Monday, 25th November 2024

ಗಂಧದಗುಡಿ ಚೆಂದದ ಗಡಿಯೂ ಹೌದು…

ಅಲೆಮಾರಿಯ ಡೈರಿ

mehandale100@gmail.com

ದೇಶಾದ್ಯಂತದ ಅಲೆಮಾರಿತನದ ಮಧ್ಯೆ ನಾನು ಕರ್ನಾಟಕದ ಬಗ್ಗೆ ಬರೆದಿದ್ದು ಕಡಿಮೆ. ಕಾರಣ ನಮ್ಮವರು ಇಲ್ಲ ಓಡಾಡಿ ಕೊಂಡೇ ಇರುತ್ತಾರಲ್ಲ ಎನ್ನುವುದು ಒಂದೆಡೆಯಾದರೆ, ಹೆಚ್ಚಿನ ಪ್ರವಾಸಿ ತಾಣಗಳಿಗಿಂತ ಅಲ್ಲಲ್ಲಿ ಕಾಲಿಟ್ಟು ಹುಡುಕಿ ತೆಗೆದ ಹಲವು ಪ್ರದೇಶಗಳೂ ಇವತ್ತು ಸರಿ ಸಾಮಾನ್ಯವಾಗಿ ಪರಿಚಿತವಾಗುತ್ತ ಸಾಗಿದ್ದು.

ಆದರೆ ನಮ್ಮಲ್ಲಿ ಪ್ರವಾಸ ಎಂದರೆ ಕೇವಲ ಬೆಂಗಳೂರಿನಿಂದ ಹೊರಟರೆ, ಅತ್ತಲಿನ ಬೇಲೂರು ಹಾಯ್ದು ಹೆಚ್ಚೆಂದರೆ ಕೊಡಗು, ಮಡಿಕೇರಿ, ಇತ್ತಲಿನ ದುಬಾರೆ, ಅಲ್ಲಲ್ಲಿ ಕಾಡಿನ ಪಯಣ ಎಂದರೆ ನಾಗರಹೊಳೆ, ಬಂಡಿಪುರ. ಅದಕ್ಕಿಂತ ವಿಭಿನ್ನ ತಿರುಗಾಟ ಮಾಡೊಣ ಎಂದರೆ ಸೀದಾ ಬಂದಿಳಿಯುವುದು ಗೋಕರ್ಣ ಕ್ರಾಸ್‌ರೋಡಿಗೆ. ಅಂದು ಅಗಾಧ ನೊರೆ ಕಕ್ಕುವ ಸಮುದ್ರ  ಸಿಗುತ್ತ ದಲ್ಲ, ಬಾಕಿ ಎಲ್ಲ ಮಾಫಿಯಾಗಿಬಿಡುತ್ತದೆ.

ಉಳಿದಂತೆ ಹಗಲ ಬಿಸಿಲಿಗೆ ಮೈಚೆಲ್ಲಿ ಸಂಜೆಯ ಹೊತ್ತಿಗೆ ರಣರಣ ಇಳಿಯುವ ಬೆವರಿಗೆ ಮೈ ಅಂಟಿಸಿಕೊಂಡು, ರಾತ್ರಿಯ ಹೊತ್ತಿಗೆ ಅದೇ ತೀರದ ಅಲೆಗಳಿಗೆ ಕಾಲು ಬಿಸಾಕಿ, ಬೇಕು ಬೇಡದ್ದನ್ನೆಲ್ಲ ಕೈಗೆಟುಕುವಂತೆ ಇರಿಸಿಕೊಂಡು ಬಿದ್ದು ಹೋಗಿರುತ್ತಾರೆ. ಅದರಾಚೆಗೆ ಕಾಡುಮೇಡು, ಪಶ್ಚಿಮಘಟ್ಟ ಎನ್ನುವ ಹುಕಿಗೆ ಬಿದ್ದವರು ಬಂದರೂ ಯಾಣ, ಅರಬೈಲು, ಅಲ್ಲಲ್ಲಿ ಬೀಳುವ ‘ಜಲಲ ಜಲಲ ಜಲಧಾರೆ’ ಎಂದು ಜೋಗ, ಕೆಪ್ಪೆ ಜೋಗ, ಸಾತೊಡ್ಡಿ, ಉಂಚಳ್ಳಿ, ಮಾಗೋಡು ಎಂದೆಲ್ಲ ನೀರಿನ ಸೆಳೆವಿಗೆ ಸಿಕ್ಕಲು ಹವಣಿಸುವವರೇ.

