Wednesday, 30th October 2024

ಅಪಾಯದ ಸುಳಿಯಲ್ಲಿ ನಾಲ್ಕು ಜಿಲ್ಲೆ

ಬೆಂಗಳೂರು:
ಮುಂದಿನ ಎರಡು ದಿನ  ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಸುರಿಯುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳು ಅಪಾಯದ ಸುಳಿಗೆ ಸಿಲುಕಿವೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟಾರೆ ಮಳೆ ಪ್ರಮಾಣ ತಗ್ಗಿ ಅಲ್ಲಲ್ಲಿ ಭಾರಿ ಪ್ರಮಾಣದ ಮಳೆ ಬೀಳುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕದಾದ್ಯಂತ ಆಗಸ್ಟ್ 16ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ. ಈಗಾಗಲೇ ಕೊಡಗು ಹಾಗೂ ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.
 ಶನಿವಾರವಾರ ಕೊಡಗಿನಲ್ಲಿ ಸುರಿದ ಮಳೆ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಆಗಸ್ಟ್ 8ರಂದು ಕೊಡಗು ಜಿಲ್ಲೆಯಲ್ಲಿ ದಾಖಲೆಯ, 230 ಮಿ.ಮೀ. ಮಳೆಯಾಗಿದೆ. ಇದು ದೇಶದಲ್ಲಿಯೇ ಸುರಿದ ಅತ್ಯಧಿಕ ಮಳೆ ಪ್ರಮಾಣವಾಗಿದೆ. ಉಡುಪಿ ಜಿಲ್ಲೆಯಲ್ಲಿಆ. 9,10ಕ್ಕೆ ರೆಡ್‌ ಅಲರ್ಟ್‌ ಘೋಷಿಸಿದ್ದು 205 ಮಿ. ಮೀ.ಗಿಂತ ಅಧಿಕ ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರಿನ ಎರಡು ತಿಂಗಳಲ್ಲಿನೆರೆ, ಪ್ರಾಕೃತಿಕ ವಿಕೋಪದ ಪ್ರಮಾಣ ಕಡಿಮೆ.
ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಮತ್ತೆ ಜಲಸಂಕಷ್ಟ ಎದುರಾಗಿದೆ. ಮಲೆನಾಡಲ್ಲಿ ಸತತ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಮುಂದುವರೆದಿದ್ದರೆ, ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ.