Thursday, 28th November 2024

ನಮ್ಮ ಒಗ್ಗರಣೆ ಡಬ್ಬಿಗೆ ಇದೀಗ ಕುಲಾಂತರಿಯ ಬಗ್ಗೆ !

ಸುಪ್ತ ಸಾಗರ

rkbhadti@gmail.com

ಸಸ್ಯವೊಂದಕ್ಕೆ ಪೇಟೆಂಟ್ ನೀಡಿದ ಅಭೂತಪೂರ್ವ ಘಟನೆ ನಡೆದದ್ದು 1985ರಲ್ಲಿ. ಅಮೆರಿಕದ ಜೈವಿಕ ತಜ್ಞ ಕೆನೆತ್ ಹಿಬ್ಬರ್ಡ್ ಹಾಗೂ ಆತನ ಜೊತೆಗಾರರಿಗೆ ಅಂಗಾಂಶ ಕಸಿಯಿಂದ ಆಯ್ಕೆ ಮಾಡಿಕೊಂಡ ಜೋಳದ ಇಡೀ ಸಸ್ಯಕ್ಕೆ ಪೇಟೆಂಟ್ ನೀಡಲಾಯಿತು. ಹಿಬ್ಬರ್ಡ್‌ಗೆ ನೀಡಲಾದ ಈ ಪೇಟೆಂಟ್‌ನಲ್ಲಿ 260 ಅಂಶ ಗಳಿದ್ದು, ಯಾರು ಆ ಅಂಶಗಳನ್ನು ಬಳಸಿಕೊಳ್ಳು ವಂತಿರಲಿಲ್ಲ.

ಮತ್ತೆ ಸಾಸಿವೆ ಸುದ್ದಿಯಲ್ಲಿದೆ. ದೇಸೀ ಸಾಸಿವೆ ತಳಿಯ ಮೇಲೆ ಬಹುರಾಷ್ಟ್ರೀಯ ತಳಿಯ ಹೇರಿಕೆ ಆಗುತ್ತಿದೆ. ಸಾಸಿವೆಯ ಕುಲಾಂತರಿ ತಳಿಯನ್ನು ಭಾರತದ ತಂದು ನೆಲದಲ್ಲಿ ಊರಲು ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಕಳೆದೊಂದು ದಶಕ ದಿಂದ ಇಂಥ ಪ್ರಯತ್ನಗಳು ಆಗುತ್ತಲೇ ಇದೆ. ಬಿಟಿ ಹತ್ತಿ, ಬದನೆ, ಆಲೂ ಎಲ್ಲದರ ಬಳಿಕ ಇದೀಗ ಸಾಸಿವೆಯ ಸರದಿ. ಒಂದೊಮ್ಮೆ ಇದು ನಮ್ಮಲ್ಲಿ ನೆಲೆಯೂರಿದ್ದೇ ಆದಲ್ಲಿ, ನಮ್ಮ ‘ದೇಸೀ ಸಾಸಿವೆ ಬೀಜ’ದ ಅಸ್ತಿತ್ವವೇ ಮರೆ ಯಾಗಿ, ಸಾಸಿವೆ ಬೆಳೆಯುವ ಉತ್ತರ ಬಹುದೊಡ್ಡ ರೈತ ಸಮುದಾಯ ದಾಸ್ಯಕ್ಕೆ ನೂಕಲ್ಪಡುತ್ತದೆ.

ಆಹಾರ ಸರಪಳಿಯ ಮೊತ್ತಮೊದಲ ಕೊಂಡಿ ಬೀಜ. ಬದುಕಿನ ನಿರಂತರತೆಯ ಪ್ರತಿರೂಪ ಅದು. ರೈತನ ಪಾಲಿಗೆ ಬೀಜವೆಂಬುದು ಬರೀ ಆಹಾರದ ಮೂಲ ವಲ್ಲ. ಬದಲಿಗೆ ಸಂಸ್ಕೃತಿ, ಚರಿತ್ರೆಯ ಸಂಗ್ರಹಕೋಶ. ಆಹಾರ ಭದ್ರತೆಯ ಆತ್ಯಂತಿಕ ಚಿಹ್ನೆ. ಇಂಥ ಬೀಜವೆಂಬುದು ನಮ್ಮ ಹಿಂದು ಪುರಾಣದ ಪ್ರಕಾರ ಬ್ರಹ್ಮನ ಕೊಡುಗೆಯಂತೆ. ವೇದ ಪುರಾಣ ಕಾಲದ ನಾಗರಿಕತೆಯ ಸಂದರ್ಭದಲ್ಲಿ ಯಾವುದೋ ಒಂದು ಸಸ್ಯ ಅಥವಾ ಜೀವ ಇನ್ನಿಲ್ಲದಂತಾದರೆ ತಕ್ಷಣ ಸಮುದ್ರ ಮಥನವನ್ನು ನಡೆಸುತ್ತಿದ್ದರಂತೆ. ಆಗ ಬಯಸಿದ ಸಸ್ಯಇಲ್ಲವೇ ಜೀವ ಪ್ರಭೇದ ಅದರ ಮೂಲಕದ್ದು ಬರುತ್ತಿತ್ತಂತೆ.