ಇದರ ಹೊರತಾಗಿ ಕಾಡುಮೇಡು ಎನ್ನದೆ ಅಲೆಯವ ಅಲೆಮಾರಿತನಕ್ಕಿಂತ ಇತ್ತೀಚಿನ ವೀಕೆಂಡ್ ತೆವಲಿನ ಟೆಕ್ಕಿ ಸಾಮ್ರಾಜ್ಯದಲ್ಲಿನ ಹೊಸ ತಲೆಮಾರು ಅರಸುವುದು ಆದಷ್ಟು ಏಕಾಂತದ ‘ಕಪಲ್ ಫ್ರೆಂಡ್ಲಿ ಗುಹೆ’ ಯಂಥ ಮಾಡುಗಳನ್ನು. ಅದನ್ನೆಲ್ಲ ‘ಹೋಮ್ ಸ್ಟೇ’ ಮತ್ತು ರೆಸಾರ್ಟ್ ನೆಪದಲ್ಲಿ ಲೆಕ್ಕತಪ್ಪಿ ಆರಂಭಿಸಲಾಗಿದ್ದು ಅದಕ್ಕೆಲ್ಲ ಪಕ್ಕಾಗಿದ್ದು ಹೆಚ್ಚಿನ ಪಶ್ಚಿಮಘಟ್ಟದ ಒಳಾವರಣದ ಕಾಡುಗಳು. ಹಾಗಾಗಿ ತೀರಾ ಎಲ್ಲೇ ಹೋದರೂ ಇವತ್ತು ಮಲೆನಾಡು, ಕರಾವಳಿಯ ಒಳಭಾಗದ ಗುಡ್ಡದ ಸೆರಗುಗಳಲ್ಲ ಬಣ್ಣ ಬಣ್ಣದ ಟೆಂಟುಗಳೇ.

ಇಲ್ಲ ತಿರುಗಾಟಕ್ಕಿಂತ ಮುಖ್ಯ ಒಂದೆರಡು ದಿನದ ಖಾಸಗಿ ಭೇಟಿಯವರು, ಮೂಗಿನ ತನಕ ಕುಡಿಯುವ ಹುಕಿಯವರು, ಉಳಿದಂತೆ ಕಾಡಿನ ಪ್ರಶಾಂತತೆಯ ಮಧ್ಯದಲ್ಲಿ ತಮ್ಮದೇ ಖಾಸಗಿ ಸಾಮ್ರಾಜ್ಯಕ್ಕಾಗಿ ಬಾಗಿಲೆಳೆದುಕೊಂಡು ಒಳಸೇರಿ 2 ದಿನವಾದ ಮೇಲೆ ಮುಖ್ಯರಸ್ತೆಗೆ ಬರುವ ಸಂಚಾರಿ ಲಾಡ್ಜುಗಳವರು.

