Saturday, 14th December 2024

ಜಾರಕಿಹೊಳಿ ತಮ್ಮ ಅನ್ವೇಷಣೆ ಇಲ್ಲಿಗೇ ಬಿಟ್ಟರೆ ಒಳಿತು

ಹಿಂದೂ ಪದದ ಕುರಿತು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಾಕಷ್ಟು ವಾದ ವಿವಾದಗಳ
ನಂತರವೂ ‘ಮುಂದಿನ ದಿನಗಳಲ್ಲಿ ನನ್ನ ಹೇಳಿಕೆ ಸಾಬೀತುಗೊಳಿಸುವ ಯತ್ನ ಮುಂದುವರಿಸುತ್ತೇನೆ.

ಪೂರಕ ದಾಖಲೆಗಳೊಂದಿಗೆ ವಿವಿಧ ವೇದಿಕೆಗಳ ಮೇಲೆ ಇದರ ಬಗ್ಗೆ ತಿಳಿಸುತ್ತೇನೆ. ನೈಜ ಸ್ಥಿತಿ ವಿವರಿಸದೆ, ಅವಾಂತರ ಸೃಷ್ಟಿಸಿದವರ ವಿರುದ್ಧ ತನಿಖೆಗಾಗಿ ಸಮಿತಿ ರಚಿಸಬೇಕು. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಸರಕಾರದ ಮೇಲೆ ಒತ್ತಡ ತರುತ್ತೇವೆ’ ಎಂದು ಹೇಳಿದ್ದಾರೆ. ವಿಕಿಪೀಡಿಯಾ ಸೇರಿದಂತೆ ಕೆಲವು ಜಾಲತಾಣಗಳು ಪರ್ಷಿಯನ್ ಭಾಷೆಯಲ್ಲಿ ಹಿಂದೂ ಎಂಬ ಪದಕ್ಕೆ ಸೋತವನು, ಗುಲಾಮ, ಕಳ್ಳ ಎಂಬಂಥ ಅರ್ಥಗಳಿವೆ ಎಂದು ಹೇಳುತ್ತವೆ.

ಆದರೆ, ಈ ಜಾಲತಾಣಗಳನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬುದು ಗೊತ್ತಿಲ್ಲ. ಜಾರಕಿಹೊಳಿ ಅವರು ಇದನ್ನೇ ಇಟ್ಟುಕೊಂಡು ತಮ್ಮ ಹೇಳಿಕೆಯನ್ನು ಮತ್ತೆ ಸಾಬೀತು ಪಡಿಸುವ ಪ್ರಯತ್ನ ಮುಂದುವರಿಸುವುದು ಸರಿಯಲ್ಲ. ಯಾವ ಭಾಷೆಯ ಪದಗಳಿಗೂ ಸಾರ್ವಕಾಲಿಕ ಅರ್ಥ ಎಂಬುದು ಇರುವುದಿಲ್ಲ. ಎಲ್ಲ ಭಾಷೆಗಳ ಪದಗಳೂ ಕಾಲಕಾಲಕ್ಕೆ ತಮ್ಮ ಅರ್ಥವನ್ನು ವಿಸ್ತರಿಸಿಕೊಳ್ಳುತ್ತವೆ, ಹೊಸ ಅರ್ಥಗಳನ್ನು ಪಡೆಯುತ್ತವೆ, ತಮ್ಮ ಹಳೆಯ ಅರ್ಥಗಳನ್ನು ಕಳೆದುಕೊಳ್ಳುತ್ತವೆ.

ಯಾವುದೇ ಭಾಷೆಯ ಕೆಲವೊಂದು ಪದಗಳನ್ನು ಹೋಲುವ ಪದ ಜಗತ್ತಿನ ಇನ್ನಾವುದೋ ಭಾಷೆಯಲ್ಲಿ ಬೇರೆ ಅರ್ಥ ಕೊಡುವು ದರಲ್ಲಿ ಅಚ್ಚರಿಯೇನಿಲ್ಲ. ಅಲ್ಲಿಯ ಆ ಪದಕ್ಕೂ ಇಲ್ಲಿಯ ಈ ಪದಕ್ಕೂ ಬರೀ ಹೋಲಿಕೆ ಇzಕ್ಷಣ ಅರ್ಥವೂ ಸಮಾನ ವಾಗಿ ಇರುತ್ತದೆ ಎಂದು ಅರ್ಥೈಸಲು ಹೊರಟರೆ ಮೂರ್ಖತನವಾಗುತ್ತದೆ. ಹಿಂದೂ ಎಂಬುದು ಧರ್ಮ ಅಲ್ಲ, ಅದೊಂದು ಜೀವನ ಕ್ರಮ. ವಿಕಿಪೀಡಿಯಾದಲ್ಲಿ ಹಿಂದೂಗೆ ಬೇರೆ ಭಾಷೆಯ ಅರ್ಥವೇನೇ ಇರಲಿ. ನಮ್ಮಲ್ಲಿ ಅದರ ಸರಿಯಾದ ಅರ್ಥ ಏನು ಎಂದು ತಿಳಿದು ನಡೆಯುವುದು ಬಹಳ ಮುಖ್ಯವಾಗುತ್ತದೆ. ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯಿಂದ ಈಗಾಗಲೇ ಪಕ್ಷಕ್ಕೆ ಬಹಳಷ್ಟು ಹಾನಿ ಮಾಡಿದ್ದಾರೆ. ಹಾಗಾಗಿ ಹಿಂದೂ ಪದದ ಕುರಿತ ಅವರ ಅನ್ವೇಷಣೆಯನ್ನು ಇಲ್ಲಿಗೇ ಬಿಟ್ಟರೆ ಒಳಿತು.