Thursday, 28th November 2024

ತುರ್ತು ಆರೋಗ್ಯ ಸೇವೆ ಪಡೆಯಲು ಯಾವುದೇ ದಾಖಲಾತಿಗಳು ಅಗತ್ಯ ಇರುವುದಿಲ್ಲ

ತುಮಕೂರು : ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ  ತುರ್ತು ಆರೋಗ್ಯ ಸೇವೆ ಅಗತ್ಯವಿದ್ದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿ ಇತರೆ ಯಾವುದೇ ದಾಖಲಾತಿಗಳು ಅಗತ್ಯ ಇರುವುದಿಲ್ಲ ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೂ
ಕೂಡ ಮತ್ತೊಮ್ಮೆ ಈ ನಿಯಮ ಮರು ಜಾರಿ ಮಾಡುತ್ತಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಣಂತಿ ಹಾಗೂ ಅವಳಿ ಮಕ್ಕಳು ಮೃತ ಪಟ್ಟ ಪ್ರಕರಣ ಸಂಬಂಧ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ರೋಗ ಜಾತಿ, ವರ್ಗ, ಆರ್ಥಿಕ ಸ್ಥಿತಿ ಅವಲಂಬಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ನಿವಾರಿಸುವುದು ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿ ಕರ್ತವ್ಯವಾಗಿದೆ. ಹಾಗಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಬಾರದು ಎಂಬ ಉದ್ದೇಶದಿಂದ ನಿಯಮವನ್ನು ಮರು ಜಾರಿಗೊಳಿಸುತ್ತಿದ್ದೇವೆ ಎಂದರು.
ಇಂತಹ ಘಟನೆಗಳು ಮರುಕಳಿಸಿದಲ್ಲಿ ಇಲಾಖೆಯು ಸಂಬ0ಧಪಟ್ಟ0ತಹ ಅಧಿಕಾರಿ ಅಥವಾ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಜತೆಗೆ ಸೇವೆಯಿಂದಲೇ ವಜಾಗೊಳಿಸುವುದು ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಬಗ್ಗೆಯೂ ನಮ್ಮ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಡಿ.ಹೆಚ್.ಒ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ರಚನೆ
ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ವಾಣಿ ವಿಲಾಸ ಆಸ್ಪತ್ರೆಯ ಪ್ರಸೂತಿ ತಜ್ಞರು, ಘೋಷಾ ಆಸ್ಪತ್ರೆ ಮುಖ್ಯಸ್ಥರು ಸೇರಿ ಮೂವರು ವೈದ್ಯರನ್ನೊಳಗೊಂಡ ಸಮಿತಿ ರಚಿಸಿ ೨ ವಾರದೊಳಗಾಗಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಬಾಲಕಿಗೆ ಉಚಿತ ಶಿಕ್ಷಣ
ಮೃತಪಟ್ಟ ಮಹಿಳೆಗೆ ೬ ವರ್ಷದ ಹೆಣ್ಣು ಮಗಳಿದ್ದು, ಆಕೆಗೆ ಬಾಲಕಿಯರ ಮಂದಿರದಲ್ಲಿ ಹದಿನೆಂಟು ವರ್ಷ ಉಚಿತ ಶಿಕ್ಷಣ, ಆರೋಗ್ಯ ಮತ್ತು ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಅಲ್ಲದೆ ಆಕೆಯ ಅಕೌಂಟಿಗೆ ಹಣ ಹಾಕಿಸುವ ವ್ಯವಸ್ಥೆ ಮಾಡಿ, ಆಕೆಗೆ ಹದಿನೆಂಟು ವರ್ಷ ತುಂಬಿದಾಗ ಉನ್ನತ ವ್ಯಾಸಂಗಕ್ಕೆ ಸಹಕಾರ ನೀಡುವ ಸಂಬ0ಧ ಮುಖ್ಯಮಂತ್ರಿಗಳೊ0ದಿಗೆ ಚರ್ಚೆ ನಡೆಸಿದ್ದೇನೆ. ಜತೆಗೆ ನಾನು ಸಹ ವೈಯುಕ್ತಿಕವಾಗಿ ಬಾಲಕಿಯ ಅಕೌಂಟಿಗೆ ಹಣ ಡೆಪಾಸಿಟ್ ಮಾಡಬೇಕೆಂಬ ತೀರ್ಮಾನ ಮಾಡಿದ್ದೇನೆ ಎಂದರು.
ಶೋಕಾಸ್ ನೋಟಿಸ್
ಮಹಿಳೆ ಜಿಲ್ಲಾಸ್ಪತ್ರೆಗೆ ಬಂದ ಸಂದರ್ಭದಲ್ಲಿ ನಡೆದಿರುವ ಘಟನಾವಳಿಯನ್ನು ಸಿಸಿಟಿವಿಯಲ್ಲಿ ನೋಡಿದ್ದೇನೆ. ಆಕೆ ಬಂದು ಶುಶ್ರೂಷಕರನ್ನು ಮೊದಲು ಭೇಟಿ ಮಾಡಿದ್ದಾಳೆ. ಅವರು ಮಾತನಾಡಿರುವ ಬಗ್ಗೆ, ವೈದ್ಯೆ ಉಷಾ ಚಿಕಿತ್ಸೆ ನೀಡಲು ಸ್ಪಂದಿಸದೇ ಇರುವ ಬಗ್ಗೆಯೂ ನೋಡಿದ್ದೇನೆ ಎಂದ ಅವರು, ಈ ಪ್ರಕರಣ ಸಂಬಂಧ ಜಿಲ್ಲಾ ಶಸ್ತçಚಿಕಿತ್ಸಕರಿಗೆ ಸಹ ಶೋಕಾಸ್ ನೋಟಿಸ್ ನೀಡಿದ್ದೇವೆ. ೨೪ ಗಂಟೆಯೊಳಗೆ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಸೂತಿ ವೈದ್ಯ ಉಷಾ ಮತ್ತು ಆರೋಗ್ಯ ಸಹಾಯಕಿಯರಾದ ಯಶೋಧ, ಸವಿತಾ ಮತ್ತು ದಿವ್ಯಾ ಎಂಬುವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.