Tuesday, 26th November 2024

ಶುಕ್ರವಾರ ಮತ್ತೆ 6670 ಪಾಸಿಟಿವ್‌ ಪ್ರಕರಣ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು: 
ರಾಜ್ಯದಲ್ಲಿ ಕರೋನಾ ವೈರಸ್‌ ಏರುಗತಿಯಲ್ಲಿಯೇ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ ಮತ್ತೆ 6670 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ.
ಕಳೆದ ನಾಲ್ಕೈದು ದಿನಗಳಿಂದ ಹೊಸ ಪ್ರಕರಣಗಳಿಗೆ ಸಮನಾಗಿದ್ದ ಚೇತರಿಕೆಯ ಪ್ರಮಾಣ ಶುಕ್ರವಾರ ಕುಸಿದಿದ್ದು, ಕೇವಲ 3951 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯೂ ಕೂಡ ಶತಕದ ಗಡಿ ದಾಟಿದ್ದು, ಭರ್ತಿ 101 ಜನ ಶುಕ್ರವಾರ ಕರೋನಾಗೆ ಬಲಿಯಾಗಿದ್ದಾರೆ.
 ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,64,924ಕ್ಕೆ ಏರಿದೆ. ಇದರಲ್ಲಿ 84,232 ಜನ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 3,000 ಗಡಿಯತ್ತಿರ ಬಂದು ನಿಂತಿದ್ದು, ಒಟ್ಟು 2998 ಜನ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇನ್ನೂ 77,686 ಪ್ರಕರಣಗಳು ಸಕ್ರಿಯವಾಗಿದ್ದು, ಚೇತರಿಸಿಕೊಂಡವರಿಗಿಂತ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. 678 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಂತೂ ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ. ಶುಕ್ರವಾರ ಮತ್ತೆ 2147 ಜನಕ್ಕೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮೂಲಕ ಸಿಲಿಕಾನ್‌ ಸಿಟಿಯಲ್ಲಿ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 69,572ಕ್ಕೆ ಏರಿದೆ. ಇದರಲ್ಲಿ 35,063 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 1200 ಜನ ಕರೋನಾ ಕಾರಣದಿಂದ ಅಸುನೀಗಿದ್ದಾರ. ಇನ್ನೂ 33,308 ಪ್ರಕರಣಗಳು ಸಕ್ರಿಯವಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಸೋಂಕಿನ ಅಬ್ಬರ ಮುಂದುವರೆದಿದ್ದು, ಶುಕ್ರವಾರ ಮತ್ತೆ 684 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಬೆಳಗಾವಿಯಲ್ಲಿ 390, ಕಲಬುರಗಿ 271, ಧಾರವಾಡ 266, ಉಡುಪಿ 246, ಮೈಸೂರು 242, ಕೊಪ್ಪಳ 173, ರಾಯಚೂರು 171, ದಕ್ಷಿಣ ಕನ್ನಡ 166, ಶಿವಮೊಗ್ಗ 151, ಬಾಗಲಕೋಟೆ 148, ವಿಜಯಪುರ 143, ಹಾಸನ 138 ಹಾಗೂ ಉತ್ತರ ಕನ್ನಡದಲ್ಲಿ 120 ಹೊಸ ಪ್ರಕರಣಗಳು ಕಂಡುಬಂದಿವೆ.
 ಇನ್ನು, ಬೆಂಗಳೂರು ಗ್ರಾಮಾಂತರ 119, ದಾವಣಗೆರೆ 111, ಗದಗ 105, ಮಂಡ್ಯ 102, ರಾಮನಗರ 93, ಹಾವೇರಿ 90, ಕೋಲಾರ 88, ಬೀದರ್‌ 84, ತುಮಕೂರು 76, ಯಾದಗಿರಿ 70, ಚಿಕ್ಕಮಗಳೂರು 65, ಚಿಕ್ಕಬಳ್ಳಾಪುರ 64, ಚಾಮರಾಜನಗರ 63, ಚಿತ್ರದುರ್ಗ 57 ಹಾಗೂ ಕೊಡಗು ಜಿಲ್ಲೆಗಳಲ್ಲಿ 27 ಹೊಸ ಕೇಸ್‌ಗಳು ಕಂಡುಬಂದಿವೆ.