ಜಗತ್ತಿನಲ್ಲಿ ನಮ್ಮ ತಂದೆ-ತಾಯಿಯರೇ ನಿಜವಾದ ಮತ್ತು ಕಣ್ಣಿಗೆ ಕಾಣ ಸಿಗುವ ದೈವಶಕ್ತಿಯ ಪ್ರತಿರೂಪ. ಅವರಿಗೆ ಗೌರವ ತೋರಿದರೆ, ನಾವು ನೈಜದೇವರನ್ನು ಒಲಿಸಿಕೊಂಡಂತೆಯೇ ಸರಿ ಎಂದು ಹಿರಿಯರು ಹೇಳಿದ್ದಾರೆ.
ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು-ಹೆತ್ತು ತನ್ನೆಲ್ಲ ಆಶೋತ್ತರ ಗಳನ್ನು ನಮಗಾಗಿಯೇ ತ್ಯಾಗ ಮಾಡಿ ಕುಟುಂಬದ ಸದಸ್ಯರ ಒಳಿತಿಗಾಗಿ ಸದಾ ಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ನನ್ನವ್ವ. ತಾನು ಅಶಿಕ್ಷಿತಳಾಗಿದ್ದರೂ ನಮ್ಮ ಬದುಕಿಗೊಂದು ಶಿಕ್ಷಣ ಆಸರೆಯಾಗಿ ಸ್ವಾವಲಂಬಿಗಳಾಗಬೇಕೆಂಬ ಹೆಬ್ಬಯಕೆ ಆಕೆಯದು.
ಹೊತ್ತು, ಹೆತ್ತು, ಪಾಲನೆ-ಪೋಷಣೆ ಮಾಡಿ, ಕಲಿಸಿ-ಬೆಳೆಸಿ, ತಿದ್ದಿ-ತೀಡಿ, ಜೀವನ-ಬದುಕಿನ ಕಲೆ-ನೆಲೆಯನ್ನು ತಿಳಿಸಿಕೊಟ್ಟು ನಮ್ಮಲ್ಲಿ ಜೀವನ-ಮೌಲ್ಯ, ಆದರ್ಶ, ನೈತಿಕತೆ, ಸದ್ಗುಣ, ಸದ್ವಿಚಾರ, ಸನ್ನಡತೆ, ಸಂಸ್ಕೃತಿ-ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಮತ್ತು ಸತ್ಕಾರ್ಯ ಗಳನ್ನು ಒಡಮೂಡಿಸಿದ ಶ್ರೇಷ್ಠ ಗುರುವೆಂದರೆ ನನ್ನ ತಾಯಿ ದೇವರು.
ಮನೆಯೇ ಮಂತ್ರಾಲಯ
ಅದಕ್ಕಂತಲೇ ‘ಮನೆಯೇ ಮಂತ್ರಾಲಯ, ತಾಯಿಯೇ ಮೊದಲ ಗುರು’ ಎಂದು ನಂಬಿರುವ ಸಮಾಜ ನಮ್ಮದು. ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ, ಅಮ್ಮ ನಿನಗ್ಯಾರೂ ಸಮ, ನನ್ನ ಜಗವೇ ನೀ… ಚಲನಚಿತ್ರ ಗೀತೆ ಈ ಸಾಲುಗಳಿಂದ ತ್ಯಾಗ ಜೀವಿಯಾಗಿ ರುವ ತಾಯಿಯನ್ನು ಕುರಿತು ವರ್ಣಿಸಿರುವುದನ್ನು ನಾವು ಕೇಳಿದ್ದೇವೆ. ಅಮ್ಮ ಎಂಬ ಎರಡಕ್ಷರದಿ ಅಡಗಿದೆ ಜಗದ ಉಸಿರು. ಆಕೆ ಕೇವಲ ಮನೆ ಬೆಳಗುವ ಜ್ಯೋತಿಯಲ್ಲ, ಜಗವ ಬೆಳಗುವ ದಿವ್ಯಜ್ಯೋತಿ ಎಂದರೆ ಅತಿಶಯೋಕ್ತಿಯಾಗಲಾರದು. ಕೇವಲ ತಾಯಿಯಾಗದೇ, ಮಮತೆಯ ಮಡಿಲು, ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಡದಿಯಾಗಿ, ಮನೆ-ಕುಟುಂಬದ ಎಲ್ಲ ಸದಸ್ಯರಿಗಾಗಿ ಸದಾ ದುಡಿಯುವಳು ತಾಯಿ.