ಇದರ ಹಿಂದಿನ ಲಾಜಿಕ್ ಇಷ್ಟೇ, ಬಹುಶಃ ಸಮುದ್ರದಾಳದಲ್ಲಿ ನಿರ್ಮಿಸಿಕೊಳ್ಳುತ್ತಿದ್ದ ವಿಶೇಷ ‘ಕಣಜ’ದಲ್ಲಿ ಆಪತ್ತಿಗೆಂದು ಬೀಜ ಸಂಗ್ರಹ ನಡೆಯುತ್ತಿದ್ದಿರಬಹುದು. ಇವನ್ನೇ ಆಗಿನ ಕಾಲದಲ್ಲಿ ಉನ್ನತ ಸಮುದಾಯ(ದೇವತೆಗಳು)ವೆಂದು ಗುರತಿಸಕೊಂಡಿ ದ್ದವರು ಭೂಲೋಕದ ರಾಜ್ಯಾಧಿಪತಿಗಳಿಗೆ ನೀಡಿ, ಬೆಳೆ-ತಳಿ ವಿಸ್ತರಣೆಗೆ ನೆರವಾಗುತ್ತಿದ್ದರು. ಹೀಗೆ ಭಾರತೀಯ ಕೃಷಿ ಜನಪದ ದಲ್ಲಿ ಅನೇಕ ರಾಜ-ಮಹಾರಾಜರು ಭೂಮಿ ಉತ್ತು ಬೀಜ ಬಿತ್ತಿದ ಘಟನೆಗಳಿವೆ. ರಾಮಾಯಣದ ಸೀತೆಯ ತಂದೆ ಜನಕ ವರುಣನನ್ನು ಪೂಜಿಸಿ, ಆತನಿಂದ ಬೀಜ ಪಡೆದು, ತಾನೇ ನೆಲವನ್ನು ಉತ್ತು, ಬಿತ್ತಿ ತನ್ನ ಜನರು ಹಸಿವಿನಿಂದ ನರಳದಂತೆ ನೋಡಿಕೊಂಡನಂತೆ.

ಹಾಗೆಯೇ ಲಕ್ಷ್ಮಣ ಪಕ್ಕಾ ಕೃಷಿಕನಾಗಿದ್ದ. ದ್ವಾಪರದಲ್ಲಿ ಬಲರಾಮನ ಮೂಲ ವೃತ್ತಿ ಕೃಷಿ. ನೇಗಿಲು ಅವನ ಅವಿಭಾಜ್ಯ ಅಂಗವೆಂಬಂತೆ ಚಿತ್ರಿತವಾಗಿದೆ. ಮಹರ್ಷಿ ಗೌತಮ ಕೃಷಿಯನ್ನೇ ತಪಸ್ಸಿನಂತೆ ನೆರವೇರಿಸಿದ್ದವರು. ಆ ಹಿನ್ನೆಲೆಯಲ್ಲೇ
ಬೀಜವನ್ನು ಧಾನ್ಯಲಕ್ಷ್ಮಿ ಎಂದು ಪೂಜಿಸುವ ಪರಂಪರೆ ಬೆಳೆದುಬಂದಿದ್ದು. ಇಂದಿಗೂ ಗ್ರಾಮೀಣ ಒಕ್ಕಲಿಗ ಕುಟುಂಬಗಳಲ್ಲಿ ಆ ನಂಬುಗೆ ಮುಂದುವರಿದಿದೆ.

ಹಾಗೆಯೇ ವಿಶೇಷ ಸಂದರ್ಭಗಳಲ್ಲಿ, ಹಬ್ಬ ಜಾತ್ರೆಗಳಲ್ಲಿ ಧಾನ್ಯಗಳ ದಾನವೂ ಹೇಳಲ್ಪಟ್ಟಿದೆ. ಇದು ಕೇವಲ ದಾನವಲ್ಲ, ಬದಲಿಗೆ ಬೀಜ ವಿನಿಮಯದ ಮಾರ್ಗ. ರೈತರ ನಡುವೆ ಬೀಜಗಳ ಮುಕ್ತ ವಿನಿಮಯವೆಂಬುದು ಜೈವಿಕ ವೈವಿಧ್ಯ ಹಾಗೂ ಆಹಾರ ಸುರಕ್ಷತೆ ಕಾಯ್ದುಕೊಳ್ಳಲು ಏರ್ಪಟ್ಟ ವ್ಯವಸ್ಥೆ. ವ್ಯಾವಹಾರಿಕವಾಗಿ ಬೀಜ ವಿನಿಮಯ ಮಾಡಬಯಸುವ ರೈತ ಸಮಪ್ರಮಾಣದ ಬೀಜ ಕೊಡುತ್ತಾನೆ. ಧಾರ್ಮಿಕ ವ್ಯವಸ್ಥೆಯಲ್ಲಿ ಶಕ್ತಿ ಇದ್ದಷ್ಟು ಧಾನ್ಯವನ್ನು ದಾನದ ರೂಪದಲ್ಲಿ ಕೊಡಲಾಗು ತ್ತದೆ.

ಅಷ್ಟೇ ವ್ಯತ್ಯಾಸ. ಇದು ಕೇವಲ ಬೀಜ ವಿನಿಮಯ ಅಲ್ಲ, ಅದನ್ನು ದಾಟಿ, ಆಲೋಚನೆಗಳು, ಜ್ಞಾನ, ಸಂಸ್ಕೃತಿಗಳ ವಿನಿಮಯ.
ಸಸ್ಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯ, ರೋಗ/ಬರ/ಕೀಟ ನಿರೋಧ ಅಂಶಗಳು ಇಂಥ ಸನ್ನಿವೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆ ನೋಡಿದರೆ ಇಂದಿನ ಜೈವಿಕ ಹಾಗೂ ಪಾರಿಸರಿಕ ನಾಶ ಸಂದರ್ಭದಲ್ಲಿ ಬೀಜ ಉಳಿಸುವವರು ನಿಜವಾದ ಬೀಜ ಕೊಡುಗೆದಾರರು. ಬೀಜ ಸಂರಕ್ಷಣೆ ಎಂಬುದು ಜೈವಿಕ ವೈವಿಧ್ಯ ಸಂರಕ್ಷಣೆ, ಬೀಜ ಕುರಿತ ಜ್ಞಾನದ ಸಂರಕ್ಷಣೆ, ಸಂಸ್ಕೃತಿ ಹಾಗೂ ಸಂತುಲಿತೆಯ ಸಂರಕ್ಷಣೆಯನ್ನು ಒಳಗೊಂಡಿದೆ. ಇಂಥ ಬೀಜ ಸಂರಕ್ಷಣೆ ಹಾಗೂ ವಿನಿಮಯ ಸಂಸ್ಕೃತಿ ಇಂದು ಅಪಾಯದಲ್ಲಿದೆ.

ದೇಶದಲ್ಲಿ ನಡೆದ ಸೋಕಾಲ್ಡ್ ಹಸಿರು ಕ್ರಾಂತಿ ಹಾಗೂ ಆಧುನಿಕ ಜೈವಿಕ ತಂತ್ರಜ್ಞಾನದ ಅಬ್ಬರ ಬೀಜದ ಸಾಂಸ್ಕೃತಿಕ
ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಅಪಮೌಲ್ಯಗೊಳಿಸುತ್ತವೆ. ರೈತ-ಗ್ರಾಮೀಣ ಸಮುದಾಯದಲ್ಲಿದ್ದ ಬೀಜದ ಕುರಿತ ಸಂಪೂರ್ಣ ಜ್ಞಾನವನ್ನು ತೊಡೆದುಹಾಕುತ್ತಿವೆ. ಹಳೆಯ ಬೀಜ ಉಳಿಸುವ ಇಲ್ಲವೇ ವಿನಿಮಯ ಮಾಡಿಕೊಳ್ಳುವ ರೈತರ ಸ್ವಾತಂತ್ರ್ಯ ಹಾಗೂ ಅಲಿಖಿತವಾಗಿ ರೈತ ಬಳಿ ಇದ್ದ ಪೇಟೆಂಟ್‌ನ (ಬೌದ್ಧಿಕ ಆಸ್ತಿಯ) ಕಳ್ಳತನವಾಗುತ್ತಿದೆ.

ಕೈಗಾರಿಕೀಕೃತ ದೇಶಗಳಲ್ಲಿ ಬೀಜ ಉಳಿಸಿದ್ದಕ್ಕೆ ಹಾಗೂ ವಿನಿಮಯ ಮಾಡಿದ್ದಕ್ಕೆ ಕಂಪನಿಗಳು ರೈತರನ್ನು ನ್ಯಾಯಾಲಯಕ್ಕೆ ಎಳೆದ ಪ್ರಸಂಗಗಳು ಈಗಾಗಲೇ ನಡೆದಿವೆ. ಬಹುರಾಷ್ಟ್ರೀಯ ಕಂಪನಿಗಳ ಜಮಾನದಲ್ಲಿ ರೂಪುಗೊಂಡಿರುವ, ರೂಪುಗೊಳ್ಳು ತ್ತಿರುವ ಬೀಜ ಕಾನೂನು ರೈತರು ಬೆಳೆಸುತ್ತಿದ್ದ ಪ್ರಭೇದಗಳ ಬೀಜಗಳನ್ನು ನಿಯಂತ್ರಿಸುತ್ತಿದೆ. ರೈತರು ನಡೆಸುವ ಬೀಜಪೋಷಕ ಕೆಲಸವನ್ನು ಕಾನೂನುಬಾಹಿರವಾಗಿಸಿದೆ. ರೈತರು ಬೀಜ ಉಳಿಸಿಕೊಳ್ಳುವ, ವಿನಿಮಯ ಮಾಡಿಕೊಳ್ಳುವ ಹಾಗೂ ಉತ್ತಮಗೊಳಿಸುವ ಹಕ್ಕು ಕಳೆದುಕೊಂಡು ನೋಂದಾಯಿತ ಬೀಜಗಳನ್ನೇ ಬಳಸಬೇಕಾಗಿ ಬಂದಿದೆ.

ಈ ಮೊದಲು ರೈತರು ಬಳಸುತ್ತಿದ್ದ ಬೀಜಗಳನ್ನು ನೋಂದಾಯಿಸಿಕೊಳ್ಳೂತ್ತಿರಲಿಲ್ಲ. ಸಣ್ಣ ರೈತರು ನೋಂದಣಿ ವೆಚ್ಚ ಭರಿಸಲು
ಅಶಕ್ಯರಾದ್ದರಿಂದ, ಅವರು ನಿಧಾನವಾಗಿ ನೋಂದಾಯಿತ ಬೀಜಗಳ ದಾಸ್ಯಕ್ಕೆ ಬೀಳಬೇಕಾಗಿದೆ. ಬೀಜ ಕಾಯಿದೆ ಜಾರಿಯಲ್ಲಿರುವ ಅನೇಕ ದೇಶಗಳಲ್ಲಿ ರೈತರು ತಮ್ಮದೇ ಬೀಜ ಉತ್ಪಾದಿಸುವಲ್ಲಿ ಎದುರಿಸಬೇಕಾದ ಅಡೆತಡೆಗಳು ಅನೇಕ. ಜರ್ಮನಿಯ ಸಾವಯವ ಕೃಷಿಕ ಜೋಸೆಫ್ ಆಲ್‌ಬ್ರೆಕ್ಟ್ ಲಭ್ಯವಿದ್ದ ವಾಣಿಜ್ಯ ಬೀಜಗಳ ಬಗ್ಗೆ ಒಲವಿಲ್ಲದ್ದರಿಂದ ತನ್ನದೇ ಗೋಧಿ ಬೀಜ ಅಭಿವೃದ್ಧಿಪಡಿಸಿದ. ಆತನ ಪಕ್ಕದ ಊರಿನ ಕೆಲ ರೈತರು ಆತನಿಂದ ಬೀಜ ಖರೀದಿಸಿ, ತಮ್ಮ ಜಮೀನಿನಲ್ಲಿ ಬೆಳೆದರು.

