲಭ್ಯವಾಗಿದೆ. ತಾಯಿಯ ಗರ್ಭದಲ್ಲಿರುವ ಆಮ್ನಿಯೋಟಿಕ್ ದ್ರವದಲ್ಲಿ ತೇಲಾಡುವ ಮಗುವಿನ ಜೀವಕೋಶಗಳನ್ನು ವಿವರವಾಗಿ ಪರೀಕ್ಷಿಸಲು ಆಮ್ನಿಯೋಸಿಂಟ ಸೀಸ್ ಪರೀಕ್ಷೆಯಿಂದ ಸಾಧ್ಯವಾಗಿದೆ.

ಗರ್ಭಿಣಿ ಮಹಿಳೆಗೆ ವಿವಿಧ ಕಾರಣಗಳಿಗಾಗಿ ಶಸ್ತ್ರಕ್ರಿಯೆ ನಡೆಸುವುದು ಎಲ್ಲರಿಗೆ ಗೊತ್ತಿದೆ. ಆದರೆ ಆಕೆಯ ಉದರದಲ್ಲಿರುವ ಶಿಶುವಿಗೇ ಶಸಕ್ರಿಯೆ
ನಡೆಸುವ ಬಗ್ಗೆ ಕೇಳಿದ್ದೀರಾ? ಅಂತಹ ಒಂದು ಅಪರೂಪದ ಶಸ್ತ್ರಕ್ರಿಯೆ ಇತ್ತೀಚೆಗೆ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನ್
ಆಸ್ಪತ್ರೆಯಲ್ಲಿ ನಡೆಯಿತು. ತಾಯಿಯ ಗರ್ಭದಲ್ಲಿರುವ ಶಿಶುವಿನ ದ್ರಾಕ್ಷಿ ಗಾತ್ರದ ಪುಟ್ಟ ಹೃದಯದಲ್ಲಿರುವ ಊನವನ್ನು ಸರಿಪಡಿಸಲು ಈ ಶಸಕ್ರಿಯೆ ಯಶಸ್ವಿಯಾಗಿ ಜರುಗಿಸಿದರು. ೨೮ ವರ್ಷದ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಸೇರಿದಾಗ ಆಕೆಗೆ ಮೊದಲು ಮೂರು ಬಾರಿ ಗರ್ಭಪಾತವಾಗಿತ್ತು. ಈಗ ನಾಲ್ಕನೇ ಬಾರಿ ಗರ್ಭ ಧರಿಸಿದಾಗ ಆಕೆಯ ಗರ್ಭಸ್ತ ಶಿಶುವಿಗೆ ಹೃದಯದ ಕವಾಟದಲ್ಲಿನ ತೊಂದರೆಯನ್ನು ವೈದ್ಯರು ಅಲ್ಟ್ರಾ ಸೌಂಡ್ ಸ್ಕಾ ನಿಂಗ್‌ ನಲ್ಲಿ ಗುರುತಿಸಿದರು. ಈ ವಿಷಯವನ್ನು ಆಕೆಗೆ ಮತ್ತು ಅವಳ ಪತಿಗೆ ತಿಳಿಸಿದಾಗ ಅವರು ಆಕೆಯ ಗರ್ಭ ಮುಂದುವರಿಕೆಯ ಬಗ್ಗೆ ಇಚ್ಛೆ ವ್ಯಕ್ತಪಡಿಸಿ ದರು.

