Sunday, 19th May 2024

ದೀಪ ಬೆಳಗುವ ಹಬ್ಬ

ರಾಘವೇಂದ್ರ ಈ ಹೊರಬೈಲು

ಅವರಿಗೆ ಹಬ್ಬಗಳೆಂದರೆ ಅದೇನೋ ಉತ್ಸಾಹ, ಸಡಗರ. ಅವರ ಮನೆಯಲ್ಲಿ ಹೇಳಿಕೊಳ್ಳವಂತಹ ಸಿರಿವಂತಿಕೆಯಿಲ್ಲದಿದ್ದರೂ ದೀಪಾವಳಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಪಟಾಕಿಗಳ ಸುರಿಮಳೆಗೈಯುತ್ತಿದ್ದರು. ಆ ಬಾರಿಯೂ ಅನೇಕ ಸಾವಿರಗಳನ್ನು ಖರ್ಚುಮಾಡಿ, ತರಹೇವಾರಿ ಪಟಾಕಿಗಳನ್ನು ತಂದು, ಧಾಂಧೂಂ ಎನಿಸಬೇಕೆಂದು ಮನೆಯೊಳಗೆ ಜೋಪಾನವಾಗಿಟ್ಟಿದ್ದರು. ಹಬ್ಬಕ್ಕೆ ಇನ್ನೊಂದೇ ದಿನ ಬಾಕಿಯಿತ್ತು. ಅಕಸ್ಮಾತ್ ಪಟಾಕಿಗಳ ಗಂಟಿಗೆ ಬೆಂಕಿ ತಗುಲಿ, ಆ ಬೆಂಕಿ ಮನೆಯೆಲ್ಲ ವ್ಯಾಪಿಸಿ, ಗ್ಯಾಸಿಗೂ ತಗುಲಿ, ಮನೆಯೆಲ್ಲ ಧಗಧಗಿಸಿ, ಅರ್ಧ ಬೆಂದುಹೋಯ್ತು.

ಮನೆಯೊಳಗಿದ್ದವರೂ ತೀವ್ರ ಗಾಯಗೊಂಡರು. ಸಂತೋಷದಿಂದ ಆಚರಿಸಬೇಕಾದ ದೀಪಾವಳಿ ಸಂತಾಪ ಸೂಚಿಸುವಂತಾ ಯಿತು. ಪಟಾಕಿ ಹುಚ್ಚಿಗೆ ಬಲಿಯಾಗಿ, ಜೀವನ, ಜೀವ, ಹಣ ಹಾಳು ಮಾಡಿಕೊಂಡವರ ಇಂತಹ ಹಲವು ಉದಾಹರಣೆಗಳು ಸಿಗುತ್ತವೆ. ಒಂದು ಕಾಲದಲ್ಲಿ ದೀಪಾವಳಿ ಹಬ್ಬಕ್ಕೆ, ಗಣೇಶನ ಹಬ್ಬಕ್ಕೆ ಮಾತ್ರ ಮೀಸಲಾಗಿದ್ದ ಈ ಪಟಾಕಿಗಳು ಇಂದು ಯಾರಾ ದರೂ ಗೆದ್ದರೆ, ಯಾರಾದರೂ ಹುಟ್ಟಿದರೂ, ಸತ್ತರೂ ಬಳಸುವ ಆಟಿಕೆಯ ವಸ್ತುಗಳಾಗಿವೆ.

ಪಟಾಕಿಗಳಿಂದ ಯಾರಿಗೂ, ಯಾವುದೇ ತೊಂದರೆಯಾಗದಿದ್ದರೆ, ಇಷ್ಟೊಂದು ಪೀಠಿಕೆ ಹಾಕಿ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಅವರ ಹಣ, ಅವರ ಖುಷಿ ಎಂದು ಸುಮ್ಮನಾಗಬಹುದಿತ್ತು. ಆದರೆ ಈ ಪಟಾಕಿಗಳು ಮಾಡುವ ಅನಾಹುತ ಹಲವು ಮುಖದ್ದು. ಲಕ್ಷಾಂತರ ಹಣ ಸುರಿದು, ಪಟಾಕಿ ವ್ಯಾಪಾರ ಮಾಡಹೊರಟವರು ಅದೆಷ್ಟೋ ಜನ ಆಕಸ್ಮಿಕವಾಗಿ ಬೆಂಕಿ ತಗುಲಿ, ಇಡೀ ಪಟಾಕಿ ಅಂಗಡಿಗಳು ಗುರುತೇ ಸಿಗದಷ್ಟು ಭಸ್ಮವಾಗಿ, ಹಾಕಿದ ಬಂಡವಾಳವೆಲ್ಲ ಮಣ್ಣು ಪಾಲಾದ ಉದಾಹರಣೆಗಳಿಗೆ
ಲೆಕ್ಕವಿಲ್ಲ.