ಸಿಹಿ ಹಂಚಿದ ನನ್ನವ್ವ
ಬಾಲ್ಯದಿಂದಲೂ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಧೈರ್ಯ ತುಂಬಿ, ಉದಾತ್ತವಾದ ಗುರಿಯನ್ನಿಟ್ಟುಕೊಳ್ಳುವಂತೆ ಪ್ರೇರೇಪಿಸು ತ್ತಿದ್ದಳು ನನ್ನ ಹಡೆದವ್ವ. ನಾನು ಪಿ.ಯು.ಸಿ ದ್ವೀತಿಯ ಪರೀಕ್ಷೆಯಲ್ಲಿ ಜಿಲ್ಲೆಗೆ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾದಾಗ ಆಕೆಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ರಾತ್ರಿ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಬಿಸಿ ಚಹ ಮಾಡಿ ಕುಡಿಸಿದ ಘಟನೆಗಳು ಈಗಲೂ ನನ್ನ ಕಣ್ಮುಂದೆ ಬಂದು ಹೋಗುತ್ತವೆ. ತನ್ನ ಮಗ ಉಪನ್ಯಾಸಕನಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ನನ್ನ ತಾಯಿ. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದರೆ ಮುಂದೊಂದು ದಿನ ಒಳ್ಳೆಯ ದಿನ ಬಂದೇ ಬರುತ್ತದೆ. ಕೆಳಗೆ ಬಿದ್ದೋರಿಗೆ ಮಾತ್ರ ಮೇಲೆಳೋದು ಗೊತ್ತಾಗುತ್ತೆ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದಳು. 1998 ರಲ್ಲಿ ನನ್ನೂರಿನ ಮತ್ತು ನಾ ಕಲಿತ ಕಾಲೇಜಿ ನಲ್ಲಿಯೇ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದೆ. ಮುಂದೆ 2009 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡಾಗ ಇಡೀ ಊರ ತುಂಬೆಲ್ಲ ಪೇಡೆ (ಸಿಹಿ) ಹಂಚಿ ಸಂಭ್ರಮಿಸಿದ್ದಳು.
ಪ್ರಾಮಾಣಿಕತೆಯ ಪಾಠ
‘ವೃತ್ತಿಯನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳು ನಿನ್ನ ಮಕ್ಕಳಂತೆ ಕಾಣಬೇಕು.’ ಎಂದಿದ್ದಳು ನನ್ನಮ್ಮ. ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ಸದಾ ವೃತ್ತಿ ಗೌರವ ಮತ್ತು ಸಾಮಾಜಿಕ ಬದ್ಧತೆಯ ಗುಣಗಳನ್ನು ಕಲಿಸಿದಾಕೆ ನನ್ನವ್ವ. ನನ್ನ ಮಗ ಕೇವಲ ಶಿಕ್ಷಕನಾಗದೇ ವಿದ್ಯಾರ್ಥಿಗಳ ಭವಿಷ್ಯ ರೂಪಕನಾಗಬೇಕೆಂಬ ಕನಸು ಕಂಡವಳು. ಆಕೆ ಇಂದು ನಮ್ಮ ಜೊತೆ ಭೌತಿಕವಾಗಿ ಇಲ್ಲವೆಂದರೂ ಆಕೆಯ ಭವಿಷ್ಯತ್ತಿನ ಸೂರ್ತಿದಾಯಕ ಕಿವಿಮಾತು, ಸಲಹೆ ಮತ್ತು ತೋರಿದ ಬದುಕಿನ ದಾರಿ ನಮಗೆಲ್ಲ ದಾರಿದೀಪವಾಗಿದೆ.
ಇಂದು ಬೇರೆ ಯಾರಾದರೂ ವಯೋವೃದ್ಧ ತಾಯಂದರನ್ನು ಕಂಡಾಗ ನನ್ನ ತಾಯಿಯನ್ನೇ ಕಂಡಂತೆ ಮನಕರಗುತ್ತದೆ.
ಅದಕ್ಕಂತಲೇ ಹಿರಿಯರು ಹೇಳುತ್ತಾರೆ ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಲು ಹಾಗೂ ಎಲ್ಲ ಸಂಕಷ್ಟಗಳಿಂದ ಜನರನ್ನು ಕಾಯಲು ದೇವರಿಗೆ ಆಗದೆಂದು ತಾಯಿ ಎಂಬ ಸ್ವರೂಪದ ದೇವತೆಯನ್ನು ಸೃಷ್ಟಿಸಿದ್ದಾನೆ. ಅಮ್ಮ ಎಂಬ ಪರಮದೈವ ನಮ್ಮ
ಜೊತೆಗಿದ್ದರೆ ಸಮಸ್ಯೆಗಳು ಹತ್ತಿರವೇ ಸುಳಿಯುವುದಿಲ್ಲ.
ಒಂದು ವೇಳೆ ಬಂದರೂ ಅವೆಲ್ಲವುಗಳಿಗೆ ತಾಯಿಯೆಂಬ ಅಗಣಿತ ಶಕ್ತಿದೇವತೆ ಹೊಡೆದೋಡಿಸುವಳು. ನನ್ನ ಮೊದಲ ಆದರ್ಶ ಮೂರ್ತಿ, ಸ್ಪೂರ್ತಿ ಮತ್ತು ಬದುಕು ರೂಪಿಸಿದ ಸಾಕಾರಮೂರ್ತಿ ಎಂದರೆ ನನ್ನವ್ವ. ಅದಕ್ಕಾಗಿ ನಾವೆಲ್ಲರೂ ತಂದೆ-ತಾಯಿಯರನ್ನು ಪ್ರೀತಿ-ಆದರ, ಗೌರವದೊಂದಿಗೆ ಕಾಣುತ್ತಾ ಅವರನ್ನು ನೆನಪಿಸಿಕೊಳ್ಳುತ್ತಿರಬೇಕು ಎನ್ನುವುದೇ ನನ್ನ ಆಶಯ.