ಬೆಂಗಳೂರು,
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (JCTU) ಇದೇ ಆ. 10 ರಂದು ಹಮ್ಮಿಕೊಂಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಡೀ ಜಗತ್ತನ್ನೇ ನಡುಗಿಸಿರುವ ಕೋವಿಡ್-19 ಹಾಗೂ ತತ್ಪರಿಣಾಮದ ಲಾಕ್ ಡೌನ್ ಹೇರಿಕೆಯಿಂದ ಕಾರ್ಮಿಕ ವರ್ಗವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದೆ. ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ನೆರವಿಗೆ ಬರಬೇಕಿದ್ದ ಕೇಂದ್ರ ಸರಕಾರ ಹಾಗೂ ಬಿಜೆಪಿ ಆಳ್ವಿಕೆಯಿರುವ ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ಮೂಲಕ ಈ ವರ್ಗದ ಬದುಕನ್ನು ಮತ್ತಷ್ಟು ಬರ್ಬರವಾಗಿಸಿವೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಕರ್ನಾಟಕ ಸರಕಾರವು ಇತ್ತೀಚೆಗೆ ತಂದಿರುವ ಕೈಗಾರಿಕೆ ಕಾಯಿದೆ ತಿದ್ದುಪಡಿಯಿಂದಾಗಿ ಶೇಕಡಾ 80 ಕ್ಕೂ ಹೆಚ್ಚು ಉದ್ದಿಮೆಗಳ ಮಾಲೀಕರಿಗೆ ಕೆಲಸಗಾರರನ್ನು ಮನಸೋ ಇಚ್ಛೆ ಬಳಸಿಕೊಂಡು ಬಿಸಾಡುವಂತಹ ಸ್ವಾತಂತ್ರ್ಯವನ್ನು ಕೊಟ್ಟಿದೆ. ಇದರಿಂದ ರಾಜ್ಯದ ಶೇಕಡಾ 50 ಕ್ಕೂ ಹೆಚ್ಚು ಭಾಗದ ಸಂಘಟಿತ ವಲಯದ ಕಾರ್ಮಿಕರು ಕೆಲಸದ ಅವಧಿ, ಓವರ್ ಟೈಮ್ ಭತ್ಯೆ, ಸುರಕ್ಷತೆ ಹಾಗೂ ಗಳಿಕೆ ರಜೆ ಮತ್ತಿತರ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಜತೆಗೆ 417 ರುಪಾಯಿ ವ್ಯತ್ಯಸ್ಥ ತುಟ್ಟಿಭತ್ಯೆಯನ್ನು (Variable Dearness Allownance) ಒಂದು ವರ್ಷ ಮುಂದೂಡುವ ಮೂಲಕ ಮಾಸಿಕ 11,000 ರುಪಾಯಿ ವರಮಾನದ ಅತ್ಯಂತ ದುರ್ಬಲ ವರ್ಗದ ದುಡಿಯುವ ಜನರ ಹೊಟ್ಟೆಯ ಮೇಲೆ ಗದಾಪ್ರಹಾರ ಮಾಡಿದೆ. ಮಾದರಿ ಸ್ಥಾಯಿ ಆದೇಶವನ್ನು ತಿದ್ದುಪಡಿ ಮಾಡಿ ನಿಗದಿತ ಕಾಲಾವಧಿ ಕೆಲಸ ಜಾರಿ ಮಾಡುವ ಮೂಲಕ ಶಾಶ್ವತ ಕೆಲಸದ ಪರಿಕಲ್ಪನೆಯನ್ನೇ ನಾಶ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಕಾರ್ಖಾನೆಗಳ ಕಾಯಿದೆ, ಕೈಗಾರಿಕಾ ವಿವಾದ ಕಾಯಿದೆ, ಗುತ್ತಿಗೆ ಕಾರ್ಮಿಕರ ಕಾಯಿದೆಗಳಿಗೆ ತಂದಿರುವ ತಿದ್ದುಪಡಿಯನ್ನು ತಕ್ಷಣ ರದ್ದುಪಡಿಸಬೇಕು. ನಿಗದಿತ ಅವಧಿ ಕೆಲಸ ಪದ್ಧತಿ ಅನುಷ್ಠಾನಕ್ಕೆ ತರಲಾಗಿರುವ ತಿದ್ದುಪಡಿ ಹಾಗೂ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡಿಕೆ ಆದೇಶ ಹಿಂಪಡೆಯಬೇಕು. ಭೂಸುಧಾರಣೆ, ಎಪಿಎಂಸಿ ಕಾಯಿದೆ, ಅಗತ್ಯ ವಸ್ತುಗಳ ಕಾಯಿದೆಗಳಿಗೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆಗಳನ್ನು ವಾಪಸ್ಸು ಪಡೆಯಬೇಕು. ಮುಂದಿನ 6 ತಿಂಗಳ ಅವಧಿಗೆ ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7500 ರುಪಾಯಿ ಪಾವತಿಸಬೇಕು ಎಂದು ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ 2008 ರ ಅಡಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರವು 10,000 ಕೋಟಿ ರುಪಾಯಿಗಳ ವರ್ತುಲ ನಿಧಿಯನ್ನು ಸ್ಥಾಪಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಾರ್ವತ್ರಿಕ ಮೂಲ ವರಮಾನ ಯೋಜನೆ, ನಿರುದ್ಯೋಗ ಭತ್ಯೆ, ನಗರ ಪ್ರದೇಶ ಉದ್ಯೋಗ ಖಾತ್ರಿ ಯೋಜನೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಸಂಸತ್ ಹಾಗೂ ರಾಜ್ಯ ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದರ ಜತೆಗೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಗತಿ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸಹಭಾಗಿ ಸಂಘಟನೆಗಳ ಪರವಾಗಿ ಇದೇ 10 ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತದ ಭಾರತ ರಕ್ಷಿಸಿ ಆಂದೋಲನವನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.