ಪ್ರತೀ ವರ್ಷ ಪಟಾಕಿಯಿಂದ ಅನೇಕ ಜೀವಹಾನಿಯಾದ ವರದಿಗಳೂ ಇವೆ. ಭಾರತದ ಪಟಾಕಿ ತಯಾರಿಕೆಯ ಪ್ರಮುಖ ಕೇಂದ್ರವಾದತಮಿಳುನಾಡಿನ ಶಿವಕಾಶಿಯಲ್ಲಿಯೇ ಪಟಾಕಿ ತಯಾರಿಸುವ ಸಂದರ್ಭಗಳಲ್ಲಿ ನಡೆದ ದುರಂತಗಳಿಗೆ ಲೆಕ್ಕವಿಲ್ಲ. ಪತ್ರಿಕಾ ವರದಿಯ ಪ್ರಕಾರ 1991, 2009, 2011 ಮತ್ತು 2012ರ ದುರಂತಗಳಲ್ಲಿ ಇಲ್ಲಿನ ಪಟಾಕಿ ದುರಂತದಲ್ಲಿ ಜೀವ ಕಳೆದು ಕೊಂಡವರ ಸಂಖ್ಯೆ ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು. ಅಂಗಾಂಗ ಊನವಾದವರ ಸಂಖ್ಯೆಯೂ ಇನ್ನೂರರ ಗಡಿ ದಾಟುತ್ತದೆ.
ಪರಿಸರದ ಮೇಲೆ ಹಾನಿ ಕೇವಲ ಮನುಷ್ಯ, ಪ್ರಾಣಿ, ಪಕ್ಷಿಗಳ ಮೇಲಲ್ಲದೆ ಸಂಪೂರ್ಣ ಪರಿಸರದ ಮೇಲೂ ಪಟಾಕಿಗಳು ಮಾಡುವ ಪರಿಣಾಮ ತುಂಬಾ ದೊಡ್ಡದು. ಪಟಾಕಿ ತಯಾರಿಕೆಯಲ್ಲಿ ಕಾಡ್ಮಿಯಂ, ಬೇರಿಯಂ, ತಾಮ್ರ, ಗಂಧಕ, ಅಲ್ಯೂಮಿನಿಯಂ ಮುಂತಾದ ಅನೇಕ ವಸ್ತುಗಳನ್ನು ಬಳಸಲಾಗಿರುತ್ತದೆ. ಅವುಗಳನ್ನು ಸಿಡಿಸಿದಾಗ ಅದರಿಂದ ವಾತಾವರಣಕ್ಕೆ ಹೊರಹೊಮ್ಮುವ ರಾಸಾಯನಿಕ ಅನಿಲಗಳು ಪರಿಸರದಲ್ಲೆಲ್ಲಾ ಪಸರಿಸಿ, ವಾಯುಮಾಲಿನ್ಯಕ್ಕೆ ಮೂಲವಾಗುತ್ತವೆ.

ಅಲ್ಲದೇ ಪಟಾಕಿ ಸಿಡಿಸಿದ ನಂತರ ಅವುಗಳ ತ್ಯಾಜ್ಯ ದೊಡ್ಡ ಕಸದ ರಾಶಿಯಾಗಿ ಬಿದ್ದು, ಪುನಃ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ, ಸ್ವಚ್ಛ ಭಾರತದ ಕನಸು ಕಾಣುತ್ತಿರುವ ಭಾರತೀಯರಿಗೆ ಭಾರೀ ಪೆಟ್ಟು ನೀಡುತ್ತದೆ. ಇತ್ತೀಚಿನ ಯುವಕರಿಗಂತೂ ಪಟಾಕಿ ಸಿಡಿಸು ವುದು ಒಂದು ದೊಡ್ಡ ಹುಚ್ಚಾಗಿ ಮಾರ್ಪಾಡಾಗಿದೆ. ತೀರಾ ಸಣ್ಣಸಣ್ಣ ವಿಷಯಕ್ಕೂ ಪಟಾಕಿ ಹೊಡೆಯುವ ಹವ್ಯಾಸ
ಬೆಳೆಸಿಕೊಳ್ಳುತ್ತಿದ್ದಾರೆ. ಯಾರೋ ರಾಜಕಾರಣಿ ತಮ್ಮೂರಿಗೆ ಬಂದರೂ ಸಾವಿರಾರು ರೂಪಾಯಿಗಳ ಪಟಾಕಿಗಳ ದೊಡ್ಡ ಸರಗಳನ್ನೇ ಹಚ್ಚಿ, ಒಂದೆರಡು ನಿಮಿಷಗಳಲ್ಲೇ ಸಾವಿರಾರು ರೂಪಾಯಿಗಳನ್ನು ಬೆಂಕಿಗಾಹುತಿ ಮಾಡುವುದರ ಜೊತೆಗೆ ಪರಿಸರಕ್ಕೇ ಬೆಂಕಿ ಹಚ್ಚಿರುತ್ತಾರೆ. ಮೆಚ್ಚಿನ ನಟನ ಚಿತ್ರ ಬಿಡುಗಡೆಯಾದಾಗಲೂ, ಶತದಿನ ಮುಟ್ಟಿದಾಗಲೂ, ಮನೆಯಲ್ಲಿ ಮಗು ಹುಟ್ಟಿದರೂ, ಕೊನೆಗೆ ಸಾವಾದರೂ ಪಟಾಕಿ ಹಚ್ಚುವಂತಹ ಹುಚ್ಚಿಗೆ ಬಿದ್ದು, ಸುತ್ತಮುತ್ತಲಿನವರಿಗೆ, ಪರಿಸರಕ್ಕೆ ನಾವೆಷ್ಟು ತೊಂದರೆ ಕೊಡುತ್ತಿದ್ದೇವೆ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೆ ಇರುವುದು ದೊಡ್ಡ ದುರಂತ.