ಜರ್ಮನಿ ಸರಕಾರ ಆತ ನೋಂದಾಯಿತವಲ್ಲದ ಬೀಜ ಮಾರುತ್ತಿದ್ದಾನೆಂದು ದಂಡ ವಿಽಸಿತು. ಬೀಜ ಕಾಯಿದೆಯು ಸಾವಯವ ಕೃಷಿಕನಾದ ತನ್ನ ಸ್ವಾತಂತ್ರ್ಯವನ್ನು ಕಸಿದಿದೆ ಎಂದು ಆತ ದಂಡವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ. 1990ರವರೆಗೆ ಸ್ಕಾಟ್ಲೆಂಡ್‌ನಲ್ಲಿ ಅಸಂಖ್ಯ ರೈತರು ಆಲೂಗಡ್ಡೆ ಬೀಜಗಳ ಮಾರಾಟ, ವಿನಿಮಯ ಮಾಡುತ್ತಿದ್ದರು. 1990ರಲ್ಲಿ ಸಸ್ಯ ಪೋಷಕ ಹಕ್ಕು(ಪಿಬಿಆರ್)ಉಳ್ಳವರು ರೈತರಿಗೆ ನೋಟಿಸ್ ನೀಡಲಾರಂಭಿಸಿದರು.

ರೈತರ ಬೀಜ ಮಾರಾಟ ಅಕ್ರಮ ಎಂದು ಘೋಷಿಸಿಲಾಯಿತು. 1994ರಲ್ಲಿ ನಡೆದ ಬೀಜ ಮಾರಾಟ ಕಂಪನಿ ಮತ್ತು ರೈತರ ನಡುವಿನ ಸಂಘರ್ಷ, ಕಾನೂನು ಸಮರದ ಬಳಿಕ ಇದೀಗ ಇಂಗ್ಲೆಂಡ್ ಮತ್ತು ಯುರೋಪಿಯನ್ ಗಣರಾಜ್ಯಗಳಲ್ಲಿ ನೋಂದಣಿ ಯಾಗದ ಬೀಜಗಳ ವಿನಿಮಯ ಸಾಧ್ಯವಿಲ್ಲದಂತಾಗಿದೆ. ಅಮೆರಿಕದಲ್ಲಿ ಕೂಡ ರೈತರ ನಡುವಿನ ಬೀಜ ವಿನಿಮಯವು ಕಾನೂನುಬಾಹಿರ. ಮಾನ್‌ಸಾಂಟೋದ ರೌಂಡ್ ಅಪ್ ಸಿದ್ಧ ವಂಶವಾಹಿ ಒಪ್ಪಂದದನ್ವಯ ರೈತ ಬೀಜ ಇಲ್ಲವೇ ಬೆಳೆಯ ಯಾವುದೇ ಭಾಗವನ್ನು ಮಾರುವಂತಿಲ್ಲ.

ಪೂರೈಸುವಂತಿಲ್ಲ, ಇಲ್ಲವೇ ಬೀಜವನ್ನು ಉಳಿಸಿಕೊಳ್ಳುವಂತಿಲ್ಲ. ಈ ಒಪ್ಪಂದದಂತೆ ಪೌಂಡ್ ಬೀಜವೊಂದಕ್ಕೆ ೫ ಡಾಲರ್ ತಂತ್ರಜ್ಞಾನ ಶುಲ್ಕ ನೀಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ, ಬೆಳೆದಾತ 100 ಪಟ್ಟು ದಂಡ ಕೊಡಬೇಕು. ಹೊಲಕ್ಕೆ ಮಾನ್‌ಸಾಂಟೋ ೩ವರ್ಷ ಕಾಲ ರೈತನ ಒಪ್ಪಿಗೆ ಪಡೆದುಕೊಳ್ಳದೆ, ರೈತನಿಲ್ಲದಿದ್ದಾಗಲೂ ಭೇಟಿ ನೀಡಬಹುದು. ಈ ಒಪ್ಪಂದವು ರೈತನ ಮುಂದಿನ ಪೀಳಿಗೆಗೂ ಅನ್ವಯಿಸುತ್ತದೆ. ಆದರೆ ಬೆಳೆಗಾರನ ಹಕ್ಕನ್ನು ಮಾನ್‌ಸಾಂಟೋ ಒಪ್ಪಿಗೆಯಿಲ್ಲದೆ ಬೇರೆಯವರಿಗೆ ವರ್ಗಾಯಿಸುವಂತಿಲ್ಲ.