ಇದರ ಹೊರತಾಗಿ ಈ ಪ್ರದೇಶ ಬಿಟ್ಟು ಬಾಕಿ ಕಡೆಯಲ್ಲಿ ಅಂದರೆ ಉತ್ತರ ಕರ್ನಾಟಕದ ಕಡೆ ವಾಹನ ತಿರುಗಿಸುವವರಿಗೆ ನೆನ ಪಾಗುವುದೇ ಹಾಳಾಗಿದ್ದೂ ಒಂದಿಷ್ಟು ಪುನರ್ವೈಭವ ಗಳಿಸಿದ ಹಂಪಿ. ಹೆಚ್ಚಿನ ಇತರ ಪ್ರವಾಸಿಗರ ಬೈಠಕ್ ಇರುವುದೇ ಹಂಪಿ ಮಹಾನವಮಿ ದಿಬ್ಬದ ಮೇಲೆ ಅಂತಿಮವಾಗಿ. ಅದರಾಚೆಗೆ ಹೋದರೆ ಕೇಳಿ. ಇವತ್ತಿಗೂ ದಾರಿಯ ಮೇಲೆ ಸುಲಭಕ್ಕೆ ಸಿಕ್ಕುವ ತಾಣಗಳಾಗಿ ಕೊಪ್ಪಳ ಮತ್ತು ಗದಗದ ವಿಭಿನ್ನ ಶೈಲಿಯ ಶಿಲ್ಪಕಲಾ ಶ್ರೀಮಂತಿಕೆಯ ಬಾವಿಗಳು ದಕ್ಕುತ್ತವೆಯೇ ವಿನಾ, ಅದಕ್ಕಾಗೇ ಹೋದ ವಿಹಾರಿಗಳು ತೀರಾ ಕಡಿಮೆ.

ಹಾಗಾಗಿ ಹಂಪಿಯಲ್ಲಿ ಕ್ಲಿಕ್ಕಿಸಿದ ಫೋಟೊಗಳಿಗೆ ಹೋಲಿಸಿದರೆ, ಗದಗ ಮತ್ತು ಕೊಪ್ಪಳ ಲಕ್ಕುಂಡಿಯ ಆಸುಪಾಸಿನಲ್ಲಿ ಆಗಿರುವ ಆಗುತ್ತಿರುವ ಸಂಚಲನ ಪ್ರವಾಸದ ಲೆಕ್ಕದಲ್ಲಿ ತುಂಬ ಕಡಿಮೆ. ಅದರಾಚೆಗೆ ಹೆಚ್ಚೆಂದರೆ ಆಗೀಗ ಹತ್ತಿರ ಬಂದಿದ್ದೇವಲ್ಲ ಎಂದು
ವಿಜಯಪುರಕ್ಕೆ ಹೋಗುವವರನ್ನು ಬಿಟ್ಟರೆ ರಾಜಧಾನಿ ಕಡೆಯಿಂದ ಇಲ್ಲಿನ ಒಣನೆಲ ಮತ್ತು ಹವೆಗೆ ಒಗ್ಗಿಕೊಂಡು ಎಗ್ಗಿಲ್ಲದೆ ಬರುತ್ತಿರುವವರು ತುಂಬ ಕಡಿಮೆ.

ಅದರಾಚೆಗಿನ ಬೀದರ್-ಸಂಡೂರಿನ ಸುಂದರ ಕೆಂಪುನೆಲದ ಹಸಿರುಕ್ಕುವ ಪ್ರದೇಶಗಳು, ರಣರಣ ಬಳ್ಳಾರಿಯ ಕಪ್ಪುನೆಲದ ವಿಭಿನ್ನ ಪ್ರದೇಶಗಳು ಇವತ್ತಿಗೂ ಪ್ರವಾಸಿಗರ ಲಿಸ್ಟ್‌ನ ಕೊನೆಯ ಆಯ್ಕೆಯೇ. ಅದರಲ್ಲೂ ಬೀದರ್ ಮತ್ತು ಹೈದರಾಬಾದ್ ಕರ್ನಾಟಕದ ಕಡೆಯಲ್ಲಿ ಈ ಕಪಲ್ ಫ್ರೆಂಡ್ಲಿಗಳು ಕಾಲಿಟ್ಟಿದ್ದರೆ ಕೇಳಿ. ಇವರಿಗೆಲ್ಲ ಬೇಕಿ ದ್ದುದು ಮುಚ್ಚಟೆಯಾಗಿ ಇದ್ದುಹೋಗುವ ಕಾಡಿನ ಒಳ ಭಾಗಕ್ಕೆ ತೆರೆದುಕೊಂಡು ಪೂರೈಸಿಕೊಳ್ಳುವ ಫ್ಯಾಂಟಸಿಯ ಬದಲಿಗೆ ಇನ್ನೇನಾದರೂ ಇದ್ದರೆ ಅದು ಮತ್ತಿಷ್ಟು
ಪ್ರೈವೆಸಿಯೇ ಹೊರತಾಗಿ ಬೇರೇನಲ್ಲ. ಹಾಗಾಗಿ ನನಗೆ ಇದೆಲ್ಲ ನೆನಪಾಗಿದ್ದು ‘ಗಂಧದ ಗುಡಿ’ ಚಿತ್ರದಲ್ಲಿ ಕಾಡು ಮತ್ತು ಮನುಷ್ಯನ ಜತೆಗೆ ಒಳನಾಡಿನ ಡಾಕ್ಯುಮೆಂಟರಿ ನೋಡಿದಾಗ.

