Friday, 12th July 2024

ರಾಜ್ಯಕ್ಕೆ ಪ್ರಥಮ ಸೇರಿ ಹತ್ತು ರ‍್ಯಾಂಕ್ ತನ್ನದಾಗಿಸಿಕೊಂಡ ವಿದ್ಯಾನಿಧಿ ಕಾಲೇಜು

ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ಜ್ಞಾನವಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ೫೯೭ ಅಂಕಗಳನ್ನು ಗಳಿಸು ವುದರೊಂದಿಗೆ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ರಾಜ್ಯಮಟ್ಟದಲ್ಲಿ ಹತ್ತು ರ‍್ಯಾಂಕ್ ತನ್ನದಾಗಿಸಿಕೊಳ್ಳುವ ಮೂಲಕ ವಾಣಿಜ್ಯ ವಿಭಾಗದಲ್ಲಿ ವಿದ್ಯಾನಿಧಿ ಕಾಲೇಜು ಪಿಯುಸಿ ಫಲಿತಾಂಶದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ.

ರಾಜ್ಯಕ್ಕೆ ವಾಣಿಜ್ಯ ವಿಭಾಗದ ದೀಪಶ್ರೀ (೫೯೪) ನಾಲ್ಕನೇ ರ‍್ಯಾಂಕ್, ತುಂಗಾ (೫೯೩) ಐದನೇ ರ‍್ಯಾಂಕ್, ಮನಮೋಹನ್ (೫೯೨) ಆರನೇ ರ‍್ಯಾಂಕ್, ಗಗನಶ್ರೀ (೫೯೧), ಅನನ್ಯಾ ಜೆ.ಟಿ (೫೯೧) ಏಳನೇ ರ‍್ಯಾಂಕ್, ಮೋನಿಷಾ (೫೯೦), ಸಾಕ್ಷಿ (೫೯೦) ಎಂಟನೇ ರ‍್ಯಾಂಕ್, ಕುಮುದಾ ಮತ್ತು ಶ್ರುತಿ (೫೮೯) ಒಂಭತ್ತನೇ ರ‍್ಯಾಂಕ್, ಮಾರುತಿ ಭುವನ್ (೫೮೮) ಹತ್ತನೇ ರ‍್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ವಿಜ್ಞಾನ ವಿಭಾಗದ ಸಾಧನೆ
ವಿಜ್ಞಾನ ವಿಭಾಗದಲ್ಲಿ ನಿತ್ಯಾ ಕೆ.ಆರ್. ಮತ್ತು ಶಾಶ್ವತ್ (೫೮೬) ಎಂಟನೇ ರ‍್ಯಾಂಕ್, ತನುಷ್ ಆರಾಧ್ಯ (೫೮೫) ಒಂಭತ್ತನೇ ರ‍್ಯಾಂಕ್, ನಿಸರ್ಗ ಎ.ಎಂ. ಮತ್ತು ಲತಾ ಆರ್ (೫೮೪) ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು ೪೭೭ ಮಂದಿ ಅತ್ಯುನ್ನತ ಶ್ರೇಣಿ , ೪೧೮ ಮಂದಿ ಪ್ರಥಮ ಶ್ರೇಣ ಮತ್ತು ೪೯ ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾನಿಧಿಯ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಮತ್ತು ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್, ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ, ಉಪನ್ಯಾಸಕರು ಅಭಿನಂದಿಸಿದ್ದಾರೆ.

ಈ ವೇಳೆ ಮಾತನಾಡಿದ ವಿದ್ಯಾನಿಧಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ತುಮಕೂರಿನ ಮಕ್ಕಳಿಗೆ ಸದಾವಕಾಶ ಸಿಗಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿದ ಕಾಲೇಜು ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವುದು ಅತ್ಯಂತ ಸಂತೋಷ ತಂದಿದೆ. ಸೂಕ್ತ ಅವಕಾಶಗಳನ್ನು ಮಕ್ಕಳು ಬಳಸಿಕೊಂಡರೆ ಮಾತ್ರ ಈ ಸಾಧನೆ ಸಾಧ್ಯ. ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಅಗತ್ಯ ಮಾರ್ಗದರ್ಶನ ಮಾಡಿದರೆ ಅವರು ಎಂತಹ ಕಠಿಣ ಪರೀಕ್ಷೆಯನ್ನಾದರೂ ಎದುರಿಸಬಹುದು. ವಿದ್ಯಾರ್ಥಿಗಳ, ಉಪನ್ಯಾಸಕರ, ಪೋಷಕರ ಶ್ರಮ ಶ್ಲಾಘನೀಯ ಎಂದರು.

ಕಾಲೇಜಿನಲ್ಲಿ ನಮಗೆ ಅಧ್ಯಯನಕ್ಕೆ ಬೇಕಾದ ಉತ್ತೇಜಕ ವಾತಾವರಣವಿದೆ. ಉಪನ್ಯಾಸಕವೃಂದದವರ ನಿರಂತರ ಮಾರ್ಗ ದರ್ಶನ, ಹೆತ್ತವರ ಬೆಂಬಲ ಸದಾ ನಮ್ಮ ಪಾಲಿಗಿತ್ತು. ಅಲ್ಲದೇ ಉನ್ನತವಾದುದನ್ನು ಸಾಧಿಸಲೇಬೇಕೆಂಬ ಛಲ ನಮ್ಮಲ್ಲಿ ಸದಾ ಜಾಗೃತವಾಗಿತ್ತು. ಸಾಮಾಜಿಕ ತಾಣಗಳಿಂದ ನಾನು ದೂರವಿದ್ದು ನಮ್ಮಲ್ಲಿ ಏಕಾಗ್ರತೆಯಿದ್ದು ಸಮರ್ಪಕ ಅಧ್ಯಯನವಿದ್ದರೆ ಮಾತ್ರ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂದು ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಅನುಭವವನ್ನು ಹಂಚಿಕೊಂಡರು.

ಫೋಟೋ: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಜ್ಞಾನವಿಯನ್ನು ವಿದ್ಯಾನಿಧಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅಭಿನಂದಿಸಿದರು. ಅಧ್ಯಕ್ಷ ಜಯಣ್ಣ, ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಇದ್ದರು.

Leave a Reply

Your email address will not be published. Required fields are marked *

error: Content is protected !!