ಮಗು ಜನಿಸಿದಾಗ ಹೃದಯದಲ್ಲಿನ ತೊಂದರೆಯಿಂದ ಮಗುವಿನ ಹೃದಯ ಸರಿಯಾಗಿ ಬೆಳವಣಿಗೆಯಾಗದಿರಬಹುದು. ಹಾಗಾಗಿ ಮಗು ತಾಯಿಯ ಉದರದಲ್ಲಿರುವಾಗಲೇ ಶಸ್ತ್ರಕ್ರಿಯೆ ಮಾಡಬೇಕಾಗಬಹುದೇನೋ ಎಂದು ವೈದ್ಯರು ತಿಳಿಸಿದಾಗ ಅದಕ್ಕೂ ತಮ್ಮ ಒಪ್ಪಿಗೆಯನ್ನು ಕೊಟ್ಟರು.
ಆ ಶಿಶುವಿನ ಹೃದಯದ ಕವಾಟವು ಮುಚ್ಚಿಕೊಂಡು ಬಿಟ್ಟಿತ್ತು. ಆ ತೊಂದರೆಯನ್ನು ಹಾಗೆಯೇ ಬಿಟ್ಟರೆ ಮಗುವಿನ ಹೃದಯ ಸರಿಯಾಗಿ ಬೆಳವಣಿಗೆ ಹೊಂದದೇ ಹೃದಯದ ಊನ ಶಾಶ್ವತವಾಗಿ ಇರುವ ಸಾಧ್ಯತೆ ಗಮನಿಸಿ ವೈದ್ಯರು ಶಿಶು ಜನಿಸುವ ಮೊದಲೇ ಶಸ್ತ್ರಕ್ರಿಯೆ ಮಾಡಲು ಬಯಸಿದರು.

ತಾಯಿಯ ಗರ್ಭದಲ್ಲಿನ ಶಿಶುವಿನ ಹೃದಯದ ಕೆಲವು ಗಂಭೀರ ಕಾಯಿಲೆಗಳನ್ನು ಗರ್ಭದಲ್ಲಿಯೇ ನಿಖರವಾಗಿ ಈಗ ಪತ್ತೆ ಹಚ್ಚಲು ಸಾಧ್ಯವಿದೆ.
ಕೆಲವೊಮ್ಮೆ ಗರ್ಭಸ್ತ ಶಿಶುವಿಗೇ ಅಂತಹ ಕಾಯಿಲೆಗಳಿzಗ ಚಿಕಿತ್ಸೆ ಮಾಡಿದರೆ ಮಗು ಜನಿಸಿದ ಮೇಲೆ ಅಂತಹ ಸಮಸ್ಯೆ ದೂರವಾಗಬಹುದು ಹಾಗೂ ಮಗುವಿನಲ್ಲಿ ಸಹಜ ಬೆಳವಣಿಗೆ ಉಂಟಾಗುತ್ತದೆ ಎಂದು ಚಿಕಿತ್ಸೆ ಮಾಡಿದ ಏಮ್ಸ ವೈದ್ಯರ ಅಭಿಪ್ರಾಯ. ಗರ್ಭಸ್ಥ ಶಿಶುವಿನ ಹೃದಯದ ಕವಾಟದಲ್ಲಿನ
ಅಡಚಣೆಯನ್ನು ಬಲೂನ್ ಡೈಲಟೇಶನ್ ಶಸ್ತ್ರಕ್ರಿಯೆ ಮಾಡಿ ಸರಿಪಡಿಸಿದರು.

ಗಮನಿಸಬೇಕಾದ ವಿಚಾರ -ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್‌ನಲ್ಲಿ ವೀಕ್ಷಣೆ ಮಾಡುತ್ತಿರುವಂತೆಯೇ ಈ ಶಸ್ತ್ರಕ್ರಿಯೆಯನ್ನು ವೈದ್ಯರು ಕೈಗೊಂಡರು. ತಾಯಿಯ ಹೊಟ್ಟೆಗೆ ಒಂದು ಸೂಜಿ ತೂರಿಸಿ ಶಿಶುವಿನ ಹೃದಯವನ್ನೇ ಪ್ರವೇಶಿಸಿದರು. ಬಲೂನ್ ಕೆಥರ್ಟ ಎಂಬ ಉಪಕರಣ ಉಪಯೋಗಿಸಿ ಅಡಚಣೆ ಹೊಂದಿದ ಕವಾಟವನ್ನು ತೆರೆಯುವಂತೆ ಮಾಡಿ ರಕ್ತ ಸಂಚಾರವನ್ನು ಹೆಚ್ಚಿಸಿದರು. ಹೀಗೆ ಮಾಡಿದ್ದರಿಂದ ರಕ್ತ ಪೂರೈಕೆ ಸರಿಯಾಗಿ, ಬೆಳವಣಿಗೆ ಇಲ್ಲದ ಹೃದಯವು ಉತ್ತಮ ರೀತಿಯಿಂದ ಬೆಳವಣಿಗೆಯಾಗುತ್ತದೆ. ಈ ತರಹದ ಶಸ ಕ್ರಿಯೆಯನ್ನು ತುಂಬಾ ಎಚ್ಚರಿಕೆಯಿಂದ
ಮಾಡ ಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಶಿಶುವಿನ ಜೀವಕ್ಕೆ ಅಪಾಯವಾಗಬಹುದು.

ಹಾಗೆಯೇ ಅತೀ ಕಡಿಮೆ ಸಮಯದಲ್ಲಿ ಶಸ್ತ್ರಕ್ರಿಯೆ ಮಾಡಿ ಮುಗಿಸಬೇಕು. ಏಕೆಂದರೆ ಈ ಶಸ್ತ್ರಕ್ರಿಯೆಯಲ್ಲಿ ಹೃದಯದ ಮುಖ್ಯ ಭಾಗವನ್ನು ಸೂಜಿ ಯಿಂದ ಪಂಕ್ಚರ್ ಮಾಡಲಾಗುತ್ತದೆ. ಈ ಶಸ್ತ್ರಕ್ರಿಯೆಗೆ ಅವರು ತೆಗೆದುಕೊಂಡ ಸಮಯ ಕೇವಲ ೯೦ ಸೆಕೆಂಡ್‌ಗಳು ಅಂದರೆ ಒಂದೂವರೆ ನಿಮಿಷ. ಈ ತಂಡದಲ್ಲಿ ಇಂಟರ್ ವೆನ್ಶನಲ್ ಹೃದಯ ತಜ್ಞರು, ಗರ್ಭಸ್ತ ಶಿಶುವಿನ ತಜ್ಞ ವೈದ್ಯರು ಮತ್ತು ಅರಿವಳಿಕೆ ವೈದ್ಯರುಗಳು ಇದ್ದರು. ಗರ್ಭಸ್ತ ಶಿಶುವಿಗೇ ಶಸ್ತ್ರಕ್ರಿಯೆ ಮಾಡುವ ಈ ವಿಧಾನ ಕಳೆದ ೩೦-೩೫ ವರ್ಷಗಳಲ್ಲಿ ಅಲ್ಲಲ್ಲಿ ಮಾಡಲಾಗುತ್ತಿದೆ. ೧೯೯೦ ರ ದಶಕದಲ್ಲಿ ಕೈಗೊಂಡ ಈ ಶಸ್ತ್ರಕ್ರಿಯೆ ಗಮನಿಸಿ. ಆಕೆ ೨೫ ರ ಯುವತಿ.

ಮದುವೆಯಾಗಿ ಮೂರು ವರ್ಷಗಳ ನಂತರ ಅವಳಿ ಗರ್ಭ ಧರಿಸಿದ್ದಳು. ವೈದ್ಯರು ಅಲ್ಟ್ರಾ ಸೌಂಡ್ ಸೋನೋಗ್ರಫಿ ಪರೀಕ್ಷೆ ಮಾಡಿಸಿದರು.
ಗರ್ಭದ ಮೂಲಕ ನಿರುಪಾಯಕಾರಿ ಶ್ರವಣಾತೀತ ಧ್ವನಿ ತರಂಗ ಹಾಯಿಸಿ ಅವಳಿ ಮಕ್ಕಳ ಬಿಂಬವನ್ನು ಟಿವಿ ಪರದೆಯ ಮೇಲೆ ಮೂಡಿಸಿ ನೋಡಿದರು. ಅವಳ ಗರ್ಭದಲ್ಲಿದ್ದ ಒಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದಿತ್ತು. ಅದರ ಕರುಳುಗಳು ಹೊಟ್ಟೆಯ ಹೊರಗೆ ಬಂದು ದೇಹದ ಸುತ್ತ ಹಾವಿನ ಆಕೃತಿಯಲ್ಲಿ ಸುತ್ತುವರಿದಿತ್ತು. ಹೃದಯದಲ್ಲಿ ವಿಶೇಷವಾದ ಊನವಿತ್ತು. ಅದರ ಮೂಳೆಯ ಬೆಳವಣಿಗೆ ಕುಂಠಿತವಾಗಿತ್ತು. ಕಾಲಿನ ಪಾದದ ಬೆರಳುಗಳು ಸೇರಿಕೊಂಡಿದ್ದವು. ಈ ಎಲ್ಲ ವಿವರಗಳನ್ನು ವೈದ್ಯರು ದಂಪತಿಗಳಿಗೆ ತಿಳಿಸಿದರು. ಮೂರು ರೀತಿಯಲ್ಲಿ ಇದನ್ನು
ಪರಿಹರಿಸಲು ಸಾಧ್ಯ ಎಂದರು.

