Wednesday, 30th October 2024

ಎರಡು ಲಕ್ಷ ಸನಿಹದಲ್ಲಿ ಕರೋನಾ 

ಬೆಂಗಳೂರು:
ರಾಜ್ಯದಲ್ಲಿ ಸೋಮವಾರ ತಗ್ಗಿದ್ದ ಕರೋನಾ ವೈರಸ್‌ ಮಂಗಳವಾರ ಮತ್ತೆ ಅಬ್ಬರ ಮುಂದುವರಿಸಿದೆ. 6,257 ಹೊಸ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದೆ.
 ಹೊಸ ಕೇಸ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮಂಗಳವಾರ ಗುಣಮುಖರಾದ 6,473 ಜನ ಸೇರಿ ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಲಕ್ಷ ಮೀರಿರುವುದು ರಾಜ್ಯಕ್ಕೆ ಸಮಾಧಾನಕಾರ ಸಂಗತಿಯಾಗಿದೆ. 86 ಜನ ಕೊರೊನಾಗೆ ಬಲಿಯಾಗಿದ್ದಾರೆ.
 ಹೊಸ ಪ್ರಕರಣಗಳಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿದೆ. ಇನ್ನೆರಡು ದಿನ ಇದೇ ಪ್ರಮಾಣದಲ್ಲಿ ಹೊಸ ಕೇಸ್‌ಗಳು ಕಂಡುಬಂದರೆ ರಾಜ್ಯದಲ್ಲಿ ಸೋಂಕು 2 ಲಕ್ಷದ ಗಡಿಯನ್ನು ಮೀರಿದೆ. ಇದರಲ್ಲಿ 1,05,599 ಸೋಂಕಿತರು ಗುಣಮುಖರಾಗಿದ್ದರೆ, 3,398 ಜನ ಕರೋನಾ ಕಾರಣದಿಂದ ಸಾವನ್ನಪ್ಪಿದ್ದು, 79,606 ಪ್ರಕರಣಗಳು ಸಕ್ರಿಯವಾಗಿವೆ.
ಸಿಲಿಕಾನ್‌ ಸಿಟಿಯಲ್ಲಿ ಕರೋನಾ ವೈರಸ್‌ನ ವೇಗ ತಗ್ಗಿದ್ದು, ಸತತ ಎರಡನೇ ದಿನವೂ 2,000ಕ್ಕಿಂತ ಕಡಿಮೆ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿರುವುದು ಉದ್ಯಾನ ನಗರಿಯ ಜನರ ಆತಂಕ ಕಡಿಮೆ ಮಾಡಿದೆ. ಮಂಗಳವಾರ 1610 ಪ್ರಕರಣಗಳಿ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 77,038ಕ್ಕೆ ಏರಿದೆ. 42,674 ಜನ ಗುಣಮುಖರಾಗಿದ್ದು, 33,070 ಪ್ರಕರಣಗಳು ಸಕ್ರಿಯವಾಗಿವೆ.
ಬಳ್ಳಾರಿಯಲ್ಲಿ ಸೋಂಕಿನ ಅಬ್ಬರ ಜೋರಾಗಿದ್ದು, ಬೆಂಗಳೂರು ನಂತರ ಅತಿಹೆಚ್ಚು ಪಾಸಿಟಿವ್‌ ಕೇಸ್‌ಗಳು ಗಣಿ ಜಿಲ್ಲೆಯಲ್ಲಿ ವರದಿಯಾಗಿವೆ. ಮಂಗಳವಾರ ಬಳ್ಳಾರಿಯಲ್ಲಿ 736 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಬೆಳಗಾವಿಯಲ್ಲಿ 575 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡದಲ್ಲಿ 276, ದಕ್ಷಿಣ ಕನ್ನಡ 243, ಮೈಸೂರು 238, ಉಡುಪಿ 219, ರಾಯಚೂರು 101, ಶಿವಮೊಗ್ಗ 189, ದಾವಣಗೆರೆ 172, ಕೊಪ್ಪಳ 169 ಹಾಗೂ ಕಲಬುರಗಿಯಲ್ಲಿ 156 ಪ್ರಕರಣಗಳು ಕಂಡುಬಂದಿವೆ.
ಇನ್ನು, ಹಾಸನದಲ್ಲಿ 146, ಮಂಡ್ಯ 141, ಬಾಗಲಕೋಟೆ 135, ವಿಜಯಪುರ 121, ಯಾದಗಿರಿ 102, ರಾಮನಗರ 96, ಚಿಕ್ಕಮಗಳೂರು 93, ತುಮಕೂರು 89, ಗದಗ 78, ಬೀದರ್‌ 73, ಉತ್ತರ ಕನ್ನಡ 73, ಚಾಮರಾಜನಗರ 72, ಕೋಲಾರ 69, ಚಿತ್ರದುರ್ಗ 47, ಕೊಡಗು 41, ಹಾವೇರಿ 36, ಚಿಕ್ಕಬಳ್ಳಾಪುರ 33 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 28 ಪ್ರಕರಣಗಳು ಕಂಡುಬಂದಿವೆ.