Friday, 29th November 2024

ಪರಿಶಿಷ್ಟರ ಶಿಕ್ಷಣ ಮೊಟಕು ತಡೆಗೆ ಸಲಹೆ 

ಚಿಕ್ಕನಾಯಕನಹಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಅರ್ಧಕ್ಕೆ ಶಿಕ್ಷಣ ಮೊಟಕು ಗೊಳಿಸುತ್ತಿದ್ದು, ಈ ವರ್ಗದ ನೌಕರರು ಇದನ್ನು ತಡೆಯುವ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟ, ಮಾತಂಗ ನೌಕರರ ಒಕ್ಕೂಟ ಇವರ ಸಹಯೋಗದಲ್ಲಿ ಪಟ್ಟಣದ ಆಚಾರ್ಯ ತೀನಂಶ್ರೀ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪ್ರೌಢಶಾಲೆ, ಪಿಯು ಹಾಗೂ ಪದವಿ ಹಂತದಲ್ಲೇ ವಿದ್ಯಾರ್ಥಿಗಳು ಶಿಕ್ಷಣ ಕೈ ಬಿಡು ತ್ತಿದ್ದಾರೆ. ಇದಕ್ಕೆ ಹಣಕಾಸು ಸೇರಿ ನಾನಾ ಸಮಸ್ಯೆಗಳಿರಬಹುದು. ನೌಕರರು ಅಂಥವ ರನ್ನು ಗುರುತಿಸಿ ಸಮಸ್ಯೆಗಳಿಗೆ ಹರಿಹಾರ ಹುಡುಕಿ ಶಿಕ್ಷಣ ಮುಂದುವರಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಮಹರ್ಷಿ ವಾಲ್ಮೀಕಿ ಚರಿತ್ರೆಯನ್ನು ತೇಜೋವಧೆ ಮಾಡಲಾಗುತ್ತಿದೆ. ವಾಲ್ಮೀಕಿ ಯಾವ ಕಳ್ಳತನ, ದರೋಡೆಯನ್ನೇನೂ ಮಾಡಿರಲಿಲ್ಲ. ಆದರೂ ಅವರ ಮೇಲೆ ಅವಹೇಳನ ನಡೆಯುತ್ತಿರುವುದು ಸಲ್ಲ. ಇಂತಹ ಹೀನ ಕೃತ್ಯಗಳು ನಿಲ್ಲಬೇಕು ಎಂದು ಹೇಳಿದರು.
ಹೈಕೋರ್ಟ್ ವಕೀಲ ಎಚ್.ವಿ. ಮಂಜುನಾಥ್, ಮೀಸಲಾತಿ-ಪ್ರಚಲಿತ ವಿದ್ಯಮಾನ ಕುರಿತು ಮಾತನಾಡಿ, ಆರ್ಥಿಕ ಅಸಮಾನತೆ ನೆಪದಲ್ಲಿ ಮೇಲ್ಜಾತಿ ಜನರಿಗೆ ಶೇ. ೧೦ ಮೀಸಲಾತಿ ನೀಡಿರುವುದು ಸರಿಯಲ್ಲ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಜಿಲ್ಲಾಧ್ಯಕ್ಷ ಬಾಲಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ಜಿ. ರಘುನಾಥ್, ದಲಿತ ಮುಖಂಡರಾದ ಬೇವಿನಹಳ್ಳಿ ಚನ್ನಬಸವಯ್ಯ, ಪ್ರಕಾಶ್, ಸಮಿತಿ ತಾಲೂಕು ಅಧ್ಯಕ್ಷ ಎನ್. ರಾಮಚಂದ್ರಯ್ಯ, ಬೆಸ್ಕಾಂ ಎಸ್ಸಿ,ಎಸ್ಟಿ ನೌಕರರ ಸಂಘದ ಅಧ್ಯಕ್ಷ ಗೂಳೂರು ನಾಗರಾಜ್ ಇತರರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಎಸ್‌ಎಸ್‌ ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಿತು.