Sunday, 28th April 2024

ಗುಜರಾತ್ ಟೈಟಾನ್ಸ್ ಐಪಿಎಲ್-15ರ ಚಾಂಪಿಯನ್

ಅಹಮದಾಬಾದ್: ಪದಾರ್ಪಣೆ ಮಾಡಿದ ವರ್ಷವೇ ಗಮನಾರ್ಹ ನಿರ್ವಹಣೆ ತೋರಿದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟೂರ್ನಿಯುದ್ದಕ್ಕೂ ಅಗ್ರಸ್ಥಾನಿಯಾಗಿ ಪ್ರಭುತ್ವ ಸಾಧಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾರ ಥ್ಯದ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಗುಜರಾತ್ ಪದಾರ್ಪಣೆ ವರ್ಷವೇ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರ ವಾಯಿತು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ಕೈಗೊಂಡ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 130 ರನ್ ಪೇರಿಲಸಷ್ಟೇ ಶಕ್ತವಾಯಿತು. ಜೋಸ್ ಬ್ಲಟರ್‌ಗೆ (39ರನ್, 35 ಎಸೆತ, 5 ಬೌಂಡರಿ) ಕಡಿವಾಣ ಹೇರಿದ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ 3) ರಾಯಲ್ಸ್ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶುಭಮನ್‌ ಗಿಲ್‌ ಮತ್ತು ಡೇವಿಡ್‌ ಮಿಲ್ಲರ್‌ ಅವರ ಉಪಯುಕ್ತ ಆಟದಿಂದಾಗಿ ಗುಜರಾತ್‌ ತಂಡವು 18.1 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ನಷ್ಟದಲ್ಲಿ 133 ರನ್‌ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ರಾಜಸ್ಥಾನ್‌ ರಾಯಲ್ಸ್‌ ತಂಡವು ಪಾಂಡ್ಯ ಸಹಿತ ಬೌಲರ್‌ಗಳ ದಾಳಿಗೆ ಕುಸಿದು 9 ವಿಕೆಟಿಗೆ ಕೇವಲ 130 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಟಾಸ್‌ ಗೆದ್ದ ಸಂಜು ಸ್ಯಾಮ್ಸನ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. ಆರ್‌ಸಿಬಿ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದ ರಾಜಸ್ಥಾನ್‌ ಇಲ್ಲಿ ಮಂಕು ಬಡಿದವರಂತೆ ಆಡಿತು. ಗುಜ ರಾತ್‌ ತಂಡದ ಶಿಸ್ತಿನ ಬೌಲಿಂಗ್‌ ದಾಳಿಗೆ ಸಿಲುಕಿ ರನ್ನಿಗಾಗಿ ಪರದಾಡಿತು. ನಾಯಕ ಹಾರ್ದಿಕ್‌ ಪಾಂಡ್ಯ 3 ಬಿಗ್‌ ವಿಕೆಟ್‌ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ರಾಜಸ್ಥಾನ್‌ ಸರದಿಯಲ್ಲಿ 39 ರನ್‌ ಮಾಡಿದ ಬಟ್ಲರ್‌ ಅವರದೇ ಸರ್ವಾಧಿಕ ಗಳಿಕೆ.

ಶಮಿ ವರ್ಸಸ್‌ ಜೈಸ್ವಾಲ್‌
ಮೊಹಮ್ಮದ್‌ ಶಮಿ-ಯಶಸ್ವಿ ಜೈಸ್ವಾಲ್‌ ಮುಖಾಮುಖಿಯೊಂದಿಗೆ ಫೈನಲ್‌ ಸಮರ ಮೊದಲ್ಗೊಂಡಿತು. ಶಮಿ ಎಸೆದ 3ನೇ ಓವರ್‌ ಮೂಲಕ ರಾಜಸ್ಥಾನ್‌ ಬ್ಯಾಟಿಂಗ್‌ಗೆ ಕುದುರಿಕೊಂಡಿತು. ಇದರಲ್ಲಿ ಜೈಸ್ವಾಲ್‌ ಒಂದು ಫೋರ್‌, ಒಂದು ಸಿಕ್ಸರ್‌ ಹೊಡೆದು ಸಿಡಿದು ನಿಂತರು. ಆ ಓವರ್‌ನಲ್ಲಿ 14 ರನ್‌ ಹರಿದು ಬಂತು.