ಒಟ್ಟಿನಲ್ಲಿ, ಹೇಳುವುದಾದರೆ ಈ ಪಟಾಕಿಗಳನ್ನು ಸುಡುವುದರಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ್ಯವಾಗಿ ಸಂಪೂರ್ಣ ಪರಿಸರ ಮಲಿನವಾಗುತ್ತದೆ. ಆಕಸ್ಮಿಕವಾಗಿ ಸ್ಪೋಟವಾದರೆ ದೇಹದ ಅಂಗಾಂಗಗಳು ಊನವಾಗಬಹುದು, ಅನೇಕ ಬಾರಿ ಜೀವಹಾನಿಯೂ ಆಗುತ್ತದೆ. ಶಾಶ್ವತ ಕಿವುಡುತನ, ಹೃದಯಾಘಾತ, ಅಸ್ತಮಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ನಮ್ಮ ಸುತ್ತಮುತ್ತಲಿನ ಮುಗ್ಧ ಪ್ರಾಣಿ- ಪಕ್ಷಿಗಳ ಮೇಲೂ ತೀರಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಏನೂ ಪ್ರಯೋಜನ ವಿಲ್ಲದ, ಮಾರಕವಾಗಿರುವ ಪಟಾಕಿಗಳನ್ನು ಜನರು ಬಳಸದೇ ಇದ್ದರೆ ಉತ್ತಮ. ಸರ್ಕಾರವೇ ಪಟಾಕಿ ಬಳಕೆಯನ್ನು ಸಂಪೂರ್ಣ ನಿಷೇಧಿಸಿ, ಕೇವಲ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಿರುವುದು ಸ್ವಾಗತಾರ್ಹ.

ಒಂದು ವೇಳೆ ದೀಪಾವಳಿಯನ್ನು ಅದ್ದೂರಿಯಾಗಿ ಮಾಡಬೇಕೆಂದಿದ್ದರೆ, ಪಟಾಕಿಯಿಂದಲೇ ಆಗಬೇಕೆಂದಿಲ್ಲ. ಮನೆ ತುಂಬಾ ಹಣತೆ ಹಚ್ಚಿ, ಬೆಳಕನ್ನು ಹೆಚ್ಚಿಸಿ, ಬೆಳಕಿನ ಹಬ್ಬವನ್ನು ಸಾರ್ಥಕಗೊಳಿಸೋಣ. ಹೊರಗಿನ ಬೆಳಕಿನ ಜೊತೆಗೆ ಪಟಾಕಿ ಹಚ್ಚದೆ,  ನಮ್ಮ ಮೂಲಕ ಪರಿಸರ ಮಾಲಿನ್ಯ ತಡೆಯುವ ಪಣದೊಂದಿಗೆ ನಮ್ಮೊಳಗೂ ಬೆಳಕನ್ನು ಪಡೆಯೋಣ. ದೀಪಾವಳಿ ಹಬ್ಬ ವೆಂದರೆ ದೀಪಗಳನ್ನು ಬೆಳಗಿ, ಮನೆಯ ಮತ್ತು ಮನಸ್ಸಿನ ಕತ್ತಲೆಯನ್ನು ಓಡಿಸುವ ದಿನ. ಇಂತಹ ದಿನದಲ್ಲಿ ಮನೆಮನೆ ಯಲ್ಲೂ ದೀಪಗಳನ್ನು ಬೆಳಗಿ, ಮನೆಮನೆಗಳಲ್ಲಿ ಮಾತ್ರವಲ್ಲದೆ ಮನದಲ್ಲೂ ಬೆಳಕನ್ನು ಕಾಣೋಣ. ಪಟಾಕಿಗಳಿಂದ ದೂರ ವಿದ್ದು, ಆ ಮೂಲಕ, ಅಕ್ಕಪಕ್ಕದವರಿಗೆ ತೊಂದರೆ, ಕಿರಿಕಿರಿ ಮಾಡದೆ, ಪರಿಸರ ಮಾಲಿನ್ಯವನ್ನು ತಡೆಯಲು ಒಂದಿಷ್ಟಾದರೂ ಪ್ರಯತ್ನ ಮಾಡೋಣ ಎಂಬುದೇ ಮಹದಾಸೆ.

Leave a Reply

Your email address will not be published. Required fields are marked *

error: Content is protected !!