ರೈತನಲ್ಲದೆ, ಆತನಿಗೆ ಸಂಬಂಧಿಸಿದವರ ಮೇಲೆ ಮಾನ್‌ಸಾಂಟೋ ಹಿಡಿತ ಸಾಧಿಸುತ್ತದೆ, ಆದರೆ ಆತನ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ಇಂಥ ಒಪ್ಪಂದಗಳು ಜೈವಿಕ ವೈವಿಧ್ಯವನ್ನಾಗಲೀ, ಆಹಾರ ಸುರಕ್ಷೆಯನ್ನಾಗಲೀ ಉಳಿಸಲಾರವು. ಇದು ನಿಧಾನವಾಗಿ ಜೈವಿಕ ವೈವಿಧ್ಯ ಏಕಸ್ವಾಮ್ಯಕ್ಕೆ ದಾರಿಮಾಡಿಕೊಡಲಿದೆ. ನಮ್ಮದೇ ಛತ್ತೀಸ್‌ಘಡ ರಾಜ್ಯದಲ್ಲಿ ಈ ಹಿನ್ನೆಲೆ ಯಲ್ಲಿಯೇ ಬೀಜ ಸತ್ಯಗ್ರಹ ನಡೆದಿದೆ. ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿನ ಭತ್ತದ ಜಿವದ್ರವ್ಯ ಸಂಗ್ರಹಕ್ಕೆ ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನ ಹಾಕುವುದನ್ನು ವಿರೋಧಿಸಿ ಹೋರಾಟ ನಡೆದಿತ್ತು. ಒಂದು ಕಾಲದಲ್ಲಿ ಭಾರತದ ‘ಭತ್ತದ ಕಣಜ’ ಎನಿಸಿಕೊಂಡಿದ್ದ ಛತ್ತೀಸ್‌ಘಡ ಇಂದು ಅತ್ಯಂತ ಕಡಿಮೆ ಉತ್ಪಾದಕತೆಯುಳ್ಳ, ತೀವ್ರ ಆಹಾರ ಅಸುರಕ್ಷಿತ ರಾಜ್ಯವಾಗಿ ಬದಲಾಗಿದೆ. ೫ ದಶಕಗಳ ಹಿಂದೆ ರಾಜ್ಯದ ಪ್ರತಿ ಪ್ರಾಂತ್ಯವೂ ತನ್ನ ಮಣ್ಣು, ಹವಾಮಾನಕ್ಕೆ ಸೂಕ್ತವಾದ ತಳಿಯನ್ನು ಬೆಳೆಯುತ್ತಿತ್ತು.

1960ರಲ್ಲಿ ಇಲ್ಲಿಗೆ ತೀವ್ರ ಇಳುವರಿ ಭತ್ತದ ತಳಿಗಳು ಪರಿಚಯಿಸಲ್ಪಟ್ಟವು. ಅನುಚಿತ ಕೀಟನಾಶಕ, ರಾಸಾಯನಿಕ
ಗೊಬ್ಬರ ಬಳಕೆಯಿಂದಾಗಿ, ಉತ್ಪಾದಕತೆ ಕುಸಿಯುತ್ತ ಸಾಗಿತು. 1971ರಲ್ಲಿ ಡಾ. ರಿಚಾರಿಯಾ ಸ್ಥಳೀಯ ಭತ್ತ ತಳಿಗಳ ದಾಖಲೀಕರಣ ಹಾಗೂ ಮೌಲ್ಯೀಕರಣಕ್ಕೆ ಸಂಶೋಧನೆಯನ್ನು ಪ್ರಾರಂಭಿಸಿದರು. ರೈತರ ತಳಿಗಳನ್ನು ಅಭಿವೃದ್ಧಿಪಡಿಸಿ, ಅವರಿಗೇ ವಾಪಸ್ ಮಾಡಬೇಕೆಂಬ ಅಲಿಖಿತ ಒಪ್ಪಂದದೊಡನೆ ಪ್ರಾರಂಭವಾದ ಈ ಯೋಜನೆಯು ತಳಿ ಸಂಗ್ರಹಕ್ಕಷ್ಟೇ ಸೀಮಿತವಾಗಿಹೋಯಿತು.

ಸಸ್ಯಗಳ ಮೇಲಿನ ಪೇಟೆಂಟ್‌ಗಳು ಆಹಾರ ಮತ್ತು ಕೃಷಿ ವ್ಯವಸ್ಥೆ ಮೇಲಿನ ಏಕಸ್ವಾಮ್ಯದ ಅಪಾಯವನ್ನು ತಂದಿತ್ತಿದೆ.
ಜೈವಿಕ ವೈವಿಧ್ಯಕ್ಕೆ ಇದು ಕುತ್ತು. ಸಣ್ಣ ರೈತರ ಉಳಿವು ಹಾಗೂ ಆಹಾರ ಸುಭದ್ರತೆಗೆ ಧಕ್ಕೆ ತರತ್ತದೆ. ಇದರಲ್ಲಿ ಎರಡು ರೀತಿ;
ಮೊದಲನೆಯದು ಪ್ರಭೇದವೊಂದಕ್ಕೆ ವಿಶಾಲ ಪೇಟೆಂಟ್ ಹಕ್ಕು ನೀಡುವುದು. ಉದಾಹರಣೆಗೆ ಸೋಯಾ ಅವರೆ ಮತ್ತು ಹತ್ತಿಗೆ ಮಾನ್‌ಸಾಂಟೋ ಒಡೆತನದ ಅಗ್ರಾಸೆಟಸ್‌ನ ಪೇಟೆಂಟ್.