ಅಲ್ಲೂ ಡೆಕ್ಕನ್ ಪ್ರದೇಶ ಬಿಟ್ಟರೆ ಅತಿಹೆಚ್ಚು ಕವರೇಜ್ ತೆಗೆದುಕೊಂಡದ್ದು ಕಾಡೇ. ಕಾಡಿನ ಅಪರಿಮಿತ ರಹಸ್ಯಗಳಿಗೆ ಸಾಕ್ಷಿ ಯಾಗುವ ಹುಲಿ ಮತ್ತು ಆನೆಯಂಥ ದೈತ್ಯಪ್ರಾಣಿಗಳು. ನಿಜಕ್ಕೂ ಇವತ್ತಿನ ದಿನದಲ್ಲಿ ಹುಲಿಯ ಸುರಕ್ಷತೆಗೆ ಅತಿಹೆಚ್ಚು ಒತ್ತು ದೊರಕಿದ್ದು ಅಣಶಿ ಅಭಯಾರಣ್ಯದಲ್ಲಿ. ಅದರಲ್ಲೂ ಬಂಡಿಪುರ ಮತ್ತು ನಾಗರಹೊಳೆ ಹೊರತುಪಡಿಸಿದರೆ ತ್ಯಾವರೆಕೊಪ್ಪವೇ ಸುರಕ್ಷಿತ, ಆದರೂ ಅದು ನೈಜ ಸ್ವತಂತ್ರ ಹುಲಿಯ ತಾಣವಲ್ಲ. ಏನಿದ್ದರೂ ಪಾಗಾರದೊಳಗೆ ಹಾಕಿದ ಮಾಂಸ ತಿಂದು ಬದುಕುವ ಪ್ರಾಣಿ. ಆದರೆ ಅಣಶಿ ಅಭಯಾರಣ್ಯ ಹಾಗಿಲ್ಲ.

ಏನಿದ್ದರೂ ಇಲ್ಲಿನ ಹುಲಿಗಳು ಇತರೆ ಕಾಡುಪ್ರಾಣಿಗಳು ಸ್ವಯಂ ಬೇಟೆಯಾಡುವ ನೈಜ ಪರಿಸ್ಥಿತಿಯಲ್ಲಿವೆ. ಲೆಕ್ಕತಪ್ಪಿ ಕಾಡು ಕೋಣಗಳ ಹಿಂಡು ಅಲೆಯುತ್ತಿರುತ್ತದೆ. ದಾಂಡೇಲಿ ಕಡೆಯಿಂದ ನೋಡಿದರೆ ಆನೆಗಳ ದಂಡು ಅಲ್ಲಲ್ಲಿ ಸುಲಭಕ್ಕೆ ಲಭ್ಯ ವಾಗುತ್ತದೆ. ವಿಪರೀತ ಮೂಡಿಪ್ರಾಣಿಗಳಾದ ಕರಡಿ, ಆನೆಗಳ ದಾಳಿಯ ಹಿಂದಿನ ಮನಸ್ಥಿತಿಯ ಮರ್ಮವಿನ್ನೂ ಮನುಜಲೋಕಕ್ಕೆ
ಸಿಕ್ಕಿಲ್ಲ.