ಮೊದಲನೆಯದು – ಏನೂ ಚಿಕಿತ್ಸೆ ಮಾಡದೆ ಗರ್ಭವನ್ನು ಬೆಳೆಯಲು ಬಿಡುವುದು. ಆಗ ಅವಳಿಗಳ ಪೈಕಿ ಆರೋಗ್ಯವಂತ ಮಗು ಉಳಿದು ಹೆರಿಗೆಯ ನಂತರ ವಿಕೃತ ಮಗು ಮರಣ ಹೊಂದುವ ಸಾಧ್ಯತೆ ಹೆಚ್ಚು. ಇದರ ತೊಂದರೆ ಎಂದರೆ ವಿಕೃತ ಮಗುವನ್ನು ಹಾಗೆಯೇ ಬಿಡುವುದರಿಂದ ಆರೋಗ್ಯ ವಂತ ಮಗುವಿನ ಮೇಲೂ ಹಾನಿಕಾರಕ ಪರಿಣಾಮ ಬೀರುವುದೋ ಎಂಬ ಸಂಶಯ. ಎರಡನೆಯ ಸಾಧ್ಯತೆ ಎಂದರೆ ಯಾವ ತೊಂದರೆಯೂ ಬೇಡವೆಂದು ಗರ್ಭಸ್ರಾವ ಮಾಡಿಸಿಕೊಳ್ಳುವುದು ಅಂದರೆ ಎರಡೂ ಶಿಶುಗಳನ್ನು ಮುಗಿಸಿಬಿಡುವುದು. ಮೂರನೆಯ ಸಾಧ್ಯತೆ ಎಂದರೆ ಆ ಕಾಲದಲ್ಲಿ ಎಲ್ಲಿಯೂ ಮಾಡಿರದ ವಿಶೇಷ ಶಸ್ತ್ರಕ್ರಿಯೆ. ಅಂದರೆ ಮಗು ಗರ್ಭಸ್ತವಾಗಿರುವಾಗಲೇ ವಿಕೃತ ಮಗುವಿನ ಹೃದಯಕ್ಕೆ ವಿಶೇಷ ಅನಿಲವನ್ನು ತೂರಿಸಿ ಅದರ ಹೃದಯ ನಿಲ್ಲುವಂತೆ ಮಾಡಿ ಆರೋಗ್ಯವಂತ ಮಗು ಸರಿಯಾಗಿ ಹುಟ್ಟುವಂತೆ ನೋಡಿಕೊಳ್ಳುವುದು.

ಅಲ್ಲಿಯವರೆಗೆ ಅಂತಹ ಸಂದರ್ಭ ಬಂದಾಗ ವೈದ್ಯರಿಗೆ ಮೇಲೆ ತಿಳಿಸಿದ ಮೊದಲ ಎರಡು ಸಾಧ್ಯತೆ ಮಾತ್ರ ಇದ್ದವು. ಈ ಮೂರನೆಯ ಸಾಧ್ಯತೆ ವೈದ್ಯಕೀಯ ರಂಗದಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ಆದ ಹೊಸ ಬೆಳವಣಿಗೆ. ಅಂದರೆ ತಾಯಿಯ ಗರ್ಭದಲ್ಲಿದ್ದಾಗಲೇ ಮಗುವಿನ ಮೇಲೆ ವೈದ್ಯರು ವಿಶೇಷ ಶಸ್ತ್ರಕ್ರಿಯೆ ನಡೆಸುತ್ತಾರೆ. ಮನಸ್ಸು ಕಲ್ಲು ಮಾಡಿಕೊಂಡು ಆ ಯುವತಿ ವೈದ್ಯರು ತಿಳಿಸಿದ ಮೂರನೆಯ ಸಾಧ್ಯತೆಯನ್ನು ಒಪ್ಪಿದಳು. ವಿಕೃತ ಮಗುವಿನ ಹೃದಯಕ್ಕೆ ವೈದ್ಯರು ಒಂದು ರೀತಿಯ ಅನಿಲ ತೂರಿಸಿ ಅದನ್ನು ನಿಲ್ಲಿಸುವುದರ ಮೂಲಕ ಇನ್ನೊಂದು ಆರೋಗ್ಯವಂತ ಮಗುವಿನ ಹೆರಿಗೆ ಸುಸೂತ್ರ ರೀತಿಯಲ್ಲಿ ನಡೆಯುವಂತೆ ನೋಡಿಕೊಂಡರು.