ಇಂಥ ಪೇಟೆಂಟ್, ನಮ್ಮ ಜಮೀನು-ತೋಟದಲ್ಲಿ ಬೆಳೆಯುವ ಬೆಳೆಗಳ ನಿಯಂತ್ರಣವನ್ನು ಒಬ್ಬನ ಕೈಯಲ್ಲಿ ಇಟ್ಟುಬಿಡುತ್ತದೆ.
ವೈಯಕ್ತಿಕ ವಂಶವಾಹಿಗಳ ಮೇಲೂ ಏಕಸ್ವಾಮ್ಯ ನೀಡುತ್ತದೆ. ಬೀಜದ ಜೀವದ್ರವ್ಯ(ಜರ್ಮ್‌ಪ್ಲಾಸಂ)ಕ್ಕೆ ಸಂಬಂಧಿಸಿಯೂ
ಬೆಳೆಗಾರರಿಗೆ ಯಾವುದೇ ಒಡೆತನ ಇರುವುದಿಲ್ಲ. ಮಾತ್ರವಲ್ಲ, ಸಸ್ಯವಲ್ಲದೆ, ಅದರ ಭಾಗಗಳು (ಹೂವು, ಹಣ್ಣು, ಬೀಜ ಇತ್ಯಾದಿ) ಹಾಗೂ ತಯಾರಿಕಾ ಪ್ರಕ್ರಿಯೆಗಳಿಗೂ ಈ ಪೇಟೆಂಟ್ ಅನ್ವಯಿಸುತ್ತವೆ.

ಇನ್ನೊಂದೆಂದರೆ ಪೇಟೆಂಟ್ ಸಂಪನ್ಮೂಲಗಳ ಮೇಲಿನ ರೈತರ ಹಕ್ಕು ಕಸಿದುಕೊಳ್ಳುವುದು. ಇದು ಕೃಷಿಯ ಅಸ್ಥಿಭಾರವನ್ನೇ ದುರ್ಬಲಗೊಳಿಸುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಜೈವಿಕ ತಂತ್ರಜ್ಞಾನ ಸಂಸ್ಥೆ ಸನ್‌ಜೀನ್‌ಗೆ ಹೆಚ್ಚು ಓಲಿಯಿಕ್ ಆಮ್ಲ ಇರುವ ಸೂರ್ಯಕಾಂತಿ ಪ್ರಭೇದವೊಂದರ ಪೇಟೆಂಟ್ ನೀಡಲಾಯಿತು. ಈ ಪೇಟೆಂಟ್ ಹೆಚ್ಚು ಆಮ್ಲ ಇರುವ ಗುಣಕ್ಕೆ ಮಾತ್ರವಲ್ಲದೆ, ಹೆಚ್ಚು ಆಮ್ಲ ಉತ್ಪಾದಿಸುವ ವಂಶವಾಹಿ ಗುಣಕ್ಕೂ ನೀಡಲಾಗಿತ್ತು. ಸನ್‌ಜೀನ್ ಸೂರ್ಯಕಾಂತಿ ಬೆಳೆ ಉತ್ಪಾದಿ ಸುತ್ತಿರುವ ಎಲ್ಲರಿಗೂ ಹೆಚ್ಚು ಓಲಿಯಿಕ್ ಆಮ್ಲವಿರುವ ಸೂರ್ಯಕಾಂತಿ ಅಭಿವೃದ್ಧಿಪಡಿಸಿದರೆ ತನ್ನ ಪೇಟೆಂಟ್
ಉಲ್ಲಂಸಿದಂತಾಗುತ್ತದೆ ಎಂದು ಎಚ್ಚರಿಸಿತು.

ಸಸ್ಯವೊಂದಕ್ಕೆ ಪೇಟೆಂಟ್ ನೀಡಿದ ಅಭೂತಪೂರ್ವ ಘಟನೆ ನಡೆದದ್ದು 1985ರಲ್ಲಿ. ಅಮೆರಿಕದ ಜೈವಿಕ ತಜ್ಞ ಕೆನೆತ್ ಹಿಬ್ಬರ್ಡ್ ಹಾಗೂ ಆತನ ಜೊತೆಗಾರರಿಗೆ ಅಂಗಾಂಶ ಕಸಿಯಿಂದ ಆಯ್ಕೆ ಮಾಡಿಕೊಂಡ ಜೋಳದ ಇಡೀ ಸಸ್ಯಕ್ಕೆ ಪೇಟೆಂಟ್ ನೀಡಲಾ ಯಿತು. ಹಿಬ್ಬರ್ಡ್‌ಗೆ ನೀಡಲಾದ ಈ ಪೇಟೆಂಟ್‌ನಲ್ಲಿ 260 ಅಂಶಗಳಿದ್ದು, ಯಾರು ಆ ಅಂಶಗಳನ್ನು ಬಳಸಿಕೊಳ್ಳುವಂತಿರಲಿಲ್ಲ. ಬೀಜವು ಪುನರುತ್ಪಾದನಾಶಕ್ತಿ ಹೊಂದಿರುವುದರಿಂದ, ಬೀಜಗಳಿಗೆ ಉಪಯೋಗಿ ಪೇಟೆಂಟ್ ನೀಡಿದರೆ ಅದನ್ನು ಖರೀದಿಸುವ ರೈತ ಅದನ್ನು ಬಳಸಿ ಬೆಳೆ ತೆಗೆಯಬಹುದೇ ಹೊರತು ಮತ್ತೆ ಬಿತ್ತನೆಗೆ ಬಳಸುವಂತಿಲ್ಲ. ಇಂಥ ಪೇಟೆಂಟ್‌ಗಳನ್ನು ಭಾರತದಲ್ಲಿ ಜಾರಿಗೊಳಿಸಬೇಕೆಂದು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ.

