Tuesday, 16th April 2024

ಮೊಳೆಗಳ ಬಳಸಿ ಆನೆಯ ಕಲಾಕೃತಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ಗೆ ಕಾಪುವಿನ ಶಶಾಂಕ್ ಸೇರ್ಪಡೆ

ಕಾಪು: ಮೊಳೆಗಳನ್ನು ಬಳಸಿ ಆನೆಯ ಕಲಾಕೃತಿ ರಚಿಸುವ ಮೂಲಕ ಕಾಪುವಿನ ಪ್ರತಿಭಾನ್ವಿತ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಗೆ ಸೇರ್ಪಡೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕಲಾ ಪ್ರೋತ್ಸಾಹಕ ಗುರುಚರಣ್ ಪೊಲಿಪು, ಗ್ರಾಮೀಣ ಪ್ರತಿಭೆ ಶಶಾಂಕ್ ಸಾಲಿಯಾನ್ ಅವರು ಕೇರಳ ದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು ಮೊಳೆಗಳ ಜೋಡಣೆಯೊಂದಿಗೆ ಆನೆಯ ಕಲಾಕೃತಿ ರಚಿಸಿದ್ದಾರೆ.

ಇವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ನಲ್ಲಿ ದಾಖಲಾಗಿರುವುದು ಕಾಪುವಿನ ಜನತೆಗೆ ಹೆಮ್ಮೆಯನ್ನುಂಟು ಮಾಡಿದೆ ಎಂದರು.

ಕಲಾವಿದ ಶಶಾಂಕ್ ಮಾತನಾಡಿ, ನನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹವೇ ಮುಖ್ಯ ಕಾರಣ. ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಚಿತ್ರ ಬಿಡಿಸಲು ಸಹಕಾರ ನೀಡಿದ್ದು, ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿ ಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿದ್ದಾರೆ ಎಂದರು.

ಶಶಾಂಕ್ ಅವರು ಕೇವಲ ಮೊಳೆಗಳನ್ನು ಬಳಸಿಕೊಂಡು 5 x 4 ಫೋಮ್ ಶೀಟ್‌ನಲ್ಲಿ 4 x 3.8 ಸೈಜ್‌ನ ಆನೆಯ ಚಿತ್ರ ಬಿಡಿಸಿದ್ದು ಇದಕ್ಕಾಗಿ 13,940 ಮೊಳೆಗಳನ್ನು ಬಳಸಿದ್ದಾರೆ. ಆಳೆತ್ತರದ ಫೋಮ್ ಶೀಟ್‌ನಲ್ಲಿ ಮೊಳೆಗಳನ್ನು ಬಳಸಿಕೊಂಡು ರಚಿಸಲಾದ ಆನೆಯ ಚಿತ್ರವನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಕಳುಹಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಪ್ರಮಾಣ ಪತ್ರ ರವಾನಿಸಿದೆ.

ಕಾಪು ತಾಲೂಕಿನ ಉಳಿಯಾರಗೋಳಿ ನಿವಾಸಿ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ಮತ್ತು ಪುಷ್ಪಾ ಸಾಲಿಯಾನ್ ದಂಪತಿ ಪುತ್ರ ಶಶಾಂಕ್ ಎಸ್.ಸಾಲಿಯಾನ್ ಅವರು ಬಿ.ಕಾಂ. ಪದವೀಧರ. ಖಾಸಗಿ ಕಾರ್ಪೋರೆಟ್ ಕಂಪೆನಿಯೊಂದರಲ್ಲಿ ನೌಕರಿ ಯಲ್ಲಿದ್ದಾರೆ.

error: Content is protected !!