ಇತ್ತಲಿನ ಒಳ ಊರುಗಳಾದ ದುದಗಾಳಿ, ಕಮರ್ಗಾಂವ್, ಕೋಟೆ, ಜಾಲಾವಳಿ, ಕುಂರಿ, ಸಿಂಗಾವ್, ದೊಂರ್ಗೊ, ಕೊಡತಳಿ, ಬಿರ್ಕೊಲ, ಚಾವಡಿ, ಸಾಟಿಮನೆ, ಬಂಕೊಳ್ಳಿ, ತರ್ಸಿಮನೆ, ಕೋತ್ರೆಪಾಲ್ ಇತ್ಯಾದಿಗಳೆಲ್ಲ ಇವತ್ತಿಗೂ ಮನುಷ್ಯನ ಕಾಲ್ತುಳಿತಕ್ಕೆ ದಕ್ಕದ ಊರುಗಳೇ. ಅದರಿಂದಾಗೇ ಕಾಳಿನದಿಯ ಆವಾಸದಲ್ಲಿ ಎಲ್ಲೇ ಹೋದರೂ ಇವತ್ತು ಅಪರೂಪದ ಪಶ್ಚಿಮಘಟ್ಟದ ಪರಿಸರ ಕಂಡುಬರುತ್ತದೆ.

ಹಚ್ಚಹಸಿರು ಮತ್ತು ದಟ್ಟಕಾಡು ಉಳಿದು ಬೆಳೆಯಲು ಇವತ್ತಿಗೂ ರಾತ್ರಿಯ ಅಪರ ಹೊತ್ತಿನಲ್ಲಿ ಡ್ರೈವ್‌ನಲ್ಲಿ ಇದ್ದರೆ ಈ ರಸ್ತೆಯ ಯಾವುದೇ ಕಡೆಯಿಂದ ಖಂಡಿತ ಒಂದಲ್ಲಾ ಒಂದು ಕಾಡುಪ್ರಾಣಿಗಳು ರಸ್ತೆಯುದ್ದಕ್ಕೂ ಸಿಕ್ಕುತ್ತವೆ. ಮುಖ್ಯವಾಗಿ ಚಿಗರೆ, ಜಿಂಕೆ, ಚಿರತೆ, ಮುಳ್ಳುಹಂದಿ, ಕಡವೆ, ಆನೆ, ಕಾಡುಕೋಣ ಸಿಂಗಲ್ ಅಲ್ಲ ಹಿಂಡಿನ ಲೆಕ್ಕದಲ್ಲಿ. ಹಕ್ಕಿಗಳಲ್ಲಿ ಮುಖ್ಯವಾಗಿ ಹಾರ್ನ್‌ಬಿಲ್ ಸೇರಿದಂತೆ ನೂರಾರು ಬಣ್ಣದ ಹಕ್ಕಿಗಳ ಸಂತೆ ಇಲ್ಲ ಸ್ವಲ್ಪ ಮಾತ್ರವೇ ದೃಷ್ಟಿ ಹರಿಸಿದರೂ ಅಲ್ಲಲ್ಲಿ ಲಭ್ಯವೇ.

ಇದೆಲ್ಲ ಕೆಲವೇ ವರ್ಷಗಳಲ್ಲಾದ ಬದಲಾವಣೆ ಕಾರಣ ಕಾಳಿನದಿ ಪ್ರದೇಶದ ಆಸುಪಾಸಿನಲ್ಲಿ ಕಳೆದ 2 ದಶಕಗಳ ಹಿಂದೆ ಇದ್ದು ದಕ್ಕಿಂತ ಇಂದಿನ ಪರಿಸ್ಥಿತಿ ಅತ್ಯುತ್ತಮವಾಗಿದೆ, ಹಾಗಾಗಿ ಎಲ್ಲೋ ಕಾಡೊಳಗಿದ್ದ ಹತ್ತು ಹಲವು ಪ್ರಾಣಿಗಳೆಲ್ಲ ಆಗೀಗ ರಸ್ತೆವರೆಗೂ ಬರುವಷ್ಟು ಪರಿಸರ ಮತ್ತು ಮಾನವ ವಾಹನ ಸ್ನೇಹಿಯಾಗೂ ಅಭ್ಯಾಸಕ್ಕೊಳಪಟ್ಟಿರಬೇಕು.