ಯಶ್‌ ದಯಾಳ್‌ಗೂ ಜೈಸ್ವಾಲ್‌ ಸಿಕ್ಸರ್‌ ಬಿಸಿ ಮುಟ್ಟಿಸಿದರು. ಆದರೆ ಮರು ಎಸೆತದಲ್ಲೇ ದಯಾಳ್‌ ಸೇಡು ತೀರಿಸಿಕೊಂಡರು. ಸ್ಕ್ವೇರ್‌ಲೆಗ್‌ನಲ್ಲಿದ್ದ ಸಾಯಿ ಕಿಶೋರ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಜೈಸ್ವಾಲ್‌ ಗಳಿಕೆ 16 ಎಸೆತಗಳಿಂದ 22 ರನ್‌ (1 ಬೌಂಡರಿ, 2 ಸಿಕ್ಸರ್‌). ಸ್ಕೋರ್‌ 31 ರನ್‌ ಆಗಿತ್ತು.

ಲಾಕಿ ಫ‌ರ್ಗ್ಯುಸನ್‌ ಮತ್ತು ರಶೀದ್‌ ಖಾನ್‌ ತಮ್ಮ ಆರಂಭಿಕ ಓವರ್‌ನಲ್ಲಿ ಉತ್ತಮ ನಿಯಂತ್ರಣ ಸಾಧಿಸಿದರು. ಪವರ್‌ ಪ್ಲೇಯಲ್ಲಿ ರಾಜಸ್ಥಾನ್‌ ಒಂದು ವಿಕೆಟಿಗೆ 45 ರನ್‌ ಗಳಿಸಿತ್ತು. ಪವರ್‌ ಪ್ಲೇ ಬಳಿಕ ಜಾಸ್‌ ಬಟ್ಲರ್‌ಗೆ ಪವರ್‌ ಬಂತು. ಫ‌ರ್ಗ್ಯುಸನ್‌ಗೆ ಸತತ ಬೌಂಡರಿಗಳ ರುಚಿ ತೋರಿಸಿದರು.

ಸಂಜು ಸ್ಯಾಮ್ಸನ್‌ 2 ಬೌಂಡರಿ ಬಾರಿಸಿ ಸಿಡಿಯುವ ಸೂಚನೆಯನ್ನೇನೋ ನೀಡಿದರು. ಆದರೆ ಹಾರ್ದಿಕ್‌ ತಮ್ಮ ಮೊದಲ ಓವರ್‌ನಲ್ಲೇ ರಾಜಸ್ಥಾನ್‌ ನಾಯಕನನ್ನು ಪೆವಿಲಿಯನ್ನಿಗೆ ಅಟ್ಟಿದರು. ಸ್ಯಾಮ್ಸನ್‌ ಗಳಿಕೆ ಕೇವಲ 14 ರನ್‌ (11 ಎಸೆತ, 2 ಬೌಂಡರಿ). ಆ ಓವರ್‌ನಲ್ಲಿ ಪಾಂಡ್ಯ ನೀಡಿದ್ದು ಒಂದೇ ರನ್‌. ಅರ್ಧ ಹಾದಿ ಮುಗಿಸುವಾಗ ರಾಜಸ್ಥಾನ್‌ 2 ವಿಕೆಟ್‌ ನಷ್ಟಕ್ಕೆ 71 ರನ್‌ ಮಾಡಿತ್ತು. ಅಪಾಯಕಾರಿ ಬಟ್ಲರ್‌ ಕ್ರೀಸ್‌ ಆಕ್ರಮಿಸಿಕೊಂಡಿದ್ದರು.

10 ಓವರ್‌ಗಳ ಬಳಿಕ ಗುಜರಾತ್‌ ಬೌಲಿಂಗ್‌ ಘಾತಕವಾಗಿ ಪರಿಣಮಿಸಿತು. ದೇವದತ್ತ ಪಡಿಕ್ಕಲ್‌ ಖಾತೆ ತೆರೆ ಯಲು ಚಡಪಡಿಸಿದರು. 10 ಎಸೆತಗಳಿಂದ ಬರೀ 2 ರನ್‌ ಮಾಡಿ ರಶೀದ್‌ ಖಾನ್‌ ಮೋಡಿಗೆ ಸಿಲುಕಿದರು. 79ಕ್ಕೆ 3 ವಿಕೆಟ್‌ ಬಿತ್ತು. ಇದೇ ಮೊತ್ತದಲ್ಲಿ ಪಾಂಡ್ಯ ದೊಡ್ಡ ಬೇಟೆಯೊಂದನ್ನು ಆಡಿದರು. ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಅವರನ್ನು ಬಲೆಗೆ ಬೀಳಿಸಿದರು. ಆರ್‌ಸಿಬಿ ವಿರುದ್ಧ ಸ್ಫೋಟಕ ಆಟವಾಡಿದ್ದ ಇಂಗ್ಲಿಷ್‌ ಮ್ಯಾನ್‌ ಗಳಿಕೆ 35 ಎಸೆತಗಳಿಂದ 39 ರನ್‌ (5 ಬೌಂಡರಿ).

