ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ದೇಶದಲ್ಲಿ ದಿನೇ ದಿನ ಹೆಚ್ಚಳವಾಗುತ್ತಿರುವ ಡೀಸೆಲ್ ದರವನ್ನು ಇನ್ನೊೊಂದು ತಿಂಗಳಲ್ಲಿ ಇಳಿಕೆ ಮಾಡದಿದ್ದರೆ, ರಾಷ್ಟ್ರವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೆಷನ್ ಎಚ್ಚರಿಕೆ ನೀಡಿದೆ.
ಈ ಕುರಿತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಅವರು, ಕೇಂದ್ರ ಸರಕಾರ ತೆರಿಗೆಯನ್ನು ಏರಿಕೆ ಮಾಡಿ ಕೃತಕವಾಗಿ ಡೀಸೆಲ್ ದರ ಹೆಚ್ಚಿಸಿರುವುದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ಅಲ್ಲದೆ, ಡೀಸೆಲ್ ದರವನ್ನು ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕು.
ದೇಶಾದ್ಯಂತ ಕರೋನಾ ಪರಿಸ್ಥಿತಿ ಇರುವುದರಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಏರುಪೇರಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರಕು ಸಾಗಾಣೆ ವಾಹನಗಳ ವ್ಯವಹಾರ ಕುಂಠಿತಗೊಂಡಿದ್ದು, ಲಾರಿ ಉದ್ದಿಮೆಯಲ್ಲಿ ಉಳಿಯುವುದೇ ಕಷ್ಟಕರವಾಗಿದೆ. ಇಂತಹ ಸಂಧರ್ಭದಲ್ಲಿ ಕೇಂದ್ರ ಸರಕಾರ ಡೀಸೆಲ್ ದರಗಳನ್ನು ದಿನೇದಿನೇ ಹೆಚ್ಚಿಸಿ ಉದ್ದಿಮೆಗೆ ದೊಡ್ಡಹೊಡೆತ ನೀಡಿದೆ. ರಾಷ್ಟ್ರಾದ್ಯಂತ ಲಾರಿ ಮಾಲೀಕರು ಕೇಂದ್ರ ಸರಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿ ದರ ತಗ್ಗಿಸಲು ಒತ್ತಡ ಹೇರಿದ್ದಾರೆ. ಈಗಿನ ಡೀಸೆಲ್ ಬೆಲೆಯು ಕೃತಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಪಾಲಿನ ತೆರಿಗೆಗಳನ್ನು ಹೆಚ್ಚಿಸಿರುವುದರಿಂದಲೇ ಆಗಿದೆ ಎಂದು ತಿಳಿಸಿದರು.
ಅಮೇರಿಕಾ ದೇಶ ಡೀಸೆಲ್ ಮೇಲೆ ಶೇ.19 ರಷ್ಟು ತೆರಿಗೆ ವಿಧಿಸಿದರೆ, ಫ್ರಾ್ಸ್ ದೇಶದಲ್ಲಿ ಇದರ ಪ್ರಮಾಣ ಶೇ.63 ರಷ್ಟಿದೆ. ಆದರೆ,
ಭಾರತದಲ್ಲಿ ಮಾತ್ರ ಇದರ ಪ್ರಮಾಣ ಶೇ.250 ರಷ್ಟಿದೆ. ಇದನ್ನು ನೋಡಿದರೆ ಕೇಂದ್ರ ಸರಕಾರ ಯಾವ ರೀತಿ ಸರಕು ಸಾಗಣೆ ವಾಹನಗಳ ಮಾಲೀಕರ ಮೇಲೆ ಅವೈಜ್ಞಾನಿಕ ತೆರಿಗೆ ಹೊರೆ ಹಾಕುತ್ತಿದೆ ಎಂದರು.
ಕರೋನಾ ಸೋಂಕಿನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವುದರಿಂದ ದುಬಾರಿ ಡೀಸೆಲ್ ದರವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ರಾಷ್ಟ್ರವ್ಯಾಪಿ ಇರುವ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು ಜಂಟಿಯಾಗಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಲು ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಡೀಸೆಲ್ ದರ ಇಳಿಸುವುದು, ಇನ್ಸೂರ್ಸೆ ಸಮಸ್ಯೆ ಬಗೆಹರಿಸುವುದು, 15 ವರ್ಷ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಡೀಸೆಲ್ ದರಗಳನ್ನು ಜಿ.ಎಸ್.ಟಿ ವ್ಯಾಪ್ತಿಗೆ ಒಳಪಡಿಸುವುದು. ಈ ಮೇಲ್ಕಂಡ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರಕಾರ ಒಂದು ತಿಂಗಳ ಒಳಗಾಗಿ ಪರಿಹರಿಸಬೇಕು. ಇಲ್ಲದೆ ಇದ್ದಲ್ಲಿ ರಾಷ್ಟ್ರವ್ಯಾಪಿ ಲಾರಿ ಮಾಲೀಕರ ಸಂಘಟನೆಗಳು ಮುಂದಿನ ಪ್ರತಿಭಟನಾ ಮಾರ್ಗವನ್ನು ಹಮ್ಮಿಕೊಳ್ಳಲು ತೀರ್ಮಾನಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯು. ಶ್ರೀನಿವಾಸ್, ಎನ್.ಶ್ರೀನಿವಾಸ್ ರಾವ್, ಗಾಯ್ಬುಸಾಬ್ ಹೊನ್ನಳ್, ಪ್ರಧಾನ
ಕಾರ್ಯದರ್ಶಿ ಆರ್.ವಿ. ಪ್ರಕಾಶ್ ಇದ್ದರು.