ಹಾಲಿನ ದರ ಏರಿಕೆಗೆ ಪ್ರಧಾನವಾಗಿ ಮೇವಿನ ಬೆಲೆ ಏರಿಕೆಯೇ ಕಾರಣವಾಗಿದೆ. ಎರಡು ವಾರದ ಹಿಂದೆ ಅಮುಲ್ ಹಾಲಿನ ದರದಲ್ಲಿ ಏರಿಕೆ ಮಾಡಲಾಗಿತ್ತು. ಇತ್ತ ನಂದಿನ ಹಾಲಿನ ದರ ಹೆಚ್ಚಳಕ್ಕೂ ಒತ್ತಡವಿದೆ. ಇದೇ ವೇಳೆ ಮಿಲ್ಮಾ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಈ ಹಿಂದೆ 2019ರಲ್ಲಿ ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಲಾಗಿತ್ತು.
ಮಿಲ್ಮಾ 2019ರಲ್ಲಿ ಕೊನೆಯದಾಗಿ ಹಾಲಿನ ದರ ಹೆಚ್ಚಿಸಿತ್ತು. ಆಗ ಲೀಟರ್‌ಗೆ 4 ರೂ. ಹೆಚ್ಚಿಸಲಾಗಿತ್ತು. ಹಾಲಿನ ದರ ಹೆಚ್ಚಳ ಗೊಳಿಸದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬ ನಿಲುವು ಹೈನುಗಾರರದ್ದು. ಬೆಲೆ ಏರಿಕೆ ವಿಚಾರವಾಗಿ ಮಿಲ್ಮಾ ಈಗಾಗಲೇ ಸರಕಾರದಿಂದ ಅನುಮತಿ ಕೋರಿದೆ.
ಕೇರಳದಲ್ಲಿ ಮಿಲ್ಮಾದ ಹಳದಿ ಕವರ್ ಹಾಲು ಮತ್ತು ತಿಳಿ ನೀಲಿ ಬಣ್ಣದ ಕವರ್ ಹಾಲು ಲೀಟರ್‌ಗೆ 44 ರೂ., ಕಡು ನೀಲಿ ಹಾಲಿನ ಪ್ರಸ್ತುತ ಬೆಲೆ 46 ರೂ., ಕೇಸರಿ ಮತ್ತು ಹಸಿರು ಬಣ್ಣದ ಕವರ್‌ಗಳ ಪೂರ್ಣ ಕೊಬ್ಬಿನ ಹಾಲಿನ ಬೆಲೆ 48 ರೂ. ಇದೆ.
ಮೇವಿನ ದರ ಹೆಚ್ಚಳಗೊಂಡಿರುವುದರಿಂದ ಹೈನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಆ ನಷ್ಟ ಸರಿದೂಗಿಸಲು ಸರಕಾರ 28 ಕೋಟಿ ರೂ.ಗಳ ಪ್ರೋತ್ಸಾಹಧನ ಘೋಷಿಸಿದೆ.
ಹಾಲಿನ ದರ ಹೆಚ್ಚಳ ಕುರಿತು ಸಮಿತಿಯು ಅಧ್ಯಯನ ಮಾಡಿ ಶಿಫಾರಸು ಮಾಡಿದೆ. ಅದರಂತೆ ಕೃಷಿಕನಿಗೆ ಪ್ರತಿ ಲೀಟರ್‌ಗೆ 38-40 ರೂ. ಲಭಿಸುತ್ತದೆ. ಆದರೆ ಹಾಲು ಉತ್ಪಾದನಾ ವೆಚ್ಚ 46 ರೂ.ಗಳಷ್ಟಾಗುತ್ತದೆ. ಕೃಷಿಕರಿಗೆ 6 ರೂ. ಲಾಭ ಸಿಗುವ ರೀತಿಯಲ್ಲಿ ಬೆಲೆ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಪ್ರಸ್ತುತ ಇರುವ ವಿಮಾ ಯೋಜನೆ ಸಾಕಾಗದ ಕಾರಣ ಜಾನುವಾರು ಆರೋಗ್ಯ ವಿಮೆ ಜಾರಿಗೊಳಿಸಬೇಕು. ಪಶು ವೈದ್ಯಕೀಯ ಸೇವೆಯನ್ನು ಒಳನಾಡುಗಳಿಗೂ ವಿಸ್ತರಿಸಬೇಕು. ಜಾನುವಾರು ಮೇವಿನ ಬೆಲೆ ಕಡಿಮೆ ಮಾಡಲು ಸಹಾಯಧನ ಜಾರಿಗೊಳಿಸ ಬೇಕು ಮುಂತಾದ ಶಿಫಾರಸುಗಳನ್ನು ಸಮಿತಿ ನೀಡಿದೆ.