ಬೀಜಗಳನ್ನು ಪೇಟೆಂಟ್ ಮಾಡಿಸುವುದರ ಅತಿ ದೊಡ್ಡ ಅಪಾಯ ಎಂದರೆ ಟರ್ಮಿನೇಟರ್ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಹೈಬ್ರೀಡ್ ಅಲ್ಲದ, ಜೈವಿಕವಾಗಿ ಬದಲಿಸಿದ ಇಲ್ಲವೇ ಮುಕ್ತ ಪರಾಗಸ್ಪರ್ಶದಿಂದ ಸೃಷ್ಟಿಯಾದ, ಬೀಜೋತ್ಪಾದನೆ ಸಂಸ್ಥೆಗಳು ಮಾರುವ ಬೀಜಗಳನ್ನು ರೈತರು ಉಳಿಸಿಕೊಂಡು ಮುಂದಿನ ಬಿತ್ತನೆಗೆ ಬಳಸದಂತೆ ಮಾಡಲು ರೂಪಿಸಲಾಗಿದೆ. ಅಮೆರಿಕದ ಕೃಷಿ ಇಲಾಖೆ ಮತ್ತು ಮಾನ್‌ಸಾಂಟೋದ ಅಂಗ ಸಂಸ್ಥೆ ಡೆಲ್ಟಾ ಆಂಡ್ ಪೈನ್‌ಲ್ಯಾಂಡ್ ಕಂಪನಿ (ಇದು ಹತ್ತಿ ಬೀಜ ಉತ್ಪಾದಿಸುವ ಜಗತ್ತಿನ ಅತ್ಯಂತ ದೊಡ್ಡ ಸಂಸ್ಥೆ) ಜಂಟಿಯಾಗಿ ತಾವು ಹೊಸ ಕೃಷಿ ಜೈವಿಕ ತಂತ್ರಜ್ಞಾನವೊಂದಕ್ಕೆ ಪೇಟೆಂಟ್ ಪಡೆದಿರುವುದಾಗಿ ಘೋಷಿಸಿದವು.

‘ಸಸ್ಯ ವಂಶವಾಹಿ ಅಭಿವ್ಯಕ್ತಿ ನಿಯಂತ್ರಣ’ ಎಂದು ಹೆಸರಿಡಲಾದ ಈ ಪೇಟೆಂಟ್ ಅದರ ಮಾಲೀಕರು ಹಾಗೂ ಲೈಸನ್ಸ್ ಹೊಂದಿರುವಾತನಿಗೆ ಭ್ರೂಣವನ್ನು ಕೊಲ್ಲಬಲ್ಲ ಬಂಜೆ ಬೀಜದ ಸೃಷ್ಟಿಗೆ ಅನುಮತಿ ಕೊಡುತ್ತದೆ. ಎಲ್ಲ ಪ್ರಭೇದದ ಬೀಜ ಹಾಗೂ ಸಸ್ಯಗಳಿಗೂ ಈ ಪೇಟೆಂಟ್ ಅನ್ವಯಿಸುತ್ತದೆ. ಮುಂದಿನ ಬೆಳೆಗಾಗಿ ಈ ಬೀಜದ ಉಳಿಸುವಿಕೆ ಸಾಧ್ಯವಿಲ್ಲ. ಇದರಿಂದಾಗಿ ಪ್ರತಿವರ್ಷ ರೈತ ಹೊಸ ಬೀಜವನ್ನು ಬೀಜೋತ್ಪಾದನೆ ಸಂಸ್ಥೆಗಳಿಂದ ಖರೀದಿಸಬೇಕಾಗುತ್ತದೆ.

ಅಮೆರಿಕದ ಕೃಷಿ ಇಲಾಖೆ ಮತ್ತು ಡೆಲ್ಪಾ ಆಂಡ್ ಪೈನ್‌ಲ್ಯಾಂಡ್ ಕಂಪನಿ ಈ ತಂತ್ರಜ್ಞಾನಕ್ಕೆ ಕನಿಷ್ಠ ೭೮ ದೇಶಗಳಲ್ಲಿ ಪೇಟೆಂಟ್ ಅರ್ಜಿ ಸಲ್ಲಿಸಿವೆ. ಈ ಬೀಜದ ಮಾರಾಟದಿಂದ ಅಮೆರಿಕದ ಕೃಷಿ ಇಲಾಖೆಗೆ ದಕ್ಕುವುದು ಶೇ.೫ ರಷ್ಟು ಲಾಭ.
ಈ ತಂತ್ರಜ್ಞಾನದ ಮುಖ್ಯ ದುಷ್ಪರಿಣಾಮ- ಈ ಬೆಳೆಗಳ ವಂಶವಾಹಿ ಪಕ್ಕದ ಜಮೀನಿನ ಬೇರೆ ಬೆಳೆಗಳಿಗೆ ನೆಗೆಯುವ ಸಾಧ್ಯತೆ. ಈ ಬೀಜಗಳನ್ನು ವಿಸ್ತಾರ ಜಮೀನಿನಲ್ಲಿ ಹೆಚ್ಚು ಕಾಲ ಅಧ್ಯಯನ ಮಾಡದೇ ಪ್ರಯೋಗಿಸಲಾಗುತ್ತಿದೆ.

