Thursday, 28th November 2024

ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿವೆ: ಜಿಲ್ಲಾಧಿಕಾರಿ

ತುಮಕೂರು: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಪ್ರತಿನಿತ್ಯ ಓದುಗರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕ ರಿಂದ ಪತ್ರಿಕೆಗಳು ಜೀವಂತವಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ವಿತರಕರ ಕೆಲಸವನ್ನು ಕನಿಷ್ಟವಾಗಿ ಕಾಣಬಾರದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್ ವಾಡ್ ಮಾತನಾಡಿ, ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭ ದಲ್ಲಿ ಮನೆ-ಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದ ಅನುಭವ ಹಂಚಿಕೊಂಡರಲ್ಲದೆ, ಪತ್ರಿಕಾ ವಿತರಕರ ಸಂಘ ಇನ್ನಷ್ಟು ಬಲಗೊಳ್ಳ ಬೇಕು. ಸಂಘದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ಸಂಘಟಿತರಾಗಿ ಸರಕಾರದ ಗಮನ ಸೆಳೆಯಬೇಕೆಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ನಾಗಣ್ಣ ಮಾತನಾಡಿ, ಪತ್ರಿಕಾ ವಿತರಕರನ್ನು ನಿಕೃಷ್ಟವಾಗಿ ಕಾಣುವ ಕಾಲ ಹೋಗಿ ವೃತ್ತಿ ಗೌರವ ನೀಡುವ ಕಾಲ ಬಂದಿದೆ.
ಕೋವಿಡ್ ಸಂದರ್ಭದಲ್ಲಿಯೂ ಅಂಜದೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದಾರೆ ಎಂದರಲ್ಲದೆ, ಪತ್ರಿಕೆ ಹಂಚುವ ಕೆಲಸ ಮಾಡುವು ದರಿಂದ ಹಣ ಗಳಿಸಬಹುದಲ್ಲದೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ಬೆಳಗಿನ ಪರಿಶುದ್ಧ ಗಾಳಿ ಸೇವನೆ, ಸೈಕಲ್ ತುಳಿಯುವುದರಿಂದ ದೇಹಕ್ಕೆ ನವಚೈತನ್ಯ ದೊರೆಯುತ್ತದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸೊಗಡು ವೆಂಕಟೇಶ್ ಮಾತನಾಡಿ, ಯಾವ ಕೆಲಸ ನಿಂತರೂ ಪತ್ರಿಕೆ ವಿತರಣೆ ಕೆಲಸ ನಿಲ್ಲುವುದಿಲ್ಲ.
ವಿತರಕರು ಎದುರಿಸುವ ಸವಾಲು, ಸಮಸ್ಯೆಗಳಿಗೆ ಸಂಘವು ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕೆಂದು ತಿಳಿಸಿದ ಅವರು, ಪತ್ರಿಕಾ ವಿತರಕರ ಸಂಘದ ಶ್ರೇಯೋಭಿವೃದ್ಧಿಗಾಗಿ 50,000 ರು.ಗಳ ಚೆಕ್ ಅನ್ನು ಕೊಡುಗೆಯಾಗಿ ನೀಡಿದರು.
ದಿನಪತ್ರಿಕೆ ಹಂಚಿಕೆದಾರರ ಸಂಘದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ,   ಪತ್ರಿಕಾ ವಿತರಕರಿಗೆ ತಮ್ಮದೇ ಆದ ಅಸ್ತಿತ್ವ ಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರ ಸಂಘವನ್ನು ರಚಿಸಲಾಗಿದೆ ಎಂದು ತಿಳಿಸಿದರಲ್ಲದೆ, ಪತ್ರಿಕೆಯನ್ನು ಓದುಗರಿಗೆ ತಲುಪಿಸಲು ವಿತರಕರು ಬೇಕೇ ಬೇಕು. ಆದರೆ ಬೇಡಿಕೆಗಳನ್ನು ಇಟ್ಟಾಗ ವಿತರಕರು ಯಾರಿಗೂ ಬೇಡವಾಗಿದ್ದಾರೆ. ರಾಜ್ಯದಲ್ಲಿ ಸುಮಾರು 70,000 ಮಂದಿ ಪತ್ರಿಕಾ ವಿತರಕರಿದ್ದು, ಪ್ರತಿ ಜಿಲ್ಲೆಗೆ ತಲಾ 1 ಕೋಟಿ ರು.ಗಳನ್ನು ವಿತರಕರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕೊರಟಗೆರೆ ತಾಲ್ಲೂಕು ಶ್ರೀ ಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಗಳು ತಮ್ಮ ಆಶೀರ್ವಚನದಲ್ಲಿ ಪತ್ರಿಕಾ ವಿತರಕರು ತಮ್ಮ ಕೆಲಸವನ್ನು ಕನಿಷ್ಠವೆಂದು ಭಾವಿಸಬಾರದು.
ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ ಅಬ್ದುಲ್‌ಕಲಾಂ ಅವರು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು ಎಂದರಲ್ಲದೆ, ವಿತರಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸರಕಾರದ ಗಮನ ಸೆಳೆಯುವ ಅಗತ್ಯವಿದೆ. ಸಂಘಟನೆಯಿಂದ ಎಲ್ಲರೂ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜೆ.ಪಿ. ಶಿವಣ್ಣ ಅವರು ತಮ್ಮ ಕ್ಲಬ್ ವತಿಯಿಂದ ಎಲ್ಲಾ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿದರು. ವಾಸುದೇವ ಎನ್.ನಾದೂರು ಸ್ವಾಗತಿಸಿದರು. ಮಂಜುನಾಥ ನಿರೂಪಿಸಿದರು. ಪತ್ರಿಕೆ ವಿತರಕರ ಸಂಘದ ಜಿಲ್ಲಾಧ್ಯಕ್ಷ ಚೆಲುವರಾಜು(ರಘು) ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಪತ್ರಿಕಾ ವಿತರಕರು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಸ್ ಪ್ರಯಾಣಿಕರಿಗೆ ಕನ್ನಡ ಪತ್ರಿಕೆಗಳನ್ನು ಉಚಿತವಾಗಿ ಹಂಚಿದರು. ಪತ್ರಿಕೆಯೊಂದಿಗೆ ಸಿಹಿ ಹಂಚಿ ಕನ್ನಡ ಪತ್ರಿಕೆಯನ್ನು ಕೊಂಡು ಓದಿ ಎಂಬ ಸಂದೇಶವನ್ನು ಸಾರಿದರು.