ಮಗು ಹುಟ್ಟುವ ಮೊದಲೇ ಅದರ ಎಲ್ಲಾ ಅಂಗಾಂಗಗಳನ್ನು ಹೊಂದಿ ಸರಿಯಾಗಿದೆಯೇ ಅಥವಾ ವಿಕೃತಗೊಂಡಿದೆಯೇ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಆಮ್ನಿಯೋಸಿಂಟಸೀಸ್ ಪರೀಕ್ಷೆಗಳು ೩-೪ ದಶಕಗಳಿಂದ ಲಭ್ಯವಿವೆ. ಇದೇ ವೈದ್ಯಕೀಯ ರಂಗದಲ್ಲಿ ಬಹಳ ಉತ್ತಮ ಪ್ರಗತಿ ಎಂದು ಆ ಕಾಲದಲ್ಲಿ ತಿಳಿಯಲಾಗಿತ್ತು. ಆದರೆ ಈ ಎರಡು ಪರೀಕ್ಷೆಗಳಿಂದ ಮಗುವಿನ ಆರೋಗ್ಯ ಕುಂಠಿತಗೊಂಡಿದೆ ಎಂದು ತಿಳಿದರೂ ಅದನ್ನು ಸರಿಪಡಿಸುವ ಬಗ್ಗೆ ವೈದ್ಯರಲ್ಲಿ ಯಾವ ಉತ್ತರವೂ ಇರಲಿಲ್ಲ. ಆದರೆ ವೈದ್ಯ ವಿಜ್ಞಾನ ನಿರಂತರ ಪ್ರಗತಿ ಮಾರ್ಗದಲ್ಲಿದೆ. ನವೀನ ತಂತ್ರ ಜ್ಞಾನದಿಂದ ವೈದ್ಯರು ಗರ್ಭಸ್ತ ಚಿಕಿತ್ಸೆ ಮಾಡಿ ತೋರಿಸಿದ್ದಾರೆ.

೧೯೯೦ ರ ದಶಕದಲ್ಲಿಯೇ ಅಮೆರಿಕಾ ಮತ್ತು ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ೫೦೦ ಕ್ಕೂ ಹೆಚ್ಚು ಶಸಕ್ರಿಯೆ ಮಾಡಲಾಗಿತ್ತು ಎಂದರೆ ಆ
ಪ್ರಗತಿಯನ್ನು ಊಹಿಸಿ. ಈ ಶಸ್ತ್ರಕ್ರಿಯಾ ವಿಧಾನ ೧೯೬೦ ರ ದಶಕದಲ್ಲಿ ಸ್ವಲ್ಪ ಮಟ್ಟಿಗೆ ಆರಂಭವಾದರೂ ೧೯೮೨ ರ ಹೊತ್ತಿಗೆ ಅಮೆರಿಕದಲ್ಲಿ ಸರಿಯಾಗಿ ನೆಲೆಯೂರಿತು. ಅಲ್ಲಿನ ಕೆಲವು ಸ್ತ್ರೀ ರೋಗ ತಜ್ಞರು ಒಂದು ಸಭೆ ನಡೆಸಿ ವೈದ್ಯಕೀಯ ತಂತ್ರeನಗಳ ಮುಂದುವರಿದ ಈ ಹಂತದಲ್ಲಿ ನಾವು ಗರ್ಭಸ್ತ ಶಿಶುವನ್ನು ಒಂದು ಪ್ರತ್ಯೇಕ ರೋಗಿ ಎಂದು ಪರಿಗಣಿಸಿ ಚಿಕಿತ್ಸೆ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿಕೊಂಡರು. ಗರ್ಭಸ್ತ ಶಿಶುವಿನ ವಿವಿಧ ಅಂಗಗಳ ಆರೋಗ್ಯ ಮತ್ತು ವಿಕೃತಿಯ ಬಗ್ಗೆ ಕಣ್ಣೆದುರೇ ನೋಡುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ನಿಂದ ಲಭ್ಯವಾಗಿದೆ. ತಾಯಿಯ ಗರ್ಭದಲ್ಲಿರುವ ಆಮ್ನಿಯೋಟಿಕ್ ದ್ರವದಲ್ಲಿ ತೇಲಾಡುವ ಮಗುವಿನ ಜೀವಕೋಶಗಳನ್ನು ವಿವರವಾಗಿ ಪರೀಕ್ಷಿಸಲು ಆಮ್ನಿಯೋಸಿಂಟಸೀಸ್ ಪರೀಕ್ಷೆ ಯಿಂದ ಸಾಧ್ಯವಾಗಿದೆ.