ಮೂಲತಃ ಇವೆಲ್ಲ ಇವತ್ತು ಇಷ್ಟು ಗರಿಗೆದರಲು, ಅವುಗಳ ಆವಾಸವಾದ ಮೂಲ ಅರಣ್ಯಸಂಪತ್ತಿಗೆ ಮಾನವನ ಪ್ರವೇಶ ನಿಷೇಧಿಸಿದ್ದು. ಹಲವು ಪ್ರಾಣಿ ಸಂರಕ್ಷಕ ವೇಷದವರಿಗೆ ಮತ್ತು ಎನ್ ಜಿಒಗಳಿಗೆ ಅರಿವಾಗದ್ದೇನೆಂದರೆ ಯಾವುದೇ ಕಾಡು ಅದ್ಭುತ
ಮತ್ತು ನೈಜವಾಗಿ ಬರಬೇಕೆಂದರೆ ೧೦ ವರ್ಷ ಆ ಜಾಗದಲ್ಲಿ ನಿಮ್ಮ ಪಾದ ಊರದಿದ್ದರೆ ಸಾಕು. ಬಾಕಿ ಎಲ್ಲ ತಾನಾಗೆ ಆಗುತ್ತದೆ. ಅಷ್ಟರ ಮಟ್ಟಿಗೆ ಮಾನವನ ಕಾಲ್ಗುಣ ಪರಿಸರಕ್ಕೂ ಅನಾಹುತಕಾರಿ.

ಉಳಿದಂತೆ ಕಾಡಿನ ಪರಿಸರ ಬೆಳೆಯುವುದಾಗಲಿ ಬೆಳೆಸುವುದಾಗಲಿ ಮಾಡುತ್ತೇವೆ ಎನ್ನುವ ಸೋಗಿಗಿಂತ ಅದರ ತಂಟೆಗೇ ಹೋಗದಿದ್ದರೆ ರಿಸಲ್ಟ್ ಪಕ್ಕಾ. ಕಾಡು ಮತ್ತು ಕಾಡುಪ್ರಾಣಿ ಎಲ್ಲವೂ ಸೇಫ್. ಮೂಲತಃ ನಮ್ಮ ವಾಸನೆ ಮತ್ತು ಹಸ್ತಕ್ಷೇಪದಿಂದಲೇ ಅರ್ಧ ಪ್ರಾಣಿಗಳು ತಮ್ಮ ಆವಾಸ ಬದಲಿಸುತ್ತಿದ್ದರೆ, ನಾವು ಏನೋ ಅವುಗಳನ್ನು ಸಾಕುತ್ತೇವೆ ಎಂದು ಅರಿವಿಗೇ ಬಾರದಂತೆ ಹೊರಹಾಕುತ್ತಿದ್ದೇವೆ.

ಆದರೆ ಎಲ್ಲೇ ಮೀರಿ ಹೋಗಲೊಪ್ಪದ ಪ್ರಾಣಿಗಳು ಈ ವೈಪರಿತ್ಯಕ್ಕೆ ಸಿಕ್ಕು ಅನಿವಾರ್ಯವಾಗಿ ತಮ್ಮ ನೈಜ ವಾತಾವರಣ ಲಭ್ಯ ವಾಗದೆ ಗೋಣು ಚೆಲ್ಲುತ್ತವೆ. ಹಾಗಾಗಿ ಕಾಡು ಮತ್ತು ಅದರ ಸರಹದ್ದಿನ ತಂಟೆಗೆ ಹೋಗದಂತೆ ರಕ್ಷಿಸಿದ್ದೇ ಆದರೆ ಇವತ್ತು ಪಶ್ಚಿಮ ಘಟ್ಟದ ಹಲವೆಡೆ ಆಗಿರುವ ಆಗುತ್ತಿರುವ ಹಬ್ಬಿದ ಮಲೆಯ ಮಧ್ಯದ ಪರಿಸರ ಎಲ್ಲ ಕಾಡಿಗೂ ಎಡೆಗೂ ಲಭ್ಯವಾಗುವುದು ದೊಡ್ಡದಲ್ಲವೇ ಅಲ್ಲ. ಹಾಗಾದಲ್ಲಿ ‘ಗಂಧದ ಗುಡಿ’ ಮಾತ್ರವಲ್ಲ ನಮ್ಮ ಕಾಡುಗಳೂ ಅಂದದ ಚೆಂದದ ಗಡಿಯೂ ಹಾಕಿ ಕೊಳ್ಳಬಲ್ಲದು.