ಇವುಗಳ ಹರಡುವಿಕೆಯಿಂದ ಮನುಷ್ಯನೂ ಸೇರಿದಂತೆ ಉಳಿದ ಮೇಲ್‌ಸ್ತರದ ಜೀವಿಗಳ ಭೂಮಿಯಿಂದಲೇ ಇಲ್ಲವಾಗುವ ಸಾಧ್ಯತೆಯಿದೆ. ಮಾತ್ರವಲ್ಲ, ಈ ತಂತ್ರಜ್ಞಾನವು ತೃತೀಯ ಜಗತ್ತಿನ ದೇಶಗಳ ಸ್ಥಳೀಯ ಬೀಜ ಉಳಿಸಿ, ಬೆಳೆಸುವ ಪ್ರವೃತ್ತಿಗೆ ತನ್ಮೂಲಕ ಆಹಾರ ಸುಭದ್ರತೆಗೆ ಕೊಳ್ಳಿ ಇಡುತ್ತದೆ.

ಜೈವಿಕ ವೈವಿಧ್ಯ, ಸ್ಥಳೀಯ ಜ್ಞಾನ ಮತ್ತು ಶತಮಾನಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂತುಲಿತ ಕೃಷಿ ವ್ಯವಸ್ಥೆ ಯನ್ನು ಆಹಾರ ಸ್ವಾಯತ್ತೆಯನ್ನು ಈ ತಂತ್ರಜ್ಞಾನ ನಾಶಮಾಡಲಿದೆ. ಒಂದು ಹೊಡೆತ ದಿಂದ ಸಸ್ಯದಿಂದ ಬೀಜ, ಬೀಜದಿಂದ ಸಸ್ಯದ ಆವೃತ್ತ ನಾಶವಾಗುತ್ತದೆ. ಸಸ್ಯ ಪೇಟೆಂಟ್‌ನಿಂದಾಗಿ ರೈತರು ಸಾಂಪ್ರದಾಯಿಕ ಬೀಜಗಳ ಬಳಕೆ
ನಿಲ್ಲಿಸುವು ದಿಲ್ಲ ಎನ್ನುವ ವಾದ ಇದೆ.

ಆದರೆ ಕೃಷಿ ಉದ್ಯಮವನ್ನು ನಿಯಂತ್ರಿಸುವ ಹುನ್ನಾರದಲ್ಲಿ ಪೇಟೆಂಟ್‌ಗಳು ಒಂದು ಅವಿಭಾಜ್ಯ ಅಂಗವಾಗಿದ್ದು, ಈ ವ್ಯವಸ್ಥೆ ಯಲ್ಲಿ ರೈತರು ದೇಶಿ ಬೀಜಗಳ ಬದಲು ಬಹುರಾಷ್ಟ್ರೀಯ ಸಂಸ್ಥೆಗಳ ಬೀಜಗಳನ್ನೇ ಬಳಸಬೇಕಾಗಿ ಬರುವುದರಿಂದ, ರೈತರ ಬೀಜ ಉಳಿಸುವ, ವಿನಿಮಯಿಸುವ ಹಕ್ಕು ಹರಣವಾಗಿ ಏಕಸ್ವಾಮ್ಯ ಸಾಧಿಸಲಾಗುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳು ರೈತರು ಏನನ್ನು ಬೆಳೆಸಬೇಕು, ಬಳಸಬೇಕಾದ ಒಳಸುರಿಗಳು ಯಾವುವು, ಯಾವುದನ್ನು ಮಾರಬೇಕು, ಎಷ್ಟಕ್ಕೆ ಮಾರ ಬೇಕು, ಗ್ರಾಹಕ ಏನನ್ನು ತಿನ್ನಬೇಕು ಎಂಬುದನ್ನೂ ನಿರ್ಧರಿಸುತ್ತವೆ.

ಈ ಜೈವಿಕ ವೈವಿಧ್ಯವು ಕೃಷಿಗೆ ಜೀವವಿಮೆ ಇದ್ದಂತೆ. ಕೃಷಿ ಜೈವಿಕ ವೈವಿಧ್ಯವು ಆರ್ಥಿಕವಾಗಿಯೂ ಅತ್ಯಗತ್ಯ ಸ್ಥಿತಿ. ಎಕೆಂದರೆ ಅದಿಲ್ಲದಿದ್ದರೆ ನಮ್ಮ ರೈತರು, ದೇಶ ತಮ್ಮ ಸ್ವಾತಂತ್ರ್ಯ ಹಾಗೂ ಉಳಿವಿನ ದಾರಿ ಕಳೆದುಕೊಳ್ಳುತ್ತವೆ. ಜೈವಿಕ ವೈವಿಧ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯ ಒಂದಕ್ಕೊಂದು ತಳಕು ಹಾಕಿಕೊಂಡಿದ್ದು, ಕೃಷಿ ವೈವಿಧ್ಯ ರಕ್ಷಣೆ ಸಾಂಸ್ಕೃತಿಕವಾಗಿ ಕೂಡ ಅವಶ್ಯ. ರೈತರು ತಮ್ಮ ಹಕ್ಕು ಕಳೆದುಕೊಂಡರೆ, ಏಕಸ್ವಾಮ್ಯವನ್ನು ನಿಯಂತ್ರಿಸುವ ರಾಜಕೀಯ ಚೌಕಟ್ಟು ಇಲ್ಲದಂತಾಗಿ ಸ್ಥಳಾಂತರ, ಹಸಿವು ಮತ್ತು ಬರ ದೇಶವನ್ನು ಕಾಡುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗದಿರಲಿ.