ತುಮಕೂರು: ಗೃಹ ರಕ್ಷಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಕ್ರೀಡೆಯನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಲಗೋಟಿ ಕರೆ ನೀಡಿದರು.
ನಗರದ ಗೃಹ ರಕ್ಷಕರ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗೃಹರಕ್ಷಕರ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗೃಹ ರಕ್ಷಕ ಸಿಬ್ಬಂದಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲಿ ಎಂಬ ಉದ್ದೇಶದಿಂದ ವಾರ್ಷಿಕವಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಗೃಹ ರಕ್ಷಕರು ಈ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೈಹಿಕವಾಗಿ ಚೆನ್ನಾಗಿದ್ದರೆ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗು ತ್ತದೆ. ಹಾಗಾಗಿ ಪ್ರತಿಯೊಬ್ಬ ಗೃಹ ರಕ್ಷಕರು ಕ್ರೀಡೆ ಹವ್ಯಾಸವಾಗಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು.
ಪ್ರಸ್ತುತ ದಿನಗಳಲ್ಲಿ ದೇಸಿ ಕ್ರೀಡೆ ಹಾಗೂ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ದೈಹಿಕವಾಗಿ ಸಮರ್ಥರಾಗಲು ಕ್ರೀಡಾಕೂಟಗಳು ಅತ್ಯವಶ್ಯ. ಹಾಗಾಗಿ ಗೃಹರಕ್ಷಕರು ಕ್ರೀಡೆಗಳಿಗೆ ಒತ್ತು ನೀಡಬೇಕು ಎಂದ ಅವರು, ಗೃಹರಕ್ಷಕ ಇಲಾಖೆಯಲ್ಲೂ ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳಿಂದ ಗೃಹ ರಕ್ಷಕರಿಗೆ ಅನುಕೂಲವಾಗುವ ಸಾಧ್ಯತೆ ಇರುತ್ತದೆ ಎಂದರು.
ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷದ ದಳದ ಜಿಲ್ಲಾ ಸಮಾದೇಷ್ಟರಾದ ಆರ್. ಪಾತಣ್ಣ ಮಾತನಾಡಿ, ದೈಹಿಕ ಬಲಾಢ್ಯತೆ ಹೆಚ್ಚಿಸಿಕೊಳ್ಳಲು ಗೃಹ ರಕ್ಷಕರು ಸಕ್ರಿಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಆಟವಾಡುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.
ಗ್ರಾಮೀಣ ಕ್ರೀಡಾಕೂಟಗಳ ಬಗ್ಗೆ ಪ್ರತಿಯೊಬ್ಬರೂ ಹೆಚ್ಚು ಒಲವು ನೀಡಬೇಕು. ಕ್ರೀಡಾ ಸ್ಫೂರ್ತಿ ಇದ್ದರೆ ಗೆಲ್ಲುವ ಹಂಬಲ ಜಾಸ್ತಿಯಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಮಹಿಳಾ ಗೃಹರಕ್ಷಕರು, ಪುರುಷ ಗೃಹರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಪಾವಗಡ ತಾಲ್ಲೂಕು ವೈ.ಎನ್. ಹೊಸಕೇಟೆ ಘಟಕದ ಭರತ್‌ಕುಮಾರ್ ಹಾಗೂ ತುಮಕೂರು ಘಟಕದ ಸವಿತಾದೇವಿ ಅವರಿಗೆ ಚಾಂಪಿಯನ್ ಪಟ್ಟ ನೀಡಿ ಅಭಿನಂದಿಸ ಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕೆ. ಪ್ರಕಾಶ್, ಕುಣಿಗಲ್ ಘಟಕದ ರಾಘವೇಂದ್ರ, ಗುಬ್ಬಿ ಘಟಕದ ಜಿ.ಆರ್. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಗೃಹ ರಕ್ಷದ ದಳದ ಸಹಾಯಕ ಬೋಧಕ ಹನುಮಂತರಾಯಪ್ಪ ವಂದಿಸಿದರು.