Wednesday, 30th October 2024

ರಾಜ್ಯದಲ್ಲಿ ಭಾನುವಾರ 5,532 ಮಂದಿಯಲ್ಲಿ ಸೋಂಕು

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
  ವಿಶ್ವ ಮಾರಿ ಕರೋನಾ ಭಾನುವಾರ ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 5,532 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು  1,34,819 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕರೋನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಒಂದೇ ದಿನ  84 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2504 ಕ್ಕೆ  (ಅನ್ಯ ಕಾರಣಕ್ಕೆ 8ಸೇರಿ) ಏರಿಕೆಯಾಗಿದೆ. ಈ ನಡುವೆ ರಾಜ್ಯದಲ್ಲಿ 4,077 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 57,725 ಕ್ಕೇರಿದಂತಾಗಿದೆ. ಇನ್ನು 74,590 ಸಕ್ರಿಯ ಪ್ರಕರಣಗಳಿವೆ.
 ರಾಜಧಾನಿ ಬೆಂಗಳೂರು ನಗರದಲ್ಲಿ 2,105 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 59501 ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ  21 ಮಂದಿ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 2,496 ಮಂದಿ ಮೃತಪಟ್ಟಿದ್ದು ಐಸಿಯುನಲ್ಲಿ 638 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಒಟ್ಟು 18,517 ಮಂದಿಗೆ ರಾಪಿಡ್‌, 14,500 ಮಂದಿಗೆ ಆರ್‌ಟಿ ಪಿಸಿಆರ್‌ ಸೇರಿದಂತೆ ಒಟ್ಟು 33,017 ಮಂದಿಗೆ ಕೋವಿಡ್‌ 19 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 2,105, ಬಳ್ಳಾರಿ 377, ಕಲಬುರಗಿ 238 ಮತ್ತು ಮೈಸೂರಿನಲ್ಲಿ ತಲಾ 238 ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನಲ್ಲಿ 2,331, ತುಮಕೂರು 150, ಬಳ್ಳಾರಿ 105, ಕಲಬರುಗಿ 117, ರಾಯಚೂರು 153 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 638 ಮಂದಿ ಐಸಿಯುನಲ್ಲಿದ್ದು, ಬೆಂಗಳೂರು ನಗರ 339, ಧಾರವಾಡ 40, ಹಾಸನ 37, ಬಳ್ಳಾರಿ 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
………
ಡಿಸೋಜಾಗೆ ಕರೋನಾ, ಖಾದರ್ ಹೋಂ ಕ್ವಾರಂಟೈನ್
 ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾಗೆ ಕರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಅವರ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಶನಿವಾರ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕರೋನಾ ಪಾಸಿಟಿವ್ ಪತ್ತೆಯಾಗಿದ್ದರಿಂದ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ ಖಾದರ್ ಇಂದಿನಿಂದ ತನ್ನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.