ಈ ಕಾಡಿನ ಕತೆ ಹೇಳುವ ಪುನೀತ್ ಸಿನಿಮಾ ಹೇಳಹೊರಟಿದ್ದು ತೋರಿಸಿದ್ದು ಅದನ್ನೆ. ಅಲೆಮಾರಿತನದ ಜತೆಗೆ ಕಾಡಿನ ಮತ್ತು ನೈಜ ವೈಪರಿತ್ಯಕ್ಕೆ ಈಡುಮಾಡದ ವಾತಾವರಣ ಅದರ ಕಾವಳ, ಅದರ ರೀತಿನೀತಿ ಉಳಿಸಬೇಕಾದ ಜವಾಬ್ದಾರಿ ಕೂಡ ಇದ್ದಿದ್ದು ನಮ್ಮ ಗಮನಕ್ಕೆ ಬಾರದಂತೆ ರೆಸಾರ್ಟು ಮತ್ತು ಒಳನಾಡಿನಲ್ಲಿ ಕಾಡಿನ ಕೋವೆಗಳಲ್ಲಿ ಸೈಕ್ಲಿಂಗೂ ಜಂಗಲ್ ರಿಸಾರ್ಟುಗಳೂ
ಇತ್ಯಾದಿ ಮಾಡುತ್ತ ಅದರ ಕಲರವ ಕದಡುತ್ತಿದ್ದೇವೆ.

ಅದರಿಂದಾಗೇ ಬದಲಾಗುತ್ತಿರುವ ಪರಿಸರ ಕಾರಣ ಅಂಥ ಅನೂಹ್ಯ ಎನ್ನುವ ಕಾಡು ಕಾಣದೆ ನಾಡು ಕೂಡ ಆಧ್ವಾನವಾಗುತ್ತಿದೆ. ಉಳಿಸಬೇಕಾದದ್ದು ಮತ್ತು ಉಳಿಯಬೇಕಾದದ್ದು ನಾವು ಮತ್ತು ಕಾಡು ಎಂದರೆ ಒಬ್ಬರ ತಂಟೆಗೆ ಹೋಗದಿದ್ದುದೇ ಹೊರತಾಗಿ ಪ್ರವಾಸ, ಟೂರು, ಟ್ರೆಕ್ಕು ಎಂದೆಲ್ಲ ಆಚೀಚೆ ನುಗ್ಗುವ ಭರದಲ್ಲಿ ಪರಿಸರ ಗಬ್ಬೆಬ್ಬಿಸುವ ಅಲೆಮಾರಿತನವಲ್ಲ. ಮೊನ್ನೆ ಜಂಗಲ್ ಟ್ರೈಬಲ್ ನೋಡುವಾಗ ಅಲೆಮಾರಿತನದ ಮಧ್ಯೆಯೂ ಎಷ್ಟೆಲ್ಲ ಜವಾಬ್ದಾರಿಯಿದೆಯಲ್ಲ ಎನ್ನಿಸುತ್ತಿದ್ದರೆ ಇದೆಲ್ಲ ಅನ್ನಿಸಿದ್ದು
ಹಂಚಿಕೊಂಡೆ.

ಕಾರಣ ಅಲೆಮಾರಿಯಾಗೋದೆ ಆದರೆ, ಮೊದಲು ಈ ಗಂಧದ ಗುಡಿಯನ್ನು ಒಮ್ಮೆ ಪೂರ್ತಿ ಒಳನಾಡುಗಳ ಮೂಲಕ ಸುತ್ತುಹಾಕಿ ಆಮೇಲೆ ಇತರ ಸರಹದ್ದುಗಳನ್ನು ಸವರುವ ಉಮೇದಿಯ ಯೋಜನೆ ಇದ್ದರೆ ಅದರ ಕತೆನೇ ಬೇರೆ.