ಹೀಗೆ ಜೀವಕೋಶಗಳನ್ನು ಪರೀಕ್ಷಿಸುವುದರಿಂದ ಹಲವಾರು ಜನನಾಗತ ಊನಗಳನ್ನೂ, ವಿಕೃತಿಗಳನ್ನೂ ಮೊದಲೇ ಪತ್ತೆ ಹಚ್ಚಲು ಸಾಧ್ಯ.
ಹಾಗಾಗಿ ಮುಂದಿನ ಹಂತವೆಂದರೆ ಗರ್ಭಸ್ತ ಶಿಶುವಿಗೇ ವಿವಿಧ ವೈದ್ಯಕೀಯ ಚಿಕಿತ್ಸೆ ಮತ್ತು ಶಸ್ತ್ರ ಕ್ರಿಯೆಗಳನ್ನು ಮಾಡುವುದು ಎಂದು ಆ ಗುಂಪು
ಯೋಚಿಸಿತು. ಈ ದಿಸೆಯಲ್ಲಿ ಮೊದಲ ಹಂತವಾಗಿ ತಾಯಿಯ ಕಿಬ್ಬೊಟ್ಟೆಯ ಮೂಲಕ ಒಂದು ಸೂಕ್ಷ್ಮಸೂಜಿಯನ್ನು ತೂರಿಸಿ ಅಗತ್ಯವಿರುವ
ಔಷಽಗಳನ್ನು ಶಿಶುವಿಗೆ ವರ್ಗಾಯಿಸುವುದು ಮತ್ತು ಶಿಶುವಿನ ರಕ್ತ ಮತ್ತು ಮೂತ್ರಗಳನ್ನು ವಿವಿಧ ಪರೀಕ್ಷೆಗಳಿಗಾಗಿ ಅದೇ ದಾರಿಯಲ್ಲಿ ತೆಗೆಯುವುದು. ನಂತರದ ಎರಡನೆಯ ಹಂತ ನಿಜವಾಗಿಯೂ ಯೋಚಿಸಿದರೆ ಮೈ ರೋಮಾಂಚನಗೊಳ್ಳುವ ಕ್ರಿಯೆ.

ತಾಯಿಯ ಗರ್ಭದಿಂದ ಶಸ್ತ್ರಕ್ರಿಯೆ ಮಾಡಿ ಮಗುವನ್ನು ತೆಗೆದು ಅದಕ್ಕೆ ಅಗತ್ಯವಿರುವ ವಿಶೇಷ ಶಸ್ತ್ರಕ್ರಿಯೆಯನ್ನು ಕ್ಲುಪ್ತ ಕಾಲದ ಲ್ಲಿ ನಡೆಸಿ ಮತ್ತೆ ಪುನಃ ಮಗುವನ್ನು ಮೊದಲ ರೀತಿಯ ಗರ್ಭದಲ್ಲಿಡುವುದು. ಹೀಗೆ ಎರಡು ಹಂತಗಳಲ್ಲಿ ನಡೆಸಬಹುದೆಂದು ಯೋಚಿಸಿದ ವೈದ್ಯ ವಿಜ್ಞಾನಿಗಳ ಈ
ಯೋಜನೆ ಕಾರ್ಯರೂಪಕ್ಕೆ ಬರಲು ಹಲವು ವರ್ಷಗಳೇ ಹಿಡಿದವು. ಈಗ ಜಗತ್ತಿನ ಹಲವು ಕಡೆ ಈ ರೀತಿಯ ಶಸ್ತ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.
ಭಾರತದಲ್ಲಿ ಈ ರೀತಿಯ ಮೊಟ್ಟ ಮೊದಲ ಶಸ್ತ್ರಕ್ರಿಯೆ ೨೦೧೮ ರಲ್ಲಿ ಕೇರಳದ ಕೊಚ್ಚಿಯಲ್ಲಿ ಜರುಗಿತು. ೨೧ ವಾರದ ಗರ್ಭಸ್ತ ಶಿಶುವಿನ ಮೂತ್ರದ ಹರಿವನ್ನು ಸರಿಪಡಿಸಲು ಈ ಶಸ್ತ್ರಕ್ರಿಯೆ ಮಾಡಲಾಯಿತು. ತಾಯಿಯ ಹೊಟ್ಟೆಯ ಮೂಲಕ ಲೇಸರ್ ಫೈಬರ್ ತೂರಿಸಿ ಆಕೆಯ ಗರ್ಭಕೋಶದ ಒಳಗಿನಿಂದ ಶಿಶುವಿನ ಮೂತ್ರ ಚೀಲಕ್ಕೆ ಹೋಗಿ ಅಲ್ಲಿ ಅಡಚಣೆ ಉಂಟು ಮಾಡುತ್ತಿದ್ದ ವಾಲ್ವ್ ತೆಗೆದು ಹಾಕಿದರು.

ಈ ತಂತ್ರಜ್ಞಾನ ವೈದ್ಯಕೀಯವಲ್ಲದ ಕಾರಣಗಳಿಗಾಗಿ ಉಪಯೋಗಿಸವಾಗಲ್ಪಟ್ಟು ದುರುಪಯೋಗವಾಗುವ ಸಾಧ್ಯತೆ ಇದೆ. ಶಿಶುವಿನ ತಂದೆ ತಾಯಿ ಗಳಿಗೆ ವಿಶೇಷ ಶಸ್ತ್ರಕ್ರಿಯೆಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಸರಿಯಾದ ಮಾಹಿತಿ ತಿಳಿಸಿ ಅವರಿಂದ ನಿಜವಾದ ಒಪ್ಪಿಗೆ ಪಡೆಯಲು ವೈದ್ಯರಲ್ಲದ ಮೂರನೆಯ ವ್ಯಕ್ತಿಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಮೇಲೆ ತಿಳಿಸಿದ ಸಂದರ್ಭಗಳಲ್ಲಿ ಅಲ್ಲದೆ ಇನ್ನೂ ಕೆಲವು ವೇಳೆ ಈ ರೀತಿಯ ಶಸ್ತ್ರಕ್ರಿಯೆ
ಅನಿವಾರ್ಯವಾಗುತ್ತದೆ. ಶ್ವಾಸಕೋಶದಲ್ಲಿ ಶೇಖರಗೊಳ್ಳುವ ವಿಚಿತ್ರ ರೀತಿಯ ದ್ರವವನ್ನು ತೆಗೆಯಲು, ಸೀಳ್ದುಟಿ, ಸೀಳಂಗುಳ ಇರುವ ಮಗು ವನ್ನು ಗರ್ಭಕೋಶದಿಂದ ತೆಗೆದು ಆ ಊನವನ್ನು ಸೂಕ್ತ ಪ್ಲಾಸ್ಟಿಕ್ ಸರ್ಜರಿ ನಡೆಸಿ ಮತ್ತೆ ಶಿಶುವನ್ನು ಗರ್ಭದಲ್ಲಿಯೇ ಇಡುವುದು. ಮಗು ಹುಟ್ಟಿದ ಮೇಲೆ ಶಸ್ತ್ರ ಕ್ರಿಯೆ ನಡೆಸಬಹುದಾದರೂ ಆಗ ಉಂಟಾಗುವ ಗಾಯ ಅಥವಾ ಕಲೆ ಹೆಚ್ಚಿನ ಪ್ರಮಾಣದಲ್ಲಿ ಉಳಿದುಕೊಳ್ಳುತ್ತದೆ.