ಇದರೊಂದಿಗೆ ಬಟ್ಲರ್‌ ಐಪಿಎಲ್‌ ಸೀಸನ್‌ ಒಂದರಲ್ಲಿ ಎರಡನೇ ಅತ್ಯಧಿಕ ರನ್‌ (863) ಬಾರಿಸಿದ ದಾಖಲೆ ಸ್ಥಾಪಿಸಿದರು. ಡೇವಿಡ್‌ ವಾರ್ನರ್‌ ಮೊತ್ತವನ್ನು ಹಿಂದಿಕ್ಕಿದರು (848). ವಿರಾಟ್‌ ಕೊಹ್ಲಿ 2016ರಲ್ಲಿ 973 ರನ್‌ ಸಂಗ್ರಹಿಸಿದ್ದು ದಾಖಲೆ.

ಬಟ್ಲರ್‌ ನಿರ್ಗಮನದೊಂದಿಗೆ ರಾಜಸ್ಥಾನದ ದೊಡ್ಡ ಮೊತ್ತದ ಯೋಜನೆ ವಿಫ‌ಲವಾಯಿತು. ಡೆತ್‌ ಓವರ್‌ ಆರಂಭವಾಗಬೇಕು ಎನ್ನುವಾಗಲೇ ಶಿಮ್ರನ್‌ ಹೆಟ್‌ಮೈರ್‌ ಔಟಾದದ್ದು ರಾಜಸ್ಥಾನ್‌ನ ಅಲ್ಪ ನಿರೀಕ್ಷೆಗೂ ಪೆಟ್ಟು ಕೊಟ್ಟಿತು. ಈ ವಿಕೆಟ್‌ ಕೂಡ ಪಾಂಡ್ಯ ಪಾಲಾಯಿತು. ಅವರ ಸಾಧನೆ 17ಕ್ಕೆ 3 ವಿಕೆಟ್‌. ಇದು ಐಪಿಎಲ್‌ ಫೈನಲ್‌ನಲ್ಲಿ ಕಪ್ತಾನ 2ನೇ ಅತ್ಯುತ್ತಮ ಬೌಲಿಂಗ್‌ ಸಾಧನೆ. 2009ರ ಫೈನಲ್‌ನಲ್ಲಿ ಆರ್‌ಸಿಬಿಯ ಅನಿಲ್‌ ಕುಂಬ್ಳೆ 16 ರನ್ನಿಗೆ 4 ವಿಕೆಟ್‌ ಕೆಡವಿದ್ದು ದಾಖಲೆ.

ಪಂದ್ಯಶ್ರೇಷ್ಠ: ಹಾರ್ದಿಕ್‌ ಪಾಂಡ್ಯ
ಸರಣಿಶ್ರೇಷ್ಠ: ಜಾಸ್‌ ಬಟ್ಲರ್‌
ಆರೆಂಜ್‌ ಕ್ಯಾಪ್‌: ಜಾಸ್‌ ಬಟ್ಲರ್‌
ಪರ್ಪಲ್‌ ಕ್ಯಾಪ್‌: ಯಜುವೇಂದ್ರ ಚಹಲ್‌

ರಾಜಸ್ಥಾನ ರಾಯಲ್ಸ್: 9 ವಿಕೆಟ್‌ಗೆ 130 (ಯಶಸ್ವಿ ಜೈಸ್ವಾಲ್ 22, ಜೋಸ್ ಬಟ್ಲರ್ 39, ಸಂಜು ಸ್ಯಾಮ್ಸನ್ 14, ರಿಯಾನ್ ಪರಾಗ್ 15, ಟ್ರೆಂಟ್ ಬೌಲ್ಟ್ 11, ಹಾರ್ದಿಕ್ ಪಾಂಡ್ಯ 17ಕ್ಕೆ 3, ಸಾಯಿ ಕಿಶೋರ್ 20ಕ್ಕೆ 2),

ಗುಜರಾತ್ ಟೈಟಾನ್ಸ್: 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 133 (ಶುಭಮಾನ್ ಗಿಲ್ 45*, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ 32*, ಟ್ರೆಂಟ್ ಬೌಲ್ಟ್ 14ಕ್ಕೆ1, ಪ್ರಸಿದ್ಧ ಕೃಷ್ಣ 40ಕ್ಕೆ 1, ಯಜುವೇಂದ್ರ ಚಾಹಲ್ 20ಕ್ಕೆ 1).

 

error: Content is protected !!